ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‌ನಲ್ಲಿ ಅಕ್ರಮ ಎಸಗಿರುವ ಶಂಕೆಯ ಮೇಲೆ ಬಿಹಾರ ಪೊಲೀಸರು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಆರು ಮಂದಿಯನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ರಾತ್ರಿ ದೇವಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಏಮ್ಸ್-ದಿಯೋಘರ್ ಬಳಿಯ ಮನೆಯೊಂದರಿಂದ ಶಂಕಿತರನ್ನು ಬಂಧಿಸಲಾಗಿದೆ. ಅವರನ್ನು ಪಾಟ್ನಾಕ್ಕೆ ಕರೆತಂದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿ ರಿತ್ವಿಕ್ ಶ್ರೀವಾಸ್ತವ್ ಹೇಳಿದ್ದಾರೆ.
ಬಂಧಿತರನ್ನು ಬಿಹಾರದ ನಳಂದ ಜಿಲ್ಲೆಯ ನಿವಾಸಿಗಳಾದ ಪರಮ್‌ಜಿತ್ ಸಿಂಗ್ ಅಲಿಯಾಸ್ ಬಿಟ್ಟು, ಚಿಂಟು ಅಲಿಯಾಸ್ ಬಲದೇವ್ ಕುಮಾರ್, ಕಾಜು ಅಲಿಯಾಸ್ ಪ್ರಶಾಂತ್ ಕುಮಾರ್, ಅಜಿತ್ ಕುಮಾರ್, ರಾಜೀವ್ ಕುಮಾರ್ ಅಲಿಯಾಸ್ ಕರು ಮತ್ತು ಪಂಕು ಕುಮಾರ್ ಎಂದು ಗುರುತಿಸಲಾಗಿದೆ ಎಂದು ದಿಯೋಘರ್ ಪೊಲೀಸರು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೇ 5, 2024ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಜೂನ್ 4ರಂದು ಹೊರ ಬಿದ್ದಿತ್ತು. ಬರೋಬ್ಬರಿ 24 ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಪರೀಕ್ಷೆಯಲ್ಲಿ ಬಿಹಾರ, ಹರಿಯಾಣ ರಾಜ್ಯಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅಕ್ರಮಗಳು ನಡೆದಿರುವ ಆರೋಪ ಕೇಳಿ ಬಂದಿವೆ.
ಇದನ್ನೂ ಓದಿ : CSIR-UGC NET ಪರೀಕ್ಷೆ ಮಂದೂಡಿಕೆ: ಮತ್ತೊಂದು ಪ್ರಶ್ನೆ ಪತ್ರಿಕೆ ಸೋರಿಕೆ?


