ತನ್ನ ಅಶ್ಲೀಲ ವಿಡಿಯೊ ಮತ್ತು ಲೈಂಗಿಕ ದೌರ್ಜನ್ಯದ ಕುರಿತು ರಾಜ್ಯ ಸರ್ಕಾರ ತನಿಖೆಗೆ ಆದೇಶಿಸುತ್ತಿದ್ದಂತೆಯೇ ವಿದೇಶಕ್ಕೆ ಪಲಾಯನ ಮಾಡಿರುವ ಹಾಸನ ಸಂಸದ, ಎನ್‌ಡಿಎ ಎಂಪಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಒಂದು ತಿಂಗಳ ಬಳಿಕ ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ್ದಾರೆ. ಸದ್ಯಕ್ಕೆ ವಿದೇಶದಲ್ಲಿರುವ ಅವರು, ‘ಕಾಂಗ್ರೆಸ್ ನಾಯಕರ ಅಪಪ್ರಚಾರದಿಂದ ಖಿನ್ನತೆಗೆ ಒಳಗಾಗಿದ್ದೆ..’ ಎಂದು ಹೇಳಿದ್ದಾರೆ.
ವಿಡಿಯೊದಲ್ಲಿ ಪ್ರಜ್ವಲ್ ಹೇಳಿದ್ದೇನು?
“ಮೊದಲಿಗೆ ನನ್ನ ತಂದೆ-ತಾಯಿ ಹಾಗೂ ತಾತನಿಗೆ, ನನ್ನ ಕುಮಾರಣ್ಣ, ನಾಡಿನ ಜನತೆ ಹಾಗೂ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕ್ಷಮೆ ಕೇಳುತ್ತೇನೆ” ಎಂದು ಮಾತು ಆರಂಭಿಸಿದ್ದಾರೆ.
“ನಾನು 27ಕ್ಕೆ ದೇಶ ಬಿಟ್ಟಾಗ ನನ್ನ ಮೇಲೆ ಯಾವುದೇ ಪ್ರಕರಣ ದಾಖಲಾಗಿರಲಿಲ್ಲ. ನಾನು ಫಾರಿನ್‌ನಲ್ಲಿ ಎಲ್ಲಿದ್ದೇನೆ ಎಂದು ಮಾಹಿತಿ ಕೊಡದಿರುವುದಕ್ಕೆ ಖಂಡಿತವಾಗಿಯೂ ಕ್ಷಮೆ ಕೇಳುತ್ತೇನೆ. ನಾನು ಮತದಾನ ಮಾಡಿ ವಿದೇಶಕ್ಕೆ ಹೋಗುವ ದಿನ ನನ್ನ ಮೇಲೆ ಯಾವುದೇ ಪ್ರಕರಣವೂ ದಾಖಲಾಗಿರಲಿಲ್ಲ. ಎಸ್‌ಐಟಿ ಕೂಡ ರಚನೆ ಆಗಿರಲಿಲ್ಲ. ಏ.26ರಂದು ನಾನು ವಿದೇಶಕ್ಕೆ ಹೋಗುವುದು ಕೂಡ ಪೂರ್ವ ನಿರ್ಧರಿತವಾಗಿರುತ್ತದೆ. ಮೂರ್ನಾಲ್ಕು ದಿನದ ಬಳಿಕ ಯೂಟ್ಯೂಬ್‌ನಲ್ಲಿ ನ್ಯೂಸ್ ಚಾನೆಲ್ ನೋಡುವ ವೇಳೆ ಈ ಮಾಹಿತಿ ನನಗೆ ತಿಳಿದುಬಂದಿತು. ಇದಾದ ನಂತರ ಎಸ್ಐಟಿ ಕೂಡ ನನಗೆ ನೋಟಿಸ್ ಕೊಡುವ ಕೆಲಸ ಮಾಡಿತು. ಎಸ್‌ಐಟಿ ನೋಟಿಸ್‌ಗೆ ಎಕ್ಸ್ ಖಾತೆ ಮತ್ತು ನಮ್ಮ ಲಾಯರ್ ಮೂಲಕ ವಿಚಾರಣೆಗೆ ಹಾಜರಾಜಲು 7 ದಿನಗಳ ಕಾಲಾವಕಾಶ ಕೇಳಿದ್ದೆನು” ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡಿರುವ ಅವರು, “ಈ ಏಳು ದಿನ ಸಮಯಾವಕಾಶ ಕೇಳಿದ ನಂತರ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ ಸೇರಿದಂತೆ ಅನೇಕರು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾತನಾಡುವುದನ್ನು ನಾನು ನೋಡಿದೆ. ಇದೆಲ್ಲವನ್ನು ನೋಡಿ ನಾನು ಡಿಪ್ರೆಶನ್‌ಗೆ ಒಳಗಾಗಿ, ಒಂದೆಡೆ ಐಸೋಲೇಷನ್‌ಗೆ ಒಳಗಾಗಿದ್ದೆನು. ಇದರಿಂದಾಗಿ ನಿಮ್ಮೆಲ್ಲರ ಮುಂದೆ ನಾನು ಕ್ಷಮೆ ಕೇಳುತ್ತೇನೆ” ಎಂದು ಹೇಳಿದ್ದಾರೆ.
“ಹಾಸನದಲ್ಲಿ ನನ್ನ ವಿರುದ್ಧದ ಎಲ್ಲ ಶಕ್ತಿಗಳು ಒಟ್ಟುಗೂಡಿ ಪಿತೂರಿ ಮಾಡುವ ಕೆಲಸ ಮಾಡಿದ್ದಾರೆ. ರಾಜಕೀಯವಾಗಿ ನಾನು ಬೆಳೆಯುತ್ತಿದ್ದೇನೆ, ಅದನ್ನು ಮುಗಿಸಬೇಕು ಎಂಬ ನಿಟ್ಟಿನಲ್ಲಿ ನನ್ನನ್ನು ಈ ಪ್ರಕರಣಗಳಲ್ಲಿ ಸಿಲುಕಿಸುವ ಕೆಲಸ ಮಾಡಿದ್ದಾರೆ. ಇದರಿಂದ ನಾನು ಮತ್ತಷ್ಟು ಆಘಾತಕ್ಕೆ ಒಳಗಾಗಿದ್ದೇನೆ” ಎಂದಿದ್ದಾರೆ.
“ಈ ಘಟನೆಯಿಂದ ಯಾರೂ ಕೂಡ ಅನ್ಯಥಾ ಭಾವಿಸುವುದು ಬೇಡ. ನಾನೇ ಸ್ವತಃ ಶುಕ್ರವಾರ ಮೇ 31ರಂದು ಎಸ್‌ಯಟಿ ಮುಂದೆ ಬಂದು ಸಂಪೂರ್ಣವಾಗಿ ಪ್ರಕರಣದ ತನಿಖೆಯಲ್ಲಿ ಭಾಗಿಯಾಗುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆಯಿದೆ. ನನ್ನ ಮೇಲೆ ದಾಖಲಾಗಿರುವಂತಹ ಸುಳ್ಳು ಪ್ರಕರಣಗಳಿಂದ ಮುಕ್ತವಾಗಿ ಹೊರಗೆ ಬರುವ ವಿಶ್ವಾಸವಿದೆ. ನನ್ನ ಮೇಲೆ ದೇವರು, ಜನರು ಹಾಗೂ ನನ್ನ ಕುಟುಂಬದ ಆಶೀರ್ವಾದ ಇರಲಿ ಎಂದು ಬೇಡಿಕೊಳ್ಳುತ್ತೇನೆ. ನಾನು ಮೇ 31ರಂದು ಬಂದು ಈ ಎಲ್ಲದಕ್ಕೂ ತೆರೆ ಎಳೆಯುತ್ತೇನೆ” ಎಂದು ಮಾಹಿತಿ ನೀಡಿರುವ ಪ್ರಜ್ವಲ್, ಯಾವ ದೇಶದಲ್ಲಿದ್ದೇನೆ ಎಂಬ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ; ‘ಹಾಸನ ಚಲೋ’ ಪ್ರತಿಭಟನೆಗೆ ಬೆಂಬಲ ಸೂಚಿಸಿದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ


