ಹಿಮಾಲಯದ ರಾಜ್ಯಗಳಾದ ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇಂದು ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ ಅಂತಿಮ ತೀರ್ಪು ಹೊರಬೀಳಲಿದೆ.
ಅರುಣಾಚಲದಲ್ಲಿ 10 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ. ಆರಂಭಿಕ ಟ್ರೆಂಡ್‌ಗಳಲ್ಲಿ, ಬಿಜೆಪಿ ಈಗ ಅರ್ಧ ಗಡಿಯನ್ನು ದಾಟಿದೆ, 10 ಗೆಲುವು ಮತ್ತು 25 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿಯ ಮಿತ್ರಪಕ್ಷ ಕಾನ್ರಾಡ್ ಸಂಗ್ಮಾ ಅವರ ನ್ಯಾಷನಲ್ ಪೀಪಲ್ಸ್ ಪಾರ್ಟಿ ಆರು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಅರುಣಾಚಲದಲ್ಲಿ ಬಿಜೆಪಿಯು 60ರಲ್ಲಿ 41 ಸ್ಥಾನಗಳನ್ನು ಜಯಿಸಿತ್ತು. ಜೆಡಿಯು 7, ಎನ್‌ಪಿಪಿ 5, ಕಾಂಗ್ರೆಸ್ 4 ಮತ್ತು ಪಿಪಿಎ 1 ಸ್ಥಾನ ಗೆದ್ದುಕೊಂಡಿದ್ದರೆ, ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯಿಸಿದ್ದರು.
ಯಾವುದೇ ಪಕ್ಷ ಬಹುಮತ ಸಾಬೀತು ಮಾಡಲು ಅರುಣಾಚಲ ಪ್ರದೇಶದಲ್ಲಿ 31 ಸ್ಥಾನಗಳನ್ನು ಹಾಗೂ ಸಿಕ್ಕಿಂನಲ್ಲಿ 17 ಕ್ಷೇತ್ರಗಳನ್ನು ಗೆಲ್ಲಬೇಕಿದೆ.
ಸಿಕ್ಕಿಂನಲ್ಲಿರುವ 32 ಸ್ಥಾನಗಳ ಪೈಕಿ 24 ಕಡೆ ಎಸ್‌ಕೆಎಂ ಆರಂಭಿಕ ಮುನ್ನಡೆ ಸಾಧಿಸಿದೆ. ಸಿಕ್ಕಿಂನ 32 ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. 2019ರಲ್ಲಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ 17 ಹಾಗೂ ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್ 15 ಸ್ಥಾನಗಳನ್ನು ಗೆದ್ದುಕೊಂಡಿತ್ತು.
ಇದನ್ನು ಓದಿ: ಲೋಕಸಭೆ ಚುನಾವಣೆ-2024: ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಗೆ ಬಹುಮತ; ಇಲ್ಲಿದೆ ಚುನಾವಣೋತ್ತರ ಸಮೀಕ್ಷಾ ಫಲಿತಾಂಶಗಳ ವಿವರಗಳು…


