ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, 46 ಸ್ಥಾನಗಳೊಂದಿಗೆ ಬಿಜೆಪಿ ರಾಜ್ಯದಲ್ಲಿ ಬಹುಮತ ಪಡೆದುಕೊಂಡಿದೆ. ಈ ಮೂಲಕ ಬಿಜೆಪಿ ಮೂರನೇ ಬಾರಿಗೆ ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ.
60 ವಿಧಾನಸಭಾ ಕ್ಷೇತ್ರಗಳ ಅರುಣಾಚಲ ವಿಧಾನಸಭೆಗೆ 10 ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ 60 ವಿಧಾನಸಭಾ ಕ್ಷೇತ್ರಗಳ ಪೈಕಿ 50 ಸ್ಥಾನಗಳಿಗೆ ಮತದಾನ ನಡೆದಿದೆ. 46 ಸ್ಥಾನಗಳೊಂದಿಗೆ ಬಿಜೆಪಿ ರಾಜ್ಯದಲ್ಲಿ ಬಹುಮತ ಪಡೆದುಕೊಂಡಿದೆ. ಎನ್‌ಪಿಪಿ ಐದು ಸ್ಥಾನಗಳನ್ನು ಮತ್ತು ಎನ್‌ಸಿಪಿ ಮೂರು ಸ್ಥಾನಗಳನ್ನು ಗೆದ್ದುಕೊಂಡಿದೆ. ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ ಇತರರು ಐದು ಸ್ಥಾನಗಳಲ್ಲಿ ಗೆಲುವನ್ನು ಕಂಡುಕೊಂಡಿದ್ದಾರೆ.
ಏಪ್ರಿಲ್ 19ರಂದು ಮೊದಲ ಹಂತದಲ್ಲಿ ಲೋಕಸಭೆ ಚುನಾವಣೆಯೊಂದಿಗೆ ಅರುಣಾಚಲ ವಿಧಾನಸಭಾ ಚುನಾವಣೆಗೆ ಏಕಕಾಲದಲ್ಲಿ ಮತದಾನ ನಡೆದಿದ್ದವು. ಅರುಣಾಚಲ ಪ್ರದೇಶದಲ್ಲಿ ಈ ಬಾರಿ 54.57% ಮತದಾನ ಬಿಜೆಪಿಗೆ ಬಿದ್ದಿದೆ, ಇದು 2019ಕ್ಕೆ ಹೋಲಿಕೆ ಮಾಡಿದರೆ ಬಿಜೆಪಿಯ ಮತ ಹಂಚಿಕೆಯಲ್ಲಿ ಹೆಚ್ಚಳವನ್ನು ತೋರಿಸುತ್ತದೆ. ಇನ್ನು ಕಾಂಗ್ರೆಸ್‌ನ ಮತ ಹಂಚಿಕೆ ಕಡಿಮೆಯಾಗಿದ್ದು, ಅರುಣಾಚಲದಲ್ಲಿ ಕಾಂಗ್ರೆಸ್ 5.56% ಮತವನ್ನು ಪಡೆದುಕೊಂಡಿದೆ. ಎನ್‌ಪಿಇಪಿ 16.11% ಮತವನ್ನು ಪಡೆದುಕೊಂಡಿದೆ. ಎನ್‌ಸಿಪಿಗೆ 10.43% ಮತ್ತು ಇತರರು 5.6% ಮತವನ್ನು ಪಡೆದುಕೊಂಡಿದ್ದಾರೆ.
2019ರ ವಿಧಾನಸಭಾ ಚುನಾವಣೆಯಲ್ಲಿ ಅರುಣಾಚಲದಲ್ಲಿ ಬಿಜೆಪಿಯು 60ರಲ್ಲಿ 41 ಸ್ಥಾನಗಳನ್ನು ಜಯಿಸಿತ್ತು. ಜೆಡಿಯು 7, ಎನ್‌ಪಿಪಿ 5, ಕಾಂಗ್ರೆಸ್ 4 ಮತ್ತು ಪಿಪಿಎ 1 ಸ್ಥಾನ ಗೆದ್ದುಕೊಂಡಿದ್ದರೆ, ಎರಡು ಸ್ಥಾನಗಳಲ್ಲಿ ಪಕ್ಷೇತರರು ಜಯಿಸಿದ್ದರು. ಯಾವುದೇ ಪಕ್ಷ ಬಹುಮತ ಸಾಬೀತು ಮಾಡಲು ಅರುಣಾಚಲ ಪ್ರದೇಶದಲ್ಲಿ 31 ಸ್ಥಾನಗಳ ಅಗತ್ಯವಿರುತ್ತದೆ. ಮುಖ್ಯಮಂತ್ರಿ ಪೇಮಾ ಖಂಡು ಹಾಗೂ ಉಪ ಮುಖ್ಯಮಂತ್ರಿ ಚೌನಾ ಮೈನ್ ತಮ್ಮ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
ಅರುಣಾಚಲ ಪ್ರದೇಶದಲ್ಲಿ ಪಕ್ಷ ಜಯಭೇರಿ ಬಾರಿಸಿದ ಬಳಿಕ ಅಲ್ಲಿನ ಜನತೆಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಧನ್ಯವಾದಗಳು ಅರುಣಾಚಲ ಪ್ರದೇಶ, ಈ ಅದ್ಭುತ ರಾಜ್ಯದ ಜನರು ಅಭಿವೃದ್ಧಿಯ ರಾಜಕೀಯಕ್ಕೆ ನಿಸ್ಸಂದಿಗ್ಧವಾದ ಜನಾದೇಶವನ್ನು ನೀಡಿದ್ದಾರೆ. ಬಿಜೆಪಿ ಬಗ್ಗೆ ಮತ್ತೊಮ್ಮೆ ತಮ್ಮ ನಂಬಿಕೆಯನ್ನು ಇಟ್ಟಿದ್ದಕ್ಕೆ ನನ್ನ ಕೃತಜ್ಞತೆಗಳು. ನಮ್ಮ ಪಕ್ಷವು ರಾಜ್ಯದಲ್ಲಿ ಇನ್ನೂ ಹೆಚ್ಚಿನ ಚೈತನ್ಯದಿಂದ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ಸಿಕ್ಕಿಂ ರಾಜ್ಯದ ವಿಧಾನಸಭಾ ಚುನಾವಣೆ ಫಲಿತಾಂಶ ಇಂದು ಪ್ರಕಟವಾಗಿದ್ದು, ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್‌ಕೆಂ) ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಇಲ್ಲಿಯವರೆಗೆ ವಿಧಾನಸಭೆಯ 31 ಸ್ಥಾನಗಳಲ್ಲಿ ಆಡಳಿತ ಪಕ್ಷ 26 ಸ್ಥಾನಗಳನ್ನು ಗೆದ್ದಿದೆ. ಉಳಿದ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಗೆಲುವಿಗಾಗಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಮುಖ್ಯಮಂತ್ರಿ ತಮಾಂಗ್ ಧನ್ಯವಾದ ತಿಳಿಸಿದ್ದಾರೆ.
ಇದನ್ನು ಓದಿ: ಸಿಕ್ಕಿಂ ವಿಧಾನಸಭಾ ಚುನಾವಣೆ ಫಲಿತಾಂಶ: ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದ ಎಸ್‌ಕೆಎಂ


