ಇಸ್ರೇಲ್ ರಫಾ ಮೇಲಿನ ಆಕ್ರಮಣದ ಮಧ್ಯೆ ‘ಆಲ್ ಐಸ್ ಆನ್ ರಫಾ’ ಎಂಬ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಸದ್ದು ಮಾಡಿದೆ. ಭಾರತೀಯ ಸೆಲೆಬ್ರಿಟಿಗಳು ಹೆಚ್ಚಾಗಿ ಈ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ. ಸಿನಿಮಾ ನಟ ದುಲ್ಕರ್ ಸಲ್ಮಾನ್, ಸಮಂತಾ ರುತ್ ಪ್ರಭು, ಟೊವಿನೋ ಥಾಮಸ್, ಕೀರ್ತಿ ಸುರೇಶ್, ಮಾಧುರಿ ದೀಕ್ಷಿತ್, ವರುಣ್ ಧವನ್, ವಿಜಯ್ ವರ್ಮಾ ಮತ್ತು ಇತರ ಹಲವು ಸೆಲೆಬ್ರಿಟಿಗಳು ರಫಾ ಮೇಲಿನ ಇಸ್ರೇಲ್ ಬಾಂಬ್ ದಾಳಿಯನ್ನು ಖಂಡಿಸಿ ‘ಆಲ್ ಐಸ್ ಆನ್ ರಫಾ’ ಎಂಬ ಪೋಸ್ಟ್‌ನ್ನು ಹಂಚಿಕೊಂಡಿದ್ದಾರೆ.
‘ಆಲ್ ಐಸ್ ಆನ್ ರಫಾ’ ಎಂಬ AI- ರಚಿತವಾದ ಚಿತ್ರದ ಪೋಸ್ಟ್‌ನ್ನು ಇನ್ಸ್ಟಾಗ್ರಾಂವೊಂದರಲ್ಲೇ 33 ದಶಲಕ್ಷಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ಚಿತ್ರವು ರಫಾದಲ್ಲಿನ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ, ಅಲ್ಲಿನ ನಿರಾಶ್ರಿತ ಜನರನ್ನು ಇಸ್ರೇಲ್ ಯುದ್ಧ ಟ್ಯಾಂಕ್‌ಗಳು ಮತ್ತು ಮಿಲಿಟರಿ ಪಡೆಗಳು ಸುತ್ತುವರಿದಿರುವುದನ್ನು ಪ್ರತಿಬಿಂಬಿಸುತ್ತದೆ.
‘ಆಲ್ ಐಸ್ ಆನ್ ರಾಫಾ’ ಎಂಬ ಪದವು ಫೆಬ್ರವರಿ 2024ರಲ್ಲಿ ಆಕ್ರಮಿತ ಪ್ಯಾಲೇಸ್ತೀನ್ ಪ್ರಾಂತ್ಯಗಳ WHOನ ಕಚೇರಿಯ ನಿರ್ದೇಶಕ ಡಾ ರಿಕ್ ಪೀಪರ್‌ಕಾರ್ನ್ ಮೊದಲು ಬಳಕೆ ಮಾಡಿದ್ದಾರೆ. ‘ರಫಾದ ಮೇಲೆ ಎಲ್ಲರ ಕಣ್ಣುಗಳು’ ಎಂಬುವುದು ಗಾಝಾದ ರಫಾದಲ್ಲಿ ನಡೆಯುತ್ತಿರುವ ನರಮೇಧವನ್ನು ಉಲ್ಲೇಖಿಸುವ ಪದಗುಚ್ಛವಾಗಿದೆ. ಇಸ್ರೇಲ್ ರಫಾ ಮೇಲೆ ದಾಳಿ ನಡೆಸಿದರೆ ಅದು ಮಹಾ ದುರಂತ ಎಂದು ಡಾ. ಪೀಪರ್‌ಕಾರ್ನ್ ಹೇಳಿದ್ದಾರೆ. ರಾಫಾದಿಂದ WHOನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೀಪರ್‌ಕಾರ್ನ್ ‘ಎಲ್ಲಾ ಕಣ್ಣುಗಳು ರಫಾ ಮೇಲೆ ಇವೆ” ಎಂದು ಹೇಳಿದ್ದಾರೆ.
ಮೇ 26ರಂದು, ಇಸ್ರೇಲ್ ವಾಯುಪಡೆಗಳು ಇಸ್ರೇಲ್‌ನ ನಿರಾಶ್ರಿತರಿರುವ ಪ್ರದೇಶದ ಮೇಲೆ ನಡೆಸಿದ ವೈಮಾನಿಕ ದಾಳಿಗೆ ಕನಿಷ್ಠ 45 ಜನರ ಹತ್ಯೆ ನಡೆದಿದೆ. 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ಯಾಲೆಸ್ತೀನ್ ನಿರಾಶ್ರಿತರಿಗಾಗಿರುವ ಯುನೈಟೆಡ್ ನೇಷನ್ಸ್ ರಿಲೀಫ್ ಅಂಡ್ ವರ್ಕ್ಸ್ ಏಜೆನ್ಸಿ(UNRWA) ಪ್ರಕಾರ, ಜನರು ರಫಾಗೆ ಓಡಿಹೋಗುವಂತೆ ಇಸ್ರೇಲ್ ಮಾಡಿದೆ. ಬಾಂಬ್ ಸ್ಫೋಟಗಳು, ಆಹಾರ ಮತ್ತು ನೀರಿನ ಕೊರತೆ, ತ್ಯಾಜ್ಯದ ರಾಶಿಗಳು ಮತ್ತು ಸೂಕ್ತವಲ್ಲದ ಜೀವನ ಪರಿಸ್ಥಿತಿಗಳ ನಡುವೆ ಇದು ಸಂಭವಿಸಿದೆ. ಗಾಝಾವು “ಭೂಮಿಯ ಮೇಲಿನ ನರಕ”ವಾಗಿದೆ ಮತ್ತು “ಗಾಝಾ ಪಟ್ಟಿಯಲ್ಲಿ ಯಾವುದೇ ಸುರಕ್ಷಿತ ಸ್ಥಳವಿಲ್ಲ” ಎಂದು UNRWA ಹೇಳಿದೆ. ಯಾರೂ ಸುರಕ್ಷಿತವಾಗಿಲ್ಲ, ನಾಗರಿಕರು ಸುರಕ್ಷಿತವಾಗಿಲ್ಲ, ನೆರವು ಕಾರ್ಯಕರ್ತರು ಸುರಕ್ಷಿತವಾಗಿಲ್ಲ, ನಮಗೆ ಕದನ ವಿರಾಮ ಬೇಕು ಎಂದು ಹೇಳಿದೆ.
ಈ ಮಧ್ಯೆ ರಫಾ ಮೇಲಿನ ದಾಳಿಯನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು “ದುರಂತ’ ಎಂದು ಕರೆದಿದ್ದಾರೆ. ಮುಗ್ಧ ನಾಗರಿಕರಿಗೆ ಹಾನಿಯಾಗದಂತೆ ನೋಡಿಕೊಳ್ಳುವ ನಮ್ಮ ಪ್ರಯತ್ನಗಳ ಹೊರತಾಗಿಯೂ, ನಿನ್ನೆ ರಾತ್ರಿ ಒಂದು ತಪ್ಪುಗಿ ದುರಂತ ಸಂಭವಿಸಿದೆ. ನಾವು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಕಳೆದ ಎರಡು ವಾರಗಳಿಂದ ಇಸ್ರೇಲ್ ರಾಫಾ ಮೇಲೆ ದಾಳಿ ನಡೆಸುತ್ತಿದೆ. ರಾಫಾ ಮೇಲಿನ ದಾಳಿಯನ್ನು ಹಮಾಸ್‌ನ್ನು ಸೋಲಿಸುವ ತನ್ನ ಕಾರ್ಯತಂತ್ರದ ಭಾಗ ಎಂದು ಇಸ್ರೇಲ್ ಹೇಳಿಕೊಂಡಿದೆ. ಮೇ 24 ರಂದು, ರಫಾದಲ್ಲಿ ಇಸ್ರೇಲ್ ತನ್ನ ಆಕ್ರಮಣಕಾರಿ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ICJ ಆದೇಶಿಸಿದೆ. ನ್ಯಾಯಾಲಯದ ಸೂಚನೆಯ ಹೊರತಾಗಿಯೂ, ಇಸ್ರೇಲ್ ರಫಾದಲ್ಲಿ ತನ್ನ ದಾಳಿಯನ್ನು ಮುಂದುವರೆಸಿದ್ದು, ಮೇ 25ರಿಂದ 60ಕ್ಕೂ ಹೆಚ್ಚು ಅಮಾಯಕ ನಾಗರಿಕರನ್ನು ಹತ್ಯೆ ಮಾಡಿದೆ.
ರಫಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ 900 ಕೆಜಿ ತೂಕದ 7 ಬಾಂಬ್‌ಗಳನ್ನು ಹಾಕಿದೆ. ಇಸ್ರೇಲ್ ಸೈನ್ಯವು “ನಿಖರವಾದ ಯುದ್ಧಸಾಮಗ್ರಿಗಳೊಂದಿಗೆ” ರಫಾವನ್ನು ಗುರಿಯಾಗಿಸಿಕೊಂಡಿದೆ. ದಾಳಿಯ ಮೊದಲು ಆ ಪ್ರದೇಶದಿಂದ ಸ್ಥಳಾಂತರವಾಗುವಂತೆ ಇಸ್ರೇಲ್ ಮಿಲಿಟರಿ ಪಡೆ ನಾಗರಿಕರಿಗೆ ಎಚ್ಚರಿಕೆ ನೀಡಿಲ್ಲ ಎಂದು ಗಾಝಾದ ಸರ್ಕಾರಿ ಮಾಧ್ಯಮ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
In the past 3 weeks around 1 million people have fled #Rafah
This happened with nowhere safe to go & amidst bombardments, lack of food & water, piles of waste & unsuitable living conditions
Day after day, providing assistance & protection becomes nearly impossible#CeasefireNow pic.twitter.com/CyVE0angws
— UNRWA (@UNRWA) May 28, 2024
ಇದನ್ನು ಓದಿ: ಬಿಜೆಪಿ ಕಾರ್ಯಕರ್ತರ ವಿರುದ್ಧ ಕಿರುಕುಳ ಆರೋಪ ಮಾಡಿದ ಕಾಮಿಡಿಯನ್ ನಳಿನ್ ಯಾದವ್


