ವಿವಾದಾತ್ಮಕ ಹೇಳಿಕೆಗಳಿಗೆ ಹೆಸರಾಗಿರುವ ರಾಜಸ್ಥಾನದ ಶಿಕ್ಷಣ ಸಚಿವ ಮದನ್ ದಿಲಾವರ್ ಅವರು, ಬುಡಕಟ್ಟು ಮುಖಂಡ ಮತ್ತು ಸಂಸದ ರಾಜ್‌ಕುಮಾರ್ ರೋಟ್ ಹಿಂದುವೋ ಅಲ್ಲವೋ ಎಂಬುವುದನ್ನು ಪರಿಶೀಲಿಸಲು ಡಿಎನ್‌ಎ ಪರೀಕ್ಷೆ ನಡೆಸಬೇಕು ಎನ್ನುವ ಮೂಲಕ ಮತ್ತೊಮ್ಮೆ ವಿವಾದವನ್ನು ಹುಟ್ಟು ಹಾಕಿದ್ದಾರೆ.
ಭಾರತೀಯ ಆದಿವಾಸಿ ಪಕ್ಷದ (ಬಿಎಪಿ) ಸಂಸದ ರಾಜ್‌ಕುಮಾರ್ ರೋಟ್ ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿರುವುದರಿಂದ ಹಿಂದೂ ಎಂದು ಗುರುತಿಸಿಕೊಳ್ಳಲು ನಿರಾಕರಿಸಿ ಹೇಳಿಕೆ ನೀಡಿದ್ದರು. ಅದಕ್ಕೆ ತಿರುಗೇಟು ನೀಡುವಾಗ ದಿಲಾವರ್ ಎಡವಟ್ಟು ಮಾಡಿಕೊಂಡಿದ್ದಾರೆ.
“ರಾಜ್‌ಕುಮಾರ್ ರೋಟ್ ಅವರು ತನ್ನನ್ನು ತಾನು ಹಿಂದೂ ಎಂದು ಗುರುತಿಸಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಹಾಗಾಗಿ, ಅವರನ್ನು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು. ಅವರ ಪೂರ್ವಜರಲ್ಲಿ ಕೆಲವರು ತಮ್ಮ ವಂಶಾವಳಿಯ ಕುರಿತು ಬರೆಯುವವರಿದ್ದಾರೆ. ಅವರನ್ನೂ ಕೇಳಬಹುದು. ದೇಶ ಮತ್ತು ಸಮಾಜವನ್ನು ಒಡೆಯಲು ಪ್ರಯತ್ನಿಸುತ್ತಿರುವವರನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ” ಎಂದು ಸಚಿವ ಮದನ್ ದಿಲ್ವಾರ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಂಸದ ರಾಜಕುಮಾರ್ ರೋಟ್, “ಮದನ್ ದಿಲಾವರ್ ಅವರ ಮನಸ್ಥಿತಿಯನ್ನು ಪರಿಶೀಲಿಸಬೇಕು. ಜವಾಬ್ದಾರಿಯುತ ಹುದ್ದೆಯಲ್ಲಿರುವ ರಾಜಸ್ಥಾನದ ಶಿಕ್ಷಣ ಸಚಿವರಿಗೆ ಇಂತಹ ಭಾಷೆ ಹಿಡಿಸುವುದಿಲ್ಲ. ದಿಲಾವರ್ ಅವರೇ, ಶಿಕ್ಷಣ ಸಚಿವರಾಗಿ ಕಳೆದ ಆರು ತಿಂಗಳಲ್ಲಿ ಬುಡಕಟ್ಟು ಪ್ರದೇಶಗಳಲ್ಲಿನ ಶಿಕ್ಷಣಕ್ಕಾಗಿ ನೀವು ಏನು ಮಾಡಿದ್ದೀರಿ ಎಂಬುವುದನ್ನು ದಯವಿಟ್ಟು ತಿಳಿಸಿ. ನೀವು ಏನನ್ನೂ ಮಾಡಿಲ್ಲ. ಇದಕ್ಕೆ ಮುಂದಿನ ದಿನಗಳಲ್ಲಿ ಆದಿವಾಸಿಗಳು ನಿಮಗೆ ತಕ್ಕ ಉತ್ತರ ನೀಡಲಿದ್ದಾರೆ” ಎಂದಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ ಕೂಡ ಸಚಿವರ ಹೇಳಿಕೆಯನ್ನು ಖಂಡಿಸಿದ್ದು. “ಶಿಕ್ಷಣ ಸಚಿವರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಅವರ ಹೇಳಿಕೆಯು ಬೌದ್ಧಿಕ ಅಸಾಮರ್ಥ್ಯವನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
ರಾಜ್‌ಕುಮಾರ್ ರೋಟ್ ಅವರು ಬುಡಕಟ್ಟು ಪ್ರಾಬಲ್ಯದ ಬನ್ಸ್ವಾರಾದಿಂದ ಬಿಎಪಿಯ ಅಭ್ಯರ್ಥಿಯಾಗಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಗೆದ್ದು, ಸಂಸದರಾಗಿದ್ದಾರೆ. ಬುಡಕಟ್ಟು ಜನಾಂಗದವ ನಂಬಿಕೆ ಮತ್ತು ಹಿಂದೂ ಧರ್ಮಗಳು ಭಿನ್ನವಾಗಿವೆ. ಬುಡಕಟ್ಟು ಸಮುದಾಯದವರು ಹಿಂದೂಗಳಲ್ಲ ಎಂದು ರೋಟ್ ಪ್ರತಿಪಾದಿಸುತ್ತಾರೆ.
ಇದನ್ನೂ ಓದಿ : 18ನೇ ಲೋಕಸಭೆ| ಇಂದಿನಿಂದ ಮೊದಲ ಅಧಿವೇಶನ: ಜೂ.26ರಂದು ಸ್ಪೀಕರ್ ಆಯ್ಕೆ


