Homeಅಂಕಣಗಳು'ಮತ್ತೆ ಮತ್ತೆ ಮಳೆ' ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ.....

‘ಮತ್ತೆ ಮತ್ತೆ ಮಳೆ’ ಕವನಸಂಕಲನದ ಬಗ್ಗೆ; ನೆನಪಿನ ಕೊಂಡವ ಹಾಯುತ್ತಾ…..

- Advertisement -
- Advertisement -

ಕವಿತೆ/ಕಲೆ ಎನ್ನುವುದು ಕೊಂಡ ಹಾಯುವ ಆಚರಣೆಯಂತೆ. ತನ್ನ ಬದುಕಿನ ಮತ್ತು ಸಮಾಜದ ನೆನಪುಗಳನ್ನು ಆ ಕೊಂಡದಲ್ಲಿ ಹಾಯಿಸಿಕೊಳ್ಳುವುದೇ ಕವಿಯ/ಕಲಾವಿದನ ಕೆಲಸ. ಏಕೆಂದರೆ ಕಾವ್ಯ/ಸಾಹಿತ್ಯ/ಕಲೆ ಅನ್ನೋದು ಶೋಷಿತರ ಮೇಲಿನ ಭಾರ ಇಳಿಸುವುದು, ಲೋಕದ ಪಾಪಗಳ ಭಾರ ಹೊರುವುದೇ ಆಗಿದೆ.

ಕವಿತೆಯನ್ನು ಕಟ್ಟುವ, ಸೃಷ್ಟಿಸುವ ಕವಿಯ ವ್ಯಕ್ತಿಗತವಾದ ಪ್ರೇಮ, ವಿರಹ, ಸಂತೋಷದ, ನೆನಪುಗಳು, ಅವಮಾನಗಳು, ಸಾಮಾಜಿಕ, ರಾಜಕೀಯ ಸಂಗತಿಗಳು ಅವನ/ಆಕೆಯ ಮನದಾಳಕ್ಕೆ ಇಳಿದು, ಅವನ/ಆಕೆಯ ಭಾವದಲ್ಲಿ ಕಡೆದು ಅರಿವಿನ ಚಿತ್ರವಾಗಿ ಮೂಡುವಂತೆ ಮಾಡುವುದೇ ಕವಿಯ ಕೆಲಸ.

ಈ ಕೆಲಸಕ್ಕೆ ಭಾಷೆ ಅತಿ ಮುಖ್ಯವಾದದ್ದು. ಆದರೆ ಅದೇ ಎಲ್ಲವೂ ಅಲ್ಲ.

ಈ ಚರ್ಚೆಗಳ ಹಿನ್ನೆಲೆಯಲ್ಲಿ ಗಮನಿಸಬಹುದಾದ ಮುಖ್ಯಸಂಗತಿ ಎಂದರೆ ಕಾವ್ಯಕ್ಕೆ ಶಬ್ದ-ಅರ್ಥಗಳೇ ಮುಖ್ಯ ಎಂಬ ವಿಚಾರ ಕನ್ನಡ ಕಾವ್ಯದ ಮೇಲೂ ಹೆಚ್ಚಿನ ಪ್ರಭಾವ ಬೀರಿ, ಕೇವಲ ಭಾಷೆಯ ಬಳಕೆಯೊಂದರಿಂದಲೇ ಹುಸಿ ಕಾವ್ಯ (pseudo poetry) ಮುನ್ನಲೆಗೆ ಬಂದು ನಿಜವಾದ ಕಾವ್ಯ ಹಿನ್ನೆಲೆಗೆ, ಮರೆಗೆ ಸರಿಯುತ್ತದೆ.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ವಾಸ್ತವದಲ್ಲಿ ಕಾವ್ಯ ಅನ್ನೋದು ಬದುಕಿಗೆ ಉಪಯೋಗವಾಗಬೇಕು, ಹಿತಕಾರಿಯಾಗಬೇಕು ಎಂಬ ಬಹುಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ.

ಹೀಗೆ ರೂಪುಗೊಳ್ಳುವ ಕವಿತೆಯ ಸ್ವರೂಪ, ಅದರ ಅಂತಿಮ ಗುರಿ ಏನು ಎಂಬುದನ್ನು ನಮ್ಮ ಜನಪದ ಕಾವ್ಯದಲ್ಲಿ ಪ್ರಚಲಿತವಿರುವ ’ಬಾಲಗೋಪಾಲನ ಲಾವಣಿಗಳು’ ಬರುವ ಸಾಲುಗಳು ವಿವರಿಸುತ್ತವೆ.

“ಬಾಲಗೋಪಾಲನ ಹಾಡ ಕೇಳರಿ
ಹಸುಗೂಸಿಗಿ ಹಾಕಿದಾಂಗ ಕ್ಷೀರವನಾ” ಎಂದು.

ಈ ಸಾಲುಗಳಲ್ಲಿ ಹಸುಗೂಸು ಹಾಲು ಕುಡಿಯುವ ಸಹಜ ಕ್ರಿಯೆಯನ್ನು ಕವಿತೆ ಓದುವ, ಕೇಳುವ ಸಹೃದಯನಿಗೆ ಹೋಲಿಸಿದರೆ ಹೆಚ್ಚು ಸ್ಪಷ್ಟವಾಗುತ್ತದೆ. ಇಲ್ಲಿ ಹಸುಗೂಸು ಹಾಲು ಕುಡಿಯುವ ಒಟ್ಟು ಕ್ರಿಯೆ, ಕಾವ್ಯದ ಸ್ವರೂಪ ಮತ್ತು ಅದರ ಪ್ರಯೋಜನವನ್ನು ಅರ್ಥವತ್ತಾಗಿ ಹೇಳುತ್ತಿದೆ. ತಾಯಿ ಕವಿಯನ್ನು ಸಂಕೇತಿಸಿದರೆ, ತಾಯ ಎದೆಹಾಲು ಕವಿತೆಯನ್ನು, ಹಸುಗೂಸು ಓದುಗನನ್ನು ಸಂಕೇತಿಸುತ್ತದೆ. ಎದೆಹಾಲು ದೋಷದಿಂದ ಮುಕ್ತವಾದ ಉತ್ತಮಕಾವ್ಯವನ್ನು ಸಂಕೇತಿಸುತ್ತದೆ.

ಹಾಲು ಕುಡಿಯುವ ಕ್ರಿಯೆ ಕೂಸಿಗೆ ಕೊಂಚವೂ ತೊಡಕಾಗಿರದೆ, ಇಷ್ಟವಾದ, ಸಹಜವಾದ, ಸಲೀಸಾದ ಕೆಲಸವಾಗಿ, ಹಾಲು ಕೂಸಿಗೆ ಹಿತವನ್ನುಂಟುಮಾಡುತ್ತದೆ. ಜೀವಶಕ್ತಿಯನ್ನು ಹೆಚ್ಚಿಸುತ್ತದೆ, ಆನಂದವನ್ನು ಉಂಟುಮಾಡುತ್ತದೆ. ಹಾಗೆಯೇ ಕಾವ್ಯವು ಸಹಜವಾಗಿರಬೇಕು, ಸರಳವಾಗಿರಬೇಕು. ಓದುಗನಿಗೆ/ಸಹೃದಯನಿಗೆ ಇಷ್ಟವಾದುದೂ, ಅವನ ಬೆಳವಣಿಗೆಗೆ ಶಕ್ತಿಯನ್ನೊದಗಿಸುವಂತಹದು, ಆನಂದವನ್ನುಂಟುಮಾಡುವಂತಹದು ಆಗಿರಬೇಕು. ಒಟ್ಟಿನಲ್ಲಿ ಅವನ ವ್ಯಕ್ತಿತ್ವದ ಬೆಳವಣಿಗೆಗೆ ಸಹಕಾರಿಯಾಗಬೇಕು.

ಇಷ್ಟೆಲ್ಲಾ ಮಾತುಗಳು ಆಡಲು ಕಾರಣ ಹೇಮಂತ ಲಿಂಗಪ್ಪ ಅವರ ಮೊದಲ ಸಂಕಲನದ ಓದು.

ಹೇಮಂತರ ’ಮತ್ತೆ ಮತ್ತೆ ಮಳೆ’ ಸಂಕಲನದಲ್ಲಿ ಒಟ್ಟು ನಲ್ವತ್ತನಾಲ್ಕು ಕವನಗಳಿವೆ. ಇಷ್ಟೂ ಕವನಗಳಲ್ಲಿ ನಾನು ಗಮನಿಸಿದ ಹಾಗೆ ಹೇಮಂತರ ಕವಿತೆಗಳ ಬಹುಮುಖ್ಯ ಅಂಶ ಅಂದರೆ ತನ್ನ ಅನುಭವವನ್ನು ಹಾಗೆ ಒಂದು ಚಿತ್ರವನ್ನಾಗಿ ಕಣ್ಣಿಗೆ ಕಟ್ಟುವಂತೆ ಕಟ್ಟುವುದು. ಇದರ ಮೂಲಕ ಕವಿ ಏನು ಹೇಳಲು ಪ್ರಯತ್ನಿಸುತ್ತಾನೆ ಅನ್ನೋದು ಮುಖ್ಯವಲ್ಲ, ಕಾವ್ಯ ಓದುಗನಿಗೆ ಏನನ್ನು ಹೇಳುತ್ತಿದೆ ಎನ್ನುವುದು ಮುಖ್ಯವಾಗುತ್ತದೆ. ಆ ವಿಚಾರವನ್ನು ಹೇಮಂತರ ಕವಿತೆಗಳು ಒಳಗೊಂಡಿವೆ ಅನ್ನೋದೇ ಅವರ ಕವಿತೆಗಳ ಯಶಸ್ಸು.

ಉದಾಹರಣೆಗೆ: 1.

ಉಬ್ಬಿದೆದೆಯ ಏದುಸಿರು
ಕಿವಿಯಿಟ್ಟು ಆಲಿಸೆ
ಕೇಳುತಿದೆ ಸಂಗೀತದಂತೆ

ನಾನು ಗಾಳಿಯೂದಲೇ ಇಲ್ಲ,
ಕೇವಲ ತುಟಿ ಸೋಕಿಸಿದಷ್ಟೆ…
ನೋಡನೋಡ ನೋಡುತ್ತಲೇ ಅವುಗಳು ಉಬ್ಬಿದ್ದೇಕೆ?
ಶಿಖರಗಳ ತುತ್ತತುದಿಯ, ತುಟಿ ಮುತ್ತಿದ್ದೇಕೆ?

ಈಗ ಮೌನದ್ದೇ ಮಾತು,
ಉಸಿರುಗಳದ್ದೇ ಗದ್ದಲ
ಸ್ಪರ್ಶದ್ದೇ ಕಾರುಬಾರು
ಮುತ್ತುಗಳದ್ದೇ ಚರ್ಚೆ….

2.

ತುಂಬಿ ಹರಿದ ಕೆರೆಯ
ತೂಬಿನಲ್ಲಿ ತಡಕಾಡಿ
ಹಿಡಿದ ಮೀನು- ಏಡಿಗಳ
ನನ್ನೂರ ಕೆರೆ
ಅದರ ಏರಿಯೂ..

ಇಂತವು ಹಲವಾರು.

ಎರಡನೆಯದಾಗಿ, ಕವಿಯಾದವನಿಗೆ ತುಂಬು ಜೀವನ ಪ್ರೀತಿ ಇರಬೇಕು ಮತ್ತದು ಪ್ರಾಮಾಣಿಕವಾಗಿರಬೇಕು. ಆಗ ಅದು ಅವನ ಕವಿತೆಗಳಲ್ಲಿ ಸಾಮಾಜಿಕವಾದ ರೂಪ ಪಡೆಯುತ್ತದೆ ಮತ್ತು ಎಲ್ಲರ ಜೀವನಪ್ರೀತಿಯಾಗುತ್ತೆ. ಅಂತಹ ಅಪಾರ ಜೀವನ ಪ್ರೀತಿ ಹೇಮಂತರ ಕವನಗಳಲ್ಲಿ ಎದ್ದು ಕಾಣುತ್ತದೆ. ಅದು ವ್ಯಕ್ತಿಗತವಾದ ಪ್ರೇಮ; ಆ ಪ್ರೇಮ ಅಚಾನಕ್ಕಾಗಿ ಕೊಡುವ ವಿರಹ, ಆ ವಿರಹದ ಅಭಿವ್ಯಕ್ತಿ ಎಲ್ಲರ ವಿರಹವಾಗಿ ಕಡೆಗೆ ವಿಷಾದವಾಗುವ ಬಗೆಯನ್ನು ಕುರಿತು, ಪ್ರೇಮದ ನೆನಪುಗಳ ಕುರಿತು, ಹಾಗೆ ಪರಿಸರ ಮತ್ತು ಅದರ ಜೊತೆಗಿನ ಜೀವಸಂಕುಲಗಳ ಬಗೆಗಿನ ಕಾಳಜಿ ಕುರಿತಾಗಿರಬಹುದು- ಇಲ್ಲೆಲ್ಲಾ ಉತ್ಕಟ ಪ್ರೇಮದ ಅಭಿವ್ಯಕ್ತಿ ಸಹಜವಾಗಿ ವ್ಯಕ್ತವಾಗಿದೆ. ಜೊತೆಗೆ ಪ್ರೇಮದ ಬಗೆಗಳನ್ನು ಹೇಮಂತ್ ತಮ್ಮ ಕವಿತೆಗಳಲ್ಲಿ ಎದುರಾಗುತ್ತಾರೆ.

ತಮ್ಮ ಮೊದಲ ಸಂಕಲನಗಳಲ್ಲಿ ಪ್ರೇಮ, ವಿರಹ, ವಿಷಾದ, ನೆನಪುಗಳನ್ನು ಕವಿತೆ ಮಾಡಲು ಹೋಗಿ ಭಾಷಣ ಮಾಡುವ ಇಲ್ಲವೇ ವಿಚಾರದ ಒಣಮಾತುಗಳ ಕಟ್ಟುಗಳನ್ನಾಗಿಸುವವರೇ ಹೆಚ್ಚು. ಆಗ ಮಾತು ಅನುಭವದ ಹೆಣವಾಗುತ್ತದೆ. ಹೇಮಂತರ ಈ ಸಂಕಲನದಲ್ಲಿ ಒಂದೆರಡು ಕವಿತೆಗಳನ್ನು ಬಿಟ್ಟರೆ ಉಳಿದಂತೆ ಗೆದ್ದಿದ್ದಾರೆ.

ಇದನ್ನೂ ಓದಿ: ’ಆದಿವಾಸಿಗಳ ಅಭಿವೃದ್ಧಿ’ ಪುಸ್ತಕದಿಂದ ಆಯ್ದ ಅಧ್ಯಾಯ; ಆದಿವಾಸಿಗಳೊಡನೆ ಅನುಸಂಧಾನ ವಿಧಾನ ಯಾವುದಾಗಿರಬೇಕು?

ಆಹ್ವಾನ, ಮಳೆ, ಪ್ರೀತಿ, ಹುಡುಕಿಕೊಡು ಹುಡುಗಿ, ಮರೆವು, ಬನ್ನಿ ಬನ್ನಿ ಪದಗಳೆ, ಹೇಗೆ, ನೆನಪು, ಬ್ರೀವರಿಯ ಹುಡುಗಿ, ಮಿಳಿತ, ನನ್ನ ತಪ್ಪಲ್ಲ, ಮಳೆಗಾಳಿ, ಪಠ್ಯಪುಸ್ತಕ, ಮತ್ತೆ ಮತ್ತೆ ಮಳೆ, ನೈಟ್ ಜರ್ನಿ ಕವಿತೆಗಳು ಮೇಲಿನ ಮಾತುಗಳಿಗೆ ಸಾಕ್ಷಿಯನ್ನು ಒದಗಿಸುತ್ತವೆ.

ಮೂರನೆಯದಾಗಿ, ಕವಿ ಏಟ್ಸ್‌ನ ‘Poetry is an escape from Emotion’- ಈ ಮಾತಿಗೆ ಸಾಕ್ಷಿ ಒದಗಿಸುವ ಹಾಗೆ ಕೇವಲ ಪ್ರೇಮ, ವಿರಹಗಳೇ ಕಾವ್ಯದ ವಸ್ತುವಲ್ಲ ಎನ್ನುವುದನ್ನು ಹೇಳುವಂತೆ ಹೇಮಂತರ ಕಾವ್ಯದ ಮತ್ತೊಂದು ಬಹುಮುಖ್ಯ ಮಗ್ಗಲು ಎಂದರೆ ಬದುಕನ್ನು, ಬದುಕಿನ ಘಟ್ಟಗಳನ್ನು, ಸನ್ನಿವೇಶಗಳನ್ನು ಭಿನ್ನವಾಗಿ ನೋಡಲೆತ್ನಿಸುವ ಕ್ರಮ ವಿಶೇಷವೆನ್ನಿಸುತ್ತದೆ..

ನಮಿಸಲಿ ನಾ ಯಾರಿಗೆ, ನನಗೂ ಮೊಲೆಗಳ ಕೊಡು ದೇವರೇ, ಮಳೆಗಾಲದ ಮುಂಜಾನೆ, ಮಗಳು, ಬೆಂಗಳೂರು ನೋಡಿದಾಗಲೆಲ್ಲಾ, ನಾವು ಕೆ.ಇ.ಬಿಯವರು, ಮಗಳಿಗೊಂದಷ್ಟು ಮಾತು- ಈ ಕವಿತೆಗಳು ಹೇಮಂತ್ ಅವರನ್ನು ಕನ್ನಡದ ಭವಿಷ್ಯದ ಉತ್ತಮ ಕವಿಯಾಗಬಲ್ಲ ಸೂಚನೆಯನ್ನು ಕೊಟ್ಟು ನಂಬಿಕೆಯನ್ನು ಹುಟ್ಟಿಸುತ್ತದೆ.

ನಾಲ್ಕನೆಯದಾಗಿ, ಈ ಸಂಕಲನದಲ್ಲಿ ಇತ್ತೀಚಿನ ದಿನಮಾನಗಳಲ್ಲಿ ನಾವುಗಳು ನೋಡುತ್ತಿರುವ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದ, ಇಲ್ಲಿನ ಬಡವರು-ಜನಸಾಮಾನ್ಯರು-ತಳ ಸಮುದಾಯಗಳ ಮೇಲಿನ ಹಿಂಸೆ, ದೌರ್ಜನ್ಯ, ಅನ್ಯಾಯಗಳ ಕೃತ್ಯಗಳನ್ನು ಖಂಡಿಸುತ್ತಲೇ ಪ್ರಭುತ್ವ ಮತ್ತು ಧಾರ್ಮಿಕ ಮೂಲಭೂತವಾದದ ಅಮಾನವೀಯತೆಯ ಮುಖಗಳನ್ನು ಬಯಲು ಮಾಡುವ ಪ್ರಯತ್ನ ಮಾಡುತ್ತಾರೆ. ಇವು ಮೇಲ್ನೋಟಕ್ಕೆ ಬಂಡಾಯ ಕವಿತೆಗಳಂತೆ ಕಂಡರೂ ಬಂಡಾಯದ ರೋಷ, ಆವೇಶಗಳು ಈ ಕವಿತೆಗಳಲ್ಲಿ ಇಲ್ಲ. ಇಲ್ಲಿ ಕಾರುಣ್ಯ, ವಿಷಾದ, ಅರ್ತತೆಯೆ ಸ್ಥಾಯಿಗುಣಗಳಾಗಿವೆ.

ಕಡೆಯದಾಗಿ, ಹೇಮಂತ್ ಈ ಸಂಕಲನದಲ್ಲಿ ಎರಡು ಕವಿತೆಗಳನ್ನು ಅನುವಾದಿಸಿದ್ದಾರೆ. ಆಫ್ರಿಕಾ ಮೂಲದ ಬರಹಗಾರ ಚಿನುವಾ ಅಚಿಬೆಯ ಒಂದು ಕವಿತೆ. ಅಕಾವ್ಯವನ್ನು ಕಾವ್ಯ ಜಗತ್ತಿಗೆ ಪರಿಚಯಿಸಿದ ನೆರೂಡನ ಒಂದು ಕವಿತೆ. ಎರಡೂ ಭಿನ್ನ ವಿಚಾರಗಳ ಕವಿತೆಗಳು. ಇವು ಕನ್ನಡದವೇ ಎಂಬಂತೆ ಅನುವಾದಗೊಂಡಿವೆ. ಹೇಮಂತ್ ಉತ್ತಮ ಅನುವಾದಕರೂ ಆಗಬಹುದು ಎಂಬ ಸೂಚನೆಗಳು ಈ ಅನುವಾದದಲ್ಲಿ ಕಾಣಬಹುದು.

ಕಾವ್ಯ ಮುಲಾಜಿನಿಂದ ಹುಟ್ಟಿಕೊಳ್ಳುವುದಿಲ್ಲ. ಹಾಗಾಗಿ ಕಾವ್ಯದ ಬಗ್ಗೆ ಮಾತನಾಡುವಾಗ, ಬರೆಯುವಾಗಲೂ ಕೂಡ ಮುಲಾಜಿಗೆ ಒಳಗಾಗಿ ಮಾತನಾಡಬಾರದು ಎನ್ನುವ ಎಚ್ಚರ ನನ್ನನ್ನು ಸದಾ ಎಚ್ಚರಿಸುತ್ತದೆ. ಹಾಗಾಗಿ ಕವಿ ಹೇಮಂತ್ ಅವರ ಈ ಸಂಕಲನದಲ್ಲಿ ಟೆಕ್ನಿಕಲ್ ದೃಷ್ಟಿಯಿಂದ ಕವಿತೆ ಪರವಾಗಿಲ್ಲ ಅನ್ನಿಸಿದರೂ ಆಶಯದ ದೃಷ್ಟಿಯಿಂದ ಕೆಲವು ಕೆಟ್ಟ ಪದ್ಯಗಳೂ ಇವೆ. ಉದಾಹರಣೆಗೆ ಗಂಡಿನ ಮನೋಧರ್ಮವನ್ನು ಢಾಳಾಗಿ ಕಾಣಿಸುವ ’ನಿವೇದನೆ’ ಕವಿತೆ. ಇಂತಹ ಕವಿತೆಗಳನ್ನು ಹೇಮಂತ್ ಬರೆಯದಿದ್ದರೆ ಒಳ್ಳೆಯದು. ಹಾಗೆಯೇ ’ದೇಶಪ್ರೇಮ’ ಎಂಬ ಚುಟುಕು ಪದ್ಯ.

ಈ ಮಿತಿಯ ನಡುವೆಯೂ ಹಲವು ಉತ್ತಮ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟಿರುವ ಹೇಮಂತ್‌ಗೆ ಮತ್ತೊಮ್ಮೆ ಅಭಿನಂದನೆಗಳು. ಮುಂದಿನ ಸಂಕಲನದಲ್ಲಿ ಇನ್ನಷ್ಟು ಉತ್ತಮ ಕವಿತೆಗಳನ್ನು ಕೊಡುವಂತಾಗಲಿ ಎಂದು ಆಶಿಸುತ್ತೇನೆ.

ಎಚ್ ಎಸ್ ರೇಣುಕಾರಾಧ್ಯ

ಎಚ್ ಎಸ್ ರೇಣುಕಾರಾಧ್ಯ
ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮಸುವಿನಕೊಪ್ಪಲು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ. ಸಾಹಿತ್ಯ, ಸಂಸ್ಕೃತಿ, ಕ್ರೀಡೆ, ರಾಜಕಾರಣ ಆಸಕ್ತಿಯ ಕ್ಷೇತ್ರಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಸ್ಸಾಂನ ನಾಲ್ವರು ಮುಸ್ಲಿಂ ಮಹಿಳೆಯರ ಗಡೀಪಾರು ಪ್ರಕ್ರಿಯೆಗೆ ಸುಪ್ರೀಂ ತಡೆ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ನೋಟಿಸ್‌

ಅಸ್ಸಾಂನಲ್ಲಿ 'ವಿದೇಶಿಯರು' ಎಂದು ಘೋಷಿತರಾಗಿ ಗಡೀಪಾರು ಭೀತಿ ಎದುರಿಸುತ್ತಿದ್ದ ನಾಲ್ವರು ಮುಸ್ಲಿಂ ಮಹಿಳೆಯರ ವಿಚಾರದಲ್ಲಿ ಭಾರತದ ಸುಪ್ರೀಂ ಕೋರ್ಟ್ ಮಹತ್ವದ ಮಧ್ಯಪ್ರವೇಶ ಮಾಡಿದೆ. ಈ ಮಹಿಳೆಯರನ್ನು ದೇಶದಿಂದ ಹೊರಹಾಕುವ (ಗಡೀಪಾರು ಮಾಡುವ) ಪ್ರಕ್ರಿಯೆಗೆ...

ದೆಹಲಿಗೆ ಬಂದಿಳಿದ ಕಾಕ್ರೋಚ್ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ : ಜಂತರ್‌ ಮಂತರ್‌ನಲ್ಲಿ ಪ್ರತಿಭಟಿಸಲು ಪೊಲೀಸರಿಂದ ಅನುಮತಿ

ಶನಿವಾರ (ಜೂ.6) ಬೆಳಿಗ್ಗೆ ದೆಹಲಿಗೆ ಆಗಮಿಸಿದ ಕಾಕ್ರೋಚ್ ಜನತಾ ಪಾರ್ಟಿಯ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ, ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ತಿಳಿಸಿದ್ದು, ಯೋಜಿತ ಆಂದೋಲನಕ್ಕಾಗಿ ನೇರವಾಗಿ ಜಂತರ್ ಮಂತರ್‌ನಲ್ಲಿ...

ಜಾಗತಿಕವಾಗಿ ಮೂರು ವರ್ಷಗಳಲ್ಲಿ 600 ಪರಿಸರ ರಕ್ಷಕರ ಹತ್ಯೆ: ವಿಶ್ವಸಂಸ್ಥೆ ತೀವ್ರ ಕಳವಳ: ಜಾಗತಿಕ ತಾಪಮಾನಕ್ಕೆ ಸಾಕ್ಷಿಯಾಗುತ್ತಿರುವ ಭಾರತ

ಜೂನ್ 5 ವಿಶ್ವ ಪರಿಸರ ದಿನ. ಜಗತ್ತಿನಾದ್ಯಂತ ಗಿಡ ನೆಡುವ, ಹಸಿರು ಭಾಷಣ ಬಿಗಿಯುವ ಮತ್ತು ಪರಿಸರ ಕಾಳಜಿಯ ಸಡಗರದ ಆಚರಣೆಗಳು ಎಲ್ಲೆಡೆ ವಿಭಿನ್ನ ರೀತಿಗಳಲ್ಲಿ ವಿಜೃಂಭಿಸುತ್ತಿವೆ. ಆದರೆ, ಇದೇ ಹೊತ್ತಿನಲ್ಲಿ ವಿಶ್ವಸಂಸ್ಥೆಯು...

ಮಣಿಪುರ ಎಸ್‌ಐಆರ್ ವಿರೋಧಿಸಿದ ಕುಕಿ-ಝೋ ಗುಂಪುಗಳು

ಮಣಿಪುರ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿದೆ. ಕುಕಿ-ಝೋ ಬುಡಕಟ್ಟು ಜನಾಂಗದ ಸಾಂಪ್ರದಾಯಿಕ ಗುಂಪಾದ ಕುಕಿ ಇನ್ಪಿ ಮಣಿಪುರ (ಕೆಐಎಂ) ಮತದಾರರ ಪಟ್ಟಿ...

ಹೇಗಿತ್ತು ‘ಕಾಕ್ರೋಚ್ ಜನತಾ ಪಕ್ಷ’ದ ಮೊದಲ ಸುದ್ದಿಗೋಷ್ಠಿ…? ಧರ್ಮೇಂದ್ರ ಪ್ರಧಾನ್‌ ರಾಜೀನಾಮೆಗೆ ಕರೆ

ಜೂನ್ 6, 2026 ರಂದು ಜಂತರ್ ಮಂತರ್‌ನಲ್ಲಿ ನಡೆಯಲಿರುವ 'ಶಾಂತಿಯುತ ಪ್ರತಿಭಟನೆ'ಗೆ ಮುನ್ನ ಜಿರಳೆ ಜನತಾ ಪಕ್ಷ (ಸಿಜೆಪಿ) ತನ್ನ ಮೊದಲ ಪತ್ರಿಕಾಗೋಷ್ಠಿಯನ್ನು ನಡೆಸಿದೆ. ಬುಧವಾರ ಸಂಜೆ (ಜೂ.3) ಸಿಜೆಪಿಯ ಮೂವರು ವಕ್ತಾರರು...

‘ಇದು ಆತ್ಮಹತ್ಯೆಯಲ್ಲ, ಮೋದಿ ಸರ್ಕಾರದ ಭ್ರಷ್ಟ ವ್ಯವಸ್ಥೆ ಮಾಡಿದ ಕೊಲೆ’: ನೀಟ್ ಆಕಾಂಕ್ಷಿಯ ಸಾವಿಗೆ ರಾಹುಲ್ ಗಾಂಧಿ ಆಕ್ರೋಶ

ದೇಶದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ‘ನೀಟ್-ಯುಜಿ’ (NEET-UG) ವಿವಾದ ಮತ್ತು ವಿದ್ಯಾರ್ಥಿಗಳ ಸಾವುಗಳು ಭಾರತದ ಒಟ್ಟಾರೆ ಶಿಕ್ಷಣ ವ್ಯವಸ್ಥೆಯ ದಯನೀಯ ಸ್ಥಿತಿಗೆ ಕನ್ನಡಿ ಹಿಡಿದಿವೆ. ಪರೀಕ್ಷಾ ಅಕ್ರಮಗಳು, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು...

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...