ಶುಲ್ಕ ಹೆಚ್ಚಳದ ವಿರುದ್ಧ ಕಳೆದ 10 ದಿನಗಳಿಂದ ಭಾರೀ ಹೋರಾಟದ ಕಾರಣಕ್ಕೆ ದೇಶದ ಗಮನ ಸೆಳೆದಿರುವ ಜೆಎನ್‌ಯುನಲ್ಲಿ ಪರಿಹಾರ ಭರವಸೆ ದೊರಕಿದೆ. ಶುಲ್ಕ ಹೆಚ್ಚಳದ ಆದೇಶ ಮರುಪರಿಶೀಲನೆಗೆ ಒಪ್ಪಿದ ಕೇಂದ್ರ ಕೇಂದ್ರ ಸರ್ಕಾರವು ಅದಕ್ಕೊಂದು ಸಮಿತಿಯನ್ನು ರಚಿಸಿದೆ. ಸಮಿತಿಯು ಈಗಾಗಲೇ ವಿವಿಯ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಹಕ್ಕೊತ್ತಾಯಗಳ ಕುರಿತು ಚರ್ಚೆ ನಡೆಸಿದೆ.
ಇದು ವಿದ್ಯಾರ್ಥಿಗಳ ನಿರಂತರ ಹೋರಾಟಕ್ಕೆ ಸಿಕ್ಕ ಮೊದಲ ಗೆಲುವಾಗಿದೆ. ಮುಂದಿನ ಒಂದು ವಾರದಲ್ಲಿ ಜೆಎನ್‌ಯು ಶುಲ್ಕ ಹೆಚ್ಚಳದಲ್ಲಿ ವಿಚಾರದಲ್ಲಿ ಸಮಿತಿಯು ತನ್ನ ವರದಿಯನ್ನು ಸಲ್ಲಿಸಲಿದೆ.
ಯುಜಿಸಿ ಮಾಜಿ ಅಧ್ಯಕ್ಷ ವಿ.ಎಸ್.ಚೌಹಾನ್, ಎಐಸಿಟಿಇ ಅಧ್ಯಕ್ಷ ಅನಿಲ್ ಸಹಸ್ರಬುದ್ಧೆ ಮತ್ತು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ಸೇರಿದಂತೆ ಮೂವರು ಸದಸ್ಯರ ಸಮಿತಿಯು ಶುಕ್ರವಾರ ಜೆಎನ್‌ಯು ಕ್ಯಾಂಪಸ್‌ಗೆ ಭೇಟಿ ನೀಡಿ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳನ್ನು ಭೇಟಿ ಮಾಡಿದೆ.
ಇದನ್ನೂ ಓದಿ: JNU ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ರಾಜ್ಯದ್ಯಂತ ವಿದ್ಯಾರ್ಥಿಗಳಿಂದ ಪ್ರತಿಭಟನೆ..
ವಿದ್ಯಾರ್ಥಿಗಳು ತಮ್ಮ ಹೋರಾಟವನ್ನು ತೀವ್ರಗೊಳಿಸಿದ್ದರಿಂದ ಸಂಧಾನಕ್ಕಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಮೂರು ಸದಸ್ಯರ ಸಮಿತಿಯನ್ನು ನೇಮಿಸಿದೆ.
“ನಾವು ವಿದ್ಯಾರ್ಥಿ ಸಂಘದ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದೇವೆ ಮತ್ತು ಅವರ ಸಲಹೆಗಳನ್ನು ಗಣನೆಗೆ ತೆಗೆದುಕೊಂಡಿದ್ದೇವೆ. ಸಭೆ ಎರಡು ಗಂಟೆಗಳ ಕಾಲ ನಡೆಯಿತು, ಅಲ್ಲಿ ವಿವಿ ಆಡಳಿತ ಮತ್ತು ವಿದ್ಯಾರ್ಥಿಗಳ ನಡುವಿನ ಭಿನ್ನಾಭಿಪ್ರಾಯದ ಹಿಂದಿನ ಕಾರಣಗಳನ್ನು ನಾವು ತಿಳಿದುಕೊಂಡಿದ್ದೇವೆ” ಎಂದು ಸಮಿತಿಯ ಸದಸ್ಯರೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
“ಇದು ಅಂತಿಮ ಸಭೆಯಾಗಿದ್ದು ನಾವು ಎಲ್ಲಾ ದೃಷ್ಟಿಕೋನಗಳಿಂದಲೂ ಆಲಿಸಿದ್ದೇವೆ. ನಾವು ಈಗ ನಮ್ಮ ಶಿಫಾರಸುಗಳನ್ನು ಒಂದು ವಾರದೊಳಗೆ ಸಲ್ಲಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
“ನಮ್ಮ ಚರ್ಚೆಯು ಸಕಾರಾತ್ಮಕವಾಗಿದೆ ಆದರೆ ಅಂತಿಮ ನಿರ್ಧಾರವನ್ನು ಜೆಎನ್‌ಯು ಆಡಳಿತವು ತೆಗೆದುಕೊಳ್ಳುತ್ತದೆ. ನಾವು ಶೀಘ್ರದಲ್ಲೇ ಶಿಫಾರಸುಗಳನ್ನು ಸಲ್ಲಿಸುತ್ತೇವೆ” ಎಂದು ವಿ.ಎಸ್. ಚೌಹಾನ್ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಾಗಾಗಿ ವಿದ್ಯಾರ್ಥಿಗಳು ಸಂಪೂರ್ಣ ಶುಲ್ಕ ಹೆಚ್ಚಳದ ಆದೇಶ ವಾಪಸಾತಿ ಆಗುವವರೆಗೂ ತಮ್ಮ ಹೋರಾಟವನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಅವರ ಹೋರಾಟಕ್ಕೆ JNU ಹಿರಿಯ ವಿದ್ಯಾರ್ಥಿಗಳು ಸಹ ಸಾಥ್ ನೀಡಿದ್ದು ಇಂದು ದೆಹಲಿಯ ಮಂಡಿಹೌಸ್‌ನಲ್ಲಿ ಭಾರೀ ಪ್ರತಿಭಟನೆ ನಡೆಸುತ್ತಿದ್ದಾರೆ.
In support of struggling #JNU students, people in large numbers gathering at #MandiHouse.#JNUProtests pic.twitter.com/VydyAELRDv
— Mahesh Kumar (@maheshu483) November 23, 2019
ಜೊತೆಗೆ ಏಮ್ಸ್ (All india Institute of medical science) ವಿದ್ಯಾರ್ಥಿ ಸಂಘವು ಕೂಡ ಪತ್ರಿಕಾ ಹೇಳಿಕೆ ನೀಡಿದ್ದು JNU ವಿದ್ಯಾರ್ಥಿಗಳ ಹೋರಾಟಕ್ಕೆ ಪೂರ್ಣ ಬೆಂಬಲ ನೀಡಿದೆ.



