ದಲಿತ ಸಮುದಾಯದ ವ್ಯಕ್ತಿಯೊಬ್ಬರು ಕುರ್ಚಿ ಮೇಲೆ ಕುಳಿತಿದ್ದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರಬಲ ಸಮುದಾಯದ ವ್ಯಕ್ತಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.
ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಚಿಟೈ ಪೂರ್ವ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದಲಿತ ವ್ಯಕ್ತಿ ಅಶೋಕ್ ಸಾಕೇತ್ ಎಂಬವರು ತನ್ನ ಮನೆ ಮುಂದೆ ಕುರ್ಚಿ ಹಾಕಿ ಕುಳಿತಿದ್ದಾಗ, ಅದೇ ದಾರಿಯಾಗಿ ಹೋಗುತ್ತಿದ್ದ ಪ್ರಬಲ ಸಮುದಾಯದ ವ್ಯಕ್ತಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು en.themooknayak.com ವರದಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ನವೆಂಬರ್ 10ರಂದು ಅಶೋಕ್ ಅವರು ಮನೆ ಮುಂದೆ ಕುರ್ಚಿ ಹಾಕಿ ಕುಳಿತಿದ್ದರು. ಈ ವೇಳೆ ಮನೆ ಮುಂದಿನ ರಸ್ತೆಯಲ್ಲಿ ಸಾಗುತ್ತಿದ್ದ ಪ್ರಬಲ ಸಮುದಾಯದ ಮಯಾಂಕ್ ದ್ವಿವೇದಿ ಎಂಬಾತ, ಅಶೋಕ್ ಕುಳಿತಿರುವುದನ್ನು ಕಂಡು ಕೋಪಗೊಂಡಿದ್ದಾರೆ. ಜಾತಿ ನಿಂದನೆ ಮಾಡಲು ಪ್ರಾರಂಭಿಸಿದ್ದಾರೆ ಎಂದು ವರದಿ ವಿವರಿಸಿದೆ.
“ನೀನು ಕೆಳ ಜಾತಿಯವ, ನೀನು ನಮ್ಮ ಮುಂದೆ ಕುರ್ಚಿಯಲ್ಲಿ ಕುಳಿತುಕೊಳ್ಳಲು ಯಾವುದೇ ಹಕ್ಕಿಲ್ಲ” ಎಂದು ಮಯಾಂಕ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಅಶೋಕ್, “ನಾನು ನನ್ನ ಮನೆ ಮುಂದೆ ಕುಳಿತಿದ್ದೇನೆ” ಎಂದು ಹೇಳಿದ್ದಾರೆ. ಈ ವೇಳೆ ಮತ್ತಷ್ಟು ಕೋಪಗೊಂಡ ಮಯಾಂಕ್, ಜಾತಿ ಉಲ್ಲೇಖಿಸಿ ಹೆಚ್ಚಿನ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಶೋಕ್ ಪೊಲೀಸ್ ದೂರು ದಾಖಲಿಸಿದ್ದು, ದೂರು ನೀಡಲು ಹೋದಾಗ ಪೊಲೀಸ್ ಅಧಿಕಾರಿಗಳೂ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ದಿ ಮೂಕ್‌ನಾಯಕ್ ಸುದ್ದಿ ಸಂಸ್ಥೆ ಜೊತೆ ಮಾತನಾಡಿರುವ ಅಶೋಕ್, “ನಾನು ದೂರು ನೀಡಲು ಲಾರ್ ಪೊಲೀಸ್ ಠಾಣೆಗೆ ಹೋದಾಗ, ಪೊಲೀಸರು ನನ್ನ ದೂರನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬದಲಾಗಿ, ಅವರು ನನಗೆ ಜಾತಿ ನಿಂದನೆ ಮಾಡಿದ್ದಾರೆ. ಅದು ನನಗೆ ಬಹಳ ನೋವುಂಟು ಮಾಡಿದೆ. ಅಂತಿಮವಾಗಿ ಎಫ್ಐಆರ್ ದಾಖಲಾಗಿದೆ. ಆದರೆ, ಪೊಲೀಸರ ವರ್ತನೆ ನಿರಾಶಾದಾಯಕವಾಗಿತ್ತು” ಎಂದು ಹೇಳಿದ್ದಾರೆ.
ಎಫ್‌ಐಆರ್ ದಾಖಲಿಸಿದ ನಂತರ ಅಪರಿಚಿತ ವ್ಯಕ್ತಿಗಳು ತಮ್ಮ ಮನೆ ಮೇಲೆ ದಾಳಿ ಮಾಡಿದ್ದಾರೆ ಎಂದು ಅಶೋಕ್ ಹೇಳಿಕೊಂಡಿದ್ದಾರೆ. ನವೆಂಬರ್ 10ರ ಸಂಜೆ, ಅವರು ಪೊಲೀಸ್ ಠಾಣೆಯಿಂದ ಹಿಂತಿರುಗಿದ ಸ್ವಲ್ಪ ಸಮಯದ ನಂತರ, ಕೆಲ ವ್ಯಕ್ತಿಗಳು ಅವರ ಮನೆಗೆ ನುಗ್ಗಿ, ಬಾಗಿಲನ್ನು ಹಾನಿಗೊಳಿಸಿದ್ದಾರೆ, ಬೆದರಿಕೆ ಹಾಕಿದ್ದಾರೆ. “ನೀನು ನಮ್ಮ ವಿರುದ್ದ ಪೊಲೀಸರಿಗೆ ದೂರು ನೀಡಿದ್ದಿಯಲ್ವಾ.. ಇನ್ನು ಪರಿಣಾಮಗಳನ್ನು ಎದುರಿಸು” ಎಂದು ಅವರು ಎಚ್ಚರಿಕೆ ನೀಡಿದ್ದಾರೆ ಎಂದು ಮೂಕನಾಯಕ್ ವರದಿ ವಿವರಿಸಿದೆ.
ದಾಳಿ ಮಾಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಅಶೋಕ್ ಕುಟುಂಬ ಪೊಲೀಸರಿಗೆ ಮನವಿ ಮಾಡಿದೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ (ಎಸ್‌ಸಿ) ವಿಭಾಗದ ಅಧ್ಯಕ್ಷ ಪ್ರದೀಪ್ ಅಹಿರ್ವಾರ್, ಕೃತ್ಯವನ್ನು ಖಂಡಿಸಿದ್ದಾರೆ. “ನಮ್ಮ ಸಮಾಜದಲ್ಲಿ ಜಾತಿ ಆಧಾರಿತ ತಾರತಮ್ಯ ಮತ್ತು ಹಿಂಸಾಚಾರದ ಘಟನೆಗಳು ಮಿತಿ ಮೀರಿವೆ. ಈ ದುರದೃಷ್ಟಕರ ಘಟನೆಯು ಆಳವಾಗಿ ಬೇರೂರಿರುವ ಜಾತಿವಾದವನ್ನು ಎತ್ತಿ ತೋರಿಸುತ್ತದೆ. ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.
ಇದನ್ನೂ ಓದಿ : ವಯನಾಡ್ ದುರಂತ ‘ರಾಷ್ಟ್ರೀಯ ವಿಪತ್ತು’ ಅಲ್ಲವೆಂದ ಕೇಂದ್ರ : ಬಂದ್ ಕರೆಕೊಟ್ಟ ಕೇರಳದ ಆಡಳಿತ-ಪ್ರತಿಪಕ್ಷ


