Homeಕರ್ನಾಟಕ'ಹಾಸನ ಚಲೋ' ಪ್ರತಿಭಟನೆಗೆ ಬೆಂಬಲ ಸೂಚಿಸಿದ 'ನಾವೆದ್ದು ನಿಲ್ಲದಿದ್ದರೆ' ಸಂಘಟನೆ

‘ಹಾಸನ ಚಲೋ’ ಪ್ರತಿಭಟನೆಗೆ ಬೆಂಬಲ ಸೂಚಿಸಿದ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ

ಸಂತ್ರಸ್ತ ಮಹಿಳೆಯರ ಫನತೆ ಕಾಪಾಡಿ, ಅವರಿಗೆ ರಕ್ಷಣೆ ನೀಡುವು ನಿಟ್ಟಿನಲ್ಲಿ ತುರ್ತು ಕ್ರಮಕ್ಕೆ ಆಗ್ರಹ

- Advertisement -
- Advertisement -

ಹಾಸನ ಸಂಸದ, ಎನ್‌ಡಿಎ ಲೋಕಸಭಾ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಸೂಕ್ತ ತನಿಖೆಗೆ ಒತ್ತಾಯಿಸಿ, ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಮೇ 30ರಂದು ಹಾಸನದ ಪ್ರಗತಿಪರ ಸಂಘಟನೆಗಳ ಒಕ್ಕೂಟ ಹಮ್ಮಿಕೊಂಡಿರುವ, “ಹಾಸನದೆಡೆಗೆ ನಮ್ಮ ನಡಿಗೆ ಹಾಸನ ಚಲೋ” ಹೋರಾಟಕ್ಕೆ ‘ನಾವೆದ್ದು ನಿಲ್ಲದಿದ್ದರೆ’ ಸಂಘಟನೆ ಬೆಂಬಲ ಸೂಚಿಸಿದೆ.

ಈ ಕುರಿತು ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ವಿವರಣೆ ನೀಡಿದ ಸಂಘಟನೆಯ ಪದಾಧಿಕಾರಿಗಳು, “ನಾವೆದ್ದು ನಿಲ್ಲದಿದ್ದರೆ ಎಂಬುದು ಮಹಿಳೆಯರಿಗೆ ಮತ್ತು ಮಾನವಹಕ್ಕುಗಳಿಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಕಾಳಜಿಯುಳ್ಳ ಎಲ್ಲ ಸಂಘಟನೆಗಳ, ವ್ಯಕ್ತಿಗಳ ಜಂಟಿವೇದಿಕೆಯಾಗಿದೆ” ಎಂದು ಹೇಳಿದರು.

“ಹಾಸನದಲ್ಲಿ ನಡೆಯುತ್ತಿರುವ ಬೃಹತ್‌ ಸಾರ್ವಜನಿಕ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲ ಭಾಗಗಳಿಂದ ಮಹಿಳಾ, ದಲಿತ, ಕಾರ್ಮಿಕ, ರೈತ, ವಿದ್ಯಾರ್ಥಿ, ಯುವಜನರ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ, ಲಿಂಗತ್ವ ಅಲ್ಪಸಂಖ್ಯಾತರ, ಆದಿವಾಸಿಗಳ ಮತ್ತು ಇನ್ನಿತರ ಹಲವು ಸಂಘಟನೆಗಳ ಪ್ರತಿನಿಧಿಗಳು, ಹಾಗೆಯೇ ರಾಜ್ಯದ ಮತ್ತು ದೇಶದ ಕೆಲವೆಡೆಗಳಿಂದ ಚಿ೦ತಕರು, ಬರಹಗಾರರು, ಬುದ್ಧಿಜೀವಿಗಳು, ಕಲಾವಿದರು, ನಿವೃತ್ತ ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಮುಂತಾದ ಸುಮಾರು ಹತ್ತು ಸಾವಿರ ಮಂದಿ ಭಾಗವಹಿಸಲಿದ್ದಾರೆ” ಎಂದು ವಿವರಣೆ ನೀಡಿದರು.

“ಈ ಪ್ರತಿಭಟನೆಯ ಉದ್ದೇಶವು, ಪ್ರಜ್ವಲ್‌ ರೇವಣ್ಣನ ಕ್ರಿಮಿನಲ್‌ ಲೈಂಗಿಕ ಹಿಂಸಾಚಾರದ ಬಲಿಪಶುಗಳಾದ ಸಾವಿರಾರು ಮಹಿಳೆಯರಿಗೆ ಸ್ಟೈರ್ಯ ತುಂಬಿ ಬಹಿರಂಗವಾಗಿ ಮತ್ತು ಒಗ್ಗಟ್ಟಾಗಿ ಅವರ ಘನತೆಯನ್ನು ಎತ್ತಿಹಿಡಿಯುವುದರ ಜೊತೆಗೆ ಹಲವು ವಿಷಯಗಳಿಗಾಗಿ ಒತ್ತಾಯಿಸುವುದೂ ಕೂಡಾ ಆಗಿದೆ” ಎಂದು ಹೇಳಿದರು.

ಸಂಘಟನೆ ಪ್ರಮುಖ ಆಗ್ರಹ ಏನು?

ಪ್ರಜ್ವಲ್‌ ರೇವಣ್ಣ ತನ್ನ ಬಲಾಡ್ಯ ಕುಟುಂಬದ ಕಾರಣಕ್ಕಾಗಿ ದೊರೆತಿರುವ ಜಾತಿಬಲ ಮತ್ತು ಹಣಬಲವನ್ನು ಬಳಸಿಕೊಂಡು, ತನ್ನ ಸಾಂವಿಧಾನಿಕ ಕರ್ತವ್ಯವನ್ನು ಮತ್ತು ಸಂಸದನಾಗಿ ತನ್ನ ಅಧಿಕಾರವನ್ನು ಅತ್ಯಂತ ದರ್ಪದಿಂದ ದುರ್ಬಳಕೆ ಮಾಡಿಕೊಂಡು, ನೂರಾರು ಮಹಿಳೆಯರನ್ನು ನಾಚಿಕೆಯಿಲ್ಲದೆ ಕ್ರಿಮಿನಲ್‌ ಸ್ವರೂಪದ ಲೈಂಗಿಕ ಹಿಂಸಾಚಾರಕ್ಕೆ ಗುರಿಪಡಿಸಿದ್ದನ್ನು ಮತ್ತು ಅದನ್ನು ವಿಡಿಯೊ ಚಿತ್ರೀಕರಣ ಮಾಡಿಕೊಂಡದ್ದನ್ನು ತೀವ್ರವಾಗಿ ಖಂಡಿಸುತ್ತೇವೆ.

ದೇಶವನ್ನು ತೊರೆದು ಓಡಿಹೋಗಿರುವ ಆರೋಪಿಯ ಬಗ್ಗೆ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸುವ ಹಾಗೂ ಆತನ ಬ್ಯಾಂಕ್‌ ಖಾತೆಯನ್ನು ಫ್ರೀಜ್ ಮಾಡುವ ಮೂಲಕ ವಾಪಾಸ್‌ ಕರೆಸಿ, ಬಂಧನ ಮತ್ತು ವಿಚಾರಣೆಗೆ ಒಳಪಡಿಸಬೇಕು. ಈ ವಿಷಯದಲ್ಲಿ ಕೇಂದ್ರವು ಕೂಡಲೇ ಆತನ ರಾಜತಾಂತ್ರಿಕ ಪಾಸ್‌ಪೋರ್ಟ್‌ ಮತ್ತು ವೀಸಾವನ್ನು ರದ್ದುಪಡಿಸಬೇಕು, ರಾಜ್ಯಸರ್ಕಾರಕ್ಕೆ-ಎಸ್‌ಐಟಿಗೆ ಇಂಟರ್‌ಪೋಲ್‌ ನೆರವು ದೊರೆಯುವಂತೆ ಮತ್ತು ಆರೋಪಿಯನ್ನು ಬಂಧಿಸಲು ಸಾಧ್ಯವಾಗುವಂತೆ ಸಹಕರಿಸಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತೇವೆ.

ಪ್ರಜ್ವಲ್‌ ರೇವಣ್ಣ ಮತ್ತು ಅವರ ತಂದೆ ಎಚ್‌.ಡಿ. ರೇವಣ್ಣ ಅವರಿಂದ ಎಲ್ಲ ರೀತಿಯ ಲೈಂಗಿಕ ಶೋಷಣೆಗೆ ಒಳಗಾದ ಮತ್ತು ದೂರು ಸಲ್ಲಿಸಲು ಮುಂದೆ ಬಂದಿರುವ ಮಹಿಳೆಯರಿಗೆ ಅವರ ಗೌಪ್ಯತೆಯನ್ನು ಕಾಪಾಡಲು ನೆರವಾಗಬೇಕು, ಮಹಿಳೆಯರಿಗೆ ತಕ್ಷಣವೇ ರಕ್ಷಣೆ ನೀಡಬೇಕು, ಅವರಿಗೆ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಸೂಕ್ತ ರಕ್ಷಣೆ, ಪುನರ್ವಸತಿ ಮತ್ತು ಪರಿಹಾರ ಒದಗಿಸಬೇಕೆಂದು ಆಗ್ರಹಿಸುತ್ತೇವೆ.

ಮಹಿಳೆಯರ ವೀಡಿಯೋಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಿದ್ದ, ಅವರ ಗುರುತುಗಳನ್ನು ಮಸುಕುಗೊಳಿಸದೆ ಅವುಗಳನ್ನು ಪೆನ್‌-ಡೈವ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಅಗಾಧ ಸಂಖ್ಯೆಯಲ್ಲಿ ಸಾರ್ವಜನಿಕವಾಗಿ ಹಂಚಿಕೊಂಡ ಪ್ರತಿಯೊಬ್ಬ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ, ವಿಚಾರಣೆ ನಡೆಸಿ, ಶಿಕ್ಷೆಗೆ ಗುರಿಪಡಿಸಬೇಕು. ಇವರ ಈ ಕೃತ್ಯದಿದಿಂದಾಗಿ ಆ ಎಲ್ಲ ಮಹಿಳೆಯರ ಮತ್ತು ಅವರ ಕುಟುಂಬದ ಗೌಪ್ಯತೆ, ಘನತೆ ಮತ್ತು ಭದ್ರತೆಗೆ ಅಪಾರವಾದ ಹಾನಿಯಾಗಿದೆ. ಇಂಟರ್ನೆಟ್‌ನಿಂದ ಈ ವೀಡಿಯೊಗಳು ಮತ್ತು ಫೋಟೋಗಳನ್ನು ತೆಗೆದುಹಾಕಲು ಪೊಲೀಸ್‌ ಇಲಾಖೆಯಿಂದ ವಿಶೇಷ ತಾಂತ್ರಿಕ ಅಧಿಕಾರಿಗಳನ್ನು ನೇಮಿಸಲು ಒತ್ತಾಯಿಸುತ್ತೇವೆ.

ತಮ್ಮ ಸ್ವಾರ್ಥ ಹಿತಾಸಕ್ತಿಯ ರಾಜಕೀಯದ ಆಟಗಳಿಗಾಗಿ ಸಂತ್ರಸ್ತ ಮಹಿಳೆಯರನ್ನು ಆಟದ ದಾಳಗಳನ್ನಾಗಿ ಬಳಸಿದ ಎಲ್ಲಾ ಜನಪ್ರತಿನಿಧಿಗಳ ಅನೈತಿಕ ಮತ್ತು ಅಮಾನವೀಯ ನಡವಳಿಕೆಯನ್ನು ಖಂಡಿಸುತ್ತೇವೆ.

ನಿಜವಾದ ಅಪರಾಧಿಗಳನ್ನು ಗುರುತಿಸುವ ಮತ್ತು ಕಾನೂನು ಕ್ರಮಕ್ಕೆ ಒಳಪಡಿಸುವ ಬದಲು, ಲೈಂಗಿಕ ದೌರ್ಜನ್ಯದ ಬಲಿಪಶುಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಸಾಮಾಜಿಕ ಚಿಂತನಾಕ್ರಮಗಳನ್ನು ವಿರೋಧಿಸಬೇಕು ಮತ್ತು ಅವುಗಳನ್ನು ಪರಿವರ್ತಿಸುವಂತಹ ಮಾರ್ಗೋಪಾಯಗಳನ್ನು ಚಿಂತಿಸಬೇಕೆಂದು ಒತ್ತಾಯಿಸುತ್ತೇವೆ.

ಪ್ರತಿಭಟನಾಕಾರರು ಈ “ಲೈಂಗಿಕ ಹಿ೦ಸಾಕಾಂಡ”ದ ಆರೋಪಿ ಪ್ರಜ್ವಲ್‌ ರೇವಣ್ಣ ಮತ್ತು ಎಲ್ಲ ಆರೋಪಿಗಳನ್ನೂ ತಮ್ಮ ಕೃತ್ಯಕ್ಕೆ ಜವಾಬ್ದಾರರನ್ನಾಗಿಸಿ ವಿಚಾರಣೆಗೆ ಒಳಪಡಿಸಬೇಕೆಂದೂ, ಸಂತ್ರಸ್ತ ಮಹಿಳೆಯರ ಫನತೆ ಕಾಪಾಡುವ ಮತ್ತು ಅವರಿಗೆ ರಕ್ಷಣೆ ನೀಡುವ ನಿಟ್ಟಿನಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಸರ್ಕಾರಕ್ಕೆ ಸಮಗ್ರವಾದ ಆಗ್ರಹಪತ್ರವನ್ನು ಅಂದು ಸಲ್ಲಿಸಲಾಗುವುದು.

ಹಾಸನದಲ್ಲಿ ನಡೆಯುತ್ತಿರುವ ಈ ಪ್ರತಿಭಟನಾ ಮೆರವಣಿಗೆಗೆ ಬೆಂಬಲ ವ್ಯಕ್ತಪಡಿಸುವ ಜೊತೆಗೆ, “ನಾವೆದ್ದು ನಿಲ್ಲದಿದ್ದರೆ” ವೇದಿಕೆಯ ಪ್ರತಿನಿಧಿಗಳು ಹಾಸನದ ಮಹಿಳೆಯರು, ಸಹ ನಾಗರಿಕರಿಗೆ ವೈಯಕ್ತಿಕವಾದ ಮನವಿ ಪತ್ರವನ್ನು ಬಿಡುಗಡೆ ಮಾಡಿದ್ದಾರೆ. ನೊಂದ ಮಹಿಳೆಯರು ತಮಗಾದ ಅನ್ಯಾಯದ ವಿರುದ್ಧ ಮಾತನಾಡಲು ಮುಂದಾಗಬೇಕೆಂದು, ಈ ಪ್ರಯತ್ನದಲ್ಲಿ ಅವರ ಸ್ನೇಹಿತರು, ಕುಟುಂಬಗಳು, ನೆರೆಹೊರೆಯವರು ಮತ್ತು ನಾಡಿನ ಪ್ರಜ್ಞಾವಂತರು ಅವರ ಬೆಂಬಲಕ್ಕೆ ದೃಢವಾಗಿ ನಿಲ್ಲುತ್ತಾರೆಂದೂ ಈ ಮನವಿ ಪತ್ರದಲ್ಲಿ ಭರವಸೆ ನೀಡಲಾಗಿದೆ.

ಮಹಿಳೆಯರು ತಮ್ಮ ಭಯ, ಆತಂಕ ಮತ್ತು ಒತ್ತಡಗಳಿಂದ ಹೊರಬಂದು, ತಮ್ಮ ಮೇಲೆ ಹಲ್ಲೆ ಮತ್ತು ಶೋಷಣೆ ಮಾಡಿದ ಪ್ರಬಲ ಪುರುಷರನ್ನು ಎದುರಿಸಲು ಸುಲಭವಲ್ಲ ಎಂದು ಅರ್ಥಮಾಡಿಕೊಂಡಿರುವ ವೇದಿಕೆಯು, “ಈಗ ಧೈರ್ಯವಾಗಿ ಮಾತನಾಡುವ, ದೂರು ದಾಖಲಿಸುವ ಮಹಿಳೆಯರಿಗೆ ನ್ಯಾಯ ಸಿಗಬೇಕಾದರೆ, ನ್ಯಾಯಾಂಗ, ಆಡಳಿತ ಮತ್ತು ಮಾಧ್ಯಮಗಳನ್ನು ಲಿಂಗ ಸಂವೇದನೆಯುಳ್ಳವರನ್ನಾಗಿ ಪರಿವರ್ತಿಸುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ” ಎಂದು ಹೇಳಿದೆ.

“ಆತ್ಮೀಯ ಸಹೋದರಿಯರೇ ಬನ್ನಿ, ನೀವು ದೊಡ್ಡ ತಪ್ಪು ಮಾಡಿದವರು ಎಂದು ದೂಷಿಸುವ ಮಾತುಗಳನ್ನು ಕಳಚಿಬಿಸಾಡಿ ಹೊರಬನ್ನಿ; ನಿಮ್ಮ ಮೇಲೆ ನಡೆದಿರುವ ದೌರ್ಜನ್ಯದ ತಪ್ಪಿನ ಹೊರೆಯನ್ನು ನೀವು ಹೊತ್ತುಕೊಳ್ಳಬೇಡಿ. ಹೊರಗೆ ಬನ್ನಿ, ಧೈರ್ಯವಾಗಿ ಮಾತನಾಡಿ ಮತ್ತು ನಿಮ್ಮ ದೂರುಗಳನ್ನು ದಾಖಲಿಸಿ. ಹಾಗೆಯೇ, ಸಹ ನಾಗರಿಕ ಬಾಂಧವರೇ, ಈ ಕ್ಷಣಕ್ಕೆ ಮಾತ್ರವಲ್ಲದೆ ಈ ಅಪರಾಧ ಸಂಭವಿಸಲು ಅವಕಾಶ ನೀಡಿದ ವ್ಯವಸ್ಥಯಲ್ಲಿ ಸಂತ್ರಸ್ತರಾದ ಈ ಎಲ್ಲ ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ನಾವು ಅವರೊಂದಿಗೆ ದೃಢವಾಗಿ ನಿಲ್ದೋಣ. ನಮ್ಮ ಮುಂದಿನ ಪೀಳಿಗೆ ಇಂತಹ ಭೀಕರತೆಗೆ ಬಲಿಯಾಗಿ ನಲುಗುವುದನ್ನು ತಡೆಗಟ್ಟುವ ನಮ್ಮ ಸಾಮೂಹಿಕ ಕರ್ತವ್ಯವನ್ನು ನಾವು ಒಟ್ಟಾಗಿ ಮಾಡೋಣ, ನಿಜವಾದ ಅಪರಾಧಿಗಳು ತಾವು ಮಾಡಿದ ಅಪರಾಧಗಳಿಗೆ ನಾಚಿಕೆಪಡಬೇಕು ಮತ್ತು ಶಿಕ್ಷಗೆ ಒಳಗಾಗಬೇಕು, ಅಲ್ಲಿಯವರೆಗೂ ಈ ಹೋರಾಟವನ್ನು ಕೈಬಿಡದೆ ಮುಂದಕ್ಕೊಯ್ಯೋಣ” ಎಂದು ಸಂಘಟನೆ ಕರೆ ನೀಡಿದೆ.

ಮನವಿ ಪತ್ರವನ್ನು ಹಾಸನ ಮತ್ತು ಹೊಳೆನರಸೀಪುರ ಹಳ್ಳಿಗಳು, ಸಮುದಾಯಗಳ ನಡುವೆ ವಿಸ್ಕೃತವಾಗಿ ಹಂಚುವ ಯೋಜನೆಯಿದ್ದು, ಹಾಸನ ಜಿಲ್ಲೆಯ ಸ್ಥಳೀಯ ಸಂಘಟನೆಗಳು ಮತ್ತು ವೇದಿಕೆಗಳ ನೆರವಿನೊಂದಿಗೆ ಈ ಪತ್ರವನ್ನು ವಿತರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಪತ್ರಿಕಾ ಗೋಷ್ಠಿಯಲ್ಲಿ “ನಾವೆದ್ದು ನಿಲ್ಲದಿದ್ದರೆ” ಜ೦ಟಿವೇದಿಕೆಯ ಪರವಾಗಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್‌. ವಿಮಲ, ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರರು ಮತ್ತು ರಾಜಕೀಯ ಕಾರ್ಯಕರ್ತೆ ಅಕ್ಕೈ ಪದ್ಮಶಾಲಿ, ‘ಒಂದೆಡೆ’ ಸಂಸ್ಥೆಯ ಮೈತ್ರೇಯಿ ಕೃಷ್ಣನ್‌, ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘಟನೆ ಮತ್ತು ಎಐಎಲ್‌ಎಜೆ ಸಂಘಟನೆಯ ಮಮತಾ ಯಜಮಾನ್‌, ಗಮನ ಮಹಿಳಾ ಸಮೂಹದ ಅಖಿಲಾ ವಿದ್ಯಸಂದ್ರ ಸೇರಿದಂತೆ ಮೊದಲಾದವರು ಮಾತಾಡಿದರು.

ಇದನ್ನೂ ಓದಿ; ಸಹೋದರ, ಚಿಕ್ಕಪ್ಪ ಹತ್ಯೆಗೀಡಾದ ಬಳಿಕ ಆಂಬ್ಯುಲೆನ್ಸ್‌ನಿಂದ ಬಿದ್ದು ದಲಿತ ಯುವತಿ ಮೃತ್ಯು: ಸಾವಿನ ಸುತ್ತ ಹಲವು ಅನುಮಾನ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎನ್‌ಸಿಇಆರ್‌ಟಿ’ಯು ಆರ್‌ಎಸ್‌ಎಸ್‌ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ: ಜೈರಾಮ್ ರಮೇಶ್

0
ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳ ಪರಿಷ್ಕರಣೆ ವಿವಾದದ ಮಧ್ಯೆ, ಸಂಸ್ಥೆಯು 2014 ರಿಂದ ಆರ್‌ಎಸ್‌ಎಸ್ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಸೋಮವಾರ ಆರೋಪಿಸಿದ್ದಾರೆ. ನೀಟ್ 2024...