ಇಂಡಿಯಾ ಮೈತ್ರಿಕೂಟವು ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಜನಾದೇಶ ಪಡೆಯಲಿದೆ ಮತ್ತು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ 48 ಗಂಟೆಗಳಲ್ಲಿ ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ಇಂಡಿಯಾ ಮೈತ್ರಿಕೂಟದಲ್ಲಿ ಗರಿಷ್ಠ ಸ್ಥಾನಗಳನ್ನು ಪಡೆಯುವ ಪಕ್ಷವು ಮೈತ್ರಿಕೂಟದ ನಾಯಕತ್ವಕ್ಕೆ “ನೈಸರ್ಗಿಕ ಹಕ್ಕುದಾರ” ಆಗಿರುತ್ತದೆ. ಇಂಡಿಯಾ ಮೈತ್ರಿಕೂಟ ಲೋಕಸಭೆಯಲ್ಲಿ ಬಹುಮತಕ್ಕೆ ಬೇಕಾದ 272 ಅಂಕಗಳಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ. ಇಂಡಿಯಾ ಮೈತ್ರಿಕೂಟವು ಬಹುಮತ ಪಡೆದಾಗ, ಕೆಲವು ಎನ್‌ಡಿಎ ಮೈತ್ರಿ ಪಕ್ಷಗಳು ಇಂಡಿಯಾ ಮೈತ್ರಿ ಕೂಟದ ಜೊತೆ ಸೇರಲು ಮುಂದೆ ಬರಬಹುದು, ಈ ವೇಳೆ ಮೈತ್ರಿಗೆ ಸೇರಿಸಬೇಕೇ ಅಥವಾ ಬೇಡವೇ ಎಂಬುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಬೇಕು ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ಇಂಡಿಯಾ ಮೈತ್ರಿಕೂಟಕ್ಕೆ ಸೇರಿಸಲಾಗುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಜೈರಾಮ್ ರಮೇಶ್, ನಿತೀಶ್ ಕುಮಾರ್ ಪಲ್ಟಿ ರಾಜಕಾರಣಕ್ಕೆ ಯಾವಾಗಲೂ ಹೆಸರುವಾಸಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ನಾಯ್ಡು ಅವರು 2019ರಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದರು. ಇಂಡಿಯಾ ಮೈತ್ರಿ ಪಕ್ಷಗಳಿಗೆ ಜನಾದೇಶ ಸಿಕ್ಕಾಗ, ಇಂಡಿಯಾ ಮೈತ್ರಿಕೂಟದ ಪಕ್ಷಗಳು ಮಾತ್ರವಲ್ಲದೆ ಕೆಲವು ಎನ್‌ಡಿಎ ಮೈತ್ರಿ ಪಕ್ಷಗಳು ಕೂಡ ಒಕ್ಕೂಟಕ್ಕೆ ಸೇರಬಹುದು. ಕಾಂಗ್ರೆಸ್ ಹೈಕಮಾಂಡ್, ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಎನ್‌ಡಿಎ ಮಿತ್ರಪಕ್ಷಗಳನ್ನು ಇಂಡಿಯಾ ಕೂಟದ ಜೊತೆ ಸೇರಿಸಬೇಕೆ ಎಂದು ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ. ಇಂಡಿಯಾ ಮತ್ತು ಎನ್‌ಡಿಎ ನಡುವಿನ ವ್ಯತ್ಯಾಸವೆಂದರೆ ಎರಡು ‘ಐ'(I)ಗಳಾಗಿದೆ. ಅದರಲ್ಲಿ ಒಂದು ‘ಇನ್ಸಾನಿಯತ್’ ಮತ್ತು ಇನ್ನೊಂದು ‘ಇಮಾಂದಾರಿ’ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ‘ಇಮಾಂದಾರಿ’ ಎಂದರೆ ಪ್ರಾಮಾಣಿಕತೆ ಮತ್ತು ‘ಇನ್ಸಾನಿಯತ್’ ಎಂದರೆ ಮಾನವೀಯತೆ ಎಂಬ ಅರ್ಥವನ್ನು ಹೊಂದಿದೆ. ಎನ್‌ಡಿಎ ಒಳಗೆ ಇರುವ ಮಾನವೀಯತೆಯನ್ನು ಹೊಂದಿರುವ ಮತ್ತು ಪ್ರಾಮಾಣಿಕತೆಯನ್ನು ಹೊಂದಿರುವ ಪಕ್ಷವನ್ನು ಇಂಡಿಯಾ ಮೈತ್ರಿಕೂಟದ ಜೊತೆ ಸೇರಿಸುವುದಾಗಿ ಜೈರಾಮ್ ರಮೇಶ್ ಹೇಳಿದ್ದಾರೆ.
ನಾವು ದೊಡ್ಡ ಮಟ್ಟದಲ್ಲಿ ಗೆಲುವನ್ನು ಹೊಂದಲಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಸೇಡಿನ ರಾಜಕೀಯ ಮಾಡುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ವಿವೇಕಾನಂದ ರಾಕ್ ಸ್ಮಾರಕಕ್ಕೆ ಹೋಗಿ ಎರಡು ದಿನಗಳ ಕಾಲ ಧ್ಯಾನಸ್ಥರಾಗಿರುತ್ತಾರೆ. ಅದೇ ವಿವೇಕಾನಂದ ಸ್ಮಾರಕದಿಂದ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್ 7, 2022ರಂದು ಭಾರತ್ ಜೋಡೋ ಯಾತ್ರೆಯನ್ನು ಪ್ರಾರಂಭಿಸಿದ್ದರು. ಮೋದಿ ನಿವೃತ್ತಿಯ ನಂತರದ ಜೀವನ ಏನಾಗಲಿದೆ ಎಂಬುದರ ಕುರಿತು ಧ್ಯಾನಿಸಲಿದ್ದಾರೆ ಎಂದು ನನಗೆ ಖಾತ್ರಿಯಿದೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಇದನ್ನು ಓದಿ:ಮೋದಿ ಕುರಿತ ಧ್ರುವ್ ರಾಥಿ ವಿಡಿಯೋ ಹಂಚಿಕೊಂಡ ವಕೀಲನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು


