ಪ್ರಧಾನಿ ನರೇಂದ್ರ ಮೋದಿಯವರು ಗುರುವಾರದಿಂದ ಕನ್ಯಾಕುಮಾರಿಯಲ್ಲಿ ಧ್ಯಾನವನ್ನು ಮಾಡುವುದಾಗಿ ಹೇಳಿಕೊಂಡಿದ್ದಾರೆ. ಕನ್ಯಾಕುಮಾರಿಯಲ್ಲಿ ಸ್ವಾಮಿ ವಿವೇಕಾನಂದರು ಈ ಹಿಂದೆ ಧ್ಯಾನ ಮಾಡಿದ್ದ ‘ಧ್ಯಾನ ಮಂಟಪಂ’ನಲ್ಲಿ ಲೋಕಸಭಾ ಚುನಾವಣಾ ಪ್ರಚಾರದ ನಂತರ ಮೋದಿ ಧ್ಯಾನ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಲೋಕಸಭೆ ಚುನಾವಣೆಯ 7ನೇ ಹಂತದ ಮತದಾನ ಜೂ.1ರಂದು ನಡೆಯಲಿದೆ. ಈ ಹಿನ್ನೆಲೆ ಮೇ 30ರಿಂದ ಮೌನ ಅವಧಿ ಆರಂಭವಾಗಲಿದೆ. ಆದರೆ ಇದೇ ಸಮಯದಲ್ಲಿ ಪ್ರಧಾನಿ ಮೇ 30ರ ಸಂಜೆಯಿಂದ ತಮ್ಮ ಧ್ಯಾನವನ್ನು ಪ್ರಾರಂಭಿಸುತ್ತಾರೆ. ಇದನ್ನು ಟಿವಿ ವಾಹಿನಿಗಳು ನೇರ ಪ್ರಸಾರ ಮಾಡಲಿದ್ದು, ಇದಕ್ಕೆ ಪ್ರತಿಪಕ್ಷಗಳು ವ್ಯಾಪಕವಾದ ವಿರೋಧವನ್ನು ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ, ಪ್ರಧಾನಿ ಮೇ 30ರ ಸಂಜೆಯಿಂದ ತಮ್ಮ ಧ್ಯಾನವನ್ನು ಪ್ರಾರಂಭಿಸುತ್ತಾರೆ ಮತ್ತು ನಾವು ಅದರ ಬಗ್ಗೆ ದೂರು ನೀಡಿದ್ದೇವೆ. ಜೂ.1ರಂದು ಮತದಾನ ಇರುವ ಹಿನ್ನೆಲೆ ಮೇ 30ರಿಂದ ಮೌನ ಅವಧಿ ಪ್ರಾರಂಭವಾಗಲಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಮೋದಿಯ ಈ ಘೋಷಣೆ ಚುನಾವಣೆಯ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಜೂನ್ 1ರ ಸಂಜೆಯಿಂದ ಪ್ರಧಾನಿ 24-48 ಗಂಟೆಗಳ ನಂತರ ತನ್ನ ಧ್ಯಾನವನ್ನು ಪ್ರಾರಂಭಿಸಬಹುದು. ಅವರು ಮೇ 30ರಿಂದ ಧ್ಯಾನ ಮಾಡಲು ಬಯಸಿದರೆ, ನಂತರ ಅದನ್ನು ಟಿವಿ ಅಥವಾ ಮುದ್ರಣ ಮಾಧ್ಯಮವು ಪ್ರಸಾರ ಮಾಡದಂತೆ ಚುನಾವಣಾ ಆಯೋಗ ನಿರ್ಬಂಧಿಸಬೇಕು ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್, ಮೋದಿ ‘ಪ್ರಾಯಶ್ಚಿತ್ತ’ಕ್ಕಾಗಿ ಕನ್ಯಾಕುಮಾರಿಗೆ ಹೋಗುವುದು ಒಳ್ಳೆಯದು. ವಿವೇಕದ ಬಗ್ಗೆ ಅರ್ಥ ಗೊತ್ತಿಲ್ಲದ ಅವರು ಏನು ‘ಧ್ಯಾನ’ ಮಾಡುತ್ತಾರೆ’. ಸ್ವಾಮಿ ವಿವೇಕಾನಂದರ ಬರಹಗಳು ಮತ್ತು ಭಾಷಣಗಳಿಂದ ಸ್ಫೂರ್ತಿ ಪಡೆಯಲು ಹೊರಟರೆ ಒಳ್ಳೆಯದು. ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತನ್ನ ಸಾಧನೆಗಳ ಬಗ್ಗೆ ಮಾತನಾಡುವುದಿಲ್ಲ. ಕಳೆದ 10 ವರ್ಷಗಳಿಂದ ಮೋದಿ ಏನು ಮಾಡಿದ್ದಾರೆ? ಏನು ಮಾಡಿದ್ದಾರೆಂದು ಪ್ರಧಾನಿ ತಮ್ಮ ಭಾಷಣಗಳಲ್ಲಿ ಹೇಳಿದ್ದಾರೆಯೇ? ಅವರ ಸಾಧನೆಗಳೇನು? ಕೊಟ್ಟ ಭರವಸೆಗಳನ್ನು ಈಡೇರಿಸುವಲ್ಲಿ ಅವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಕಪಿಲ್ ಸಿಬಲ್ ಟೀಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪ.ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ,ಯಾರಾದರೂ ಹೋಗಿ ಧ್ಯಾನ ಮಾಡಬಹುದು… ಆದರೆ, ಧ್ಯಾನ ಮಾಡುವಾಗ ಯಾರಾದರೂ ಕ್ಯಾಮೆರಾ ತೆಗೆದುಕೊಳ್ಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ಕನ್ಯಾಕುಮಾರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಧ್ಯಾನವನ್ನು ದೂರದರ್ಶನದಲ್ಲಿ ಪ್ರಸಾರ ಮಾಡಿದರೆ ಅದು ಮಾದರಿ ನೀತಿ ಸಂಹಿತೆ (ಎಂಸಿಸಿ) ಉಲ್ಲಂಘನೆಯಾಗುತ್ತದೆ ಎಂದು ಹೇಳಿದ ಮಮತಾ ಬ್ಯಾನರ್ಜಿ ಈ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.
ಇಂತಹ ಪರೋಕ್ಷ ಪ್ರಚಾರಕ್ಕೆ ಚುನಾವಣಾ ಆಯೋಗ ಅನುಮತಿ ನೀಡಬಾರದು ಎಂದು ಕಾಂಗ್ರೆಸ್ ತಮಿಳುನಾಡು ಘಟಕದ ಮುಖ್ಯಸ್ಥ ಕೆ ಸೆಲ್ವಪೆರುಂತಗೈ ಹೇಳಿದ್ದಾರೆ. ಚುನಾವಣಾ ಆಯೋಗವು ಪ್ರಧಾನಿಯವರ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಬೇಕು, ಇದು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತದೆ. ಅಧಿಕೃತ ಪ್ರಚಾರದ ಅವಧಿ ಮುಗಿದ ನಂತರ ಇದು ಸೂಚಿತ ಪ್ರಚಾರದ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
VIDEO | Lok Sabha Elections 2024: "The PM will start his meditation from the evening of May 30 and we have complained about that. We all know that the silence period will begin from May 30 and thus his declaration is a violation of the MCC. The PM can start his meditation after… pic.twitter.com/Hm0xXxmXA2
— Press Trust of India (@PTI_News) May 29, 2024
ಇದನ್ನು ಓದಿ: ಮಧ್ಯಪ್ರದೇಶ: ಬುಡಕಟ್ಟು ಸಮುದಾಯದ ವ್ಯಕ್ತಿಯೋರ್ವನಿಗೆ ಥಳಿಸಿ ಮೂತ್ರ ಕುಡಿಯುವಂತೆ ಬಲವಂತ


