ಕೇಂದ್ರ ಸರ್ಕಾರದ ಅನುದಾನಿತ ಉಪಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲ್ಯಾಣಕ್ಕಾಗಿ ಇರುವ ನಿಧಿಯನ್ನು ಮಧ್ಯ ಪ್ರದೇಶ ಸರ್ಕಾರ ಧಾರ್ಮಿಕ ಕೇಂದ್ರಗಳು ಮತ್ತು ಮ್ಯೂಸಿಯಂ ಅಭಿವೃದ್ಧಿ, ಗೋವುಗಳ ಕಲ್ಯಾಣಕ್ಕೆ ಬಳಕೆ ಮಾಡಿಕೊಂಡಿರುವ ವಿಷಯ ಬಹಿರಂಗವಾಗಿದೆ.
ಹಿಂದುಸ್ತಾನ್ ಟೈಮ್ಸ್ ವರದಿಯ ಪ್ರಕಾರ, ‘ಗೋ ಸಂವರ್ಧನೆ ಮತ್ತು ಪಶು ಸಂವರ್ಧನೆ ಯೋಜನೆಯಡಿ ಗೋ ಕಲ್ಯಾಣಕ್ಕೆ ನಿಗದಿಯಾಗಿದ್ದ 252 ಕೋಟಿ ರೂಪಾಯಿಗಳಲ್ಲಿ 96.76 ಕೋಟಿ ರೂಪಾಯಿಗಳನ್ನು ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ನಿಧಿಯಿಂದ ಬಳಸಿಕೊಳ್ಳಲಾಗಿದೆ. ಗೋ ಕಲ್ಯಾಣ ನಿಧಿಯನ್ನು ಕಳೆದ ವರ್ಷಕ್ಕಿಂತ 90 ಕೋಟಿ ರೂಪಾಯಿಯಷ್ಟು ಹೆಚ್ಚಿಸಲಾಗಿದೆ.
ಅದೇ ರೀತಿ, ಆರು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಮೀಸಲಿಟ್ಟ 109 ಕೋಟಿ ರೂ.ಗಳಲ್ಲಿ ಅರ್ಧದಷ್ಟು ಹಣ ಕೂಡ ಪರಿಶಿಷ್ಟರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ ನಿಧಿಯಿಂದ ತೆಗೆದುಕೊಳ್ಳಲಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ದಾಖಲೆಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.
This is the condition of Govt school in Madhya Pradesh.
Meanwhile, MP govt diverts SC/ST funds for Cows, religious sites. pic.twitter.com/POMdT3f2Nw— Mohammed Zubair (@zoo_bear) July 23, 2024
ಪರಿಶಿಷ್ಟರ ಕಲ್ಯಾಣ ನಿಧಿಯನ್ನು ಇತರ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆ. ಇದರಿಂದ ಪರಿಶಿಷ್ಟರು ಕೂಡ ಪ್ರಯೋಜನ ಪಡೆಯುತ್ತಾರೆ ಎಂದು ಹಣಕಾಸು ಇಲಾಖೆಯ ಅಧಿಕಾರಿಯೊಬ್ಬರು ಹೇಳಿದ್ದಾಗಿ ಹಿಂದೂಸ್ತಾನ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ.
“ನಮ್ಮ ಬಜೆಟರಿ ವ್ಯವಸ್ಥೆಯಲ್ಲಿ ಇತರ ಯೋಜನೆಗಳಿಗೆ ಎಸ್‌ಸಿ, ಎಸ್‌ಟಿ ಉಪಯೋಜನೆ ಹಣವನ್ನು ಬಳಸಿಕೊಳ್ಳುವುದಕ್ಕೆ ಯಾವುದೇ ನಿರ್ಬಂಧ ಇಲ್ಲ” ಎಂದು ಅಧಿಕಾರಿ ಹೇಳಿದ್ದಾರೆ ಎಂದಿದೆ.
1974ರಲ್ಲಿ ಪರಿಶಿಷ್ಟ ಪಂಗಡಗಳ ಉಪಯೋಜನೆ ಜಾರಿಗೆ ಬಂದರೆ, 1979ರಲ್ಲಿ ಪರಿಶಿಷ್ಟ ಜಾತಿಗೆ ಉಪಯೋಜನೆ ಜಾರಿಗೆ ಬಂದಿದೆ. ಇದು ಸಂವಿಧಾನದ 46 ನೇ ವಿಧಿಯನ್ನು ಅನುಷ್ಠಾನಗೊಳಿಸುವ ಒಂದು ಮಾರ್ಗವಾಗಿದೆ. ರಾಜ್ಯಗಳು ಶಿಕ್ಷಣ ಮತ್ತು ಸಮಾಜದ ದುರ್ಬಲ ವರ್ಗಗಳ ಆರ್ಥಿಕ ಹಿತಾಸಕ್ತಿಗಳನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
ಮಧ್ಯ ಪ್ರದೇಶವು ಕರ್ನಾಟಕದ ಬಳಿಕ ಎಸ್‌ಸಿ, ಎಸ್ಟಿ ನಿಧಿಯನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿರುವ ಎರಡನೇ ರಾಜ್ಯವಾಗಿದೆ. ಕರ್ನಾಟಕ ಸರ್ಕಾರ ಕಲ್ಯಾಣ ಯೋಜನೆಗಳಿಗಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಈ ಉಪಯೋಜನೆಯಿಂದ ವರ್ಗಾಯಿಸಿತ್ತು.
ಇದನ್ನೂ ಓದಿ : ನೀಟ್-ಯುಜಿ ಮರು ಪರೀಕ್ಷೆ ಇಲ್ಲ, ಪರೀಕ್ಷಾ ಪಾವಿತ್ರ್ಯ ಉಲ್ಲಂಘಿಸಲಾಗಿದೆ ಎಂದು ತೀರ್ಮಾನಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್


