ಇದೇ 2024 ಡಿಸೆಂಬರ್ ತಿಂಗಳಲ್ಲಿ ಮಂಡ್ಯದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಆಯ್ಕೆಗೆ ಸಂಬಂಧಿಸಿದಂತೆ ಈಗ ವಿವಾದ ಭುಗಿಲೆದ್ದಿದೆ. ಕೆಲವರು ಸಾಹಿತ್ಯೇತರ ಕ್ಷೇತ್ರದಲ್ಲಿ ’ಗಮನಾರ್ಹ’ ಸಾಧನೆ ಮಾಡಿದವರನ್ನು ಕೂಡ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿಗೆ(ಕಸಾಪ) ಶಿಫಾರಸ್ಸು ಮಾಡಿದ್ದಾರೆ. ಬೇರೆಬೇರೆ ಕ್ಷೇತ್ರದವರು ತಮ್ಮ ಕ್ಷೇತ್ರವನ್ನೂ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲವರು ಕಸಾಪಕ್ಕೆ ಪತ್ರಗಳನ್ನು ಬರೆದಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಈ ಹಿನ್ನೆಲೆಯಲ್ಲಿ ಕಸಾಪ ಅಧ್ಯಕ್ಷರು, ’ಚರ್ಚೆಗೆ ಅವಕಾಶ ನಿಡಲಾಗಿದೆ; ಸಾರ್ವಜನಿಕ ಅಭಿಪ್ರಾಯ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ’ (ಪ್ರ.ವಾ. 13, ಅಕ್ಟೋಬರ್ 2024) ಎಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಕನ್ನಡದ ಅನೇಕ ಬರಹಗಾರ/ರ್ತಿಯರು, ಚಿಂತಕರು, ಬುದ್ಧಿಜೀವಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಅನೇಕರು ತಮ್ಮ ಆಯ್ಕೆಯ ಸಮ್ಮೇಳನಾಧ್ಯಕ್ಷರ ಹೆಸರುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈಗಲೂ ತಮ್ಮ ಅಭಿಪ್ರಾಯಗಳನ್ನು ಹೇಳುತ್ತಿದ್ದಾರೆ.
ಸಮ್ಮೇಳನಾಧ್ಯಕ್ಷರ ಆಯ್ಕೆಯ ಬಗ್ಗೆ ಈಗ ಎದ್ದಿರುವ ವಿವಾದವು ಉದ್ದೇಶಪೂರ್ವಕವಾಗಿಯೇ ಹುಟ್ಟುಹಾಕಲಾಗಿದೆ. ಈ ವಿವಾದದ ಮುಖಾಂತರ ಚರ್ಚೆಯ ದಿಕ್ಕನ್ನು ಬೇರೊಂದು ಕಡೆಗೆ ತಿರುಗಿಸುವ ಸಂಚಿನಂತೆ ಇದು ಕಾಣುತ್ತಿದೆ. ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಪ್ರತಿ ವರ್ಷವು (ಕೆಲವು ವರ್ಷ ನಡೆಸಲಾಗಿಲ್ಲ) ಕನ್ನಡ ನಾಡು ನುಡಿ ಸಾಹಿತ್ಯ ಕೇಂದ್ರಿತವಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತ ಬಂದಿದೆ. ಇಂತಹ ಬೃಹತ್ ಸಮ್ಮೇಳನದ ವಿಶಾಲವಾದ ಭಿತ್ತಿಯಲ್ಲಿ ಕನ್ನಡ ಪ್ರಜ್ಞೆಯ ಸುತ್ತಮುತ್ತ ಗಂಭೀರವಾಗಿ ಚರ್ಚೆಯಾಗಬೇಕಿರುವ ನೂರಾರು ಸಂಗತಿಗಳಿವೆ. ಇತ್ತೀಚಿನ ಕೆಲವು ವರ್ಷಗಳಿಂದ ಕನ್ನಡ ನಾಡು, ನುಡಿ, ಪುಸ್ತಕ, ಪ್ರಕಟಣೆ, ಚಳವಳಿ, ಸ್ತ್ರೀವಾದ, ವಿಮರ್ಶೆ, ಸಂಶೋಧನೆ ಮುಂತಾದ ವಿಷಯಗಳ ಬಗೆಗಿನ ವಿದ್ವತ್ಪೂರ್ಣ ಗೋಷ್ಠಿಗಳ ಚರ್ಚೆಗಳನ್ನು ಅಪ್ರಸ್ತುತಗೊಳ್ಳುವಂತೆ ಮಾಡಲಾಗುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ತೀವ್ರ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಾಹಿತ್ಯ ಮತ್ತು ಕಲಾಜಗತ್ತಿನ ಹಲವಾರು ಕ್ಷೇತ್ರಗಳ ಬಗ್ಗೆ ಮೌನ ತಾಳಲಾಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನವೆಂದರೆ ಮೂರು ದಿನ ನಡೆಯುವ ಅಧ್ಯಕ್ಷರ ಮೆರವಣಿಗೆ ಹಾಗೂ ಬರಿ ಮನರಂಜನೆ, ಸಂಭ್ರಮ, ಜಾತ್ರೆ ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಲಾಗಿದೆ. ಸಮ್ಮೇಳನದ ಧ್ಯೇಯೋದ್ದೇಶಗಳನ್ನು ಗಾಳಿಗೆ ತೂರಲಾಗಿದೆ.
ಪ್ರತಿ ವರ್ಷವು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಅದ್ದೂರಿಯಾಗಿ ನಡೆಸುತ್ತ ಬಂದಿರುವುದು ದಿಟ. ಎಲ್ಲರಿಗೂ ಗೊತ್ತಿರುವಂತೆ ಕನ್ನಡ ಸಾಹಿತ್ಯದಲ್ಲಿ ಗುರುತರವಾದ ಸಾಧನೆ ಮಾಡಿದವರನ್ನು ಗುರುತಿಸಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಪಟ್ಟವನ್ನು ನೀಡಲಾಗುತ್ತದೆ. ಇದಕ್ಕೆ ಚಾರಿತ್ರಿಕವಾಗಿ ಹಾಗೂ ಸಾಂಸ್ಕೃತಿಕವಾಗಿಯೂ ಸಾಕಷ್ಟು ದೀರ್ಘವಾದ ಪರಂಪರೆಯೇ ಇದೆ. ಇದು ಕೇವಲ ಕನ್ನಡ ನಾಡು, ನುಡಿ, ಸಂಸ್ಕೃತಿಯ ಅಸ್ಮಿತೆಯಾಗಿಯಷ್ಟೇ ಗೋಚರಿಸುತ್ತ ಬಂದಿದ್ದಲ್ಲ. ಪ್ರತಿರೋಧದೊಂದಿಗೆ ನಿರ್ಮಿಸಿಕೊಂಡು ಬಂದ, ಅತ್ಯಂತ ಪ್ರಾಚೀನ ಪರಂಪರೆಯನ್ನು ಹೊಂದಿರುವ ಕನ್ನಡ ನುಡಿಯ ಸಾಹಿತ್ಯದೊಳಗೆ ಆ ಭಾಷಿಕ ಸಮುದಾಯದ ಸ್ವತಂತ್ರ ನಾಡು, ಪ್ರದೇಶ, ಗಡಿಗಳ ಅಸ್ತಿತ್ವವನ್ನು ಕೂಡ ಗರ್ಭೀಕರಿಸಿಕೊಂಡಿರುತ್ತದೆ. ಕನ್ನಡದ ಮೊದಲ ಮೀಮಾಂಸೆಯ ಕೃತಿ ಒಂಬತ್ತನೆಯ ಶತಮಾನದ ’ಕವಿರಾಜಮಾರ್ಗ’ವೇ ಇದಕ್ಕೊಂದು ಅತ್ಯುತ್ತಮ ನಿದರ್ಶನವಾಗಿದೆ. ಆದರೆ ಕೆಲವು ವರ್ಷಗಳಿಂದ ಸಾಹಿತ್ಯ ಸಮ್ಮೇಳನವು ಕನ್ನಡ ಸಾಹಿತ್ಯ ಹಾಗೂ ಕರ್ನಾಟಕ ಸಂಸ್ಕೃತಿಯ ಚಹರೆಗಳ ಸಂಕೀರ್ಣ ನೆಲೆಗಳನ್ನು ಒರೆಗೆ ಹಚ್ಚಿ ನೋಡಲು ಸಾಧ್ಯವಾಗುತ್ತಿಲ್ಲ. ಕಸಾಪವೆಂದರೆ ಸಮ್ಮೇಳನಾಧ್ಯಕ್ಷರನ್ನು ಆಯ್ಕೆ ಮಾಡುವ ಏಜೆನ್ಸಿಯನ್ನು ತೆಗೆದುಕೊಂಡಿರುವಂತೆ ನಡೆದುಕೊಳ್ಳುತ್ತಿದೆ. ಕಸಾಪವೆಂದರೆ ಸಮ್ಮೇಳನಾಧ್ಯಕ್ಷಗಿರಿಯನ್ನು ಕೊಡಿಸುವ ದಂಧೆಯಾಗಿದೆ. ಇಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿಗೆ ಮೊದಲ ಮಣೆ ಹಾಕಲಾಗುತ್ತದೆ. ಇಲ್ಲಿ ಜಾತ್ಯತೀತ ಪ್ರಜ್ಞೆಗಿಂತ ಜಾತಿಪ್ರಜ್ಞೆಯೇ ಪ್ರಧಾನವಾಗಿ ಕೆಲಸ ಮಾಡುತ್ತದೆ. ಕನ್ನಡ ಜಗತ್ತಿಗೆ ಬರಹಗಾರ/ರ್ತಿಯರ ಕೊಡುಗೆಗಳಿಗಿಂತ ಕಸಾಪದವರು ಅಳೆದು ತೂಗುವ ಸ್ವಜನ ಪಕ್ಷಪಾತಗಳು, ಲಿಂಗ ತಾರತಮ್ಯತೆಗಳು ಇಲ್ಲಿ ಮುಖ್ಯವಾಗಿರುತ್ತವೆ.
ವರ್ಷಕ್ಕೊಮ್ಮೆ ಜರುಗುವ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯ ಮಾನದಂಡಗಳೇನು? ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತದೆಯೇ? ಇವುಗಳ ಬಗ್ಗೆ ಕಸಾಪದಲ್ಲಿರುವ ನೀತಿ ನಿಯಮಗಳೇನು? ಕಸಾಪದಲ್ಲಿರುವ ’ಕಾರ್ಯಕಾರಿ ಸಮಿತಿ’ಯು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮವೇ? ಹಾಗಾದರೆ ಸರ್ವಾನುಮತದಿಂದ ಸಮ್ಮೇಳಾಧ್ಯಕ್ಷರನ್ನು ಆಯ್ಕೆ ಮಾಡಿದ್ದೇವೆ ಎಂಬುದರ ಅರ್ಥವೇನು? ಇವುಗಳ ಬಗ್ಗೆ ಸಾರ್ವಜನಿಕವಾದ ಚರ್ಚೆಗಳಾಗದೇ ಕೇವಲ ಸಮ್ಮೇಳನಾಧ್ಯಕ್ಷರ ಪಟ್ಟವು ಇತರ ಕ್ಷೇತ್ರದವರಿಗೂ ನೀಡಬಾರದೇಕೆ ಎನ್ನುವ ಚರ್ಚೆಯನ್ನು ಮುಂಚೂಣಿಗೆ ತರಲಾಗಿದೆ. ಈಗ ಇರುವ ಸಂಸ್ಥೆಯ ಮೂಲ ಸಂರಚನೆಯಲ್ಲಿ ಬದಲಾವಣೆಗಳನ್ನು ತರಬೇಕಾಗುತ್ತದೆ. ಈಗ ನಡೆಯುತ್ತಿರುವ ಚರ್ಚೆಯನ್ನು ಗಮನಿಸಿದರೆ ಇರುವ ನಿಯಮಗಳನ್ನೇ ಉಪಯೋಗಿಸಿಕೊಂಡು ಕಸಾಪ ಎಂಬ ಸಂಸ್ಥೆಯನ್ನು ಒಳಗೊಳಗೆ ಕೊಳೆಯುವಂತೆ ಮಾಡುವ ಸಂಚು ನಡೆಯುತ್ತಿದೆ ಎಂದೆನ್ನಿಸುತ್ತದೆ.
ಕೆಲವು ವರ್ಷಗಳ ಹಿಂದೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ದೇವನೂರ ಮಹಾದೇವ ಅವರು ನಿರಾಕರಿಸಿ ಬರೆದ ಪತ್ರಕ್ಕೆ ಬೆಂಬಲ ಸಿಗಲಿಲ್ಲ. (ಆಗ ಸಿದ್ಧಲಿಂಗಯ್ಯನವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು.) ಆಗ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವು ಕಡ್ಡಾಯವಾಗಬೇಕೆಂಬ ವಿಷಯದಲ್ಲಿ ಕಸಾಪವು ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿ ವಿಫಲವಾಯಿತು. ಹಾಗೆ ನೋಡಿದರೆ ಕಸಾಪವು ಘನತೆ, ಗೌರವ, ಬದ್ಧತೆಗಳನ್ನು ಕಳೆದುಕೊಂಡಿದೆ. ಅದು ಕನ್ನಡ ನಾಡು ನುಡಿಯ ವಿಷಯದಲ್ಲಿ ಗಟ್ಟಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದರಲ್ಲಿ ವಿಫಲವಾಗಿದೆ. ಹೀಗಾಗಿ ಸಾಹಿತ್ಯ ಸಮ್ಮೇಳನವೆಂದರೆ ಕೇವಲ ತೋರಿಕೆಯ ಮತ್ತು ಆಡಂಬರದ ಆಡಂಬೋಲವಾಗಿ ಉಳಿದುಕೊಂಡಿದೆ. ಇದು ಹೇಗೋ ಸಮ್ಮೇಳನಕ್ಕಾಗಿ ಸಮ್ಮೇಳನ ನಡೆಸಿಕೊಂಡು ಹೋಗುವ ಪರಿಪಾಟ ಬೆಳೆದು ನಿಂತಿದೆ.
ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ಎನ್ನುವುದು ಕನ್ನಡದ ಬರಹಗಾರ/ರ್ತಿಯವರಿಗೆ ನೀಡುವ ಗೌರವದ ಸಂಕೇತವಾಗಿರುತ್ತದೆ. ಸಮ್ಮೇಳನಾಧ್ಯಕ್ಷತೆ ಎಂದರೆ ಅವರ ಸಾಹಿತ್ಯಿಕ ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಕೊಡುಗೆಗೆ ಸಂದ ಗೌರವವಾಗಿರುತ್ತದೆ. ಅವರ ಸಾಹಿತ್ಯ, ಚಿಂತನೆ, ಬೌದ್ಧಿಕತೆ, ಕೃತಿಗಳು ಮುಂಚೂಣಿಗೆ ಬರಬೇಕೆ ಹೊರತು ಬರಹಗಾರ/ರ್ತಿಯರೇ ಉತ್ಸವ ಮೂರ್ತಿಗಳಾಗಿ ಮೆರೆಯುವುದಲ್ಲ. ’ಮುಖ್ಯರು-ಅಮುಖ್ಯರು’ ಧೋರಣೆಯ ಈ ವ್ಯಕ್ತಿನಿಷ್ಠ ಕೇಂದ್ರಿತ ಅತಿರೇಕದ ವಿಜೃಂಭಣೆಯು ಸಮಾನತೆಯ ತತ್ವದ ವಿರೋಧಿಯಾಗಿದೆ. ಬರಹಗಾರ/ರ್ತಿಯವರನ್ನು ಭಿನ್ನರು, ವಿಭಿನ್ನರು ಎಂದು ಗುರುತಿಸಬಹುದೇ ಹೊರತು ’ಪ್ರಧಾನ-ಅಪ್ರಧಾನ’ ಎಂಬ ನಿಲುವಿನಿಂದ ನೋಡುವುದು ಆಳದಲ್ಲಿ ಜಾತಿ ಶ್ರೇಣೀಕರಣದ ಮನಸ್ಥಿತಿಯ ಇನ್ನೊಂದು ರೂಪವಾಗಿದೆ. ಇನ್ನು ಕಸಾಪವು ಇವರನ್ನು ಸಮ್ಮೇಳನಾಧ್ಯಕ್ಷಗಿರಿಗೆ ಏರಿಸಿದ್ದೇ ಮೆರೆದಾಡುವಂತೆ ಮಾಡಲು ಪೈಪೋಟಿಗೆ ಇಳಿದಂತೆ ತೋರುತ್ತದೆ. ಇದೇ ಮೆರೆದಾಟದ ಉತ್ಸವದಲ್ಲಿ ಕಸಾಪ ಅಧ್ಯಕ್ಷರ ಕಟೌಟ್‌ಗಳು ಕೂಡ ರಾರಾಜಿಸುತ್ತವೆ. ಹಾಗೆ ನೋಡಿದರೆ ಈಗ ರಾಜಕೀಯ ಸಮಾರಂಭಗಳಿಗೂ ಮತ್ತು ಸಾಹಿತ್ಯ ಸಮ್ಮೇಳನಗಳಿಗೂ ಹೆಚ್ಚು ವ್ಯತ್ಯಾಸ ಉಳಿದಿಲ್ಲ ಅನ್ನಿಸುವಂತಾಗಿದೆ.
ಈಗ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ಮಠಾಧೀಶರ, ರಾಜಕಾರಣಿಗಳ ಹೆಸರುಗಳು ಶಿಫಾರಸುಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸಾಹಿತ್ಯ ಕ್ಷೇತ್ರದವರಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ. ಇದು ಎಲ್ಲರಿಗೂ ತಿಳಿದಿರುವಂತೆ ’ಕನ್ನಡ ಸಾಹಿತ್ಯ’ದ ಸಮ್ಮೇಳನವಾದ್ದರಿಂದ ಇಲ್ಲಿ ’ಕನ್ನಡ ಸಾಹಿತ್ಯ’ ಪರಂಪರೆಗೆ ಅಪೂರ್ವವಾದ, ಮಹತ್ತರವಾದ, ವಿಶಿಷ್ಟವಾದ ರೀತಿಯಲ್ಲಿ ಕೊಡುಗೆ ಕೊಟ್ಟವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಂಡು ಬರಲಾಗಿದೆ. ಈ ಪರಂಪರೆಯೇ ಮುಂದುವರೆಯುವುದು ಕನ್ನಡ ಸಾಹಿತ್ಯ ಜಗತ್ತಿಗೆ ಸಲ್ಲುವ ಗೌರವವಾಗಿರುತ್ತದೆ. ಕನ್ನಡ ಸಾಹಿತ್ಯಲೋಕದ ಎಷ್ಟೋ ಅರ್ಹರಿಗೆ ಕೂಡ ಸಮ್ಮೇಳನಾಧ್ಯಕ್ಷತೆಯ ಅವಕಾಶ ಸಿಗದೇ ಹೋಗಿರುವುದು ನಮ್ಮ ಕಣ್ಣಮುಂದಿದೆ. ಪೂರ್ಣಚಂದ್ರ ತೇಜಸ್ವಿ ಮತ್ತು ಪಿ. ಲಂಕೇಶ್ ಅವರಂತಹ ಲೇಖಕರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸದೇ ಅಸಡ್ಡೆ ಮಾಡಲಾಯಿತು.
ಈಗ ನಮ್ಮ ನಡುವೆ ಇರುವ ಕನ್ನಡದ ಎಷ್ಟೋ ವಿಮರ್ಶಕರು, ಸಂಶೋಧಕರು, ಚಿಂತಕರು, ಬುದ್ಧಿಜೀವಿಗಳನ್ನು ಸಾಹಿತ್ಯ ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸಲು ಅದ್ಯಾವ ನೀತಿ ನಿಯಮಗಳು ಅಡ್ಡಿಯಾಗಿವೆಯೋ ತಿಳಿಯದು. ಇನ್ನು ಪುರುಷ ಪ್ರಧಾನತೆ ಎಷ್ಟೊಂದು ಪ್ರಬಲವಾಗಿದೆಯೆಂದರೆ ಬರಹಗಾರ್ತಿಯರನ್ನು ಹಾಗೂ ಅವರ ಸಾಹಿತ್ಯವನ್ನು ಅತ್ಯಂತ ತುಚ್ಛವಾಗಿ ಕಾಣಲಾಗುತ್ತದೆ. ಕಾಮಾಲೆ ಕಣ್ಣಿಗೆ ಎಲ್ಲವೂ ಹಳದಿಯಾಗಿ ಕಾಣುವಂತೆ ಗಂಡಸರಿಂದಲೇ ತುಂಬಿ ಹೋಗಿರುವ ಕಸಾಪಕ್ಕೆ ಪುರುಷರೇ ಕಾಣುತ್ತಾರೆ. ಒಂದು ಶತಮಾನಕ್ಕೂ ಹೆಚ್ಚಿನ ವಯಸ್ಸಾಗಿರುವ ’ಕನ್ನಡ ಸಾಹಿತ್ಯ ಪರಿಷತ್ತು’ ಸಂಸ್ಥೆಯ ಚರಿತ್ರೆಯಲ್ಲಿಯೇ ಇದುವರೆಗೂ ಮಹಿಳೆಯೊಬ್ಬರು ಕೂಡ ಅಧ್ಯಕ್ಷರಾಗಲಿಲ್ಲ. ಸ್ತ್ರೀವಾದಿ ಬರಹಗಾರ್ತಿಯರೆಂದರೆ, ಸ್ತ್ರೀವಾದಿ ಸಾಹಿತ್ಯವೆಂದರೆ ಈಗಲೂ ಕಡೆಗಣ್ಣಲ್ಲಿ ನೋಡುವವರಿದ್ದಾರೆ. ಕನ್ನಡ ಸಾಹಿತ್ಯ ಜಗತ್ತಿನ ಸ್ಥಿತಿಗತಿ ಹೀಗಿರುವಾಗ ಬೇರೆ ಕ್ಷೇತ್ರದವರನ್ನು ಸಮ್ಮೇಳನಾಧ್ಯಕ್ಷತೆಗೆ ಪರಿಗಣಿಸುವುದು ಹಾಗೂ ಈ ನಿಟ್ಟಿನಲ್ಲಿ ಆಲೋಚಿಸುವುದು ಕೂಡ ಕನ್ನಡ ಸಾಹಿತ್ಯಕ್ಕೆ ಎಸಗುವ ದ್ರೋಹ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.
ಇದನ್ನೂ ಓದಿ: ಡಿಸೆಂಬರ್ 20, 21, 22 ರಂದು ಮಂಡ್ಯದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಸುಭಾಷ್ ರಾಜಮಾನೆ
ಬೆಂಗಳೂರಿನ ಯಲಹಂಕ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು. ಕನ್ನಡ, ಇಂಗ್ಲಿಷ್, ಮರಾಠಿ ಭಾಷೆಗಳನ್ನು ಬಲ್ಲ ಇವರು, ಸಿನಿಮಾ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ತೊಡಗಿಸಿಕೊಂಡಿದ್ದಾರೆ.


