ಕೋಲ್ಕತ್ತಾದಲ್ಲಿ ತರಬೇತಿ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಖಂಡಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಆಗಸ್ಟ್ 17 ರಂದು ತುರ್ತು ಹೊರತುಪಡಿಸಿ ದೇಶದಾದ್ಯಂತ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸುವ 24 ಗಂಟೆಗಳ ಬಂದ್‌ಗೆ ಕರೆ ನೀಡಿದೆ.
ಬಂದ್ ಸಮಯದಲ್ಲಿ ಒಪಿಡಿ (ಹೊರ ರೋಗಿ ವಿಭಾಗ) ಹಾಗೂ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುವುದಿಲ್ಲ. ದೇಶದಾದ್ಯಂತ ಆಧುನಿಕ ಔಷಧ ವೈದ್ಯರ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಐಎಂಎ ಪ್ರಕಟಣೆಯಲ್ಲಿ ತಿಳಿಸಿದೆ.
ಐಎಂಎ ಪ್ರಕಟಣೆಯ ನಂತರ ಫೆಡರೇಶನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್(ಎಫ್‌ಒಆರ್‌ಡಿಎ) ಕೂಡ ತಾನು ಹಿಂಪಡೆದಿದ್ದ ಪ್ರತಿಭಟನೆಯ ನಿರ್ಧಾರವನ್ನು ವಾಪಸ್ ಪಡೆದಿದ್ದು, ಪುನಃ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ.
“ಆರೋಗ್ಯ ಸಚಿವಾಲಯದ ಭರವಸೆಯ ಆಧಾರದ ಮೇಲೆ ಮುಷ್ಕರವನ್ನು ಹಿಂತೆಗೆದುಕೊಳ್ಳುವ ನಮ್ಮ ಹಿಂದಿನ ನಿರ್ಧಾರವು ನಮ್ಮ ಸಮುದಾಯದಲ್ಲಿ ದುಃಖ ಮತ್ತು ನಿರಾಶೆಯನ್ನುಉಂಟುಮಾಡಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ನಾವು ಪ್ರತಿಭಟನೆಗೆ ಮತ್ತೆ ಬೆಂಬಲ ನೀಡುತ್ತೇವೆ” ಎಂದು ಎಫ್‌ಒಆರ್‌ಡಿಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಎಫ್‌ಒಆರ್‌ಡಿಎಯ ಪ್ರತಿನಿಧಿಗಳು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ ಬಳಿಕ ಮುಷ್ಕರವನ್ನು ಹಿಂತೆಗೆದುಕೊಳ್ಳುವುದಾಗಿ ಎರಡು ದಿನಗಳ ಹಿಂದೆ ಘೋಷಿಸಿದ್ದರು.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಘಟನೆ ಕೂಡ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುವುದಾಗಿ ತಿಳಿಸಿದೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯರು, ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ನಿರ್ಭಯಾ ಪ್ರಕರಣದಂತೆ ಪ್ರತಿಭಟನೆ ದೇಶದಾದ್ಯಂತ ವ್ಯಾಪಿಸುತ್ತಿದೆ.
ಕಲ್ಕತ್ತಾ ಹೈಕೋರ್ಟ್ ಆದೇಶದಂತೆ ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
ಇದನ್ನೂ ಓದಿ : ಕೋಲ್ಕತ್ತಾ ಪ್ರಕರಣದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ನರ್ಸ್ ಮೇಲೆ ಅತ್ಯಾಚಾರ, ಕೊಲೆ


