Homeಕರ್ನಾಟಕಕನ್ನಡ ಪತ್ರಿಕೋದ್ಯಮದ ನಿಂತ ನೀರಿಗೆ ಬಂಡೆ ಎಸೆದ ‘ಜನವಾಹಿನಿ’!

ಕನ್ನಡ ಪತ್ರಿಕೋದ್ಯಮದ ನಿಂತ ನೀರಿಗೆ ಬಂಡೆ ಎಸೆದ ‘ಜನವಾಹಿನಿ’!

- Advertisement -
- Advertisement -

ಜನಪರ ಪತ್ರಿಕೋದ್ಯಮದ ಅನುಭವಗಳು ನಾನುಗೌರಿ.ಕಾಂ ಓದುಗರಿಗಾಗಿ

ಪತ್ರಿಕೋದ್ಯಮವೆಂದರೆ ಜನರ, ಜನತಂತ್ರದ ಪರ ಇರಬೇಕೆಂದು ಸಹಜ ನಿರೀಕ್ಷೆ. ಅದಕ್ಕೆ ವಿರುದ್ಧವಾಗಿ ಪತ್ರಿಕೋದ್ಯಮವು ಇಂದು ತೀರಾ ಕೆಳಮಟ್ಟಕ್ಕೆ ಮತ್ತು ಜನರ ಹಿತಾಸಕ್ತಿಗೆ ವಿರುದ್ಧವಾಗಿ ಬೆಳೆಯುತ್ತಿದೆಯೆಂಬ ಭಾವನೆ ದಿನೇ ದಿನೇ ಬೆಳೆಯುವಂತಹ ಪರಿಸ್ಥಿತಿ ಏರ್ಪಟ್ಟಿದೆ. ಜನವಿರೋಧಿಯಾಗಿ ಆಳುವವರ ತುತ್ತೂರಿಯಾಗುತ್ತಿರುವ, ಸುಳ್ಳು ಸುದ್ದಿಗಳನ್ನು ಹರಡುವ ಪತ್ರಿಕೋದ್ಯಮವನ್ನು ಬಯಲುಗೊಳಿಸುವ ಕೆಲಸ ಮಾಡೋಣ. ಆದರೆ ಅದರ ಜೊತೆಜೊತೆಗೇ ಜನಪರ ಪತ್ರಿಕೋದ್ಯಮದ ಮಾದರಿಯನ್ನು ಹೊಸ ಬಗೆಯಲ್ಲಿ ನಿರ್ಮಾಣ ಮಾಡುವುದೂ ನಮ್ಮೆಲ್ಲರ ಕರ್ತವ್ಯವಾಗಿದೆ. ಅದಕ್ಕೆ ಅಂತಹ ಕೆಲವು ಪ್ರಯೋಗಗಳ ಅನುಭವಗಳನ್ನೂ ನಾವು ಅರಿಯುವ ಅಗತ್ಯವಿದೆ. ‌ಅದರ ಭಾಗವಾಗಿ ಮಂಗಳೂರು ಮತ್ತು ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ‘ಜನವಾಹಿನಿ’ಯ ಕುರಿತಾಗಿ ಒಂದು ಬರಹ ಸರಣಿ ನಮ್ಮಲ್ಲಿ ಪ್ರಕಟವಾಗಲಿದೆ. ಜನವಾಹಿನಿಯ ಸಂಪಾದಕೀಯ ಬಳಗದಲ್ಲಿದ್ದು ಈಗ ನಾನುಗೌರಿ ಪತ್ರಿಕಾ ತಂಡದ ಜೊತೆಗಿರುವ ಹಿರಿಯ ಪತ್ರಕರ್ತ ನಿಖಿಲ್ ಕೋಲ್ಪೆಯವರು ವಾರಕ್ಕೊಮ್ಮೆ ಜನವಾಹಿನಿಯ ದಿನಗಳನ್ನು ಮೆಲುಕು ಹಾಕಲಿದ್ದಾರೆ. ವಿಶೇಷವೆಂದರೆ ಕೊಂಕಣಿ ಪತ್ರಿಕೆ ‘ಆರ್ಸೋ’ (ಕನ್ನಡಿ)ದ ಕನ್ನಡ ವಿಭಾಗದಲ್ಲಿ ಇದು ಪ್ರಕಟವಾಗುತ್ತಿದ್ದು, ಈಗ ಕೊಂಕಣಿಯೇತರ ಓದುಗರಿಗೆ ನಾನುಗೌರಿ.ಕಾಂನಲ್ಲಿ ಪ್ರಕಟವಾಗಲಿದೆ. ಓದುಗರ ಪ್ರತಿಕ್ರಿಯೆಗಳಿಗೆ ಸ್ವಾಗತ..

ಜನವಾಹಿನಿ ನೆನಪು : ಭಾಗ-1

ಕೃಪೆ: ‘ಆರ್ಸೋ’ ಕೊಂಕಣಿ ಪತ್ರಿಕೆ

ಹೆಚ್ಚು ಕಡಿಮೆ ಎರಡು ದಶಕಗಳ ಹಿಂದೆ ‘ಜನವಾಹಿನಿ’ ಪತ್ರಿಕೆ ರಾಜ್ಯದ ಅದರಲ್ಲೂ ಮುಖ್ಯವಾಗಿ ಕರಾವಳಿಯ ಮಾರುಕಟ್ಟೆಗೆ ಕಾಲಿಟ್ಟಾಗ ಅಚ್ಚರಿಪಟ್ಟವರು ಹಲವರು! ಜೊತೆಗೆ ಬೆಚ್ಚಿ ಬಿದ್ದು ಭಯಪಟ್ಟವರು ಇನ್ನು ಕೆಲವರು! ಕೆಲವು ಸ್ಥಾಪಿತ ಪತ್ರಿಕೆಗಳಿಗೆ ಸ್ಪರ್ಧೆಯ ಭಯವಾದರೆ, ಸ್ಥಾಪಿತ ಹಿತಾಸಕ್ತಿಗಳಿಗೆ ತಮ್ಮ ವಿಚಾರಗಳಿಗೆ ಪ್ರತಿಸ್ಪರ್ಧಿ ಹುಟ್ಟಿಕೊಂಡ ಭಯ. ಕನ್ನಡ ಪತ್ರಿಕಾ ರಂಗದ ನಿಂತ ನೀರಿಗೆ ಕಲ್ಲೆಸೆದಂತೆ ಅಲ್ಲ ಒಂದು ಬಂಡೆಯನ್ನೇ ಎಸೆದಂತಾಗಿತ್ತು.

ತನ್ನ ಹೊಸತನ, ಸರಳ ಮತ್ತು ನೇರ ವಿಚಾರ ಮಂಡನೆ, ಜಾತ್ಯತೀತ ಗುಣ, ಸಾಮಾಜಿಕ ಕಾಳಜಿ, ಜೊತೆಗೆ ಕನ್ನಡ ಪತ್ರಿಕಾರಂಗದಲ್ಲಿಯೇ ಮೊತ್ತ ಮೊದಲ ಬಾರಿಗೆ ಹೊಸ ರೀತಿಯ ವಿನ್ಯಾಸ, ಬಣ್ಣದ ಪುಟಗಳು ಇತ್ಯಾದಿಗಳಿಂದ ಜನರ ಮನಸೆಳೆದು, ಎರಡು ತಿಂಗಳೊಳಗೆ ಜನಮಾನಸದಲ್ಲಿ ಸ್ಥಾಯಿಯಾದ ಪತ್ರಿಕೆ ಜನವಾಹಿನಿ.

ಜನವಾಹಿನಿ ಮುಖಪುಟ

ಕನ್ನಡದ ಹಲವು ಸ್ಥಾಪಿತ ಪತ್ರಿಕೆಗಳ ನಿದ್ದೆಗೆಡಿಸಿ, ಅವುಗಳಲ್ಲಿಯೂ ಹಲವಾರು ಬದಲಾವಣೆಗಳನ್ನು ತರುವಷ್ಟು ಪ್ರಭಾವ ಬೀರಿದ ಮತ್ತು ಜಾತ್ಯತೀತರು, ಪ್ರಜಾಪ್ರಭುತ್ವವಾದಿಗಳು ಹಾಗೂ ಸಾಮಾನ್ಯ ಜನರಲ್ಲಿ ನಮ್ಮ ಪರ ಮಾತನಾಡುವವರು ಯಾರಾದರೊಬ್ಬರು ಇದ್ದಾರೆ ಎಂಬ ಭರವಸೆ ಮೂಡಿಸಿದ ಈ ಪತ್ರಿಕೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ, ಒಂದು ನಿರ್ದಿಷ್ಟ ದಿನದಂದು ಕುಸಿತಗೊಂಡು, ಕ್ಷಯ ರೋಗ ಹಿಡಿದ ರೋಗಿಯಂತೆ ದಿನದಿಂದ ದಿನಕ್ಕೆ ಬಳಲಿ ಬೆಂಡಾಗಿ, ಕೊನೆಗೊಂದು ದಿನ ಕೊನೆಯುಸಿರು ಎಳೆದುದು ಕನ್ನಡ ಪತ್ರಿಕಾರಂಗದಲ್ಲಿ ಒಂದು ದೊಡ್ಡ ದುರಂತ! ಅದರಲ್ಲಿ ದುಡಿದ ಎಲ್ಲಾ ಪತ್ರಕರ್ತರು, ತಂತ್ರಜ್ಞರು ಹಾಗೂ ಇತರ ಸಿಬ್ಬಂದಿಗಳಿಗೆ ಇಂದೂ ಕಣ್ಣಲ್ಲಿ ನೀರು ತರಿಸುವ ಅಕಾಲಿಕ ಮರಣ.

‘ಜನವಾಹಿನಿ’ ಆರಂಭವಾಗುವುದಕ್ಕೆ ಬಹಳ ಮೊದಲೇ ಸಂಪಾದಕೀಯ ತಂಡ ಸೇರಿದ ಬೆರಳೆಣಿಕೆಯ ಪತ್ರಕರ್ತರಲ್ಲಿ ಎರಡನೆಯವನು ನಾನು. ಇಲ್ಲಿ ನಾನು ‘ಜನವಾಹಿನಿ’ಯ ಆರಂಭದ ದಿನಗಳ ಬಗ್ಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಅದರ ತ್ವರಿತ ಬೆಳವಣಿಗೆ ಮತ್ತು ದಾರುಣ ಅಂತ್ಯದ ಬಗ್ಗೆ ಮುಂದಿನ ಸಂಚಿಕೆಗಳಲ್ಲಿ ಬರೆಯುವೆ!

ಪತ್ರಕರ್ತರಾದ ನಿಖಿಲ್ ಕೋಲ್ಪೆ

ನಾನು ‘ಮುಂಗಾರು’ ಪತ್ರಿಕೆಯನ್ನು ತೀರಾ ಬಡವನಾಗಿ ಬಿಟ್ಟುಹೋದ ಮೇಲೆ, ಸಂಜೆ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿಯೂ ಬೇಸತ್ತು, ಈ ಪತ್ರಿಕಾರಂಗದ ಸಹವಾಸವೇ ಬೇಡ ಎಂದು ಮನೆಯಲ್ಲಿಯೇ ಏನಾದರೂ ಕೃಷಿ ಮಾಡಿ ಬದುಕುವ ಎಂದು ದೈಹಿಕ ಶ್ರಮಕ್ಕಿಳಿದು ತರಕಾರಿ ಬೆಳೆಸಿದ್ದೆ. ಇನ್ನೇನು ಫಲಕೊಡಬೇಕು ಎಂಬ ಹೊತ್ತಿಗೆ ಸರಿಯಾಗಿ ಗೆಳೆಯ ಎನ್.ಎ.ಎಂ. ಇಸ್ಮಾಯಿಲ್ ಫೋನ್ ಮಾಡಿದರು. ಆಗ ಮೊಬೈಲ್ ಫೋನುಗಳೆಲ್ಲ ಇದ್ದಿರಲಿಲ್ಲ. ‘ನಮ್ಮ ವಿಚಾರಗಳಿಗೆ ಸರಿಹೊಂದುವ ಒಂದು ದಿನಪತ್ರಿಕೆ ಹೊರಬರುತ್ತಿದೆ. ದೊಡ್ಡ ಯೋಜನೆ. ನೀವು ಬಿಷಪ್ಸ್ ಹೌಸಿಗೆ ಬನ್ನಿ’ ಎಂದೆಲ್ಲ ಹೇಳಿದರು. ನನಗೆ ಅಚ್ಚರಿಯಾಯಿತು. ಬಿಷಪ್ಸ್ ಹೌಸ್! ಯಾರದ್ದು ಇದು ಯೋಜನೆ ಎಂದು ಕೇಳಿದೆ. ಫಾದರ್ ಸ್ಯಾಮ್ಯುಯೆಲ್ ಸಿಕ್ವೇರಾ ಅಂತ ಪಾದ್ರಿ ಇದ್ದಾರೆ. ನಮ್ಮ ಹಾಗೇ ಯಂಗ್ ಎಂದರು. ಈ ಸ್ವಾಮಿಗಳು, ಪಾದ್ರಿ, ಮುಲ್ಲಾಗಳೆಂದರೆ ಅಪಾರ ಅಪನಂಬಿಕೆ ಇದ್ದ ನಾನು, ನಮಸ್ಕಾರ! ನಾನು ಬರುವುದಿಲ್ಲ ಎಂದೆ. ಇಲ್ಲ, ನೀವು ಬಂದು ಮಾತನಾಡಿ ನೋಡಿ, ಸ್ಯಾಮುವೆಲ್ ನಿಮ್ಮ ಬಾಕಿ ಪಾದ್ರಿಗಳಂತೆ ಅಲ್ಲ, ‘ರಾಕ್ಣೊ’ ಪತ್ರಿಕೆಯ ಪ್ರಸಾರವನ್ನು ದಾಖಲೆ ಮಟ್ಟಕ್ಕೆ ಏರಿಸಿದವರು ಎಂದರು. ಸರಿ ಎಂದು ಮರುದಿನ ಹೋದೆ.

ಅಲ್ಲಿಗೆ ಹೋದಾಗ ಬಿಷಪ್ಸ್ ಹೌಸ್‍ನಲ್ಲಿ ‘ರಾಕ್ಣೊ’ ಪತ್ರಿಕೆ ಕಚೇರಿಯ ಹತ್ತಿರವೇ ಒಂದು ಕೊಠಡಿಯನ್ನು ನಮಗೆ ಕೊಡಲಾಗಿತ್ತು. ರೇಷ್ಮಾ ಎಂಬ ಅತ್ಯಂತ ದಕ್ಷ ಮತ್ತು ಮೆಲು ಮಾತಿನ ಹುಡುಗಿ ಇಸ್ಮಾಯಿಲ್ ಜೊತೆ ಅಲ್ಲಿದ್ದರು. ನಂತರ ಸರ್ಕ್ಯುಲೇಷನ್ ಮೆನೇಜರ್ ಎಂದು ಹೇಳಿಕೊಂಡ ಸ್ಟ್ಯಾನ್ಲಿ ಸೆರಾವೋ ಮತ್ತು ಜಾಹೀರಾತು ಮೆನೇಜರ್ ಎಂದು ಹೇಳಿಕೊಂಡ ವಿಚಿತ್ರ ಕನ್ನಡ ಮಾತನಾಡುವ ಪೌಲೋಸ್ ಸೇರಿಕೊಂಡರು. ಚರ್ಚೆ ನಡೆದು ಎಲ್ಲರೂ ಅವರವರ ಐಡಿಯಾ ಹೇಳಿದರು. ಇವರಿಬ್ಬರೂ ಹೇಳಿಕೊಂಡದ್ದು ಮತ್ತು ಮಾಡಿ ತೋರಿಸಿದವರು!

ನಂತರದ ದಿನಗಳಲ್ಲಿ ರವೀಂದ್ರ ಶೆಟ್ಟಿ, ವಿಲ್ಫ್ರೆಡ್ ಡಿ’ಸೋಜ, ಕೇಶವ ಕುಂದರ್, ಬಿ.ಬಿ.ಶೆಟ್ಟಿಗಾರ್ ಮುಂತಾದವರು ಸೇರಿಕೊಂಡರು. ಬೇರೆ ಕೆಲಸವಿಲ್ಲ. ಚರ್ಚೆ, ಸೂಕ್ಷ್ಮಾತಿಸೂಕ್ಷ್ಮ ಚರ್ಚೆ ಮತ್ತು ಆಗ ಹೊಸದಾಗಿ ಬಂದಿದ್ದ ಕಂಪ್ಯೂಟರ್ ಗೇಮ್ ‘ಪ್ರಿನ್ಸ್’ ಆಡುವುದು! ನಾನು ಆ ತನಕ ಕಂಪ್ಯೂಟರ್ ಮುಟ್ಟಿ ನೋಡಿರಲಿಲ್ಲ. ಅದು ತಾಂತ್ರಿಕ ಕೆಲಸ, ಪತ್ರಕರ್ತರಿಗೂ ಅದಕ್ಕೂ ಸಂಬಂಧವಿಲ್ಲ; ನಾವು ಬರೆದುಕೊಟ್ಟರೆ ಮುಗಿಯಿತು ಎಂದು ಭಾವಿಸಿದ್ದೆವು. ಇಸ್ಮಾಯಿಲ್‍ಗೆ ಸ್ವಲ್ಪ ಮಟ್ಟಿಗೆ ಕಂಪ್ಯೂಟರ್ ಗೊತ್ತಿತ್ತು. ಉಳಿದವರ ಪಾಡೂ ಇದೇ ಆಗಿತ್ತು. ಆಟವಾಡುತ್ತಾ ಸ್ವಲ್ಪ ಸ್ವಲ್ಪವೇ ಈ ಮೌಸ್, ಪಾಯಿಂಟರ್, ಕರ್ಸರ್ ಇತ್ಯಾದಿ ನಿಯಂತ್ರಣಕ್ಕೆ ಬಂದವು. ಸ್ಪಲ್ಪ ಸ್ವಲ್ಪ ಟೈಪಿಂಗನ್ನೂ ಕಲಿತೆವು.

ಆಗ ಕನ್ನಡವನ್ನು ಡಾಸ್‍ (Dos)ನಲ್ಲಿ ‘ಪ್ರಕಾಶಕ್’ ಸಾಫ್ಟ್ ವೇರ್ ಮೂಲಕ ಟೈಪ್ ಮಾಡಿ, ನಂತರ ಕನ್ವರ್ಟ್ ಮಾಡಿ, ‘ಪೇಜ್ ಮೇಕರ್’ ಮೂಲಕ ಪುಟ ತಯಾರಿಸಬೇಕಿತ್ತು. ಇದನ್ನೆಲ್ಲಾ ನಾವೇ ಪತ್ರಕರ್ತರು ಮಾಡಬೇಕೆಂದೂ, ಡಿಟಿಪಿ ಅಪರೇಟರ್ ಎಂದು ಯಾರೂ ಇರುವುದಿಲ್ಲವೆಂದೂ ಹೇಳಿದಾಗ ನಾವು ಗಾಬರಿಬಿದ್ದೆವು. ಆದರೆ, ಇದೇ ಪತ್ರಿಕಾರಂಗದ ಭವಿಷ್ಯವೆಂದೂ, ಮುಂದೆ ಪ್ರೂಫ್ ರೀಡರ್ ಎಂದು ಕೂಡಾ ಯಾರೂ ಇರುವುದಿಲ್ಲವೆಂದೂ ತಿಳಿದಾಗ, ಭವಿಷ್ಯಕ್ಕೆ ಅಡ್ಡಿಯಾಗುವವರು ನಾವಾಗಿರಲಿಲ್ಲ. ತಲೆಬಗ್ಗಿಸಿ ಕಲಿಯಲಾರಂಭಿಸಿದೆವು. ಆಗ ನಮ್ಮಲ್ಲಿ ಉತ್ಸಾಹ ತುಂಬಿದ್ದು ನಮ್ಮ ಕನಸುಗಳು ಮಾತ್ರ. ಸ್ಯಾಮುಯೆಲ್ ಅವರಿಗೆ ಆಗ ತಮ್ಮ ‘ರಾಕ್ಣೊ’ ಪತ್ರಿಕೆಯ ಸಂಪಾದಕತ್ವದ ಜವಾಬ್ದಾರಿಯಿಂದ ಮುಕ್ತಿ ಸಿಕ್ಕಿರಲಿಲ್ಲ.

ಕೆಲದಿನಗಳಲ್ಲಿ ಪತ್ರಿಕೆ ಹೇಗಿರಬೇಕು ಎಂಬ ಸ್ಪಷ್ಟ ಕಲ್ಪನೆ ನಮ್ಮೊಳಗೆ ಮೂಡಿತ್ತು. ಪತ್ರಿಕೆ ನಮ್ಮ ಕಣ್ಣ ಮುಂದೆ ಸ್ಪಷ್ಟವಾಗಿ ಕಾಣುತ್ತಿತ್ತು- ನಾನು ಹೀಗೆಯೇ ಇರಬೇಕು ಎಂಬಂತೆ.

ಬಣ್ಣದ ಪತ್ರಿಕೆ, ಜಾತ್ಯತೀತ ನಿಲುವು, ಜನಪರ ಕಾಳಜಿ ಇತ್ಯಾದಿ ಇತ್ಯಾದಿ. ನಾನು ಪ್ರಾಯೋಗಿಕ ಪ್ರಶ್ನೆಗಳನ್ನು ಕೇಳುತ್ತಿದ್ದೆ. ಅದೊಂದು ಶೇರು ಬಂಡವಾಳದ ಸಾರ್ವಜನಿಕ ಸಂಸ್ಥೆ. ಚರ್ಚಿಗೂ ಅದಕ್ಕೂ ಸಂಬಂಧ ಇಲ್ಲ. ಆದರೆ, ಕ್ರೈಸ್ತರು ಮತ್ತು ಇತರ ಜಾತ್ಯತೀತರು ಭಾಗವಹಿಸುತ್ತಾರೆ ಇತ್ಯಾದಿಯಾಗಿ ಹೇಳಲಾಗಿತ್ತು. ನಾವು ಅದರ ಬಗ್ಗೆ ತಲೆಗೆಡಿಸಿಕೊಳ್ಳಲೇ ಇಲ್ಲ. ಅವರು ಸಂಪಾದಕೀಯ ವಿಷಯದಲ್ಲಿ ಮಧ್ಯಪ್ರವೇಶ ಮಾಡುತ್ತಾರೋ ಎಂದು ಕೇಳಿದ್ದಕ್ಕೆ, ಇಲ್ಲ ಎಲ್ಲವೂ ನಮ್ಮ ಸಾಮೂಹಿಕ ನಿರ್ಧಾರ, ಆ ಕುರಿತು ಚಿಂತೆ ಬೇಡ ಎಂದು ಇಸ್ಮಾಯಿಲ್ ಹೇಳಿದರು. ಆಗಲೇ ನಾನು ಈ ಪತ್ರಿಕೆಗಾಗಿ ಶಕ್ತಿ ಮೀರಿ ದುಡಿಯುವುದು, ಮತ್ತೆ ನೋಡೋಣ ಎಂಬ ನಿರ್ಧಾರಕ್ಕೆ ಬಂದಿದ್ದೆ.

ಇರಲಿ, ಕೇಳಿಯೇ ಬಿಡೋಣ ಎಂದು ಕೇಳಿದೆ- “ಎಲ್ಲಾ ಸರಿ ಇಸ್ಮಾಯಿಲ್, ಸಂಬಳ ಎಷ್ಟು ಕೊಡಬಹುದು”.
“ಈಗ ಹೆಚ್ಚೇನಿಲ್ಲ! ಒಂದು ನಾಲ್ಕು ಸಾವಿರ ಸಿಗಬಹುದು” ಎಂದರು. ನನಗೆ ಮೂರ್ಛೆ ತಪ್ಪುವುದೊಂದು ಬಾಕಿ ಇತ್ತು. ‘ಮುಂಗಾರು’ ಪತ್ರಿಕೆಯಲ್ಲಿ ಆರಂಭದ ಸಂಬಳ 750 ರೂ., ಖಾಯಂ ಆದಾಗ 1200 ಇತ್ತು. ನಂತರದ ಪತ್ರಿಕೆಗಳಲ್ಲಿ ಅದು 2500ರ ವರೆಗೆ ಏರಿ ಮತ್ತೆ 2,000ಕ್ಕೆ ಇಳಿದಿತ್ತು- ಅದೂ ಕಂತಿನಲ್ಲಿ. ಸರಿ, ಇಷ್ಟು ಸಂಬಳ ಧಾರಾಳವಾಯಿತು. ಇನ್ನು ಜೀವನಪರ್ಯಂತ ಈ ಪತ್ರಿಕೆಯನ್ನು ಕಟ್ಟಿ ಬೆಳೆಸುತ್ತೇನೆ ಎಂದು ಯೋಚಿಸಿದೆ. ಬಹುಶಃ ಇದೇ ಯೋಚನೆ ನನ್ನ ಜೊತೆಗೆ ಇದ್ದವರಿಗೂ, ನಂತರ ಬಂದು ಸೇರಿದ ಹುಡುಗ, ಹುಡುಗಿಯರಿಗೂ ಇದ್ದುದರಿಂದಲೇ ‘ಜನವಾಹಿನಿ’ ಮುಂದೆ ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಾ ಹೋಯಿತು. ಕೃಷ್ಣ ಪಕ್ಷ ಮತ್ತು ಅಮವಾಸ್ಯೆಯ ಕತ್ತಲೂ ಮುಂದೆ ಕಾದಿದೆ ಎಂಬುದರ ಸುಳಿವೇ ನಮಗೆ ಆಗ ಇರಲಿಲ್ಲ.

ಆ ತನಕ ನನ್ನ ಅಥವಾ ಬೇರೆಯವರ ಸಂದರ್ಶನ ನಡೆದೇ ಇರಲಿಲ್ಲ. ಒಂದು ದಿನ ಇಸ್ಮಾಯಿಲ್, ಫಾದರ್ ಸ್ಯಾಮ್ಯುಯೆಲ್ ಇಂಟರ್‍ವ್ಯೂ ಮಾಡುತ್ತಾರಂತೆ ಹೋಗಿ ಎಂದರು. ನನಗೆ ಎದೆ ಧಸಕ್ಕೆಂದಿತು. ‘ಮುಂಗಾರು’ ಪತ್ರಿಕೆಯಲ್ಲಿ ಬರೇ ಕೆಲವು ಕಾಪಿಗಳನ್ನು ಅನುವಾದ ಮಾಡಲು ಮಾತ್ರ ಹೇಳಲಾಗಿತ್ತು. ನಂತರದ ಪತ್ರಿಕೆಗಳಿಗೆ ಅವರೇ ಕರೆದಿದ್ದರು. ಒಳಗೆ ಹೋದಾಗ, ಯಾವುದೋ ಮುದಿ, ಗಂಭೀರ ಪಾದ್ರಿಯನ್ನು ನಿರೀಕ್ಷಿಸಿದ್ದ ನನಗೆ ನನಗಿಂತ ಪ್ರಾಯದಲ್ಲಿ ಚಿಕ್ಕವರಾಗಿದ್ದ ಗಡ್ಡಧಾರಿ ಯುವಕನನ್ನು ಕಂಡು ಅಚ್ಚರಿಯಾಯಿತು. ನಿಮಗೆ ಸಾಕಷ್ಟು ಅನುಭವವಿದೆ; ಇಸ್ಮಾಯಿಲ್ ಎಲ್ಲಾ ಹೇಳಿರಬೇಕಲ್ಲ; ಹೇಗೆ? ಎಂದರು. ಮಾಡಬಹುದು ಬಹಳ ಚೆನ್ನಾಗಿ ಮಾಡಬಹುದು ಎಂದೆ. ಆಯಿತು, ಪ್ಲಾನ್ ಮಾಡಿ ಎಂದರು ಸ್ಯಾಮುಯೆಲ್ ಸಿಕ್ವೇರ.

ನಂತರ, ನಾವೇ ಸೇರಿ ಪ್ರತೀ ಪುಟ, ಪ್ರತೀ ಆವೃತ್ತಿ, ಇರಬೇಕಾದ ವಿಷಯಗಳು, ಬರವಣಿಗೆಯ ಶೈಲಿ ಇತ್ಯಾದಿಯಾಗಿ ಎಲ್ಲವನ್ನೂ ಭಯಾನಕ ಚರ್ಚೆಯ ಬಳಿಕ ಅಂತಿಮಗೊಳಿಸಿ, ಒಂದು ಕಾಲ್ಪನಿಕ ರೂಪ ಕೊಟ್ಟೆವು. ಬೇರೆ ಪತ್ರಿಕೆಗಳ ಹಳೆಯ ಸುದ್ದಿಗಳ ಆಧಾರದಲ್ಲಿ ‘ರಾಕ್ಣೊ’ ಪತ್ರಿಕೆಯ ಡಿಟಿಪಿಯವರ ನೆರವಿನಿಂದ ಡಮ್ಮಿ ಪುಟಗಳನ್ನು ತಯಾರಿಸುವ ಕೆಲಸ ಆರಂಭಿಸಿದೆವು. ಸ್ಟ್ಯಾನ್ಲಿ ಮತ್ತು ಪೌಲೋಸ್ ಪ್ರಸರಣ ಮತ್ತು ಜಾಹೀರಾತು ವಿಭಾಗ ಯೋಜನೆ, ಸಂಪರ್ಕ ಇತ್ಯಾದಿಗಳಲ್ಲಿ ಮಗ್ನರಾದರು.

ನಾವು ಸರಳ ಭಾಷಾಶೈಲಿ, ಮುಂದೆ ಇರಬೇಕಾದ ವಿಷಯಗಳ ಪ್ರಸ್ತುತಿ, ವಿನ್ಯಾಸ ಇತ್ಯಾದಿಗಳ ಕುರಿತು ಚರ್ಚೆ ಮಾಡುತ್ತಾ, ಪತ್ರಿಕಾ ಬಳಗ ಪಳಗಲಾರಂಭಿಸಿತು. ನಮ್ಮ ಚಿಂತನೆಯಲ್ಲೂ, ಪ್ರಸ್ತುತಿಯ ಶೈಲಿಯಲ್ಲೂ ಒಂದು ಏಕರೂಪತೆ ಮೂಡಲು ಆರಂಭವಾಯಿತು. ಹೀಗಿರುವಾಗ ಸಾಮ್ಯುಯೆಲ್ ಕೂಡಾ ಆಗಾಗ ನಮ್ಮನ್ನು ಸೇರಿಕೊಳ್ಳುತ್ತಿದ್ದರು. ಮೊದಲಿಗೆ ಈಗಿನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯನ್ನು ಸುತ್ತಿ, ರಾಜಕೀಯ ನಾಯಕರು, ಬುದ್ಧಿ ಜೀವಿಗಳನ್ನು, ಏಜೆಂಟರನ್ನು ಭೇಟಿ ಮಾಡಿ ಅಭಿಪ್ರಾಯ ರೂಪಿಸಬೇಕೆಂದೂ ನಿರ್ಧರಿಸಲಾಯಿತು. ಹೀಗೆ ಹೋಗುವಾಗ ನಮ್ಮ ಪತ್ರಿಕೆ ಹೇಗೆ ಇರುತ್ತದೆ ಎಂದು ತೋರಿಸಲು ಒಂದು ಮಾದರಿ ಪತ್ರಿಕೆಯನ್ನು ಮುದ್ರಿಸಬೇಕು ಎಂಬ ಅಭಿಪ್ರಾಯ ಬಂತು. ಆದರೆ, ಇದಕ್ಕಿದ್ದ ಅಡ್ಡಿ ಒಂದೇ. ‘ಜನವಾಹಿನಿ’ ಎಂಬ ಹೆಸರು ನಮ್ಮೆಲ್ಲರ ಮನಸ್ಸಿನಲ್ಲಿ ಇದ್ದರೂ, ಆ ಟೈಟಲ್ ನಮ್ಮ ಕೈಗೆ ಬಂದಿರಲಿಲ್ಲ.

ಆ ಹೊತ್ತಿಗೆ ನನಗೊಂದು ಇನ್‍ಸ್ಟೆಂಟ್ ಐಡಿಯಾ ಹೊಳೆಯಿತು. ಟೈಟಲ್ ಬದಲು ಐದು ಪ್ರಶ್ನಾರ್ಥಕ ಚಿಹ್ನೆಗಳನ್ನು ಹಾಕಬಹುದೆಂದೂ, ಇದರಿಂದ ಪತ್ರಿಕೆಯ ಹೆಸರು ಏನು ಎಂಬ ಬಗ್ಗೆ ಎಲ್ಲರಿಗೂ ಕುತೂಹಲ ಮೂಡುವುದೆಂದೂ, ಪತ್ರಿಕೆ ಮುಂದೆ ಯಾವ ಹೆಸರಿನಿಂದ ಬಂದರೂ ಇದೇ ಆ ಪತ್ರಿಕೆ ಎಂದು ಗೊತ್ತಾಗುತ್ತದೆ ಎಂದೂ ನಾನು ಸೂಚಿಸಿದೆ. ಅದಕ್ಕೆ ತಕ್ಷಣ ಒಪ್ಪಿಗೆ ಸಿಕ್ಕಿತು. ಈ ರೀತಿ ಆರಂಭವಾದ ಇನ್ನೋವೇಷನ್ ಮುಂದೆಯೂ ನಿರಂತರ ಮುಂದುವರಿಯಿತು. ಮುಂದೆ ಅನೇಕ ಹೊಸ ಪ್ರಯೋಗಗಳು ಮೊದಲ ಬಾರಿಗೆ ಕನ್ನಡ ಪತ್ರಿಕಾರಂಗಕ್ಕೆ ಪ್ರವೇಶ ಮಾಡಲಿದ್ದವು.

ಅಷ್ಟರಲ್ಲಿಯೇ ಹೊಸ ಪತ್ರಿಕೆಯೊಂದು ಬರುವ ವಿಷಯ ಬಹಿರಂಗವಾಗಿತ್ತು. ಕೆಲವರಿಗೆ ಆಗಲೇ ಹೊಟ್ಟೆ ಉರಿ ಆರಂಭವಾಗಿತ್ತು. ಸ್ಥಾಪಿತ ಪತ್ರಿಕೆಗಳ ಎದುರಿಗೆ ಇವರು ನಿಲ್ಲಲು ಉಂಟೇ ಎಂಬ ಕುಹಕದ ಮಾತುಗಳು ಕೇಳಿಬರುತ್ತಿದ್ದವು. ಸಂಜೆ ಪತ್ರಿಕೆಯೊಂದು ಕ್ರೈಸ್ತರ ಪತ್ರಿಕೆ ಬರುತ್ತಿದೆ ಎಂದೂ ಅಪಪ್ರಚಾರ ಆರಂಭಿಸಿತು. ನಂತರ ನಮ್ಮ ಮಾದರಿ ಪತ್ರಿಕೆ ಬಂದಾಗ ಅದನ್ನು ‘ಕ್ವೆಶ್ಚನ್ ಮಾರ್ಕ್’ ಪತ್ರಿಕೆ ಎಂದು ಲೇವಡಿ ಮಾಡಿ, ಅದರ ಭವಿಷ್ಯವೇ ಪ್ರಶ್ನಾರ್ಥಕವಾಗಿದೆ ಎಂದೆಲ್ಲಾ ವಿಷ ಕಾರಲು ಆರಂಭಿಸಿತು.

ಇದು ನಮ್ಮನ್ನು ವಿಚಲಿತಗೊಳಿಸಲಿಲ್ಲ. ನಮ್ಮ ಸಂಕಲ್ಪ ಇನ್ನಷ್ಟು ಗಟ್ಟಿಯಾಯಿತು. ಬಿಷಪ್ಸ್ ಹೌಸಿನಲ್ಲೇ ಚಾ, ಕಾಫಿ, ತಿಂಡಿ, ಹೊಟೇಲಿನಲ್ಲಿ ಊಟ, ಕೆಲವು ಸಲ ಅಲ್ಲೇ ಪೇಪರ್ ಹಾಸಿ ನಿದ್ದೆ. ಸ್ನಾನ ಮಾಡಿದರೆ ಉಂಟು, ಇಲ್ಲದಿದ್ದರೆ ಇಲ್ಲ. ಇದೆಲ್ಲ ನಡೆಯುವಾಗ ಇನ್ನೊಂದು ಕಡೆಯಲ್ಲಿ ಪ್ರೆಸ್ ಸ್ಥಾಪನೆ, ಕಚೇರಿಯ ಸಿದ್ಧತೆ, ಕಂಪ್ಯೂಟರ್ ಅಳವಡಿಕೆ ಇತ್ಯಾದಿ ಎಲ್ಲಾ ಕೆಲಸಗಳು  ಭರದಿಂದ ಸಾಗುತ್ತಿದ್ದರೂ, ಕೆಲಸ ಮುಗಿದಿರಲಿಲ್ಲ. ಅದಕ್ಕಾಗಿ ಬೇರೆಯೇ ತಂಡವಿದ್ದು, ಸಂಪಾದಕೀಯದ ನಮಗೆ ಅವರ ಪರಿಚಯವೇ ಇರಲಿಲ್ಲ. ಆಗ ನಮ್ಮನ್ನು ಸೇರಿಕೊಂಡವರು ಮುಂದೆ ಸಂಪಾದಕರಾದ ಬಾಲಕೃಷ್ಣ ಗಟ್ಟಿಯವರು. ಅದೇ ಹೊತ್ತಿಗೆ ನಮ್ಮ ಕೋರ್ ತಂಡಕ್ಕೆ ನೇಮಕಾತಿ ಪತ್ರವೂ ಸಿಕ್ಕಿತು. ನಾವು ಮಾನಸಿಕವಾಗಿ ಒಂದು ಹೊಸರೀತಿಯ ಪತ್ರಿಕೆ ತರಲು ಸಿದ್ಧರಾಗಿದ್ದೆವು.

ಮುಂದಿನ ಕುತೂಹಲಕಾರಿ ಬೆಳವಣಿಗೆಗಳನ್ನು ಮುಂದೆ ಹೇಳುವೆ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಆಂಧ್ರದಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಕಡಿತಗೊಳಿಸಿ ಮುಸ್ಲಿಮರಿಗೆ ನೀಡಲಾಗಿದೆ ಎಂಬ...

0
"ಮುಸ್ಲಿಂ ಮೀಸಲಾತಿಯನ್ನು ಜಾರಿಗೊಳಿಸಲು ಕಾಂಗ್ರೆಸ್ ಆಂಧ್ರ ಪ್ರದೇಶದಲ್ಲಿ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಕಡಿಮೆ ಮಾಡಿದೆ. ಇದೊಂದು ಪ್ರಮುಖ ಯೋಜನೆಯಾಗಿದ್ದು, ಇದನ್ನು ಇಡೀ ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್ ಬಯಸಿದೆ" ಎಂದು ಟೋಂಕ್‌ನಲ್ಲಿ ಮಂಗಳವಾರ (ಏ.23)...