ಕಳ್ಳತನ ಯತ್ನದ ಶಂಕೆಯಲ್ಲಿ 35 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಗುಂಪೊಂದು ಥಳಿಸಿ ಹತ್ಯೆಗೈದಿರುವ ಘಟನೆ ಉತ್ತರಪ್ರದೇಶದ ಅಲಿಘರ್ ನಗರದಲ್ಲಿ ನಡೆದಿದ್ದು, ಘಟನೆ ಬಳಿಕ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
ಮಂಗಳವಾರ ರಾತ್ರಿ 10.15ರ ಸುಮಾರಿಗೆ ಮಾಮು ಭಂಜಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಘಾಸ್ ಕಿ ಮಂಡಿ ಪ್ರದೇಶದ ನಿವಾಸಿ ಮೊಹಮ್ಮದ್ ಫರೀದ್ ಅಲಿಯಾಸ್ ಔರಂಗಜೇಬ್(35) ಹತ್ಯೆಯಾದವರು. ಈ ಕುರಿತು ಗಾಂಧಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳೆಯ ನಗರದ ರೈಲ್ವೆ ನಿಲ್ದಾಣದ ರಸ್ತೆಯ ಮಾಮು ಭಂಜಾ ಪ್ರದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಗುಂಪುಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಎರಡು ಗುಂಪುಗಳು ಕೋಮುವಾದಿ ಘೋಷಣೆಗಳನ್ನು ಕೂಗಿರುವ ಹಿನ್ನೆಲೆ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಘಟನೆ ಬಳಿಕ ಹೆಚ್ಚುವರಿ ಘರ್ಷಣೆಯನ್ನು ತಪ್ಪಿಸಲು ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಅಲಿಘರ್ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್(ಐಜಿ) ಶಲಭ್ ಮಾಥುರ್, ಸ್ಥಳದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್‌ಎಎಫ್) ಜೊತೆಗೆ ವಿವಿಧ ಪೊಲೀಸ್ ಠಾಣೆಗಳಿಂದ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ. ಬುಧವಾರ ಪೊಲೀಸರು 6 ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸೆಕ್ಷನ್ 302 (ಕೊಲೆ), 341 ಹಾಗೂ ಭಾರತೀಯ ದಂಡ ಸಂಹಿತೆ (ಐಪಿಸಿ) ವಿವಿಧ ಸೆಕ್ಸನ್‌ಗಳಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳು ಕೊಲೆಯಾದ ವ್ಯಕ್ತಿಯ ನೆರೆಹೊರೆಯವರಾಗಿದ್ದು, ಆರೋಪಿಗಳನ್ನು ರಾಹುಲ್, ಮೋಹಿತ್, ಚಿರಾಗ್ ವಾರ್ಷ್ನೆಯಿ, ಅಂಕಿತ್ ವಾರ್ಷ್ನೆಯಿ, ಕಮಲ್ ಚೌಧುರಿ ಹಾಗೂ ಜೈಗೋಪಾಲ್ ಶರ್ಮಾ ಎಂಬುದಾಗಿ ಗುರುತಿಸಲಾಗಿದೆಯೆಂದು ಅಲಿಗಢ ಪೊಲೀಸ್ ಅಧೀಕ್ಷಕ ಮೃಗಾಂಕ್ ಶೇಖರ್ ಪಾಠಕ್ ತಿಳಿಸಿದ್ದಾರೆ.
ಸ್ಥಳೀಯ ವ್ಯಾಪಾರಿ ಮುಖೇಶ್ ಚಂದ್ ಮಿತ್ತಲ್ ಎಂಬವರ ಮನೆಗೆ ಔರಂಗಜೇಬ್ ನುಗ್ಗಿದ್ದಾನೆಂದು ಆರೋಪಿಸಿ ಆತನನ್ನು ಬರ್ಬರವಾಗಿ ಥಳಿಸಿ ಹತ್ಯೆಗೈಯ್ಯಲಾಗಿದೆ. ಮೃತನ ಸಹೋದರ ಮೊಹಮ್ಮದ್ ಝಕಿ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಫರೀದ್ ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಮಾಮು ಭಂಜಾ ಪ್ರದೇಶದಲ್ಲಿ ಕೆಲವರು ಅವರನ್ನು ಗುಂಪುಗೂಡಿ ಥಳಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನು ಓದಿ: ಜಾತಿ ಸಮೀಕ್ಷೆಗೆ ಅನುಮೋದನೆ ನೀಡಿದ ಚಂಪೈ ಸೊರೇನ್ ನೇತೃತ್ವದ ಜಾರ್ಖಂಡ್ ಕ್ಯಾಬಿನೆಟ್


