ಚುನಾವಣಾ ತಕರಾರು ಅರ್ಜಿಗೆ ಸಂಬಂಧಿಸಿ ಪರಾಜಿತ ಅಭ್ಯರ್ಥಿ ಹಾಗೂ ಅರ್ಜಿದಾರರಾದ ಸೌಮ್ಯ ರೆಡ್ಡಿ ಅವರಿಗೆ ಡಿವಿಡಿ ಮತ್ತು ಇತರ ಕೆಲವು ದಾಖಲೆಗಳನ್ನು ರೆಕಾರ್ಡ್‌ನಲ್ಲಿ ಇರಿಸಲು ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ (ಮಾ.3) ವಜಾಗೊಳಿಸಿದೆ.
ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಸಿ.ಕೆ ರಾಮಮೂರ್ತಿ ಅವರಿಗೆ ಲಿಖಿತ ಹೇಳಿಕೆ ಸಲ್ಲಿಸಲು ಮೂರು ವಾರಗಳ ಕಾಲಾವಕಾಶ ನೀಡಿದೆ ಎಂದು ವರದಿಯಾಗಿದೆ.
ಶಾಸಕ ಸಿ.ಕೆ ರಾಮಮೂರ್ತಿ ವಿರುದ್ಧ ಸೌಮ್ಯಾರೆಡ್ಡಿ ಅವರು ಕರ್ನಾಟಕ ಹೈಕೋರ್ಟ್‌ಗೆ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದರು. ತಮ್ಮ ಅರ್ಜಿಯಲ್ಲಿ ರಾಮಮೂರ್ತಿ ಅವರ ಆಯ್ಕೆಯನ್ನು ಅಸಿಂಧು ಎಂಬುದಾಗಿ ಘೋಷಿಸಬೇಕು ಎಂದು ಕೋರಿದ್ದರು.
ಸೌಮ್ಯರೆಡ್ಡಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಡಿವಿಡಿ ಸೇರಿದಂತೆ 10 ಪ್ರಮುಖ ದಾಖಲೆಗಳನ್ನು ಹಾಜರುಪಡಿಸಲು ಫೆ.14ರಂದು ಅನುಮತಿ ನೀಡಿತ್ತು.
ಹೈಕೋರ್ಟ್ ಆದೇಶ ಪ್ರಶ್ನಿಸಿ ಸಿ.ಕೆ ರಾಮಮೂರ್ತಿ ಅವರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ : 2023ರಲ್ಲಿ ನಡೆದಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ, ಜಯನಗರ ಕ್ಷೇತ್ರದಿಂದ ಸಿ.ಕೆ ರಾಮಮೂರ್ತಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತು ಸೌಮ್ಯರೆಡ್ಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯರೆಡ್ಡಿ ಕೇವಲ 16 ಮತಗಳಿಂದ ಪರಾಭವಗೊಂಡಿದ್ದರು.
ಈ ಸಂಬಂಧ ಸಿ.ಕೆ ರಾಮಮೂರ್ತಿ ಅವರ ಆಯ್ಕೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ಸೌಮ್ಯರೆಡ್ಡಿ, ಮತಎಣಿಕೆ ಪ್ರಕ್ರಿಯೆಯಲ್ಲಿ ಏನೋ ವ್ಯತ್ಯಾಸವಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದರು.
“ವಿದ್ಯುನ್ಮಾನ ಮತ ಯಂತ್ರಗಳ ಮತ ಎಣಿಕೆಯಲ್ಲಿ ನಾನು ಮುನ್ನಡೆ ಸಾಧಿಸಿದ್ದೆ. ಆದರೆ ಅಂಚೆ ಮತಗಳ ಎಣಿಕೆಯಲ್ಲಿ ವ್ಯತ್ಯಾಸವಾಗಿದೆ. ಒಟ್ಟು 827 ಅಂಚೆ ಮತಗಳಲ್ಲಿ ವ್ಯತ್ಯಾಸವಾಗಿದ್ದು, ಪ್ರತಿ ಬಾರಿ ಮರು ಎಣಿಕೆ ಮಾಡಿದಾಗಲೂ ಪ್ರತ್ಯೇಕ ಅಂಕಿ-ಅಂಶ ಬಂದಿದೆ. ಮತ ಎಣಿಕೆ ಆರಂಭವಾದ ನಂತರವೂ ಅಂಚೆ ಮೂಲಕ ಬಂದಿದ್ದ ಮತ ಪತ್ರಗಳನ್ನು ಎಣಿಕೆಗೆ ಪರಿಗಣಿಸಲಾಗಿದೆ” ಎಂದು ಸೌಮ್ಯಾರೆಡ್ಡಿ ಆರೋಪಿಸಿದ್ದರು.


