ಇಸ್ಲಾಮಿಕ್ ರಾಷ್ಟ್ರ ಬಾಂಗ್ಲಾದೇಶದಲ್ಲಿ ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗುತ್ತಿದೆ.
“ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದ ಮೌಲಾನಾ ಮತ್ತು ಇತರರನ್ನು ಬಾಂಗ್ಲಾದೇಶ ಹೇಗೆ ಓಡಿಸಿದ್ದಾರೆ ನೋಡಿ. ಯಾವುದೇ ಇಸ್ಲಾಮಿಕ್ ರಾಷ್ಟ್ರಗಳು ರಸ್ತೆಯಲ್ಲಿ ನಮಾಝ್ ಮಾಡಲು ಅನುವದಿಸುವುದಿಲ್ಲ. ಸೌದಿಯಲ್ಲಿ ರಸ್ತೆಯಲ್ಲಿ ನಮಾಝ್ ಮಾಡುವ ನಾಟಕ ಆಡುವವರನ್ನು ಬಂಧಿಸಿ ದಂಡ ವಿಧಿಸಲಾಗುತ್ತದೆ. ಭಾರತದಲ್ಲಿ, ರಸ್ತೆ, ಬಸ್ಸುಗಳು, ರೈಲುಗಳು, ನಿಲ್ದಾಣಗಳು, ಉದ್ಯಾನವನಗಳು ಇತ್ಯಾದಿಗಳಲ್ಲಿ ನಮಾಝ್ ಮಾಡಲು ಅನುಮತಿಸದಿದ್ದರೆ, ಅವರು ಮತ್ತು ಅವರ ಮಾಧ್ಯಮ, ವಿರೋಧ ಪಕ್ಷಗಳ ನಿಷ್ಠಾವಂತರು ‘ಸರ್ವಾಧಿಕಾರ’ ಎಂದು ಕರೆಯಲು ಪ್ರಾರಂಭಿಸುತ್ತಾರೆ” ಎಂದು ಪೋಸ್ಟ್‌ಗಳಲ್ಲಿ ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಹಿತಿ ಹುಡುಕಿದ್ದೇವೆ. ಈ ವೇಳೆ 19 ಜುಲೈ 2024 ರಂದು ಟಿಆರ್‌ಟಿ ವರ್ಲ್ಡ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಿದ ಅದೇ ವಿಡಿಯೋ ಲಭ್ಯವಾಗಿದೆ. “ಅಂತ್ಯಸಂಸ್ಕಾರದ ನೇತೃತ್ವ ವಹಿಸಿದ್ದ ಇಮಾಮ್ ನನ್ನು ಬಾಂಗ್ಲಾದೇಶ ಪೊಲೀಸರು ಬಂಧಿಸಿದ್ದಾರೆ” ಎಂಬ ಶೀರ್ಷಿಕೆಯೊಂದಿಗೆ ಅದನ್ನು ಅಪ್ಲೋಡ್ ಮಾಡಲಾಗಿದೆ.

ಟಿಆರ್‌ಟಿ ವರದಿ ಪ್ರಕಾರ, ವೈರಲ್ ವಿಡಿಯೋ ಬಾಂಗ್ಲಾದೇಶದ ಮುನ್ಶಿಗಂಜ್‌ನಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಇತ್ತೀಚೆಗೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಇಮಾಮ್ (ಮೌಲಾನಾ) ಅನ್ನು ಪೊಲೀಸರು ಬಂಧಿಸಿದ ಸಂದರ್ಭದ್ದು ಎಂದು ಗೊತ್ತಾಗಿದೆ.
ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಜುಲೈ 18 ರ ಅಲ್ ಜಝೀರಾ ಸುದ್ದಿ ಸಂಸ್ಥೆಯ ವರದಿಯೂ ನಮಗೆ ಲಭ್ಯವಾಗಿದೆ. ಅದರಲ್ಲೂ ಪ್ರತಿಭಟನೆಯ ಸಂದರ್ಭದಲ್ಲಿ ಮೃತಪಟ್ಟ ವಿದ್ಯಾರ್ಥಿಗಳ ಅಂತ್ಯಕ್ರಿಯೆಯ ಪ್ರಾರ್ಥನೆಯ ನೇತೃತ್ವ ವಹಿಸಿದ್ದ ಇಮಾಮ್ (ಮೌಲಾನಾ) ಅನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿಸಲಾಗಿದೆ.

ಬಾಂಗ್ಲಾದೇಶದ ಮಾಧ್ಯಮಗಳು ಕೂಡ ಈ ಘಟನೆಯ ಬಗ್ಗೆ ವರದಿ ಮಾಡಿವೆ. ಬಂಧಿತರನ್ನು ಇಮಾಮ್ ಅಬ್ದುರಹ್ಮಾನ್ ಹಿರಾನ್ ಮತ್ತು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಕ್ಷದ ಸದಸ್ಯ ಕಾರ್ಯದರ್ಶಿ ವಕೀಲ ಮೆಹಬೂಬ್-ಉಲ್-ಆಲಂ ಸ್ವಪನ್ ಎಂದು ತಿಳಿಸಿವೆ. ಅವರು ರಸ್ತೆಯಲ್ಲಿ ನಮಾಝ್ ಮಾಡುತ್ತಿದ್ದರಿಂದ ಗೊಂದಲ ಉಂಟಾಗಿತ್ತು ಎಂದು ಪೊಲೀಸರು ತಿಳಿಸಿದ್ದಾಗಿ ಹೇಳಿವೆ.
ಒಟ್ಟಿನಲ್ಲಿ ವೈರಲ್ ವಿಡಿಯೋ ಪ್ರತಿಭಟನೆ ವೇಳೆ ಮೃತಪಟ್ಟ ವಿದ್ಯಾರ್ಥಿಗಳ ಅಂತಿಮ ಪ್ರಾರ್ಥನೆ ವೇಳೆ ಇಮಾಮ್ ಅನ್ನು ಪೊಲೀಸರು ಬಂಧಿಸಿದ್ದ ಸಂದರ್ಭದ್ದೇ ಹೊರತು, ರಸ್ತೆಯಲ್ಲಿ ನಮಾಝ್ ಮಾಡಿದ ಕಾರಣಕ್ಕೆ ಇಮಾಮ್ ಅನ್ನು ಬಂಧಿಸಿರುವುದು ಅಲ್ಲ. ಅಂತಿಮ ಪ್ರಾರ್ಥನೆ ವೇಳೆ ಇಮಾಮ್ ಅನ್ನು ಪೊಲೀಸರು ಬಂಧಿಸಿರುವುದು ಶಾಂತಿ ಸುವ್ಯವಸ್ಥೆ ಕಾಪಾಡುವ ಕಾರಣಕ್ಕಾಗಿದೆ, ಹೊರತು ರಸ್ತೆಯಲ್ಲಿ ನಮಾಝ್ ಮಾಡಿದ್ದಕ್ಕಲ್ಲ.
ಇದನ್ನೂ ಓದಿ : FACT CHECK : ನ್ಯಾಯಾಲಯದ ಮುಸ್ಲಿಂ ಸಿಬ್ಬಂದಿ ಕುಡಿಯುವ ನೀರಿಗೆ ಉಗುಳಿದ್ದಾರೆ ಎಂಬುವುದು ಸುಳ್ಳು


