ಶಿವಸೇನಾ (ಯುಬಿಟಿ) ಪಕ್ಷವು ಎನ್‌ಡಿಎಗೆ ಮರಳಲಿದೆ ಎಂಬ ಊಹಾಪೋಗಳ ನಡುವೆಯೆ, ಯುವ ನಾಯಕ ಆದಿತ್ಯ ಠಾಕ್ರೆ ಅವರು ಕೇಂದ್ರದಲ್ಲಿ ಸರ್ಕಾರ ರಚಿಸುವ ನಿರೀಕ್ಷೆಯಲ್ಲಿರುವ ಬಿಜೆಪಿ ಮಿತ್ರಪಕ್ಷಗಳಿಗೆ ತಮ್ಮ ಸಲಹೆಯನ್ನು ನೀಡಿದ್ದು, ‘ಸ್ಪೀಕರ್ ಸ್ಥಾನ ಪಡೆಯಿರಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಬಿಜೆಪಿ ಹೊಸದಾಗಿ ನೆನಪಿಸಿಕೊಳ್ಳುತ್ತಿರುವ ಎನ್‌ಡಿಎ ಸಂಭಾವ್ಯ ಮಿತ್ರಪಕ್ಷಗಳಿಗೆ ಒಂದು ವಿನಮ್ರ ಸಲಹೆ, ಸ್ಪೀಕರ್ ಹುದ್ದೆಯನ್ನು ಪಡೆಯಿರಿ. ಬಿಜೆಪಿಯ ತಂತ್ರಗಳನ್ನು ಅನುಭವಿಸಿದ್ದೇವೆ, ಅವರು ನಿಮ್ಮೊಂದಿಗೆ ಸರ್ಕಾರವನ್ನು ರಚಿಸುವ ನಿಮಿಷದಲ್ಲಿ ಭರವಸೆಗಳನ್ನು ಮುರಿದು, ನಿಮ್ಮ ಪಕ್ಷಗಳನ್ನೂ ಒಡೆಯಲು ಪ್ರಯತ್ನಿಸುತ್ತಾರೆ” ಎಂದು ಅವರು ಟಿಡಿಪಿ ಮತ್ತು ಜೆಡಿಯು ಪಕ್ಷಗಳನ್ನು ಟ್ಯಾಗ್ ಮಾಡಿದ್ದಾರೆ.
ಇಂದು ಬೆಳಿಗ್ಗೆ, ಬಿಜೆಪಿ ನೇತೃತ್ವದ ಎನ್‌ಡಿಎ, ಭಾನುವಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ನರೇಂದ್ರ ಮೋದಿ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡಲು ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಹೊಸದಾಗಿ ಚುನಾಯಿತ ಸಂಸದರ ಸಭೆ ನಡೆಸಿತು.
ದೆಹಲಿಯಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಜೆಡಿಎಸ್ ನಾಯಕ ಎಚ್‌ಡಿ ಕುಮಾರಸ್ವಾಮಿ, ಶಿವಸೇನೆ ಮುಖ್ಯಸ್ಥ ಏಕನಾಥ್ ಶಿಂಧೆ, ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಮತ್ತು ಎಚ್‌ಎಎಂ (ಎಸ್) ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಸೇರಿದಂತೆ ಬಿಜೆಪಿ ಮಿತ್ರಪಕ್ಷಗಳು ಮೋದಿಯನ್ನು ಎನ್‌ಡಿಎ ಬಣದ ನಾಯಕರಾಗಿ ಆಯ್ಕೆ ಮಾಡುವ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಅವರ ಪ್ರಸ್ತಾಪವನ್ನು ಅನುಮೋದಿಸಿದ್ದಾರೆ.
A humble suggestion to the possible allies of the bjp in the newly remembered NDA:
Get the post of the Speaker.
Having experienced the tactics of the bjp, the minute they form government with you, they will break the promises and try to break your parties too.
You’ll have…
— Aaditya Thackeray (@AUThackeray) June 7, 2024
“ಪ್ರಾದೇಶಿಕ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಸಮತೋಲನಗೊಳಿಸುವುದು ಸಮಾನಾಂತರವಾಗಿ ಸಾಗಬೇಕು ಮತ್ತು ಸಮಾಜದ ಎಲ್ಲಾ ಸ್ತರಗಳ ಸಮಗ್ರ ಅಭಿವೃದ್ಧಿಯನ್ನು ಖಾತ್ರಿಪಡಿಸಿಕೊಳ್ಳಬೇಕು” ಎಂದು ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಹೇಳಿದರು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮೋದಿಯವರ ನಾಯಕತ್ವದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ, “ಮೋದಿ ಭಾರತವನ್ನು ದೊಡ್ಡ ರೀತಿಯಲ್ಲಿ ಅಭಿವೃದ್ಧಿಪಡಿಸುತ್ತಾರೆ ಮತ್ತು ನಾವು ಪ್ರತಿದಿನ ಅವರನ್ನು ಪೂರ್ಣ ಹೃದಯದಿಂದ ಬೆಂಬಲಿಸುತ್ತೇವೆ ಎಂದು ನಮಗೆ ವಿಶ್ವಾಸವಿದೆ” ಎಂದು ಹೇಳಿದ್ದಾರೆ.
ಬಿಜೆಪಿಗೆ ಸರ್ಕಾರ ರಚಿಸಲು ಬೇಕಾದ ಬಹುಮತದ ಕೊರತೆಯಿಂದಾಗಿ, ಟಿಡಿಪಿ ಮತ್ತು ಜೆಡಿಯು ಬೆಂಬಲವು ನರೇಂದ್ರ ಮೋದಿಯವರ ಮೂರನೇ ಅವಧಿಗೆ ಪ್ರಧಾನಿಯಾಗಲು ನಿರ್ಣಾಯಕವಾಗಿದೆ. ಎನ್‌ಡಿಎ 293 ಸ್ಥಾನಗಳನ್ನು ಹೊಂದಿದೆ, ಬಿಜೆಪಿಯು 240 ಸ್ಥಾನಗಳನ್ನು ಪಡೆದುಕೊಂಡಿದೆ. ಜೆಡಿಯು 12 ಸಂಸದರನ್ನು ಹೊಂದಿದೆ, ಇದು 16 ಸಂಸದರನ್ನು ಹೊಂದಿರುವ ಟಿಡಿಪಿ ನಂತರ ಎರಡನೇ ಅತಿದೊಡ್ಡ ಬಿಜೆಪಿ ಮಿತ್ರ ಪಕ್ಷವಾಗಿದೆ.
ಇದನ್ನೂ ಓದಿ; ಹಳೆ ಸಂಸತ್ ಭನದಲ್ಲಿ ಎನ್‌ಡಿಎ ನಾಯಕರ ಸಭೆ; ಲೋಕಸಭೆ ನಾಯಕರಾಗಿ ನರೇಂದ್ರ ಮೋದಿ ಆಯ್ಕೆ


