ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ಮಹೇಶ್ ರಾವುತ್ ಅವರಿಗೆ ತನ್ನ ಅಜ್ಜಿಯ ಅಂತಿಮ ಸಂಸ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸುಪ್ರೀಂ ಕೋರ್ಟ್ ಎರಡು ವಾರಗಳ ಮಧ್ಯಂತರ ಜಾಮೀನು ನೀಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಎಸ್‌ವಿಎನ್ ಭಟ್ಟಿ ಅವರ ರಜಾಕಾಲದ ಪೀಠವು, ಮಹೇಶ್ ರಾವುತ್ ಅವರಿಗೆ ಜೂನ್ 26 ರಿಂದ ಜುಲೈ 10 ರವರೆಗೆ ಮಧ್ಯಂತರ ಜಾಮೀನು ನೀಡಿದೆ. ಮಧ್ಯಂತರ ಜಾಮೀನು ವಿಚಾರಣಾ ನ್ಯಾಯಾಲಯವು ನಿಗದಿಪಡಿಸಿದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಆರೋಪಿಯು ಜುಲೈ 10 ರಂದು ತಪ್ಪದೇ ಶರಣಾಗಬೇಕು ಎಂದು ನ್ಯಾಯಾಲಯ ಸೂಚಿಸಿದೆ.
ರಾವುತ್ ಪರ ವಾದ ಮಂಡಿಸಿದ ವಕೀಲೆ ಅಪರ್ಣಾ ಭಟ್ ಅವರು, ರಾವುತ್ ಅವರಿಗೆ ಬಾಂಬೆ ಹೈಕೋರ್ಟ್ ಈಗಾಗಲೇ ಜಾಮೀನು ನೀಡಿದ್ದರೂ, ಆದೇಶಕ್ಕೆ ತಡೆ ನೀಡಲಾಗಿದೆ. ಅವರ ಅಜ್ಜಿ ಮೇ ಕೊನೆಯ ವಾರದಲ್ಲಿ ನಿಧನರಾಗಿದ್ದು, ಕೆಲವು ಅಂತಿಮ ವಿಧಿವಿಧಾನಗಳನ್ನು ನಡೆಸಬೇಕಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಎನ್‌ಐಎ ಪರ ವಾದ ಮಂಡಿಸಿದ ವಕೀಲರು ಎನ್‌ಐಎ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲು ಆದ್ಯತೆ ನೀಡಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಪರ್ಣಾ ಭಟ್, ಜಾಮೀನು ಆದೇಶವನ್ನು ಪ್ರಶ್ನಿಸಿ ಎನ್‌ಐಎ ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಕಾರಣ ವಿಶೇಷ ನ್ಯಾಯಾಲಯವು ಅರ್ಜಿ ಪರಿಗಣಿಸುವುದಿಲ್ಲ ಎಂದು ಉತ್ತರಿಸಿದರು.
2018ರ ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 1967ರ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 15 ರ ಅಡಿಯಲ್ಲಿ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ರಾವುತ್ ವಿರುದ್ಧ ಆರೋಪ ಹೊರಿಸಲಾಗಿದೆ. ಅವರು ನಿಷೇಧಿತ ಸಿಪಿಐ (ಮಾವೋವಾದಿ) ಯೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ದೇಶದ ವಿರುದ್ಧ ಯುದ್ಧ ಸಾರಿದ್ದಾರೆ ಎಂದು ಆರೋಪಿಸಲಾಗಿದೆ.
ರಾವುತ್ ಅವರನ್ನು ಜೂನ್, 2018ರಲ್ಲಿ ಬಂಧಿಸಲಾಗಿತ್ತು. 5 ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಭೀಮಾ ಕೋರೆಗಾಂವ್-ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿತ್ತು. ಅವರ ವಿರುದ್ದದ ಆರೋಪಗಳಿಗೆ ಪುರಾವೆಗಳಿಲ್ಲದಿರುವುದು ಪ್ರಾಥಮಿಕವಾಗಿ ಕಂಡು ಬಂದಿದೆ. ಅಲ್ಲದೆ, ಅವರು ವಿಚಾರಣೆಯಿಲ್ಲದೆ 5 ವರ್ಷ ಮತ್ತು 3 ತಿಂಗಳು ಜೈಲಿನಲ್ಲಿ ಕಳೆದಿದ್ದಾರೆ ಎಂದು ನ್ಯಾಯಾಲಯ ಹೇಳಿತ್ತು.
ಆದರೆ, ಬಳಿಕ ಜಾಮೀನು ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅಂತಿಮವಾಗಿ ಸುಪ್ರೀಂ ಕೋರ್ಟ್ ತಡೆಯಾಜ್ಞೆಯನ್ನು ವಿಸ್ತರಿಸಿದೆ.
ರಾವುತ್ ಅವರ ಅಜ್ಜಿಯ ಅಂತಿಮ ಸಂಸ್ಕಾರ ಮೇ 26ರಂದು ನಡೆದಿದ್ದು, ಉಳಿದ ಕಾರ್ಯಗಳನ್ನು ಜೂನ್ 27ಕ್ಕೆ ನಿಗದಿಪಡಿಸಿಲಾಗಿದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಮುಂದೆ ಅವರ ಜಾಮೀನು ಅರ್ಜಿಯನ್ನು ಜೂನ್ 14ರಂದು ವಿಚಾರಣೆಗೆ ಪಟ್ಟಿ ಮಾಡಲಾಗಿತ್ತು. ಆದರೆ, ಸೂಚನೆಗಳನ್ನು ಪಡೆಯಲು ಮತ್ತು ಉತ್ತರವನ್ನು ಸಲ್ಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ವಕೀಲರು ಸಮಯ ಕೋರಿದ್ದ ಹಿನ್ನೆಲೆ ಮುಂದೂಡಲಾಗಿತ್ತು.
ಇದನ್ನೂ ಓದಿ : ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ: ಸಂತ್ರಸ್ತನ ವಿರುದ್ದವೇ ಎಫ್‌ಐಆರ್ ದಾಖಲು


