ಅಕ್ರಮ ಮರಳು ದಂಧೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಮಹಿಳಾ ಅಧಿಕಾರಿಗೆ ಭದ್ರಾವತಿ ಶಾಸಕರ ಪುತ್ರ ಎನ್ನಲಾದ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದ್ದು, ಪೊಲೀಸರು ಮೂವರನ್ನು ಮಂಗಳವಾರ (ಫೆ.11) ಬಂಧಿಸಿದ್ದಾರೆ.
ಮಹಿಳಾ ಅಧಿಕಾರಿಗೆ ಫೋನ್ ಮೂಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ ವಿಡಿಯೋವೊಂದು ಸೋಮವಾರ (ಫೆ.10) ವೈರಲ್ ಆಗಿತ್ತು. ಫೋನ್‌ನಲ್ಲಿ ಮಾತನಾಡಿರುವ ವ್ಯಕ್ತಿ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ ಸಂಗಮೇಶ್ ಅವರ ಪುತ್ರ ಬಸವೇಶ್ ಎನ್ನಲಾಗಿದೆ. ಈ ಸಂಬಂಧ ಮಹಿಳಾ ಅಧಿಕಾರಿ ಕೆ.ಕೆ ಜ್ಯೋತಿ ಅನಾಮಧೇಯ 6-7 ವ್ಯಕ್ತಿಗಳ ವಿರುದ್ಧ ಮಂಗಳವಾರ (ಫೆ.11) ಭದ್ರಾವತಿ ಡಿವೈಎಸ್‌ಪಿಗೆ ದೂರು ನೀಡಿದ್ದರು.
ದೂರು ದಾಖಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಮಹಿಳಾ ಅಧಿಕಾರಿ, ವೈರಲ್ ವಿಡಿಯೋದಲ್ಲಿರುವಂತೆ ಅಕ್ರಮ ಮರಳು ದಂಧೆ ತಡೆಯಲು ಹೋದಾಗ ನಡೆದಿರುವ ಘಟನೆ ಸಂಬಂಧ ದೂರು ನೀಡಿದ್ದೇನೆ ಎಂದಿದ್ದಾರೆ. ಅವರು ಶಾಸಕ ಸಂಗಮೇಶ್ ಅಥವಾ ಇತರ ಯಾರ ಹೆಸರೂ ಉಲ್ಲೇಖಿಸಿಲ್ಲ. ನಿಂದನೆ ಪ್ರಕರಣ ಹೊರತು, ಅಕ್ರಮ ಮರಳು ದಂಧೆ ಸೇರಿದಂತೆ ಇತರ ವಿಷಯಗಳ ಕುರಿತು ಮಾತನಾಡಲೂ ನಿರಾಕರಿಸಿದ್ದಾರೆ. ಪೊಲೀಸರಿಗೆ ನೀಡಿರುವ ದೂರಿನಲ್ಲೂ ಅವರು ಯಾರ ಹೆಸರೂ ಉಲ್ಲೇಖಿಸಿಲ್ಲ ಎಂದು ವರದಿಯಾಗಿದೆ.
ಮಹಿಳಾ ಅಧಿಕಾರಿ ಮೇಲೆ ‘ಗಾಡಿ ಹತ್ತಿಸ್ರೋ’ ಎಂದರಂತೆ
“ಅಕ್ರಮವಾಗಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ಹೋದಾಗ ನಮ್ಮ ಮೇಲೆ ಗಾಡಿ ಹತ್ತಿಸ್ರೋ ಅಂತ ಹೇಳುತ್ತಿದ್ರು. ಆಗ ಭಯ ಆಯ್ತು ಪೋನ್ ಕಾಲ್ ಸಹ ಬಂತು, ಯಾಕೋ ಸರಿಯಾಗಲ್ಲ ಅಂತ ವಾಪಾಸ್ಸು ಬಂದೆ. ಅಧಿಕಾರಿಗಳು ನನಗೆ ಸಪೋರ್ಟ್ ಮಾಡಿದರು” ಎಂದು ಅಧಿಕಾರಿ ಜ್ಯೋತಿ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ.
ಮೂವರ ಬಂಧನ
ಮಹಿಳಾ ಅಧಿಕಾರಿಯ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಭದ್ರಾವತಿ ಹಳೇ ನಗರ ಠಾಣೆ ಪೊಲೀಸರು ದಾವಣೆಗೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾವಿನಕಟ್ಟೆ ನಿವಾಸಿ ರವಿ (38) ಬಿನ್ ಮಲ್ಲೇಶಪ್ಪ, ಹಾಸನ ಜಿಲ್ಲೆ ಅರಕಲಗೂಡಿನ ನಿವಾಸಿ ವರುಣ್ (34) ಬಿನ್ ರಾಜಶೇಖರ್ ಮತ್ತು ಭದ್ರಾವತಿ ತಾಲೂಕಿನ ಸುರೇಂದ್ರ ಗೌಡ ಕ್ಯಾಂಪ್‌ನ ಅಜಯ್ ಬಿನ್ ತಿಪ್ಪೇಶ್ (28) ಎಂಬವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಎಫ್‌ಐಆರ್‌ನಲ್ಲಿ ಶಾಸಕರ ಮಗನ ಹೆಸರೇ ಇಲ್ಲ!
ಪ್ರಕರಣ ಸಂಬಂಧ ಪೊಲೀಸರು 6-7 ಜನರ ವಿರುದ್ದ ಎಫ್‌ಐಆರ್ ದಾಖಲಿಸಿ ಮೂವರನ್ನು ಬಂಧಿಸಿದ್ದಾರೆ. ಇನ್ನುಳಿದವರಿಗೆ ಹುಡುಕಾಟ ನಡೆಸುತ್ತಿದ್ದಾರೆ. ಆದರೆ, ಮಹಿಳಾ ಅಧಿಕಾರಿಗೆ ನಿಂದಿಸಿದ್ದಾರೆ ಎನ್ನಲಾದ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ಅವರ ಹೆಸರೇ ಎಫ್‌ಐಆರ್ ಪ್ರತಿಯಲ್ಲಿ ಇಲ್ಲ ಎಂದು ವರದಿಗಳು ಹೇಳಿವೆ.
‘ಯಾವ ಶಾಸಕನ ಮಗ ಆದ್ರೂ ನನಗೆ ಕೌಂಟ್ ಆಗಲ್ಲ’ : ಡಾ.ನಾಗಲಕ್ಷ್ಮೀ ಚೌಧರಿ
ಮಹಿಳಾ ಅಧಿಕಾರಿಗೆ ಶಾಸಕ ಸಂಗಮೇಶ್ ಅವರ ಪುತ್ರ ಬಸವೇಶ್ ನಿಂದಿಸಿದ್ದಾರೆ ಎಂಬ ಆರೋಪದ ಕುರಿತು ಮಂಗಳವಾರ ಬೀದರ್‌ನಲ್ಲಿ ಪ್ರತಿಕ್ರಿಯೆ ನೀಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು “ಮಹಿಳಾ ಆಯೋಗದಿಂದ ಸಮನ್ಸ್ ನೋಟಿಸ್ ಕಳುಹಿಸಲಾಗಿದೆ. ಯಾವುದೇ ಶಾಸಕನ ಮಗ ಆದ್ರೂ ನನಗೆ ಕೌಂಟ್ ಆಗಲ್ಲ. ಕೆಟ್ಟ ಪದಗಳಿಂದ ನಿಂದನೆಯಾಗಿರುವುದು ನಮಗೆ ಮುಖ್ಯವಾಗುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಕ್ರಮ ಮರಳು ದಂಧೆ ತಡೆಯಲು ಹೋದ ಮಹಿಳಾ ಅಧಿಕಾರಿಗೆ ಭದ್ರಾವತಿ ಶಾಸಕರ ಪುತ್ರನಿಂದ ನಿಂದನೆ ಆರೋಪ : ವಿಡಿಯೋ ವೈರಲ್


