“ಉತ್ತರ ಪ್ರದೇಶದ ಅಲೀಗಢದಲ್ಲಿ ನ್ಯಾಯಾಧೀಶರ ಕೊಠಡಿಯಲ್ಲಿ ಮುಸ್ಲಿಂ ಉದ್ಯೋಗಿಯೊಬ್ಬರು ಕುಡಿಯುವ ನೀರಿಗೆ ಉಗುಳುತ್ತಿದ್ದಾರೆ. ಹಿಂದುಗಳೇ ಈ ವಿಡಿಯೋವನ್ನು ನೋಡಿ..ಈಗಲಾದರೂ ಎಚ್ಚೆತ್ತುಕೊಳ್ಳಿ” ಎಂದು ಬರೆದುಕೊಂಡು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಅನೇಕರು “ಇದು ಮುಸಲ್ಮಾನರ ಜಿಹಾದ್‌ನ ಒಂದು ಭಾಗ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆಲ ಸಾಮಾಜಿಕ ಜಾಲತಾಣದ ಬಳಕೆದಾರರು “ಅಲೀಗಢ ನ್ಯಾಯಾಲಯದಿಂದ ಉಗುಳುವ ಜಿಹಾದ್‌ನ ಹೊಚ್ಚ ಹೊಸ ವಿಡಿಯೋ ಬಿಡುಗಡೆಯಾಗಿದೆ. ನ್ಯಾಯಾಲಯದ ನ್ಯಾಯಾಧೀಶರು ಸಹ ಸ್ಪಿಟ್ ಜಿಹಾದ್‌ಗೆ ಬಲಿಯಾದರು” ಎಂಬ ಶೀರ್ಷಿಕೆಯನ್ನು ನೀಡಿ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ಈ ವಿಡಿಯೋ 2018ಕ್ಕೂ ಹಿಂದಿನದ್ದು ಎಂಬುವುದು ನಮಗೆ ತಿಳಿದು ಬಂದಿದೆ. ಈ ಕುರಿತು 29 ಮೇ 2018 ರಂದು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.
ವರದಿಯ ಪ್ರಕಾರ, ವಿಕಾಸ್ ಗುಪ್ತಾ ಎಂಬ ನಾಲ್ಕನೇ ದರ್ಜೆಯ ಉದ್ಯೋಗಿ, ಉತ್ತರ ಪ್ರದೇಶದ ಅಲಿಗಢದಲ್ಲಿ ತನ್ನ ಜೊಲ್ಲು ನೀರಿನಲ್ಲಿ ಬೆರೆಸಿ ಮಹಿಳಾ ನ್ಯಾಯಾಧೀಶರಿಗೆ ನೀಡುತ್ತಿರುವುದು ಕಂಡುಬಂದಿದೆ. ವಿಡಿಯೋ ಬಹಿರಂಗವಾದ ನಂತರ, ಗುಪ್ತಾ ಅವರನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ ಮತ್ತು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಪಿ.ಕೆ ಸಿಂಗ್ ಘಟನೆಯನ್ನು ದೃಢಪಡಿಸಿದ್ದರ ವರದಿಗಳು ಬಂದಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ಪತ್ರಿಕಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈ ಮೂಲಕ ನೀರಿನ ಲೋಟಕ್ಕೆ ಉಗುಳಿರುವ ವ್ಯಕ್ತಿ ಮುಸ್ಲಿಂ ಸಮುದಾಯಕ್ಕೆ ಸೇರಿದವರಲ್ಲ ಮತ್ತು ಆತ ಹಿಂದೂ ಎಂಬುವುದು ಸಾಬೀತಾಗಿದೆ. ಈ ಕುರಿತು ಎಬಿಪಿ ಸೇರಿದಂತೆ ಹಲವು ಸುದ್ದಿ ಮಾಧ್ಯಮಗಳು ಕೂಡ ವರದಿ ಮಾಡಿರುವುದು ಕಂಡು ಬಂದಿದೆ.

ವೈರಲ್ ವಿಡಿಯೋ ಕುರಿತು ಜುಲೈ 26, 2024ರಂದು ಅಲೀಗಢ ಪೊಲೀಸರು ಕೂಡ ಎಕ್ಸ್ ಮೂಲಕ ಸ್ಪಷ್ಟನೆ ಕೊಟ್ಟಿದ್ದು, “ದಯವಿಟ್ಟು ಸತ್ಯಾಂಶಗಳನ್ನು ಪರಿಶೀಲಿಸದೆ ತಪ್ಪುದಾರಿಗೆಳೆಯುವ ಮಾಹಿತಿಯನ್ನು ಪೋಸ್ಟ್ ಮಾಡಬೇಡಿ. ಮೇಲ್ಕಂಡ ಪ್ರಕರಣವು 2018 ನೇ ಸಾಲಿನದ್ದಾಗಿದ್ದು, ಆ ಸಮಯದಲ್ಲಿ ಸಂಬಂಧಪಟ್ಟ ಇಲಾಖೆಯು ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ಕೈಗೊಂಡಿದೆ” ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದಂತೆ ಕುಡಿಯುವ ನೀರಿಗೆ ಉಗುಳಿದ ವ್ಯಕ್ತಿ ಮುಸ್ಲಿಂ ಅಲ್ಲ ಎಂಬುವುದು ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದಿದೆ. ತಪ್ಪು ಯಾರು ಮಾಡಿದರೂ ತಪ್ಪೇ. ಅದರಲ್ಲಿ ಜಾತಿ, ಧರ್ಮದ ವ್ಯತ್ಯಾಸ ಇಲ್ಲ. ಈ ಪ್ರಕರಣಕ್ಕೆ ತಪ್ಪು ಮಾಹಿತಿಯೊಂದಿಗೆ ಕೋಮು ಬಣ್ಣ ಬಳಿದಿರುವ ಕಾರಣ ನಾವು ಸತ್ಯಾಸತ್ಯತೆ ತಿಳಿಸುವ ಕಾರ್ಯ ಮಾಡಿದ್ದೇವೆ.
ಇದನ್ನೂ ಓದಿ : FACT CHECK : ಮುಸ್ಲಿಮರ ಹೋಟೆಲ್ ಕುರಿತ ನ್ಯಾಯಮೂರ್ತಿಗಳ ಹೇಳಿಕೆಯನ್ನು ತಿರುಚಿ ಹಂಚಿಕೊಳ್ಳಲಾಗಿದೆ


