ಮುಂಬವರು ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆಗೆ ಮಹಾ ವಿಕಾಸ್ ಅಘಾಡಿ (ಎಂವಿಎ) ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಮತ್ತು ಎನ್‌ಸಿಪಿ (ಎಸ್‌ಪಿ) ಸೂಚಿಸುವ ಯಾವುದೇ ನಾಯಕನನ್ನು ಬೆಂಬಲಿಸಲು ನಾವು ಸಿದ್ದ ಎಂದು ಶಿವಸೇನೆ (ಯುಬಿಟಿ) ನಾಯಕ ಉದ್ದವ್ ಠಾಕ್ರೆ ಹೇಳಿದ್ದಾರೆ.
ಮಹಾ ವಿಕಾಸ್ ಅಘಾಡಿ (ಎಂವಿಎ) ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಠಾಕ್ರೆ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯು ರಾಜ್ಯದ ಸ್ವಾಭಿಮಾನವನ್ನು ರಕ್ಷಿಸುವ ಹೋರಾಟವಾಗಿದೆ ಎಂದಿದ್ದಾರೆ.
“ಮಹಾ ವಿಕಾಸ್ ಅಘಾಡಿಯ ಸಿಎಂ ಅಭ್ಯರ್ಥಿಯನ್ನು ನಿರ್ಧರಿಸೋಣ, ನಾನು ಅದನ್ನು ಬೆಂಬಲಿಸುತ್ತೇನೆ. ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಅವರ ಅಭ್ಯರ್ಥಿಯನ್ನು ಘೋಷಿಸಲಿ ನಾನು, ಅದನ್ನು ಬೆಂಬಲಿಸುತ್ತೇನೆ. ಏಕೆಂದರೆ ನಾವು ಮಹಾರಾಷ್ಟ್ರದ ಒಳಿತಿಗಾಗಿ ಕೆಲಸ ಮಾಡಬೇಕಾಗಿದೆ. ಜನರಿಗೆ ನಾವು ಬೇಕು, ನೀವಲ್ಲ ಎಂದು ಈ 50 ಖೋಕಾಗಳು ಮತ್ತು ಗದ್ದಾರ್‌ಗಳಿಗೆ ನಾನು ಉತ್ತರ ನೀಡಬೇಕಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಹಿಂದಿನ ಅನುಭವವನ್ನು ನೆನಪಿಸಿಕೊಂಡ ಉದ್ಧವ್ ಠಾಕ್ರೆ “ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಪಡೆಯುವ ಪಕ್ಷದ ವ್ಯಕ್ತಿ ಸಿಎಂ ಎಂಬ ತತ್ವಕ್ಕೆ ಬದಲಾಗಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಮುಂಚಿತವಾಗಿ ನಿರ್ಧರಿಸಬೇಕು” ಎಂದಿದ್ದಾರೆ.
“ಬಿಜೆಪಿ ಜೊತೆಗಿನ ಮೈತ್ರಿಯ ಅನುಭವದ ನಂತರ, ಮೈತ್ರಿಕೂಟದಲ್ಲಿ ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷಕ್ಕೆ ಸಿಎಂ ಹುದ್ದೆ ಎಂಬ ನೀತಿ ಅನುಸರಿಸಬಾರದು ಎಂಬ ಅಭಿಪ್ರಾಯ ಹೊಂದಿದ್ದೇವೆ. ಹಿಂದಿನ ಹಲವು ಚುನಾವಣೆಗಳಲ್ಲಿ ಬಿಜೆಪಿ ಜೊತೆಗಿನ ಮೈತ್ರಿಯಿಂದ ನಾವು ಅನುಭವಿಸಿದ್ದೇವೆ. ಗರಿಷ್ಠ ಸಂಖ್ಯೆಯ ಶಾಸಕರನ್ನು ಗಳಿಸಲು, ಪಕ್ಷಗಳು ತಮ್ಮ ಮಿತ್ರಪಕ್ಷಗಳ ಅಭ್ಯರ್ಥಿಗಳನ್ನು ಕೆಳಗಿಳಿಸಲು ಪ್ರಯತ್ನಿಸುತ್ತವೆ. ಆದ್ದರಿಂದ ಹೆಚ್ಚು ಶಾಸಕರನ್ನು ಹೊಂದಿರುವ ಪಕ್ಷವು ಸಿಎಂ ಸ್ಥಾನವನ್ನು ಪಡೆಯಬೇಕು ಎಂಬ ವಾದವನ್ನು ನಾನು ಬೆಂಬಲಿಸುವುದಿಲ್ಲ” ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರತಿಪಕ್ಷಗಳ ಒಕ್ಕೂಟದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸುವಂತೆ ಉದ್ಧವ್ ಠಾಕ್ರೆ ಅವರು ಮಹಾ ವಿಕಾಸ್ ಅಘಾಡಿ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.
ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಶಿವಸೇನೆ (ಯುಬಿಟಿ), ಕಾಂಗ್ರೆಸ್, ಎನ್‌ಸಿಪಿ (ಎಸ್‌ಪಿ) ಪಕ್ಷಗಳು ಮಹಾ ವಿಕಾಸ ಅಘಾಡಿ ಎಂಬ ತಮ್ಮ ಹಳೆಯ ಒಕ್ಕೂಟದ ಹೆಸರಿನಲ್ಲಿ ಚುನಾವಣೆ ಎದುರಿಸಲಿವೆ.
ಇದನ್ನೂ ಓದಿ : ಜಮ್ಮು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆ


