ಇಬ್ಬರು ಮುಸುಕುಧಾರಿಗಳು ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶರತ್ ಪಟ್ಟನಾಯಕ್ ಅವರ ಮೇಲೆ ಮಸಿ ಎರಚಿರುವ ಘಟನೆ ಭುವನೇಶ್ವರದ ಪಕ್ಷದ ರಾಜ್ಯ ಕಚೇರಿಯಲ್ಲಿ ಶುಕ್ರವಾರ (ಜೂನ್ 21) ಬೆಳಿಗ್ಗೆ ನಡೆದಿದೆ.
ಬೆಳಿಗ್ಗೆ 11:30 ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಪಟ್ಟನಾಯಕ್ ಅವರ ಚೇಂಬರ್‌ಗೆ ಪ್ರವೇಶಿಸಿ ಮಸಿ ಎರಚಿ ಓಡಿ ಹೋಗಿದ್ದಾರೆ ಎಂದು ಕಾಂಗ್ರೆಸ್ ಹಿರಿಯ ಮುಖಂಡರೊಬ್ಬರು ತಿಳಿಸಿದ್ದಾರೆ.
ದುಷ್ಕರ್ಮಿಗಳು ಪಟ್ಟನಾಯಕ್ ಅವರ ಕೊಠಡಿಯ ಬಾಗಿಲನ್ನೂ ವಿರೂಪಗೊಳಿಸಿದ್ದಾರೆ. ಕಾಂಗ್ರೆಸ್ ಭವನದೊಳಗೆ ದಾಂಧಲೆ ನಡೆಸಿದ್ದಾರೆ ಎಂದೂ ವರದಿಯಾಗಿದೆ.
“ಇಂತಹ ಕೃತ್ಯಗಳಿಗೆ ನಾನು ಹೆದರುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಬೆಳವಣಿಗೆಯನ್ನು ಕಂಡು ಹೊಟ್ಟೆಕಿಚ್ಚು ಪಡುವವರು ಇದರ ಹಿಂದೆ ಇದ್ದಾರೆ ಎಂದು ಪಟ್ಟನಾಯಕ್ ಸುದ್ದಿಗಾರರಿಗೆ ಹೇಳಿದ್ದಾರೆ.
ಘಟನೆಯ ಬಳಿಕ ಪಟ್ಟನಾಯಕ್ ಅವರು ನೀಟ್ ಪರೀಕ್ಷೆಯ ಅಕ್ರಮಗಳ ವಿರುದ್ಧ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಘಟನೆಯ ಕುರಿತು ತನಿಖೆ ನಡೆಸಲಾಗುವುದು ಎಂದು ಕಾಂಗ್ರೆಸ್ ವಕ್ತಾರ ಬಿಸ್ವರಂಜನ್ ಮೊಹಂತಿ ಹೇಳಿದ್ದಾರೆ. ಬಿಜೆಪಿ ವಕ್ತಾರ ದಿಲೀಪ್ ಮಲ್ಲಿಕ್ ಮಾತನಾಡಿ, ಇದು ಕಾಂಗ್ರೆಸ್‌ನ ಆಂತರಿಕ ಕಲಹದಿಂದ ನಡೆದಿರುವ ಘಟನೆ. ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶದಿಂದ ಮಸಿ ಎರಚಿದ್ದಾರೆ. ಕಾಂಗ್ರೆಸ್ ಸಹಾನುಭೂತಿ ಪಡೆಯುವ ಉದ್ದೇಶದಿಂದ ಇತರ ಪಕ್ಷಗಳತ್ತ ಬೆರಳು ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಮುಂಬೈ : 5 ತಿಂಗಳ ಹಿಂದೆ ಪ್ರಧಾನಿ ಮೋದಿ ಉದ್ಘಾಟಿಸಿದ್ದ ಅಟಲ್ ಸೇತು ರಸ್ತೆಯಲ್ಲಿ ಬಿರುಕು


