ಮುಸ್ಲಿಂ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿರುವ ಆರೋಪ ಹೊತ್ತಿರುವ ಹಿಂದಿ ಚಿತ್ರ ‘ಹಮಾರೆ ಬಾರಹ್’ ನ ಬಿಡುಗಡೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಬಾಂಬೆ ಹೈಕೋರ್ಟ್ ಪ್ರಕರಣವನ್ನು ವಿಲೇವಾರಿ ಮಾಡುವವರೆಗೆ ಚಿತ್ರ ಬಿಡುಗಡೆ ಮಾಡದಂತೆ ಸೂಚಿಸಿದೆ.
ಚಿತ್ರದ ಬಿಡುಗಡೆಗೆ ಅನುಮತಿ ನೀಡಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಸುಪ್ರೀಂ ಕೋರ್ಟ್‌ನ ರಜಾಕಾಲದ ಪೀಠ ಈ ಆದೇಶ ಹೊರಡಿಸಿದೆ.
The Supreme Court on Thursday (June 13) suspended the screening of the film "Hamare Baarah", until disposal on merits of the case pending over its release before the Bombay High Court. The film, scheduled to release on June 14, is alleged to be derogatory towards the Islamic… pic.twitter.com/N89Smj0q7e
— Live Law (@LiveLawIndia) June 13, 2024
ಪ್ರಕರಣದ ಹಿನ್ನೆಲೆ : ಜೂನ್ 7ರಂದು ಹಮಾರೆ ಬಾರಹ್ ಚಿತ್ರ ಬಿಡುಗಡೆಗೆ ದಿನಾಂಕ ನಿಗದಿಯಾಗಿತ್ತು. ಈ ನಡುವೆ ಚಿತ್ರಕ್ಕೆ ನೀಡಲಾದ ಸೆನ್ಸಾರ್ ಸರ್ಟಿಫಿಕೇಟ್ ಹಿಂಪಡೆಯಬೇಕು ಮತ್ತು ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಅಝರ್ ಬಾಷಾ ತಂಬೋಲಿ ಎಂಬವರು ಬಾಂಬೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಚಿತ್ರವು ಸಿನಿಮಾಟೋಗ್ರಾಫ್ ಕಾಯ್ದೆ-1952ರ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದರು. ಚಿತ್ರದ ಟ್ರೇಲರ್ ಭಾರತೀಯ ಮುಸ್ಲಿಮರ ನಂಬಿಕೆ ಮತ್ತು ವಿವಾಹಿತ ಮುಸ್ಲಿಂ ಮಹಿಳೆಯರನ್ನು ಅವಹೇಳಿಸುವಂತಿದೆ. ಈ ಚಿತ್ರದ ಬಿಡುಗಡೆ ಸಂವಿಧಾನದ 19(2) ಮತ್ತು 25 ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದರು.
ಚಿತ್ರದ ಟ್ರೇಲರ್ ವಿವಾಹಿತ ಮುಸ್ಲಿಂ ಮಹಿಳೆಯರಿಗೆ ಸಮಾಜದಲ್ಲಿ ಸ್ವತಂತ್ರ ಹಕ್ಕುಗಳಿಲ್ಲ ಎಂದು ಚಿತ್ರಿಸಿದೆ. ಕುರಾನ್‌ನ 223ನೇ ಆಯತ್ ಅನ್ನು ತಪ್ಪಾಗಿ ವಿವರಿಸಿದೆ. ಚಿತ್ರದ ಬಿಡುಗಡೆಗೆ ಮುನ್ನ ಮಾರ್ಪಾಡುಗಳನ್ನು ಕೈಗೊಳ್ಳಲು ನಿರ್ದೇಶಿಸಲಾಗಿದ್ದರೂ, ಟ್ರೇಲರ್ ಯಾವುದೇ ಡಿಸ್ಕ್ಲೈಮರ್ ಅಥವಾ ಸಿಬಿಎಫ್‌ಸಿ ನೀಡಿದ ಸರ್ಟಿಫಿಕೇಟ್‌ನ್ನು ಉಲ್ಲೇಖಿಸಿಲ್ಲ ಎಂದಿದ್ದರು.
ಈ ಆರೋಪವನ್ನು ಅಲ್ಲಗಳೆದಿದ್ದ ಸಿಬಿಎಫ್‌ಸಿ, “ಎಲ್ಲಾ ಅಗತ್ಯ ಕಾರ್ಯವಿಧಾನಗಳನ್ನು ಅನುಸರಿಸಿದ ನಂತರ ಚಿತ್ರಕ್ಕೆ ಪ್ರಮಾಣಪತ್ರ ನೀಡಲಾಗಿದೆ. ಆಕ್ಷೇಪಾರ್ಹ ದೃಶ್ಯಗಳು ಮತ್ತು ಸಂಭಾಷಣೆಗಳನ್ನು ಅಳಿಸಲಾಗಿದೆ. ಯೂಟ್ಯೂಬ್ ಮತ್ತು ಬುಕ್‌ಮೈಶೋನಲ್ಲಿ ಬಿಡುಗಡೆಯಾದ ಚಿತ್ರದ ಟ್ರೇಲರ್‌ಗಳು ಪ್ರಮಾಣೀಕೃತ ಟ್ರೇಲರ್‌ಗಳಲ್ಲ ಎಂದು ಹೇಳಿತ್ತು.
ವಾದ-ಪ್ರತಿವಾದ ಆಲಿಸಿದ್ದ ಬಾಂಬೆ ಹೈಕೋರ್ಟ್ ಜೂನ್ 14ರವರೆಗೆ ಚಿತ್ರ ಬಿಡುಗಡೆ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಅಲ್ಲದೆ, ಚಿತ್ರ ವೀಕ್ಷಿಸಿ ವರದಿ ನೀಡಲು ಮೂವರು ಸದಸ್ಯರ ಸಮಿತಿ ರಚಿಸಿತ್ತು. ಆದರೆ, ಈ ಸಮಿತಿ ಕಾಲ ಮಿತಿಯೊಳಗೆ ವರದಿ ನೀಡದೆ ಹೆಚ್ಚಿನ ಕಾಲವಕಾಶ ಕೋರಿತ್ತು. ಹಾಗಾಗಿ, ಹೈಕೋರ್ಟ್ ಜೂನ್ 14ರಂದು ಚಿತ್ರ ಬಿಡುಗಡೆಗೆ ಅವಕಾಶ ನೀಡಿತ್ತು. ನಿರ್ಮಾಪಕರು ಸ್ವಯಂ ಪ್ರೇರಿತರಾಗಿ ಆಕ್ಷೇಪಾರ್ಹ ಅಂಶಗಳನ್ನು ತೆಗದು ಹಾಕುವಂತೆ ಸೂಚಿಸಿತ್ತು.
ಚಿತ್ರ ಬಿಡುಗಡೆಗೆ ಅನುಮತಿ ನೀಡಿರುವ ಮತ್ತು ಸಿಬಿಎಫ್‌ಸಿಯಿಂದ ಸಮಿತಿ ರಚನೆಗೆ ನಿರ್ದೇಶನ ನೀಡಿರುವ ಹೈಕೋರ್ಟ್ ಆದೇಶ ಪ್ರಶ್ನಿಸಿ ಅರ್ಜಿದಾರ ಅಝರ್ ಬಾಷಾ ತಂಬೋಲಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ಕೋರ್ಟ್ ಬಾಂಬೆ ಹೈಕೋರ್ಟ್ ಪ್ರಕರಣ ವಿಲೇವಾರಿ ಮಾಡುವವರೆಗೆ ಚಿತ್ರ ಬಿಡುಗಡೆ ಮಾಡದಂತೆ ತಡೆ ನೀಡಿದೆ.
ಇದನ್ನೂ ಓದಿ : ಬಾಲಕಿ ಮುಂದೆ ಬೆತ್ತಲಾಗುವುದು ಅತ್ಯಾಚಾರಕ್ಕೆ ಯತ್ನಿಸಿದಂತಲ್ಲ: ರಾಜಸ್ಥಾನ ಹೈಕೋರ್ಟ್


