ಆಪಾದಿತ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ನ್ಯಾಯಾಲಯವು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಮೂರು ದಿನಗಳ ಕಾಲ ಕೇಂದ್ರ ತನಿಖಾ ದಳ (ಸಿಬಿಐ) ಕಸ್ಟಡಿಗೆ ನೀಡಿದೆ.
ದೆಹಲಿ ರೋಸ್ ಅವೆನ್ಯೂ ನ್ಯಾಯಾಲಯದ ನ್ಯಾಯಾಧೀಶ ಅಮಿತಾಭ್ ರಾವತ್ ಅವರು, ಸಿಬಿಐ ಮತ್ತು ಕೇಜ್ರಿವಾಲ್ ಪರ ವಕೀಲರ ವಾದಗಳನ್ನು ಸುದೀರ್ಘವಾಗಿ ಆಲಿಸಿದ ನಂತರ ಈ ಆದೇಶ ಹೊರಡಿಸಿದ್ದಾರೆ.
ನ್ಯಾಯಾಧೀಶ ರಾವತ್ ಅವರು ತನಿಖೆಯಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದ ನಂತರ, ಸಿಬಿಐ ಬುಧವಾರ ಔಪಚಾರಿಕವಾಗಿ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿ ಐದು ದಿನಗಳ ಕಾಲ ಕಸ್ಟಡಿಗೆ ಕೇಳಿತ್ತು.
ವಿಚಾರಣೆಯ ಸಂದರ್ಭದಲ್ಲಿ, ಕೇಜ್ರಿವಾಲ್ ಅವರು, ನ್ಯಾಯಾಲಯವನ್ನು ವೈಯಕ್ತಿಕವಾಗಿ ಉದ್ದೇಶಿಸಿ ಪ್ರಕರಣದಲ್ಲಿ ಬಂಧಿತರಾಗಿರುವ ಮನೀಶ್ ಸಿಸೋಡಿಯಾ ಸೇರಿದಂತೆ ಇತರ ಎಎಪಿ ನಾಯಕರು ನಿರಪರಾಧಿಗಳು ಎಂದು ಸಮರ್ಥಿಸಿಕೊಂಡರು.
ಕೇಜ್ರಿವಾಲ್ ಸಂಪೂರ್ಣ ಆರೋಪವನ್ನು ಮನೀಶ್ ಸಿಸೋಡಿಯಾ ಮೇಲೆ ಹೊರಿಸಿದ್ದಾರೆ ಎಂಬ ಸಿಬಿಐ ಹೇಳಿಕೆಯನ್ನು ಅವರು ತಳ್ಳಿಹಾಕಿದರು.
ಕೇಜ್ರಿವಾಲ್ ಸಂಪೂರ್ಣ ಆರೋಪವನ್ನು ಸಿಸೋಡಿಯಾ ಮೇಲೆ ಹೊರಿಸಿದ್ದಾರೆ ಎಂದು ಪ್ರತಿಬಿಂಬಿಸಲು ಮಾಧ್ಯಮದ ಮುಖ್ಯಾಂಶಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಸಿಬಿಐ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು. ಕೋರ್ಟ್ ಕೂಡ ಕೇಜ್ರಿವಾಲ್ ಅವರ ಮಾತನ್ನು ಒಪ್ಪಿದೆ.
ಪ್ರಕರಣದ ಹಿನ್ನೆಲೆ : ದೆಹಲಿಯ ಆಪಾದಿತ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಮಾರ್ಚ್ 21, 2024 ರಂದು ಜಾರಿ ನಿರ್ದೇಶನಾಲಯ (ಇಡಿ) ಮೊದಲು ಬಂಧಿಸಿತು.
ಕೆಲ ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ ಉದ್ದೇಶಪೂರ್ವಕವಾಗಿ ಮದ್ಯ ನೀತಿಯಲ್ಲಿ ಮಾರ್ಪಾಡು ಮಾಡಿದ ಹಗರಣದಲ್ಲಿ ಕೇಜ್ರಿವಾಲ್ ಪ್ರಮುಖ ಆರೋಪಿ ಎಂದು ಇಡಿ ಹೇಳಿತ್ತು.
ಮದ್ಯ ಮಾರಾಟಗಾರರಿಗೆ ಅನುಕೂಲವಾಗುವಂತೆ ಅಬಕಾರಿ ನೀತಿ ರೂಪಿಸಲು ಕೇಜ್ರಿವಾಲ್ ಕಿಕ್‌ಬ್ಯಾಕ್ ಪಡೆದಿದ್ದಾರೆ. ಆ ಹಣವನ್ನು ಗೋವಾ ವಿಧಾನಸಭೆ ಚುನಾವಣೆಗೆ ಎಎಪಿ ಬಳಸಿಕೊಂಡಿದೆ ಎಂದು ಆರೋಪಿಸಿತ್ತು.
ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರ ದೂರಿನ ಮೇರೆಗೆ ಸಿಬಿಐ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಇಡಿ ಕೇಜ್ರಿವಾಲ್ ಅವರನ್ನು ಬಂಧಿಸಿತ್ತು.
ಮಾರ್ಚ್ 21 ರಂದು ಇಡಿಯಿಂದ ಬಂಧನಕ್ಕೊಳಗಾದ ನಂತರ ಕೇಜ್ರಿವಾಲ್ ಜೈಲಿನಲ್ಲಿಯೇ ಇದ್ದರು. ಈ ನಡುವೆ ಮೇ 10 ರಂದು ಸುಪ್ರೀಂ ಕೋರ್ಟ್ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಜೂನ್ 1ರವರೆಗೆ ಜಾಮೀನು ನೀಡಿ ಲೋಕಸಭೆ ಚುನಾವಣೆಗೆ ಪ್ರಚಾರ ಮಾಡಲು ಅವಕಾಶ ಮಾಡಿಕೊಟ್ಟಿತು. ಜೂನ್ 2 ರಂದು ಕೇಜ್ರಿವಾಲ್ ಜೈಲಿಗೆ ಮರಳಿದ್ದರು. ಅಂದಿನಿಂದ ಜೈಲಿನಲ್ಲೇ ಇದ್ದರು.
ನ್ಯಾಯಾಲಯದ ಅನುಮತಿಯೊಂದಿಗೆ ಸಿಬಿಐ ಈ ವಾರದ ಆರಂಭದಲ್ಲಿ ಕೇಜ್ರಿವಾಲ್ ಅವರಿಂದ ಹೇಳಿಕೆಯನ್ನು ದಾಖಲಿಸಿಕೊಂಡಾಗಲೂ ಅವರು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದರು.
ಬಳಿಕ ಕೇಜ್ರಿವಾಲ್ ಅವರನ್ನು ಬಂಧಿಸಲು ಸಿಬಿಐ ನ್ಯಾಯಾಲಯದ ಅನುಮತಿ ಕೋರಿತ್ತು. ದೆಹಲಿಯ ವಿಚಾರಣಾ ನ್ಯಾಯಾಲಯದ ಮುಂದೆ ಸಂಕ್ಷಿಪ್ತ ವಿಚಾರಣೆಯ ನಂತರ, ಸಿಬಿಐ ಬುಧವಾರ ಮುಂಜಾನೆ ಕೇಜ್ರಿವಾಲ್ ಅವರನ್ನು ಔಪಚಾರಿಕವಾಗಿ ಬಂಧಿಸಿತ್ತು. ನಂತರ ಅವರ ಬಂಧನದ ಕಾರಣವನ್ನು ನ್ಯಾಯಾಲಯಕ್ಕೆ ತಿಳಿಸಿತ್ತು. ನಂತರ ಕೇಜ್ರಿವಾಲ್ ಅವರನ್ನು ಕಸ್ಟಡಿಗೆ ನೀಡುವಂತೆ ಕೋರಿ ಸಿಬಿಐ ರೂಸ್ ಅವೆನ್ಯೂ ನ್ಯಾಯಾಲಯವನ್ನು ಕೋರಿತ್ತು.
ಇದನ್ನೂ ಓದಿ : ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೋಡಾ ಮರು ನೇಮಕ


