ಪ್ರಧಾನಿ ನರೇಂದ್ರ ಮೋದಿಯವರ ಶೈಕ್ಷಣಿಕ ಅರ್ಹತೆ ಕುರಿತು ಮಾಹಿತಿ ಪಡೆಯಲು ಅರ್ಜಿ ಸಲ್ಲಿಸುವುದರ ಹಿಂದೆ ಏನಾದರು ‘ಸಾರ್ವಜನಿಕ ಹಿತಾಸಕ್ತಿ’ ಇದೆಯಾ? ಎಂದು ಮಾಹಿತಿ ಹಕ್ಕು (ಆರ್‌ಟಿಐ) ಕಾರ್ಯಕರ್ತರೊಬ್ಬರನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ಪ್ರಧಾನಿ ಮೋದಿಯವರು 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್ ಆಫ್ ಆರ್ಟ್ಸ್ (ಬಿಎ) ಪದವಿ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಆರ್‌ಟಿಐ ಕಾರ್ಯಕರ್ತ ದಾಖಲೆ ಕೇಳಿದ್ದಕ್ಕೆ ಹೈಕೋರ್ಟ್ ಮೇಲಿನಂತೆ ಪ್ರಶ್ನಿಸಿದೆ ಎಂದು ವರದಿ ಹೇಳಿದೆ.
ಪ್ರಧಾನಿ ಮೋದಿಯವರ ಶೈಕ್ಷಣಿಕ ಅರ್ಹತೆ ಕುರಿತು ಆರ್‌ಟಿಐ ಮೂಲಕ ಮಾಹಿತಿ ಒದಗಿಸುವಂತೆ ದೆಹಲಿ ವಿಶ್ವವಿದ್ಯಾನಿಲಯಕ್ಕೆ ಕೇಂದ್ರ ಮಾಹಿತಿ ಆಯೋಗ ಸೂಚಿಸಿದೆ. ಇದನ್ನು ಪ್ರಶ್ನಿಸಿ 2017ರಲ್ಲಿ ದೆಹಲಿ ವಿಶ್ವವಿದ್ಯಾನಿಲಯ ಹೈಕೋರ್ಟ್ ಮೆಟ್ಟಿಲೇರಿದೆ.
ಪ್ರಧಾನಿ ಮೋದಿ 1978 ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಬಿಎ ಮತ್ತು 1983ರಲ್ಲಿ ಗುಜರಾತ್ ವಿಶ್ವವಿದ್ಯಾನಿಲಯದಿಂದ ಮಾಸ್ಟರ್ ಆಫ್ ಆರ್ಟ್ (ಎಂ.ಎ) ಪದವಿ ಪಡೆದಿದ್ದಾರೆ ಎಂದು ಭಾರತೀಯ ಜನತಾ ಪಕ್ಷ (ಬಿಜೆಪಿ) ಹೇಳಿಕೊಂಡಿದೆ.
ಆದರೆ, ಆಮ್ ಆದ್ಮಿ ಪಕ್ಷ (ಎಎಪಿ) ಸೇರಿದಂತೆ ಕೆಲವರು ಮೋದಿ ಪದವಿ ಪಡೆದಿದ್ದಾರೆ ಎನ್ನುವುದು ಕಟ್ಟು ಕಥೆ ಎಂದಿದ್ದಾರೆ.
ಮಂಗಳವಾರ (ಫೆ.11) ದೆಹಲಿ ವಿಶ್ವವಿದ್ಯಾನಿಲಯದ ಪರವಾಗಿ ಹೈಕೋರ್ಟ್‌ಗೆ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಸಾರ್ವಜನಿಕ ಕುತೂಹಲ (Interest to the Public) ಮತ್ತು ‘ಸಾರ್ವಜನಿಕ ಹಿತಾಸಕ್ತಿ’ ( Public Interest)ಎನ್ನುವುದು ಎರಡೂ ಒಂದೇ ಅಲ್ಲ. ಹಾಗಾಗಿ, ಮಾಹಿತಿ ಹಕ್ಕು ಕಾಯ್ದೆಯಡಿ ಕೇವಲ ಕುತೂಹಲಕ್ಕಾಗಿ ಮೋದಿಯವರ ಪದವಿ ವಿವರ ಕೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಮುಂದುವರಿದು, “ವಿಶ್ವ ವಿದ್ಯಾನಿಲಯದಲ್ಲಿರುವ ಎಲ್ಲಾ ವಿದ್ಯಾರ್ಥಿಗಳ ಪದವಿ ಮತ್ತು ಅಂಕ ಪಟ್ಟಿಗಳ ವಿವರಗಳು ಬಹಳ ‘ವಿಶ್ವಾಸಾರ್ಹ ರೀತಿಯಲ್ಲಿ’ ಇದೆ. ಅವೆಲ್ಲವೂ ವಿದ್ಯಾರ್ಥಿಗಳ ‘ವೈಯಕ್ತಿಕ ಗೌಪ್ಯ’ ಮಾಹಿತಿಗಳು ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಸಂಜಯ್ ಹೆಗ್ಡೆ, ಶೈಕ್ಷಣಿಕ ವಿವರಗಳು ಸಾರ್ವಜನಿಕ ಮಾಹಿತಿಯಾಗಿದ್ದು, ಅವುಗಳನ್ನು ನೋಟಿಸ್ ಬೋರ್ಡ್‌ಗಳು ಮತ್ತು ಪತ್ರಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದಿದ್ದಾರೆ.
ಮುಂದುವರಿದು, ಸಾರ್ವಜನಿಕ ಹಿತಾಸಕ್ತಿ ಯಾವಾಗಲು ಬಹಿರಂಗಪಡಿಸುವಿಕೆಯ ಕಡೆ ಇರುತ್ತದೆಯೇ ಹೊರತು, ಮುಚ್ಚಿಡುವುದರ ಕಡೆ ಅಲ್ಲ. ಚುನಾಯಿತ ಜನ ಪ್ರತಿನಿಧಿಗಳ ಆಸ್ತಿ, ಕುಟುಂಬದ ಹಿನ್ನೆಲೆ ಇತ್ಯಾದಿ ಮಾಹಿತಿಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲಾಗುತ್ತದೆ. ಅದೇ ರೀತಿ ಒಬ್ಬ ಜನ ಪ್ರತಿನಿಧಿಯ ಶೈಕ್ಷಣಿಕ ಅರ್ಹತೆ ವಿಚಾರ ಬಂದಾಗ ಸಾರ್ವಜನಿಕ ಪ್ರಾಧಿಕಾರಗಳು ಏನು ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ವಾದ-ಪ್ರತಿವಾದ ಅಲಿಸಿದ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆಬ್ರವರಿ 19ಕ್ಕೆ ನಿಗದಿ ಮಾಡಿದೆ.
ಪ್ರಕರಣದ ಹಿನ್ನೆಲೆ :
ಮಾಹಿತಿ ಹಕ್ಕು ಕಾರ್ಯಕರ್ತ ನೀರಜ್ ಕುಮಾರ್ ಎಂಬವರು, 1978ರಲ್ಲಿ ದೆಹಲಿ ವಿಶ್ವವಿದ್ಯಾನಿಲಯದಿಂದ ಪ್ರಧಾನಿ ಮೋದಿ ಬಿಎ ಪದವಿ ಪಡೆದಿದ್ದಾರೆ ಎನ್ನಲಾದ ಸಂದರ್ಭದ ಎಲ್ಲಾ ವಿದ್ಯಾರ್ಥಿಗಳ ರೋಲ್ ನಂಬರ್‌ಗಳು, ಅಂಕಗಳು ಮತ್ತು ಅವರು ಪದವಿ ಕೋರ್ಸ್‌ನಲ್ಲಿ ಉತ್ತೀರ್ಣರಾಗಿದ್ದಾರೆಯೇ ಅಥವಾ ಅನುತ್ತೀರ್ಣರಾಗಿದ್ದಾರೆಯೇ? ಎಂಬ ವಿವರಗಳನ್ನು ಕೇಳಿದ್ದಾರೆ.
ದೆಹಲಿ ವಿಶ್ವವಿದ್ಯಾನಿಲಯ ಆರ್‌ಟಿಐ ಕಾರ್ಯಕರ್ತ ನೀರಜ್ ಕುಮಾರ್ ಮೂರನೇ ವ್ಯಕ್ತಿ (ವಿಷಯಕ್ಕೆ ಸಂಬಂಧಿಸದ) ಎಂಬ ಕಾರಣ ನೀಡಿ, ಮೋದಿಯವರ ಪದವಿ ಕುರಿತು ಮಾಹಿತಿ ನೀಡಲು ನಿರಾಕರಿಸಿತ್ತು. ಇದರ ವಿರುದ್ದ ನೀರಜ್ ಕುಮಾರ್ ಕೇಂದ್ರ ಮಾಹಿತಿ ಆಯೋಗಕ್ಕೆ ದೂರು ನೀಡಿದ್ದರು.
2016ರಲ್ಲಿ ಕೇಂದ್ರ ಮಾಹಿತಿ ಆಯೋಗವು ಆರ್‌ಟಿಐ ಕಾರ್ಯಕರ್ತನಿಗೆ ಮಾಹಿತಿ ಒದಗಿಸುವಂತೆ ದೆಹಲಿ ವಿವಿಗೆ ಸೂಚಿಸಿತ್ತು. ದೆಹಲಿ ವಿಶ್ವವಿದ್ಯಾನಿಲಯವು ಸಾರ್ವಜನಿಕ ಸಂಸ್ಥೆಯಾಗಿದ್ದು, ಅದರ ಪದವಿಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯು ಸಂಸ್ಥೆಯ ರಿಜಿಸ್ಟರ್‌ನಲ್ಲಿ ಲಭ್ಯವಿದೆ. ಅದು ಸಾರ್ವಜನಿಕ ದಾಖಲೆಯಾಗಿದೆ ಎಂದು ಹೇಳಿತ್ತು.
ಆದರೆ, ದೆಹಲಿ ವಿವಿ ಮಾಹಿತಿ ನೀಡಲು ನಿರಾಕರಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಆರ್‌ಟಿಐ ಮೂಲಕ ಎಲ್ಲಾ ವಿದ್ಯಾರ್ಥಿಗಳ ರೋಲ್ ನಂಬರ್‌ಗಳು, ಹೆಸರುಗಳು ಮತ್ತು ಅಂಕಗಳನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ಇದೆ ಎಂದು ಹೇಳಿಕೊಂಡಿದೆ.


