ಯೂಟ್ಯೂಬರ್ ಧ್ರುವ್ ರಾಥಿ ಪ್ರಧಾನಿ ಮೋದಿಯನ್ನು ಟೀಕಿಸಿದ್ದ ವಿಡಿಯೋವನ್ನು ಹಂಚಿಕೊಂಡ ವಕೀಲರೊಬ್ಬರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಸ್ವಯಂಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿದ್ದಾರೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಲಿಬರೇಶನ್‌ನ ಮಹಾರಾಷ್ಟ್ರ ಕಾರ್ಯದರ್ಶಿಯೂ ಆಗಿರುವ ವಕೀಲ ಆದೇಶ್ ಬನ್ಸೋಡೆ ‘ಮೈಂಡ್ ಆಫ್ ಎ ಡಿಕ್ಟೇಟರ್’ ಎಂಬ ಶೀರ್ಷಿಕೆಯ ಧ್ರುವ್ ರಾಥಿ ಅವರ ವೀಡಿಯೊ ಲಿಂಕ್‌ನ್ನು ವಸಾಯಿಯ ಬಾರ್ ಅಸೋಸಿಯೇಷನ್ ವಾಟ್ಸಾಪ್ ಗ್ರೂಪ್‌ಗೆ ಹಂಚಿಕೊಂಡಿದ್ದಾರೆ. ಮತದಾನ ಮಾಡುವ ಮೊದಲು ವೀಡಿಯೊವನ್ನು ವೀಕ್ಷಿಸಿ ಎಂಬ ಸಂದೇಶದೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಮೇ 20ರಂದು ಐದನೇ ಹಂತದ ಲೋಕಸಭೆ ಚುನಾವಣೆ ವೇಳೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿತ್ತು.
ಬನ್ಸೋಡೆ ಅವರು ಹಂಚಿಕೊಂಡಿರುವ ವೀಡಿಯೊದ ಬಗ್ಗೆ ಮತ್ತೋರ್ವ ವಕೀಲರು ಪೊಲೀಸರಿಗೆ ಪತ್ರ ಬರೆದ ನಂತರ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿದ್ದಾರೆ. ಎಂಬಿವಿವಿ ಪೊಲೀಸ್‌ನ ರಹಸ್ಯ ವಿಭಾಗದ ಹೆಡ್‌ಕಾನ್ಸ್‌ಟೇಬಲ್ ದೂರಿನ ಮೇರೆಗೆ ಎಫ್‌ಐಆರ್ ದಾಖಲಾಗಿದೆ. ಎಫ್ಐಆರ್‌ನಲ್ಲಿ ಶೇರ್ ಮಾಡಿರುವ ವಿಡಿಯೋ ಮತ್ತು ಅದರ ಸಂದೇಶವು ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಸುಳ್ಳು ಬಿಂಬನೆ ಮೂಲಕ ಮತದಾರರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದೆ. ಎಂಬಿವಿವಿ ಪೊಲೀಸ್ ಕಮಿಷನರ್ ಮಧುಕರ್ ಪಾಂಡೆ ತಮ್ಮ ಕಮಿಷನರೇಟ್‌ಗೆ ಮೇ 18 ಮತ್ತು ಮೇ 20ರ ನಡುವೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ನಿಷೇಧಾಜ್ಞೆ ಹೊರಡಿಸಿದ್ದರು. ವಿಡಿಯೋ ಹಂಚಿಕೆಯು ಕಮಿಷನರ್ ಅವರ ಆದೇಶದ ಉಲ್ಲಂಘನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಎಫ್‌ಐಆರ್ ಬಗ್ಗೆ ಪ್ರತಿಕ್ರಿಯಿಸಿದ ಬನ್ಸೋಡೆ, ಎಫ್‌ಐಆರ್ ಕಾನೂನುಬಾಹಿರ, ಇದು ಜನರ ಧ್ವನಿಯನ್ನು ಹತ್ತಿಕ್ಕುವ ರಾಜ್ಯದ ನಡೆಯ ಭಾಗ ಎಂದು ಆರೋಪಿಸಿದ್ದಾರೆ. ಐಪಿಸಿ ಸೆಕ್ಷನ್ 188ರಡಿಯಲ್ಲಿ ಪ್ರಕರಣ ದಾಖಲಿಸುವ ಮುನ್ನ ಪೊಲೀಸರು ಸಂಬಂಧಿತ ಕೋರ್ಟಿನಿಂದ ಅನುಮತಿ ಪಡೆಯಬೇಕಿದೆ. ಈ ನಿರ್ದಿಷ್ಟ ವೀಡಿಯೋವನ್ನು ಕೋಟ್ಯಂತರ ಜನರು ವೀಕ್ಷಿಸಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ, ಅವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಲಾಗುವುದೇ? ಸಿಆರ್‌ಪಿಸಿ ಸೆಕ್ಷನ್ 195ರ ಪ್ರಕಾರ, ಐಪಿಸಿಯ ಸೆಕ್ಷನ್ 188ರಡಿಯಲ್ಲಿ ಎಫ್‌ಐಆರ್ ದಾಖಲಿಸುವ ಮೊದಲು ಪೊಲೀಸರು ಸಂಬಂಧಪಟ್ಟ ನ್ಯಾಯಾಲಯದಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ ಎಂದು ಬನ್ಸೋಡೆ ಹೇಳಿದ್ದಾರೆ.
ಇದನ್ನು ಓದಿ: ಜಮ್ಮು-ಕಾಶ್ಮೀರ: ಠಾಣೆಗೆ ನುಗ್ಗಿ ಪೊಲೀಸರಿಗೆ ಥಳಿಸಿದ ಸೇನಾಧಿಕಾರಿಗಳು


