ಸರ್ಕಾರಿ ಕೋಟಾದಡಿ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಲ್ಲಿ ಪ್ರವೇಶ ಪಡೆದ (2022 ಜುಲೈ 22ಕ್ಕೆ ಅನ್ವಯವಾಗುವಂತೆ) ಎಂಬಿಬಿಎಸ್ ವಿದ್ಯಾರ್ಥಿಗಳು ಪದವಿಯ ಬಳಿಕ ಕಡ್ಡಾಯ ಗ್ರಾಮೀಣ ಸೇವೆ ಅಥವಾ ಬಾಂಡ್‌ಗಳ ಅನುಷ್ಠಾನದ ಕಠಿಣ ಷರತ್ತಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರಿನ ಡಾ. ಶರಣ್ಯಾ ಮೋಹನ್ ಸೇರಿದಂತೆ ರಾಜಸ್ಥಾನ, ಹರಿಯಾಣ, ಕೇರಳ, ಗುಜರಾತ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಮತ್ತು ಚೆನ್ನೈನ ವಿವಿಧ ಭಾಗಗಳ ಒಟ್ಟು 447 ವೈದ್ಯರು ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಲೇವಾರಿ ಮಾಡಿದೆ.
“ಜಗತ್ತಿನ ಯಾವುದೇ ಭಾಗದಲ್ಲಿ ಕಡ್ಡಾಯವಾಗಿ ಗ್ರಾಮೀಣ ಸೇವೆ ಮಾಡುವುದು ವೈದ್ಯಕೀಯ ವೃತ್ತಿಯಲ್ಲಿ ಹೊಸದೇನಲ್ಲ. ಹೆಸರು ಬದಲಾಗಬಹುದು, ವಿಚಾರ ಒಂದೇ. ವೈದ್ಯರು ಸಮುದಾಯ/ಗ್ರಾಮೀಣ ಸೇವೆ ಮಾಡುವುದಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯು ಒಪ್ಪಂದಕ್ಕೆ ಸಹಿ ಹಾಕಿರುವ ದೇಶಗಳಿಗೆ ಹಲವು ಶಿಫಾರಸ್ಸುಗಳನ್ನು ಮಾಡಿದೆ” ಎಂದು ನ್ಯಾಯಾಲಯ ತಿಳಿಸಿದೆ.
“ವೈದ್ಯರನ್ನು ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ ವಾಸಿಸುವ ಆದಿವಾಸಿಗಳು, ಬಡವರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶದಿಂದ ಗ್ರಾಮೀಣ ಸೇವೆ ಕಡ್ಡಾಯಗೊಳಿಸಲಾಗಿದೆ. ವಿದ್ಯಾರ್ಥಿಗಳು ಸಾರ್ವಜನಿಕ ಆರೋಗ್ಯ ಯೋಜನೆಯ ಭಾಗವಾಗಬೇಕು. ವೈದ್ಯಕೀಯ ಪದವೀಧರರು ಸ್ವಯಂಪ್ರೇರಿತವಾಗಿ ಗ್ರಾಮೀಣ ಪ್ರದೇಶದಲ್ಲಿ ಸೇವೆ ನೀಡಲು ತಮ್ಮನ್ನು ತೊಡಗಿಸಕೊಳ್ಳುತ್ತಾರೆ ಎಂಬ ಕನಸು ಒಂದು ದಿನ ಸಾಕಾರವಾಗಬಹುದು. ಈ ಕನಸು ಆದಷ್ಟು ಬೇಗ ಸಾಕಾರಗೊಳ್ಳುವ ಮೂಲಕ ಸಮಸಮಾಜ ನಿರ್ಮಾಣವಾಗಬೇಕು” ಎಂದು ನ್ಯಾಯಾಲಯ ಹೇಳಿದೆ.
“2012ರ ಜುಲೈ 17ರ ಅಧಿಸೂಚನೆಯಲ್ಲಿ ತಿದ್ದುಪಡಿ ನಿಯಮಗಳು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದಾಗಿನಿಂದ ಜಾರಿಗೆ ಬರಲಿವೆ ಎಂದು ಹೇಳಲಾಗಿದೆ. ನಿಯಮಗಳು ರೂಪಿಸಿದ ಹತ್ತು ವರ್ಷಗಳ ಬಳಿಕ ಅಂದರೆ 2022ರ ಜುಲೈ 22ರಂದು ಗೆಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಇದನ್ನು ನೋಡಿದರೆ ರಾಜ್ಯ ಸರ್ಕಾರ ಹತ್ತು ವರ್ಷಗಳಿಂದ ಗಾಢ ನಿದ್ರೆಯಲ್ಲಿತ್ತು ಎಂದೆನಿಸುತ್ತದೆ” ಎಂದು ನ್ಯಾಯಾಲಯ ಕುಟುಕಿದೆ.
ತಿದ್ದುಪಡಿ ನಿಯಮಗಳನ್ನು 2022ರ ಜುಲೈ 27ಕ್ಕೆ ಗೆಜೆಟ್‌ನಲ್ಲಿ ಪ್ರಕಟಿಸಿರುವುದರಿಂದ, ಅದಕ್ಕೂ ಮುಂಚಿನ ವಿದ್ಯಾರ್ಥಿಗಳಿಗೆ ಈ ನಿಯಮ ಅನ್ವಯವಾಗದು ಎಂದು ಪೀಠ ಸ್ಪಷ್ಟಪಡಿಸಿದೆ. ಈ ಮೂಲಕ ನ್ಯಾಯಾಲಯದ ಮೆಟ್ಟಿಲೇರಿದ್ದ ಗೆಜೆಟ್ ಪ್ರಕಟಣೆಯ ಪೂರ್ವದ 447 ವಿದ್ಯಾರ್ಥಿಗಳಿಗೆ ಕಡ್ಡಾಯ ಗ್ರಾಮೀಣ ಸೇವೆಯ ನಿಯಮಾವಳಿ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದು, ಅವರಿಗೆ ಪರಿಹಾರ ಕಲ್ಪಿಸಿದೆ.
ಇದನ್ನೂ ಓದಿ : ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣ: ಮೂವರು ಉನ್ನತಾಧಿಕಾರಿಗಳ ವಿರುದ್ದ ಎಫ್‌ಐಆರ್


