ಬಿಜೆಪಿ ಮತ್ತು ಅದರ ಅಂಗ ಸಂಸ್ಥೆಯ ಕಾರ್ಯಕರ್ತರು ತಮಗೆ ನಿರಂತರವಾಗಿ ಕಿರುಕುಳವನ್ನು ನೀಡುತ್ತಿದ್ದಾರೆ ಎಂದು ಸ್ಟ್ಯಾಂಡ್-ಅಪ್ ಕಾಮಿಡಿಯನ್ ನಳಿನ್ ಯಾದವ್ ಗಂಭೀರವಾದ ಆರೋಪವನ್ನು ಮಾಡಿದ್ದಾರೆ.
2021ರ ಜನವರಿ 1ರಂದು, ಇಂದೋರ್‌ನ ಕೆಫೆಯೊಂದರಲ್ಲಿ ನಡೆದ ಕಾರ್ಯಕ್ರಮದ ವೇಳೆ ಕಾಮಿಡಿಯನ್ ಮುನವ್ವರ್ ಫಾರೂಕಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂಬ ದೂರಿನ ಮೇರೆಗೆ ಸ್ಟ್ಯಾಂಡ್-ಅಪ್ ಹಾಸ್ಯನಟರಾದ ನಳಿನ್ ಯಾದವ್ ಮತ್ತು ಮುನವ್ವರ್ ಫಾರುಕಿ ಸೇರಿ ಇತರ ಇಬ್ಬರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಜಾಮೀನು ಪಡೆದು ಮುನವ್ವರ್ ಫರುಕಿ ಫೆಬ್ರವರಿ 2021ರಲ್ಲಿ ಇಂದೋರ್ ಕೇಂದ್ರ ಕಾರಾಗೃಹದಿಂದ ಹೊರ ಬಂದಿದ್ದರು. ಕೆಲವು ದಿನಗಳ ನಂತರ, ಫೆಬ್ರವರಿ 26ರಂದು ಮಧ್ಯಪ್ರದೇಶ ಹೈಕೋರ್ಟ್‌ನ ಇಂದೋರ್ ಪೀಠವು ಮಧ್ಯಂತರ ಜಾಮೀನಿನ ಮೇಲೆ ನಳಿನ್ ಯಾದವ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಆದೇಶಿಸಿತ್ತು.
ಪ್ರಕರಣ ದಾಖಲು ಮತ್ತು ಜಾಮೀನಿನ ಬಳಿಕ ನಮಗೆ ಕಷ್ಟದ ದಿನಗಳು ಆರಂಭವಾಗಿದೆ ಎಂದು ಮಧ್ಯಪ್ರದೇಶ ಮೂಲದ ನಳಿನ್ ಯಾದವ್ ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ತನಗೆ ಮತ್ತು ತನ್ನ ಕಿರಿಯ ಸಹೋದರನಿಗೆ ಆಡಳಿತ ಪಕ್ಷದ ಅಂಗಸಂಸ್ಥೆಗಳು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಮೇ 26 ರಂದು ಜನನಿಬಿಡ ರಸ್ತೆಯಲ್ಲಿ ಗುಂಪೊಂದು ತನ್ನ ಮತ್ತು ಸಹೋದರನ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ತೋರಿಸುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
‘ದಿ ಇಂಡಿಯನ್ ಎಕ್ಸ್‌ಪ್ರೆಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಳಿನ್ ಯಾದವ್, ಜೈಲಿನಿಂದ ಬಿಡುಗಡೆ ಬಳಿಕ ನಮ್ಮ ಮೇಲೆ ದೌರ್ಜನ್ಯ ಪ್ರಾರಂಭವಾಗಿದೆ. ಇದು ಈಗಲೂ ನಿರಂತರವಾಗಿ ನಡೆಯುತ್ತಿದೆ. ಇದರಿಂದಾಗಿ ಮನೆಯನ್ನು ಬಲಾಯಿಸುವಂತೆ ಪೊಲೀಸರು ನನಗೆ ಸೂಚಿಸಿದ್ದಾರೆ ಎಂದು ಹೇಳಿದ್ದಾರೆ.
ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ನಳಿನ್ ಮಾತನಾಡುತ್ತಾ, ನನ್ನನ್ನು ಬಂಧಿಸಿದಾಗಿನಿಂದ, ನಾನು ಮತ್ತು ನನ್ನ ಸಹೋದರ ಸ್ಥಳೀಯ ಗೂಂಡಾಗಳು ಮತ್ತು ಬಿಜೆಪಿಯ ಅಂಗಸಂಸ್ಥೆಗಳಿಂದ ನಿರಂತರ ಕಿರುಕುಳ ಮತ್ತು ಹಿಂಸಾಚಾರವನ್ನು ಎದುರಿಸುತ್ತಿದ್ದೇವೆ. ನನ್ನನ್ನು ರಾಷ್ಟ್ರವಿರೋಧಿ ಎಂಬ ಹೊಸ ಗುರುತಿನಿಂದ ಬಿಂಬಿಸಲಾಗುತ್ತಿದೆ. ಜೈಲಿನಿಂದ ಬಿಡುಗಡೆ ಬಳಿಕ ಎರಡು ವರ್ಷಗಳಲ್ಲಿ 3 ದಿನಗಳಿಗಿಂತ ಹೆಚ್ಚು ಕಾಲ ನಾನು ಮನೆಗೆ ಬಂದಿಲ್ಲ. ಏಕೆಂದರೆ ಇಲ್ಲಿನ ಕೆಲವು ಗೂಂಡಾಗಳು ನಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ನಾನು ಜೈಲಿನಿಂದ ಬಿಡುಗಡೆಯಾದ ಸ್ವಲ್ಪ ದಿನಗಳಲ್ಲೇ ಗುಂಪೊಂದು ನನ್ನ ಮೇಲೆ ಹಲ್ಲೆ ನಡೆಸಿತ್ತು. ಈ ಬಗ್ಗೆ ಪೊಲೀಸ್ ದೂರು ಕೊಟ್ಟಿದ್ದು, ಲಘು ಸೆಕ್ಸನ್‌ಗಳಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನನಗೆ ಮನೆ ಬಿಟ್ಟು ದೂರ ತೆರಳುವಂತೆ ಪೊಲೀಸರು ನಿರಂತರವಾಗಿ ಹೇಳುತ್ತಲೇ ಬಂದಿದ್ದಾರೆ. ಇಂದೋರ್‌ನಿಂದ 30 ಕಿಮೀ ದೂರದಲ್ಲಿರುವ ಪಿತಾಂಪುರ್ ಕೈಗಾರಿಕಾ ಪ್ರದೇಶದಲ್ಲಿ ಪಾಲಿಥಿನ್ ಚೀಲಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದೆ. ನನ್ನ ಪ್ರಕರಣದ ಬಗ್ಗೆ ತಿಳಿದ ನಂತರ ಇಂದೋರ್‌ನ ಕಂಪನಿಯಿಂದ ನನ್ನನ್ನು ವಜಾ ಮಾಡಲಾಗಿದೆ ಎಂದು ಹೇಳಿದ್ದಾರೆ.
ಈ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ, ಈ ಆರೋಪಗಳನ್ನು ನಿರಾಕರಿಸಿದೆ ಮತ್ತು ಪ್ರಚಾರ ಗಿಟ್ಟಿಸಲು ಹಾಸ್ಯನಟ ನಳಿನ್ ಯಾದವ್ ರೂಪಿಸಿದ ತಂತ್ರ ಎಂದು ಹೇಳಿದೆ.
ಇದನ್ನು ಓದಿ: ವಾಲ್ಮೀಕಿ ನಿಗಮದ ಖಾತೆಯಿಂದ ₹87 ಕೋಟಿ ಹಣ ವರ್ಗಾವಣೆ: ಸಚಿವ ಬಿ. ನಾಗೇಂದ್ರ ಸ್ಪಷ್ಟನೆ


