ನಿವೃತ್ತ ಐಪಿಎಸ್ ಅಧಿಕಾರಿ ಯು ನಿಸಾರ್ ಅಹ್ಮದ್ ಅವರನ್ನು ಕರ್ನಾಟಕ ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರ ನಾಮ ನಿರ್ದೇಶನ ಮಾಡಿದೆ.
ಈ ಸಂಬಂಧ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಾಗರಾಜ್ ಅವರು ಜೂನ್ 7ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಅಧಿಸೂಚನೆಯಲ್ಲಿ, “ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 1994ರ ಸೆಕ್ಷನ್ 3(1) ಮತ್ತು 4(1) ರ ಅಡಿಯಲ್ಲಿ ಸರ್ಕಾರಕ್ಕೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ನಿವೃತ್ತ ಐಜಿಪಿ ಯು ನಿಸಾರ್ ಅಹ್ಮದ್, ಬೆಂಗಳೂರು ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರನ್ನಾಗಿ ನಾಮನಿರ್ದೇಶನಗೊಳಿಸಲಾಗಿದೆ” ಎಂದು ಉಲ್ಲೇಖಿಸಲಾಗಿದೆ.
ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ನೂತನ ಅಧ್ಯಕ್ಷರಾಗಿ ಯು ನಿಸಾರ್ ಅಹ್ಮದ್ (ನಿವೃತ್ತ ಐಜಿಪಿ) ಅವರನ್ನು ನೇಮಕ ಮಾಡಿದೆ.
Karnataka Govt Appointed U Nisar Ahmed(Retd IGP) As Karnataka State Minority Commission President@DOMGOK @siddaramaiah @NasirHussainINC @zoo_bear pic.twitter.com/kyOhM4DBiS— Irshad Venur ಇರ್ಷಾದ್ ವೇಣೂರು (@muhammadirshad6) June 7, 2024
ಇತ್ತೀಚೆಗಷ್ಟೇ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹುದ್ದೆಯಿಂದ ವಿಧಾನ ಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಝೀಮ್ ಅವರ ನಾಮ ನಿರ್ದೇಶನವನ್ನು ರಾಜ್ಯ ಸರ್ಕಾರ ಹಿಂಪಡೆದಿತ್ತು. ಈ ಕ್ರಮವನ್ನು ಹೈಕೋರ್ಟ್ ಕೂಡ ಎತ್ತಿ ಹಿಡಿದಿತ್ತು. ಈಗ ತೆರವಾಗಿರುವ ಅಧ್ಯಕ್ಷರ ಸ್ಥಾನಕ್ಕೆ ನಿವೃತ್ತ ಐಜಿಪಿ ಯು ನಿಸಾರ್ ಅಹ್ಮದ್ ಅವರನ್ನು ನಾಮನಿರ್ದೇಶನಗೊಳಿಸಿ ಆದೇಶ ಹೊರಡಿಸಿದೆ.
ಯು ನಿಸಾರ್ ಅಹ್ಮದ್ ಅವರು 2012ರಲ್ಲಿ ರಾಜ್ಯದ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್( ಐಜಿಪಿ) ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಅದಕ್ಕೂ ಮುನ್ನ 2007ರಿಂದ 2011ರವರೆಗೆ ಬೆಂಗಳೂರು ನಗರದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಇದನ್ನೂ ಓದಿ : ಸಂತ್ರಸ್ತೆ ಅಪಹರಣ ಪ್ರಕರಣ: ಭವಾನಿ ರೇವಣ್ಣಗೆ ಹೈಕೋರ್ಟಿನಿಂದ ನಿರೀಕ್ಷಣಾ ಜಾಮೀನು


