ಆಂಧ್ರ ಪ್ರದೇಶದ ಗುಂಟೂರಿನಲ್ಲಿ ಮುಸ್ಲಿಮರು ಹಿಂದೂ ದೇವಾಲಯವನ್ನು ಕೆಡವಿದ್ದಾರೆ ಎಂದು ಬರೆದುಕೊಂಡು ವಿಡಿಯೋವೊಂದನ್ನು ಹಂಚಿಕೊಳ್ಳಲಾಗ್ತಿದೆ. ವಿಡಿಯೋದಲ್ಲಿ ಮುಸ್ಲಿಮರ ಟೋಪಿ ಧರಿಸಿ ಕೆಲ ವ್ಯಕ್ತಿಗಳು ಸುತ್ತಿಗೆ ಹಿಡಿದು ಪ್ರವೇಶ ದ್ವಾರವೊಂದನ್ನು ಕೆಡವುವ ದೃಶ್ಯವಿದೆ.

ಆಂಧ್ರ ಪ್ರದೇಶದ ಗುಂಟೂರಿನ 17ನೇ ವಾರ್ಡ್‌ನಲ್ಲಿ 40 ವರ್ಷ ಹಳೆಯ ನಾಗ ದೇವಸ್ಥಾನವನ್ನು ಶಾಂತಿಪ್ರಿಯರು ಕಡೆವಿದ್ದಾರೆ. ಎಫ್‌ಐಆರ್ ದಾಖಲಿಸಲು ಪೊಲೀಸರಿಗೆ ಇದರ ಬಗ್ಗೆ ಮಾಹಿತಿಯೇ ಇಲ್ಲ” ಎಂಬ ಸಂದೇಶದೊಂದಿಗೆ ವಿಡಿಯೋ ಹಂಚಿಕೊಳ್ಳಲಾಗ್ತಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಮುಸ್ಲಿಮರು ಹಿಂದೂ ದೇವಸ್ಥಾನ ಕೆಡವಿದ್ದಾರೆ ಎಂಬ ಆರೋಪ ಸುಳ್ಳು ಎಂದು ಗೊತ್ತಾಗಿದೆ.
ಅಸಲಿಗೆ, ಆಂಧ್ರ ಪ್ರದೇಶದ ಗುಂಟೂರಿನಲ್ಲಿ ದರ್ಗಾ ಒಂದರ ಜಮೀನು ವಿಚಾರಕ್ಕೆ ಎರಡು ಮುಸ್ಲಿಂ ಗುಂಪುಗಳ ನಡುವೆ ಜಗಳ ನಡೆದಿದೆ. ಒಂದು ಗುಂಪು ದರ್ಗಾ ಕಟ್ಟಡ ಕೆಡವಿ ಹೊಸತು ನಿರ್ಮಿಸಲು ಮುಂದಾಗಿತ್ತು. ಈ ವೇಳೆ ಏಕಾಏಕಿ ಆಗಮಿಸಿದ ಇನ್ನೊಂದು ಗುಂಪು ಅಡ್ಡಿಪಡಿಸಿದೆ. ಈ ವೇಳೆ ವಾಗ್ವಾದ ನಡೆದು ಒಂದು ಗುಂಪು ದರ್ಗಾದ ಪ್ರವೇಶ ದ್ವಾರ ಕೆಡವಲು ಮುಂದಾಗಿದೆ.
ಈ ಪ್ರಕರಣ ಮುಸ್ಲಿಂ ಸಮುದಾಯದ ಜನರ ಎರಡು ಗುಂಪುಗಳ ನಡುವೆ ನಡೆದಿರುವುದೇ ಹೊರತು, ಇದರಲ್ಲಿ ಹಿಂದೂ-ಮುಸ್ಲಿಂ ಎಂಬ ಯಾವುದೇ ಕೋಮು ವೈಷಮ್ಯದ ವಿಷಯವಿಲ್ಲ. ವೈರಲ್ ವಿಡಿಯೋ ಹಳೆಯದ್ದಾಗಿದ್ದು, ಮತ್ತೆ ಹಂಚಿಕೊಳ್ಳಲಾಗಿದೆ.
ದರ್ಗಾದ ಪ್ರವೇಶ ದ್ವಾರ ಕೆಡವಿದ ಘಟನೆಗೆ ಸಂಬಂಧಿಸಿದಂತೆ ಅಕ್ಟೋಬರ್ 14,2022ರಂದು ಅಂಡಮಾನ್ & ನಿಕೋಬಾರ್ ದ್ವೀಪ ಬಿಜೆಪಿ ರಾಷ್ಟ್ರೀಯ ಉಸ್ತುವಾರಿ ಕಾರ್ಯದರ್ಶಿ ಸತ್ಯ ಕುಮಾರ್ ಯಾದವ್ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದರು.

ಇನ್ನು ಈ ಘಟನೆಯ ಕುರಿತು ಅಕ್ಟೋಬರ್ 17, 2022ರಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಅದರಲ್ಲಿ “ಅಕ್ಟೋಬರ್ 12, 2022ರಂದು ಗುಂಟೂರಿನ ಎಲ್‌ಆರ್ ನಗರ ಪ್ರದೇಶದ ಭಾಜಿ ಭಾಷಾ ನಿಶಾನಿ ದರ್ಗಾವನ್ನು ಕೆಲವು ಅಪರಿಚಿತ ಜನರು ಧ್ವಂಸಗೊಳಿಸಲು ಪ್ರಯತ್ನಿಸಿದ್ದಾರೆ ಎಂದಿತ್ತು.

ವರದಿಯ ಪ್ರಕಾರ, ದರ್ಗಾ ಇರುವ ಜಮೀನಿನ ಮಾಲೀಕ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಹಾಗಾಗಿ, ಅವರ ಮಗಳು ದರ್ಗಾದಲ್ಲಿ ಪ್ರಾರ್ಥನೆ ಮುಂದುವರೆಸುವಂತೆ ಸ್ಥಳೀಯರನ್ನು ಕೋರಿದ್ದರು. ದರ್ಗಾ ಕಟ್ಟಡ ಶಿಥಿಲಗೊಂಡಿದ್ದರಿಂದ ಸ್ಥಳೀಯರು ಹಣ ಸಂಗ್ರಹಿಸಿ ಕಟ್ಟಡ ನವೀಕರಣ ಕೆಲಸ ಪ್ರಾರಂಭಿಸಿದ್ದರು. ಈ ವೇಳೆ ಏಕಾಏಕಿ ಸ್ಥಳಕ್ಕೆ ಬಂದ ಅಪರಿಚಿತರ ಗುಂಪು, “ನಾವು ಹೊಸ ಕಟ್ಟಡ ಕಟ್ಟುತ್ತೇವೆ” ಎಂದು ಎಂದಿದ್ದಾರೆ. ಈ ವೇಳೆ ಎರಡು ಗುಂಪುಗಳ ನಡುವೆ ಜಗಳ ಶರುವಾಗಿದೆ.
ಈ ಕುರಿತು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್‌ಗೆ ಪ್ರತಿಕ್ರಿಯಿಸಿದ್ದ ಲಾಲ್‌ಪೇಟ್ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಪ್ರಭಾಕರ್ ” ಘಟನೆ ಕುರಿತು ನಾವು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ. ಅವರು ಪರಿಶೀಲಿಸಿ ಜಮೀನಿನ ನಿಜವಾದ ಮಾಲೀಕರು ಯಾರು ಎಂದು ಪತ್ತೆ ಹಚ್ಚಲಿದ್ದಾರೆ. ವಿವಾದ ಬಗೆ ಹರಿಯುವವರೆಗೆ ದರ್ಗಾ ಬಂದ್ ಆಗಿರಲಿದೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಗುಂಟೂರಿನಲ್ಲಿ ಹಿಂದು ದೇವಾಲಯವನ್ನು ಮುಸ್ಲಿಮರು ಕೆಡವಿದ್ದಾರೆ ಎಂಬ ಸಾಮಾಜಿಕ ಜಾಲತಾಣಗಳ ಸಂದೇಶ ಸುಳ್ಳು. ವಿಡಿಯೋದಲ್ಲಿ ಕಾಣುವ ಪ್ರವೇಶ ದ್ವಾರದಲ್ಲಿ ನಾಗನ ಆಕೃತಿ ಕಂಡು ಜನರು ಅದು ಹಿಂದೂ ದೇವಾಲಯ ಎಂದು ಪ್ರತಿಪಾದಿಸಿರಬಹುದು.
ಇದನ್ನೂ ಓದಿ : FACT CHECK: ರಾಹುಲ್ ಗಾಂಧಿ ನಕಲಿ ಲೋಕೋ ಪೈಲಟ್‌ಗಳ ಜೊತೆಗೆ ಸಂವಾದ ನಡೆಸಿದ್ದಾರೆ ಎಂಬುವುದು ಸುಳ್ಳು


