‘ಲಕ್ಕಿ ಅಲಿ’ ಎಂದೇ ಪ್ರಸಿದ್ದಿ ಪಡೆದಿರುವ ಖ್ಯಾತ ಗಾಯಕ ಮಕ್ಸೂದ್ ಮಹಮೂದ್ ಅಲಿ ಅವರು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, ಅವರ ಪತಿ ಸುಧೀರ್ ರೆಡ್ಡಿ, ಸಹಾಯಕ ಪೊಲೀಸ್ ಕಮಿಷನರ್ ಮಂಜುನಾಥ್ ಯಲಹಂಕ ಮತ್ತಿತರರ ವಿರುದ್ಧ ಭೂಕಬಳಿಕೆ ಆರೋಪದ ಮೇಲೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಅಲಿ ಅವರು ಗುರುವಾರ ತಮ್ಮ ಎಕ್ಸ್ ಖಾತೆಯಲ್ಲಿ ದೂರಿನ ಪ್ರತಿಯನ್ನು ಹಂಚಿಕೊಂಡಿದ್ದಾರೆ.
— Lucky Ali (@luckyali) June 20, 2024
“ಐಎಎಸ್ ಅಧಿಕಾರಿ, ಅವರ ಪತಿ ಮತ್ತು ಸೋದರ ಮಾವ ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಂಡು ಸಾಕಷ್ಟು ಹಣ ವಿನಿಮಯದ ಮೂಲಕ ಭೂ ಕಬಳಿಕೆ ಮಾಡಿದ್ದಾರೆ” ಎಂದು ಅಲಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೂರಿನಲ್ಲಿ ಸಿಂಧೂರಿ ಅವರ ಸೋದರ ಮಾವ ಮಧುಸೂಧನ್ ರೆಡ್ಡಿ ಮತ್ತು ಯಲಹಂಕ ತಾಲೂಕು ಸರ್ವೆ ಅಧಿಕಾರಿ ಮನೋಹರ್ ಅವರ ಹೆಸರೂ ಇದೆ. ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯ ಹೆಸರು ಹೇಳಲಿಚ್ಛಿಸದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಬಗ್ಗೆಯೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ವಿವಾದ 2022ರಲ್ಲಿ ಮೊದಲು ಪ್ರಾರಂಭಗೊಂಡಿತ್ತು. ಡಿಸೆಂಬರ್ 4,2022 ರಂದು ಲಕ್ಕಿ ಅಲಿ ಎಕ್ಸ್‌ನಲ್ಲಿ ವಿವಾದದ ಕುರಿತು ಪೋಸ್ಟ್ ಮಾಡಿದ್ದರು. ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಟ್ಯಾಗ್ ಮಾಡಿದ್ದರು.
“ಕೆಂಚೇನಹಳ್ಳಿ ಯಲಹಂಕದಲ್ಲಿರುವ ಟ್ರಸ್ಟ್ ಆಸ್ತಿಯಾಗಿರುವ ನನ್ನ ಜಮೀನನ್ನು ಬೆಂಗಳೂರು ಭೂ ಮಾಫಿಯಾದ ಸುಧೀರ್ ರೆಡ್ಡಿ, ಅವರ ಪತ್ನಿ ರೋಹಿಣಿ ಸಿಂಧೂರಿ ಎಂಬ ಐಎಎಸ್ ಅಧಿಕಾರಿಯ ಸಹಾಯದಿಂದ ಅತಿಕ್ರಮಿಸುತ್ತಿದ್ದಾರೆ. ಅವರು ತಮ್ಮ ವೈಯಕ್ತಿಕ ಲಾಭಕ್ಕಾಗಿ ರಾಜ್ಯದ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಬಲವಂತವಾಗಿ ಮತ್ತು ಕಾನೂನುಬಾಹಿರವಾಗಿ ನನ್ನ ಜಮೀನಿನೊಳಗೆ ಬರುತ್ತಿದ್ದಾರೆ. ಸಂಬಂಧಿತ ದಾಖಲೆಗಳನ್ನು ತೋರಿಸಲು ನಿರಾಕರಿಸುತ್ತಿದ್ದಾರೆ” ಎಂದು ಅಲಿ ಬರೆದುಕೊಂಡಿದ್ದರು.
“ಇದು ಸಂಪೂರ್ಣವಾಗಿ ಕಾನೂನುಬಾಹಿರ ಎಂದು ನನ್ನ ಕಾನೂನು ಸಲಹೆಗಾರರು ತಿಳಿಸಿದ್ದಾರೆ. ನಮ್ಮ ಜಮೀನಿಗೆ ಪ್ರವೇಶಿಸಲು ಅವರು ನ್ಯಾಯಾಲಯದ ಅನುಮತಿ ಹೊಂದಿಲ್ಲ. ಕಳೆದ 50 ವರ್ಷಗಳಿಂದ ಜಮೀನು ನಮ್ಮ ಸ್ವಾಧೀನದಲ್ಲಿದೆ, ನಾವು ಅಲ್ಲಿ ವಾಸಿಸುತ್ತಿದ್ದೇವೆ. ಈ ಕುರಿತು ಎಸಿಪಿಗೆ ದೂರು ನೀಡಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ” ಎಂದಿದ್ದರು.
“ನಮಗೆ ಸ್ಥಳೀಯ ಪೊಲೀಸರಿಂದ ಯಾವುದೇ ಸಹಾಯ ಸಿಗುತ್ತಿಲ್ಲ. ಅವರು ಅತಿಕ್ರಮಣ ಮಾಡಿದವರನ್ನು ಬೆಂಬಲಿಸುತ್ತಿದ್ದಾರೆ. ನಮ್ಮ ಪರಿಸ್ಥಿತಿ ಮತ್ತು ನಮ್ಮ ಭೂಮಿಯ ಕಾನೂನು ಸ್ಥಿತಿಯ ಬಗ್ಗೆ ಅಸಡ್ಡೆ ಹೊಂದಿದ್ದಾರೆ. ಆತ್ಮೀಯ ಸರ್, ಡಿಸೆಂಬರ್ 7 ರಂದು ನ್ಯಾಯಾಲಯದ ಅಂತಿಮ ವಿಚಾರಣೆಗೂ ಮುನ್ನ ಸುಳ್ಳು ಆಸ್ತಿಯನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿರುವ ಅವರ ಈ ಕಾನೂನುಬಾಹಿರ ಚಟುವಟಿಕೆಯನ್ನು ನಿಲ್ಲಿಸಲು ನಾನು ನಿಮ್ಮ ಸಹಾಯವನ್ನು ಕೋರುತ್ತೇನೆ” ಎಂದು ಹೇಳಿದ್ದರು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ, “ಈ ಪ್ರಕರಣದಲ್ಲಿ ನನ್ನದೇನು ಪಾತ್ರವಿಲ್ಲ. ದುರುದ್ದೇಶದಿಂದ ನನ್ನನ್ನು ಇದಕ್ಕೆ ಎಳೆದು ತರಲಾಗಿದೆ. ನನಗೆ ತಿಳಿದಿರುವ ಹಾಗೆ OSNO5592/2016ರಲ್ಲಿ ಲಕ್ಕಿ ಅಲಿ ವಿರುದ್ಧ ತಾತ್ಕಾಲಿಕ ತಡೆಯಾಜ್ಞೆ ಇದೆ ಎಂದು ಗೊತ್ತಾಗಿದೆ” ಎಂದಿದ್ದರು.
“ಅಲಿ ಅವರ ಪ್ರತಿಭೆಯನ್ನು ನಾನು ಗೌರವಿಸುತ್ತೇನೆ. ಈ ಪ್ರಕರಣ ನ್ಯಾಯಾಲಯದಲ್ಲಿರುವಾಗ ಈ ಚರ್ಚೆ ಅನಗತ್ಯ ಎಂದು ತೋರುತ್ತದೆ. ನನಗೆ ಅಪಖ್ಯಾತಿ ತರಲು ಮತ್ತು ಸಾರ್ವಜನಿಕ ಸಹಾನುಭೂತಿ ಗಳಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ. ನಾನು ಕಾನೂನು ಕ್ರಮದ ಮೊರೆ ಹೋಗಲು ಯೋಚಿಸುತ್ತಿದ್ದೇನೆ” ಎಂದು ಹೇಳಿದ್ದರು.
ಮೂಲತಃ ಬೆಂಗಳೂರಿನವರಾದ ಲಕ್ಕಿ ಅಲಿ ಅವರು ಭಾರತದ ಪ್ರಸಿದ್ಧ ಗಾಯಕರಲ್ಲಿ ಒಬ್ಬರು. ಹಿಂದಿ ಸಿನಿಮಾ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಲ್ಲಿ ಅವರು ಹಾಡಿದ್ದಾರೆ. ಸಿನಿಮಾಕ್ಕಿಂತ ಹೆಚ್ಚಾಗಿ ಅವರು ತಮ್ಮದೇ ಸಂಗೀತ ಸಂಯೋಜನೆಯ ಪ್ರೈವೇಟ್ ಆಲ್ಬಂಗಳಿಂದ ಹೆಚ್ಚು ಜನಪ್ರಿಯರಾದವರು.
ಇದನ್ನೂ ಓದಿ : ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪ: ಸಂತ್ರಸ್ತನ ವಿರುದ್ದವೇ ಎಫ್‌ಐಆರ್ ದಾಖಲು


