Homeಚಳವಳಿ'ಜನವಾಹಿನಿ' 'ಉದಯ'ದಲ್ಲಿ 'ಮುಂಗಾರು' ನೆನಪು! : ಹಿರಿಯ ಪತ್ರಕರ್ತ ನಿಖಿಲ್ ಕೋಲ್ಪೆಯವರ ಅನುಭವ ಬರಹ

‘ಜನವಾಹಿನಿ’ ‘ಉದಯ’ದಲ್ಲಿ ‘ಮುಂಗಾರು’ ನೆನಪು! : ಹಿರಿಯ ಪತ್ರಕರ್ತ ನಿಖಿಲ್ ಕೋಲ್ಪೆಯವರ ಅನುಭವ ಬರಹ

‘ಮುಂಗಾರು’ ದಿನಪತ್ರಿಕೆ ಕಟ್ಟಿದವರು ತಿಂಗಳಿಗೆ ಆರುನೂರರಿಂದ ಒಂದೂವರೆ ಸಾವಿರ ರೂಪಾಯಿ ಸಂಬಳವನ್ನು ನಾಲಕ್ಕು ಕಂತುಗಳಲ್ಲಿ ಪಡೆದು, ಅರೆಹೊಟ್ಟೆಯಲ್ಲಿ ಪ್ರೀತಿಯಿಂದ ದುಡಿದವರು.

- Advertisement -
- Advertisement -

ಜನವಾಹಿನಿಯ ನೆನಪುಗಳು-10
ನಿಖಿಲ್ ಕೋಲ್ಪೆ

ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

‘ಜನವಾಹಿನಿ’ ಆರಂಭಗೊಂಡಾಗ ದಿನಪತ್ರಿಕೆಯಲ್ಲಿ ಕೆಲಸಮಾಡಿ ಹೆಚ್ಚಿನ ಅನುಭವ ಇದ್ದವರೆಂದರೆ ಬಿ.ಬಿ. ಶೆಟ್ಟಿಗಾರ್ ಮತ್ತು ನಾನು. ನಾವಿಬ್ಬರು ‘ಮುಂಗಾರು’ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೆವು. ಜಿನ್ನಪ್ಪ ಮತ್ತು ಕೆಲವರು ನಂತರ ‘ಮುಂಗಾರು’ ಸೇರಿದವರು. ಶೆಟ್ಟಿಗಾರ್ ಅವರು ನನಗಿಂತ ಮುಂಚೆಯೇ ಅಲ್ಲಿ ಕ್ರೀಡಾ ವಿಭಾಗದಲ್ಲಿ ಕೆಲಸ ಮಾಡಿದ್ದವರು. ಇಲ್ಲಿಯೂ ಅವರಿಗೆ ಕ್ರೀಡಾ ವಿಭಾಗವನ್ನೇ ನೀಡಲಾಗಿತ್ತು. ಅಲ್ಲಿ ನಾನಿದ್ದುದು ಜನರಲ್ ಡೆಸ್ಕಿನಲ್ಲಿ ಮತ್ತು ಇಲ್ಲಿಯೂ ಅದೇ ಹೊಣೆ ಹೊತ್ತಿದ್ದೆ. ಓದುಗರಿಗೆ ಗೊತ್ತಿರಬಹುದು – ಜನರಲ್ ಡೆಸ್ಕಿಗೆ ಮುಖಪುಟ, ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಸುದ್ದಿಗಳ ಹೊಣೆಗಾರಿಕೆ ಇರುತ್ತದೆ. ಆದುದರಿಂದ ಅಲ್ಲಿ ಕಲಿತದ್ದು ಇಲ್ಲಿ ತುಂಬಾ ಉಪಯೋಗಕ್ಕೆ ಬಂತು. ಮುದ್ರಣ ವಿಭಾಗದಲ್ಲೂ ಅಲ್ಲಿ ಕೆಲಸ ಮಾಡಿದವರಿದ್ದರು.

‘ಮುಂಗಾರು’ ಮತ್ತು ‘ಜನವಾಹಿನಿ’ಗೆ ಹಲವು ಸಾಮ್ಯಗಳು ಇದ್ದಂತೆ, ತಾಂತ್ರಿಕ ವಿಭಾಗದಲ್ಲಿ ಬಹಳಷ್ಟು ವ್ಯತ್ಯಾಸಗಳಿದ್ದವು. ಈ ಹಿನ್ನೆಲೆಯಲ್ಲಿ ‘ಜನವಾಹಿನಿ’ಯ ಆರಂಭಿಕ ದಿನಗಳ ಕುರಿತು ಬರೆಯುವ ಮೊದಲು ‘ಮುಂಗಾರು’ ನೆನಪು ಮಾಡಿಕೊಳ್ಳುವುದು ಅಪ್ರಸ್ತುತ ಆಗಲಾರದು ಎಂದು ಅನಿಸುತ್ತಿದೆ.

ಇದನ್ನೂ ಓದಿ: ಕನ್ನಡ ಪತ್ರಿಕೋದ್ಯಮದ ನಿಂತ ನೀರಿಗೆ ಬಂಡೆ ಎಸೆದ ‘ಜನವಾಹಿನಿ’!

ಎರಡೂ ಪತ್ರಿಕೆಗಳು ಸ್ಥಾಪಿತ ಮೇಲ್ವರ್ಗದ ಹಿತಾಸಕ್ತಿಯುಳ್ಳ ಪತ್ರಿಕೆಗಳಿಗೆ ಎದುರಾಗಿ ಜನಪರ ಉದ್ದೇಶ ಮತ್ತು ಕಾಳಜಿ ಹೊಂದಿದ್ದವು. ಎರಡೂ ಪತ್ರಿಕೆಗಳು ಜನಸಾಮಾನ್ಯರಿಂದ ಹಣ ಸಂಗ್ರಹಿಸಿದ್ದವು. ಎರಡೂ ಜನಸಾಮಾನ್ಯರ, ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಗಳ ಸುದ್ದಿಗಳಿಗೆ, ಸಮಸ್ಯೆಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿದ್ದವು. ಸಿರಿವಂತರ ಶೋಕಿಯ ಸುದ್ದಿಗಳಿಗೆ, ಧಾರ್ಮಿಕ ಸುದ್ದಿಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಿರಲಿಲ್ಲ. ಅದಕ್ಕಾಗಿಯೇ ಅವು ಅತ್ಯಂತ ವೇಗದಲ್ಲಿ ಜನಪ್ರಿಯತೆ ಪಡೆದವು. ಅದಕ್ಕಾಗಿಯೇ ಎರಡೂ ಪತ್ರಿಕೆಗಳು ಸ್ಥಾಪಿತ ದೊಡ್ಡ ಪತ್ರಿಕೆಗಳು ಮತ್ತು ‘ಹಣಪರ’ ಚಿಕ್ಕ ಪತ್ರಿಕೆಗಳ ಕಿರುಕುಳ ಮತ್ತು ಸಂಚಿಗೆ ಗುರಿಯಾಗಿದ್ದವು. ಕೊನೆಗೂ ಬಂಡವಾಳಿಗರ ದುರಾಸೆ, ದುರುದ್ದೇಶ ಮತ್ತು ಕೆಟ್ಟ ಅಡಳಿತದ ತಪ್ಪುಗಳಿಂದಾಗಿ ಪ್ರಾಣವನ್ನೇ ಕಳೆದುಕೊಂಡದ್ದು ದುರಂತ.

ಕಂಪ್ಯೂಟರೀಕೃತ ಎಡಿಟಿಂಗ್, ಇಲೆಕ್ಟ್ರಾನಿಕ್ ಟೆಲಿಪ್ರಿಂಟರ್, ಕಲರ್ ಸೆಪರೇಷನ್ ಮಾಡುವ ಇಮೇಜ್ ಸೆಟ್ಟರ್, ಬಣ್ಣದ ಆಫ್‍ಸೆಟ್ ಮುದ್ರಣ ಯಂತ್ರ, ಇಂಟರ್‌ನೆಟ್, ಫೊಟೋ ಏಜೆನ್ಸಿಗಳ ಚಂದಾ ಇತ್ಯಾದಿ ಎಲ್ಲಾ ಸೌಲಭ್ಯಗಳು ‘ಜನವಾಹಿನಿ’ಯಲ್ಲಿ ಇದ್ದರೂ, ‘ಮುಂಗಾರು’ವಿನಲ್ಲಿ ಇವ್ಯಾವುವೂ ಇರಲಿಲ್ಲ! ‘ಜನವಾಹಿನಿ’ಯೇ ಕನ್ನಡದ ಮೊತ್ತ ಮೊದಲ ಬಣ್ಣದ ದಿನಪತ್ರಿಕೆಯಾಗಿದ್ದು, ದೊಡ್ಡ ಪತ್ರಿಕೆಗಳೂ ನಂತರ ಬಣ್ಣವನ್ನು ಅಳವಡಿಸಿಕೊಂಡವು ಎಂಬುದನ್ನು ಗಮನಿಸಬೇಕು.

‘ಮುಂಗಾರು’ವಿಗೆ ಬರುವ ಮೊದಲು ನಾನು ಮುಂಬೈಯಲ್ಲಿ ಕೆಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದೆ. ಅಲ್ಲಿದ್ದುದು ಮೊಳೆ ಜೋಡಿಸುವ ಪದ್ಧತಿ. ಮೊಳೆ ಜೋಡಿಸುವವರು ಬಹಳ ಕಲಿತವರು ಆಗಿರದ ಕಾರಣ, ಅವರು ಮಾಡಬಹುದಾದ ತಪ್ಪುಗಳನ್ನು ತಿದ್ದಲು ಕರಡು ತಿದ್ದುವವರು ಅಂದರೆ, ಪ್ರೂಫ್ ರೀಡರ್ಸ್ ಇದ್ದರು. ಈಗ ಆ ಹುದ್ದೆಯೂ ಇಲ್ಲ. ಈಗಿನ ಕೆಲವು ಪತ್ರಕರ್ತರಿಗೆ ಆಗಿನ ಪ್ರೂಫ್ ರೀಡರ್‌ಗಳಷ್ಟೂ ಭಾಷಾ ಜ್ಞಾನವಿಲ್ಲ ಎಂಬುದು ಇನ್ನೊಂದು ದುರಂತ!

ಮುಂಗಾರು ಸಂಪಾದಕೀಯ

ನನ್ನ ದೊಡ್ಡಪ್ಪ ಎಸ್.ಬಿ. ಕೋಲ್ಪೆಯವರ ‘ಕ್ಲ್ಯಾರಿಟಿ’ (Clarity) ಎಂಬ ಇಂಗ್ಲಿಷ್ ವಾರಪತ್ರಿಕೆ ಸೇರಿದ ಬಳಿಕ ನನಗೆ ಮುದ್ರಣ ಮತ್ತಿತರ ಆಧುನಿಕ ತಂತ್ರಜ್ಞಾನದ ಪರಿಚಯವಾದದ್ದು. ‘ಮುಂಗಾರು’ ಬಹಳಷ್ಟು ಆಗಿನ ತಂತ್ರಜ್ಞಾನಗಳನ್ನೇ ಅಳವಡಿಸಿರಲಿಲ್ಲ. ಕಾರ್ಮಿಕರ ಉದ್ಯೋಗಕ್ಕೆ ಕುತ್ತಾಗುವುದು ಎಂಬ ಸಂಸ್ಥಾಪಕ ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿಯವರ ನಿಲುವೇ ಇದಕ್ಕೆ ಕಾರಣ. ನಾನು ಈ ಪತ್ರಿಕೆ ಸೇರಲು ಎಸ್. ಬಿ. ಕೋಲ್ಪೆ ಅವರ ಪ್ರೇರಣೆ ಕಾರಣ. ಅದಕ್ಕೆ ಕಾರಣವೆಂದರೆ, ಮುಂಬಯಿಯಲ್ಲಿ ‘ಫ್ರೀ ಪ್ರೆಸ್ ಜರ್ನಲ್’ನಲ್ಲಿ ಮುಖ್ಯ ವರದಿಗಾರರಾಗಿದ್ದ ಎಸ್. ಬಿ. ಕೋಲ್ಪೆಯವರ ಮಾರ್ಗದರ್ಶನದಲ್ಲಿ ಬೆಳೆದವರು ವಡ್ಡರ್ಸೆಯವರು, ನಂತರ ಸಂಪಾದಕರಾದ ವೈ. ಎಂ. ಹೆಗ್ಡೆಯವರು, ಸಹಾಯಕ ಸಂಪಾದಕರಾದ ಆರ್. ಕೆ. ಸಾಲ್ಯಾನ್ ಅವರು. ಹಾಗೆಂದು ನಾನು ‘ಮುಂಗಾರು’ ಸೇರುವುದು ಸುಲಭಸಾಧ್ಯವಾಗಿರಲಿಲ್ಲ! ಶಿಫಾರಸು ಅಲ್ಲಿ ನಡೆಯುತ್ತಿರಲಿಲ್ಲ! ಬರೇ ಪ್ರತಿಭೆ ಮಾತ್ರ. ಈ ಕುರಿತು ಮುಂದೆ ಬರೆಯುವೆ.

ಇದನ್ನೂ ಓದಿ: ಜನಪರ ಪತ್ರಿಕೋದ್ಯಮದ ಕನಸು ಹೊತ್ತಿದ್ದ ‘ಜನವಾಹಿನಿ’ಯ ನಿಶ್ಶಸ್ತ್ರ ಸೈನಿಕರ ಬಗ್ಗೆ…

ಈ ಹಿನ್ನೆಲೆಯಲ್ಲಿ ಸೀಮಿತ ತಂತ್ರಜ್ಞಾನ, ಕಡಿಮೆ ಸಂಬಳದ ನಡುವೆಯೂ ‘ಮುಂಗಾರು’ ಪತ್ರಕರ್ತರು ಏನು ಸಾಧಿಸಿದ್ದರು ಎಂಬುದನ್ನು ತೋರಿಸಲು ಅಲ್ಲಿ ದುಡಿದ ಕೆಲವು ಮಿತ್ರರ ಅಭಿಪ್ರಾಯಗಳನ್ನು ಇಲ್ಲಿ ನೋಡಿ!

‘ಮುಂಗಾರು’ ದಿನಪತ್ರಿಕೆ ಕಟ್ಟಿದವರು ತಿಂಗಳಿಗೆ ಆರುನೂರರಿಂದ ಒಂದೂವರೆ ಸಾವಿರ ರೂಪಾಯಿ ಸಂಬಳವನ್ನು ನಾಲಕ್ಕು ಕಂತುಗಳಲ್ಲಿ ಪಡೆದು, ಅರೆಹೊಟ್ಟೆಯಲ್ಲಿ ಪ್ರೀತಿಯಿಂದ ದುಡಿದವರು. ನಾನೂ ಅದರ ಪುಟ್ಟ ಭಾಗವಾಗಿ ನನ್ನ ವೃತ್ತಿ ಆರಂಭಿಸಿದ ಬಗ್ಗೆ ನನಗೆ ಹೆಮ್ಮೆ ಇದೆ.

ರಾಜಾರಾಂ ತಲ್ಲೂರ್, ಹಿರಿಯ ಪತ್ರಕರ್ತ.

ಮುಂಗಾರು! ಅಲ್ಲಿನ ಪ್ರತಿ ಕ್ಷಣಗಳೂ ಅನನ್ಯ. ಪತ್ರಿಕೋದ್ಯಮದ ಅ.ಆ.ಇ. ಕಲಿಸಿದ ಸಂಸ್ಥೆ ಈಗ ಹೇಗಿರಬಹುದು? ಮೊನ್ನೆ ತಾನೆ ಮಂಗಳೂರಿಗೆ ಹೋಗಿದ್ದಾಗ ನಾ ಕೆಲಸ ಮಾಡಿದ ಬೈಕಂಪಾಡಿ, ಉಳಕೊಂಡ ಚಿತ್ರಾಪುರದಲ್ಲಿ ಒಬ್ಬನೇ ಗಂಟೆಗಳ ಕಾಲ ಸುತ್ತಾಡಿದೆ. ನಿಜಕ್ಕೂ ಮನಸ್ಸು ಭಾರ! ಸುರಿದ ಮುಂಗಾರಿನ ಮಳೆಗೆ ಬೊಗಸೆ ಹಿಡಿದ ದಿನಗಳು ಜೀವನದಲ್ಲಿ ಶಾಶ್ವತ. ಬರವಣಿಗೆ ಕಲಿಸಿದವರು, ವರದಿಗಾರಿಕೆ ಕಲಿತದ್ದು, ಮೊಳೆ ಜೋಡಿಸಿದ್ದು… ಬಾರೋ ತಮ್ಮಾ ಅನ್ನುತ್ತಿದ್ದ ವರಶೆ (ವಡ್ಡರ್ಸೆ ರಘುರಾಮ ಶೆಟ್ಟಿ)… ಜತೆಗೆ ಕೆಲಸ ಮಾಡುತ್ತಿದ್ದ ಟಿ.ಕೆ. ರಮೇಶ್ ಶೆಟ್ಟಿ, ದಿನೇಶ್ ಅಮೀನ್ ಮಟ್ಟು, ಬೈಲೂರು ಮೊಹಮ್ಮದ್ ಹನೀಫ್, ಕೇಶವ ವಿಟ್ಲ, ರಾಜಾರಾಂ ತಲ್ಲೂರು, ಚಿದಂಬರ ಬೈಕಂಪಾಡಿ, ಬಿ.ಬಿ.ಶೆಟ್ಟಿಗಾರ್, ದಾಮೋದರ ಶೆಟ್ಟಿಗಾರ್, ಸುನಿಲ್ ನಟೇಕರ್, ಮಂಜುನಾಥ್ ಭಟ್, ಭೀಮ ಭಟ್, ವಿಜೂ ಪೂಣಚ್ಚ, ಎಚ್, ನಾಗವೇಣಿ, ಪ್ರಕಾಶ್ ಶೆಟ್ಟಿ, ವಿಶ್ವ ಕುಂದಾಪುರ, ನಿಖಿಲ್ ಕೋಲ್ಪೆ… ಎಲ್ಲ ಕಣ್ಣ ಮುಂದೆ ನಿಂತರು. ಶಂಕರ್ ಶೆಟ್ಟರ ಕ್ಯಾಂಟಿನ್ ದೋಸೆ ತಿಂದು ಲೆಕ್ಕ ಬರೀತಿದ್ದು…. ಕೊನೆಯ ದಿನಗಳಲ್ಲಿ ಬರುತ್ತಿದ್ದುದು ಆರುನೂರು ರೂ. ಸಂಬಳ, ಆದರೆ ನೆಮ್ಮದಿ 100%….!
ಮಂಜುನಾಥ ಚಾಂದ್ ತ್ರಾಸಿ, ಹಿರಿಯ ಪತ್ರಕರ್ತ

‘ಸಂತೋಷ’, ‘ಚಿತ್ರತಾರ’ದ ನಂತರ ನನಗೆ ವಿನ್ಯಾಸ ಪ್ರಯೋಗಗಳನ್ನು ಮಾಡುವ ಯೋಗ ಸಿಕ್ಕಿದ್ದು ‘ಮುಂಗಾರು’ವಿನಲ್ಲಿ. ಹ್ಯಾಂಡ್ ಕಂಪೋಸಿಂಗ್‍ನಲ್ಲಿ ವಿನ್ಯಾಸ ಪ್ರಯೋಗಗಳನ್ನು ಮಾಡುವುದೆಂದರೆ ಅಂದು ಪಾಪದ ಕಂಪೋಸಿಟರ್‍ಗಳ ತಾಳ್ಮೆ ಪರೀಕ್ಷಿಸಿದಂತೆ!
ಪ್ರಕಾಶ್ ಶೆಟ್ಟಿ, ಪ್ರಖ್ಯಾತ ವ್ಯಂಗ್ಯಚಿತ್ರಕಾರ

‘ಮುಂಗಾರು’ವಿನ ಆರಂಭದ ದಿನಗಳು. ಗೌರವ ಡಾಕ್ಟೋರೇಟ್ ವಿಚಾರವೊಂದರಲ್ಲಿ ಮಂಗಳೂರು ವಿವಿ ಸುದ್ದಿಗೆ ಗ್ರಾಸವಾಯಿತು. ರಾಜ್ಯಪಾಲ ವೆಂಕಟಸುಬ್ಬಯ್ಯ ಅವರ ಗೆಳೆಯ(ಇಬ್ಬರೂ ಆಂಧ್ರದವರು) ಸುಬ್ಬಿರಾಮರೆಡ್ಡಿಯವರಿಗೆ ಮಂಗಳೂರು ವಿವಿಯ ಮೂಲಕ ಗೌರವ ಡಾಕ್ಟೋರೇಟ್ ನೀಡಲು ನಿರ್ಧರಿಸಲಾಯಿತು. ಇದನ್ನು ಮಂಗಳೂರಿನ ಪ್ರಜ್ಞಾವಂತರು ವಿರೋಧಿಸಿದರು. ರೆಡ್ಡಿಯವರಿಗೆ ಯಾವ ಕಾರಣಕ್ಕೆ ಆ ಪದವಿ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದರು. ಆತ ಉದ್ಯಮಿ, ಸಮಾಜಸೇವಕ ಎಂದೆಲ್ಲ ವಿವಿ ಸಮಜಾಯಿಷಿ ನೀಡಿತು. ಜನ ಒಪ್ಪಲಿಲ್ಲ. ವಿರೋಧವನ್ನು ಲೆಕ್ಕಿಸದೆ ಇಬ್ಬರು ಮಹಾನ್ ಸಾಧಕರ ಜತೆಯಲ್ಲಿ (ಏನೂ ಅಲ್ಲದ) ರೆಡ್ಡಿಯವರಿಗೂ ಗೌರವ ಡಾಕ್ಟೋರೇಟ್ ಪದವಿ ನೀಡಲಾಯಿತು. ಅದೇ ದಿನ ನರೇಂದ್ರ ನಾಯಕರ ನೇತೃತ್ವದಲ್ಲಿ ಮಂಗಳೂರಿನ ಪುರಭವನದ ಬಳಿಯಲ್ಲಿ ಅಣಕು ಪದವಿಪ್ರಧಾನ ಸಮಾರಂಭ ನಡೆಯಿತು. ಹಾದಿಯಲ್ಲಿ ಬೀದಿಯಲ್ಲಿ ಹೋಗುವವರಿಗೆಲ್ಲ ‘ಯಾರಿಗೆ ಬೇಕು ಗೌರವ ಡಾಕ್ಟೋರೇಟ್, ಬನ್ನಿ ಬನ್ನಿ..’ ಎಂದು ಕರೆದು ಪದವಿ ಹಂಚಲಾಯಿತು. ಕತ್ತೆಯೊಂದಕ್ಕೂ ಪದವಿ ನೀಡಿ ಗೌರವಿಸಲಾಯಿತು. ಮಾರನೆ ದಿನದ ‘ಮುಂಗಾರು’ ಮುಖಪುಟ ನೋಡಿದ ಎಲ್ಲರೂ ಬಿದ್ದು ಬಿದ್ದು ನಕ್ಕರು. ಎಡಭಾಗದಲ್ಲಿ ರೆಡ್ಡಿಯವರಿಗೆ ಗೌರವ ಡಾಕ್ಟೋರೇಟ್ ಪದವಿ ನೀಡುವ ಫೋಟೋ ಇದ್ದರೆ ಬಲಭಾಗದಲ್ಲಿ ಕತ್ತೆಗೆ ಗೌರವ ಡಾಕ್ಟೋರೇಟ್ ಪದವಿ ನೀಡುವ ಫೋಟೋ ಬಂದಿತ್ತು. ಇಂಥ ಕೆಲಸ ಮಾಡುವ ಧೈರ್ಯ ‘ಮುಂಗಾರು’ವಿಗಲ್ಲದೆ ಯಾವ ಪತ್ರಿಕೆಗೆ ತಾನೇ ಇದ್ದಿತ್ತು ಆಗ?


-ಶ್ರೀನಿವಾಸ ಕಾರ್ಕಳ, ಹಿರಿಯ ಬರಹಗಾರ

ಇಂತಹ ಅಭಿಪ್ರಾಯಗಳನ್ನು ಬೇಕಾದಷ್ಟು ಕೊಡಬಹುದು. ಅಂದು ಆ ಶಾಲೆಯಲ್ಲಿ ಕಲಿತವರು ದೊಡ್ಡ ದೊಡ್ಡ ಪತ್ರಕರ್ತರಾಗಿದ್ದಾರೆ. ಕೆಲವರಾದರೂ ಅದೇ ವೃತ್ತಿನಿಷ್ಟೆ ಉಳಿಸಿಕೊಂಡಿದ್ದಾರೆ. ‘ಜನವಾಹಿನಿ’ ಎಂಬ ಶಾಲೆಯಲ್ಲಿ ಕಲಿತವರೂ ಇಂದು ಬೇರೆ ಬೇರೆ ಮಾಧ್ಯಮಗಳಲ್ಲಿ ಪ್ರಮುಖ ಸ್ಥಾನಗಳಲ್ಲಿ ಇದ್ದಾರೆ. ಯಾರು ಏನಾಗಿದ್ದಾರೆ ಎಂದು ಹೇಳಲಾರೆ.

’ಮುಂಗಾರು’ ಸಂಪಾದಕೀಯ ವಿಭಾಗವಿದ್ದ ಹಾಲ್

ಇದನ್ನು ಬರೆಯಲು ಯೋಚಿಸಿದಾಗ ಇದು ಒಂದೇ ಸಂಚಿಕೆಯಲ್ಲಿ ಮುಗಿಯಲಾರದು ಎಂದು ಅನಿಸಿರಲಿಲ್ಲ! ‘ಜನವಾಹಿನಿ’ ಮತ್ತು ‘ಮುಂಗಾರು’ ಸಾಮ್ಯದ ಬಗ್ಗೆ ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ನೋಡೋಣ.

******

ಒಂದು ವಿಚಿತ್ರ ಮದುವೆ!

ನಾನು ‘ಮುಂಗಾರು’ ಪತ್ರಿಕೆ ಸೇರಿದ್ದು ಡಿಸೆಂಬರ್ 6, 1989ರಂದು. ಆಗ ನನಗೆ 25 ವರ್ಷ ಕಳೆದಿದ್ದಷ್ಟೇ. ಮೊದಲಿಗೆ ಹಗಲಿನ ಪಾಳಿ ಇತ್ತು. ಒಂದೆರಡೇ ದಿನಗಳಲ್ಲಿ ರಾತ್ರಿ ಪಾಳಿ ಬಂತು. ಕೆಲದಿನಗಳಲ್ಲಿ ಪರಿಚಯ, ಸಲಿಗೆ ಬೆಳೆಯಿತು. ಹೀಗಿರುತ್ತಾ ಒಂದು ದಿನ ಎಲ್ಲರೂ ಡೆಸ್ಕಿನಲ್ಲಿ ಕೆಲಸ ಮಾಡುತ್ತಾ, ನಮ್ಮ ಸುದ್ದಿ ಸಂಪಾದಕರಾಗಿದ್ದ ಮಂಜನಾಥ ಭಟ್ಟರು ಕೇಳಿದರು, “ನಿಮಗೆ ಮದುವೆಗಿದುವೆ ಆಗಿದೆಯೋ ಹೇಗೆ!?”

ನಾನು ಉತ್ತರಿಸಿದೆ, “ಮೊನ್ನೆ 13ನೇ ತಾರೀಕಿಗೆ ಆಯಿತು!”
ಎಲ್ಲರೂ ಕೆಲಸ ನಿಲ್ಲಿಸಿ ಅಚ್ಚರಿಯಿಂದ ನನ್ನ ಕಡೆ ನೋಡಿದರು. ಯಾರೂ ನಂಬಲಿಲ್ಲ. ನಾನೇನೋ ತಮಾಷೆ ಮಾಡುತ್ತಿದ್ದೇನೆ ಎಂದು ಅವರು ಭಾವಿಸಿ ಜೋರಾಗಿ ನಕ್ಕರು. ನಾನು ಇದು ನಿಜವೆಂದು ಮತ್ತೆಮತ್ತೆ ಹೇಳಿ ವಿವರಿಸಬೇಕಾಯಿತು. ನಾನು ಡಿಸೆಂಬರ್ 13ರಂದು ರಾತ್ರಿ ಪಾಳಿಯಲ್ಲಿ ಕೆಲಸಕ್ಕೆ ಹಾಜರಿದ್ದೆ. ಅದು ಅವರು ನಂಬದಿರಲು ಕಾರಣ.

“ನಮ್ಮದು ರಿಜಿಸ್ಸರ್ಡ್ ಮದುವೆ. ಬಂಟ್ವಾಳದಲ್ಲಿ ಆಯಿತು” ಎಂದೆ ನಾನು.
“ಅಂತರ್ಜಾತಿ ಮದುವೆಯೋ ಹೇಗೆ?”
“ಅಂತರ್ಧಮೀಯ!”
ಎಲ್ಲರೂ ನನ್ನ ವಿವರಣೆಯನ್ನು ಅಚ್ಚರಿಯಿಂದಲೇ ಕೇಳಿ ಅಭಿನಂದನೆಗಳನ್ನು ಹೇಳಿ, ವಿಷಯ ತಿಳಿಸದೇ ಇದ್ದುದಕ್ಕೆ ಆಕ್ಷೇಪಿಸಿದರು. ಅಲ್ಲಿಂದ ಮುಂದೆ ಅವರೆಲ್ಲಾ ನನ್ನನ್ನು ನೋಡುವ ದೃಷ್ಟಿ ಸ್ವಲ್ಪ ಬದಲಾಯಿತು ಎಂದು ಮುಂದೆ ನನಗೆ ಸೂಕ್ಷ್ಮವಾಗಿ ಅನಿಸಿದ್ದಿದೆ.

ಅದದ್ದು ಇದು. ನಾನೂ, ಅವಳೂ ಮುಂಬಯಿಯಿಂದ ಬಂದಿದ್ದೆವು. ರಿಜಿಸ್ಟ್ರಾರ್ ಕಚೇರಿಯಲ್ಲಿ 13ಕ್ಕೆ ದಿನ ಕೊಟ್ಟಿದ್ದರು. ಆಗ ತಾನೇ ಕೆಲಸಕ್ಕೆ ಸೇರಿದ್ದ ನನಗೆ ಆಗಲೇ ರಜೆ ಕೇಳಲು ಸ್ವಾಭಿಮಾನ, ಕರ್ತವ್ಯನಿಷ್ಟೆ ಬಿಡಲಿಲ್ಲ. ಹಾಗಾಗಿ ರಾತ್ರಿಪಾಳಿ ಮುಗಿಸಿ ಬೆಳಗ್ಗೆ ಮನೆಗೆ ಹೋಗಿ, ನಂತರ ಒಂದು ಕೈ ಬೆರಳೆಣಿಕೆಯ ಗೆಳೆಯರ ಸಮ್ಮುಖದಲ್ಲಿ ಮದುವೆಯಾಗಿ, ಮನೆಯಲ್ಲಿ ತಾಯಿ ಮಾಡಿದ್ದ ಕೋಳಿ ಊಟವನ್ನು ಅದೇ ಗೆಳೆಯರ ಜೊತೆ ಮಾಡಿ, ಬೈಕಂಪಾಡಿಗೆ ಹೋಗಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ್ದೆ!

ಬಹುಶಃ ಮದುವೆಯ ದಿನವೇ ಕರ್ತವ್ಯಕ್ಕೆ ಹಾಜರಾದ ಪತ್ರಕರ್ತ ನಾನೊಬ್ಬನೇ ಇರಬಹುದೇ ಎಂದು ಈಗಲೂ ಆಗಾಗ ಅನಿಸುವುದಿದೆ. ಆಗ ‘ಮುಂಗಾರು’ವಿನಲ್ಲಿ ಎಂತಹ ಆದರ್ಶವಾದಿ ಸ್ಯಾಂಪಲ್‍ಗಳು ಇದ್ದವೆಂದು ಹೇಳಲು ಇದನ್ನು ಉಲ್ಲೇಖಿಸುತ್ತಿದ್ದೇನೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ರೇವಣ್ಣ ಸಹಚರ ಸತೀಶ್ ಬಾಬಣ್ಣಗೆ ನ್ಯಾಯಾಂಗ ಬಂಧನ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಯಲಾದ ಬೆನ್ನಲ್ಲಿ ಮೈಸೂರಿನಲ್ಲಿ ಮಹಿಳೆಯನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣದ ಎರಡನೇ ಆರೋಪಿ ಸತೀಶ್ ಬಾಬಣ್ಣ ಬಂಧನವಾಗಿದ್ದು, ಅವರನ್ನು ನ್ಯಾಯಾಲಯ 14...