ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.
ಅತ್ಯಾಚಾರ ಸೇರಿದಂತೆ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಪ್ರಜ್ವಲ್ ಪರ ವಕೀಲ ಅರುಣ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ.
ಹಾಸನದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ ವೇಳೆ ಲೈಂಗಿಕ ದೌರ್ಜನ್ಯದ ವಿಡಿಯೋ ವೈರಲ್ ಆಗಿತ್ತು. ಎಪ್ರಿಲ್ 26ರಂದು ನಡೆದ ಎರಡನೇ ಹಂತದ ಚುನಾವಣೆಯ ನಂತರ ಪ್ರಜ್ವಲ್ ಅವರು ದೇಶವನ್ನು ತೊರೆದಿದ್ದರು. ಈ ಕುರಿತ ಆರೋಪಗಳ ತನಿಖೆಗಾಗಿ ಕರ್ನಾಟಕ ಸರ್ಕಾರವು ಎಸ್‌ಐಟಿಯನ್ನು ರಚಿಸಿತ್ತು. ಬಳಿಕ ಪ್ರಜ್ವಲ್ ಪತ್ತೆಗೆ ಲುಕ್ ಔಟ್ ನೊಟೀಸ್ ಮತ್ತು ರೆಡ್ ಕಾರ್ನರ್ ನೊಟೀಸ್ ಜಾರಿ ಮಾಡಲಾಗಿತ್ತು. ಪ್ರಜ್ವಲ್ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್‌ನ್ನು ಹಿಂಪಡೆಯಲು ವಿನಂತಿಯೊಂದಿಗೆ ಕೇಂದ್ರ ಸರಕಾರವನ್ನು ಕೂಡ ಸಂಪರ್ಕಿಸಲಾಗಿತ್ತು.
ನಾಪತ್ತೆಯಾದ ಒಂದು ತಿಂಗಳ ನಂತರ, ಪ್ರಜ್ವಲ್ ಸೋಮವಾರದಂದು ವೀಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ತಾನು ತನಿಖೆಗೆ ಸಹಕರಿಸುತ್ತೇನೆ ಮತ್ತು ಮೇ 31ರಂದು ಬೆಳಿಗ್ಗೆ 10 ಗಂಟೆಗೆ ಎಸ್‌ಐಟಿ ಮುಂದೆ ಹಾಜರಾಗುತ್ತೇನೆ. ನನಗೆ ನ್ಯಾಯಾಂಗದ ಮೇಲೆ ನಂಬಿಕೆಯಿದ್ದು, ನ್ಯಾಯಾಲಯದ ಮೂಲಕ ಸುಳ್ಳು ಪ್ರಕರಣಗಳಿಂದ ಮುಕ್ತಿ ಹೊಂದುವ ವಿಶ್ವಾಸವಿದೆ ಎಂದು ಹೇಳಿದ್ದರು.
ಇದರ ಬೆನ್ನಲ್ಲಿ ಮೇ 30ರಂದು ಮ್ಯೂನಿಚ್‌ನಿಂದ ಬೆಂಗಳೂರಿಗೆ ಹಿಂತಿರುಗಲು ಪ್ರಜ್ವಲ್ ಹೆಸರಿನಲ್ಲಿ ವಿಮಾನ ಟಿಕೆಟ್ ಬುಕ್ ಆಗಿದೆ. ಪ್ರಜ್ವಲ್ ವಿರುದ್ಧ ಈಗಾಗಲೇ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದ್ದು, ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಬಹುದಾಗಿದೆ.
ಪ್ರಜ್ವಲ್ ರೇವಣ್ಣ ವಾಪಸ್ ಆಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ ಪರಮೇಶ್ವರ್, ಪ್ರಜ್ವಲ್ ವಿರುದ್ಧ ವಾರಂಟ್ ಜಾರಿಯಾಗಿರುವುದರಿಂದ ಬಂಧಿಸಬೇಕಾಗುತ್ತದೆ. ಇದಕ್ಕೆ ಎಸ್ಐಟಿಯವರು ಬೇಕಿದ್ದ ಪ್ರಕ್ರಿಯೆ ಆರಂಭಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ವಿಡಿಯೋ ವೈರಲ್ ಬೆನ್ನಲ್ಲಿ ಸಂತ್ರಸ್ತೆಯೊಬ್ಬರು ಹೊಳೆನರಸೀಪುರ ಪೊಲೀಸ್ ಠಾಣೆಗೆ ಎಚ್‌ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಅಪ್ಪ-ಮಗನ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 354 (ಎ), 354 (ಡಿ) ಮತ್ತು 506, 509 ಅಡಿಯಲ್ಲಿ ದೂರು ದಾಖಲಿಸಲಾಗಿತ್ತು.


