ನಾಲ್ಕು ವರ್ಷದ ಹೆಣ್ಣು ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಮಗುವಿನ ಸಂಬಂಧಿಯಾಗಿರುವ ಬೆಂಗಳೂರಿನ ಗೌರಿಪಾಳ್ಯದ ಇರ್ಫಾನ್ ಖಾನ್ ಬಂಧಿತ ವ್ಯಕ್ತಿ ಎಂದು ತಿಳಿದು ಬಂದಿದೆ. ಈತನ ವಿರುದ್ದ ಮಾಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಆರೋಪಿ ಮಗುವಿನ ಮನೆಗೆ ಆಗಾಗ ಭೇಟಿ ನೀಡುತ್ತಿದ್ದ. ಅದೇ ರೀತಿ ಜುಲೈ 20ರಂದು ಮನೆಗೆ ತೆರಳಿದ್ದ. ಅಂದು ಸಂಜೆ ಕೊಲೆಯಾಗಿರುವ ಹೆಣ್ಣು ಮಗುವಿನ ಜೊತೆಗೆ ಮತ್ತೊಂದು ಮಗುವನ್ನು ಅಂಗಡಿಗೆ ಕರೆದೊಯ್ದು ಐಸ್‌ಕ್ರೀಂ ಕೊಡಿಸಿಕೊಂಡು ಬಂದಿದ್ದ. ನಂತರ ಹೆಣ್ಣು ಮಗುವನ್ನು ಮಾತ್ರ ತನ್ನೊಂದಿಗೆ ಕರೆದೊಯ್ದಿದ್ದ.
ಸಂಜೆ 7 ಗಂಟೆಯಾದರೂ ಮಗು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ತಾಯಿ ಅಕ್ಕಪಕ್ಕ ಹುಡುಕಾಡಿದ್ದರು. ಕೊನೆಗೆ ಮಗುವನ್ನು ಅಂಗಡಿಗೆ ಕರೆದೊಯ್ದಿದ್ದ ಇರ್ಫಾನ್‌ಗೆ ಕರೆ ಮಾಡಿದ್ದರು. ಆತ “ನನಗೇನು ಗೊತ್ತಿಲ್ಲ” ಎಂದು ಕರೆ ಕಟ್ ಮಾಡಿದ್ದ. ಬಳಿಕ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಮಗುವಿನ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ಕೊಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗು ಹಾಗೂ ಇರ್ಫಾನ್‌ಗಾಗಿ ಹುಡುಕಾಟ ನಡೆಸಿದ್ದರು.
ಸಿಸಿಟಿವಿ ಸೇರಿದಂತೆ ವಿವಿಧ ಮೂಲಗಳನ್ನು ಆಧರಿಸಿ ಶೋಧ ಕಾರ್ಯ ನಡೆಸಿದಾಗ, ಇರ್ಫಾನ್ ಖಾನ್ ತಿಪ್ಪಗೊಂಡನಹಳ್ಳಿ ಬಳಿಯ ರಸ್ತೆಯಲ್ಲಿ ಓಡಾಡಿರುವುದು ಗೊತ್ತಾಗಿದೆ. ಪೊಲೀಸರು ಅಲ್ಲಿ ಹುಡುಕಾಡಿದಾಗ ರಸ್ತೆ ಬದಿಯ ಬಂಡೆಯೊಂದರ ಬಳಿ ಬೆತ್ತಲೆ ಸ್ಥಿತಿಯಲ್ಲಿ ಮಗುವಿನ ಶವ ಪತ್ತೆಯಾಗಿದೆ. ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮಗುವಿನ ಮೃತದೇಹ ಹಸ್ತಾಂತರಿಸಲಾಗಿದೆ.
ಇರ್ಫಾನ್ ಖಾನ್ ಮೇಲಿನ ಅನುಮಾನ ಖಚಿತಪಡಿಸಿಕೊಂಡ ಪೊಲೀಸರು, ಆತನಿಗಾಗಿ ಹುಡುಕಾಡಿದ್ದರು. ಈ ವೇಳೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ತಲೆ ಮರೆಸಿಕೊಂಡಿದ್ದ ಇರ್ಫಾನ್ ಪತ್ತೆಯಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಆಗ್ರಹ
ಬಾಲಕಿಯ ಅತ್ಯಾಚಾರ, ಕೊಲೆ ವಿಷಯ ಹೊರ ಬೀಳುತ್ತಿದ್ದಂತೆ, ನಿನ್ನೆ (ಜು.23) ಮಾಗಡಿ ಪಟ್ಟಣದಲ್ಲಿ ನೂರಾರು ಮಂದಿ ಜಮಾಯಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದು, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಿ, ಇಲ್ಲಾ ಎನ್‌ಕೌಂಟರ್ ಮಾಡಿ ಎಂದು ಆಗ್ರಹಿಸಿದ್ದಾರೆ. ಪಟ್ಟಣದ ಬಿಕೆ ರಸ್ತೆಯಿಂದ ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಿ ಉಪ ತಹಶೀಲ್ದಾರ್ ಸೋಮಶೇಖರ್ ಹಾಗೂ ಡಿವೈಎಸ್‌ಪಿ ಪ್ರವೀಣ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಕಲಬುರ್ಗಿ, ಗೌರಿ ಹತ್ಯೆ ಪ್ರಕರಣ : ವಿಚಾರಣೆಗೆ ತ್ವರಿತಗತಿ ನ್ಯಾಯಾಲಯ ಸ್ಥಾಪಿಸದ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ


