ಬ್ರಿಟನ್‌ನಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶ ಪಡೆದಿದ್ದ’ಸಂತೋಷ್’ ಚಿತ್ರವನ್ನು ಭಾರತೀಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ನಿರ್ಬಂಧ ವಿಧಿಸಿದೆ ಎಂದು ವರದಿಯಾಗಿದೆ.
ಸಂಧ್ಯಾ ಸೂರಿ ನಿರ್ದೇಶನದ ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಈ ಚಿತ್ರದಲ್ಲಿ ಶಹಾನಾ ಗೋಸ್ವಾಮಿ ಸಾಂಸ್ಥಿಕ ಭ್ರಷ್ಟಾಚಾರವನ್ನು ತೋರಿಸುವ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ.
ವಿವಿಧ ಸುದ್ದಿ ವರದಿಗಳ ಪ್ರಕಾರ, ಸಿಬಿಎಫ್‌ಸಿ ಭಾರತದಲ್ಲಿ ಚಿತ್ರಕ್ಕೆ ಬಿಡುಗಡೆ ಪ್ರಮಾಣಪತ್ರ ನೀಡುವ ಮೊದಲು ‘ಹಲವು ದೃಶ್ಯಗಳಿಗೆ ಕತ್ತರಿ ಹಾಕುವಂತೆ’ ಸೂಚಿಸಿದೆ. ಪೊಲೀಸ್ ದೌರ್ಜನ್ಯವನ್ನು ಚಿತ್ರಿಸುವ ದೃಶ್ಯಗಳನ್ನು ಚಿತ್ರದಿಂದ ತೆಗೆದುಹಾಕಬೇಕೆಂದು ಕೇಳಲಾದ ದೃಶ್ಯಗಳ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇದು ಚಲನಚಿತ್ರ ನಿರ್ಮಾಪಕರು ಮತ್ತು ಸೆನ್ಸಾರ್ ಮಂಡಳಿಯ ನಡುವೆ ಬಿಕ್ಕಟ್ಟಿಗೆ ಕಾರಣವಾಗಿದೆ.
ಸಿಬಿಎಫ್‌ಸಿಯ ಸೂಚನೆ ಅಥವಾ ಬೇಡಿಕೆ ಬಗ್ಗೆ ದಿ ಗಾರ್ಡಿಯನ್‌ಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ ಚಿತ್ರದ ನಿರ್ದೇಶಕಿ ಸಂಧ್ಯಾ ಸೂರಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದು, ಈ ಪರಿಸ್ಥಿತಿಯನ್ನು ‘ಹೃದಯವಿದ್ರಾವಕ’ ಎಂದಿದ್ದಾರೆ.
“ಸಿಬಿಎಫ್‌ಸಿಯ ಬೇಡಿಕೆ ನಮಗೆ ಆಶ್ಚರ್ಯ ತಂದಿದೆ. ಆದರೆ, ಇದು ಭಾರತೀಯ ಚಿತ್ರಗಳಿಗೆ ಹೊಸತಲ್ಲ ಅಥವಾ ಇದುವರೆಗೆ ಯಾವುದೇ ಸಿನಿಮಾಗಳನ್ನು ಈ ರೀತಿಯ ಪರಿಸ್ಥಿತಿ ಎದುರಿಸಿಲ್ಲ ಎಂದು ನನಗೆ ಅನಿಸಿಲ್ಲ. ಸಿಬಿಎಫ್‌ಸಿ, ಚಿತ್ರದಲ್ಲಿ ಪೊಲೀಸ್ ದೌರ್ಜನ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ಹಲವಾರು ದೃಶ್ಯಗಳಿಗೆ ಕತ್ತರಿ ಹಾಕುವಂತೆ ನಮಗೆ ಸೂಚಿಸಿದೆ” ಎಂದು ಹೇಳಿದ್ದಾರೆ.
ಸಿಬಿಎಫ್‌ಸಿಯ ಬೇಡಿಕೆಗಳನ್ನು ಈಡೇರಿಸುವ ಬದಲು ಕಾನೂನು ಮಾರ್ಗದ ಮೂಲಕ ಹೋಗಿ ನ್ಯಾಯಾಲಯದಲ್ಲಿ ನಿರ್ಧಾರವನ್ನು ಪ್ರಶ್ನಿಸಲು ಸಿದ್ಧಳಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಚಿತ್ರದ ನಟಿ ಶಹಾನಾ ಗೋಸ್ವಾಮಿ ತಮ್ಮ ನಿರ್ದೇಶಕರು ಮತ್ತು ಚಿತ್ರ ತಂಡದ ನಿರ್ಧಾರವನ್ನು ಬೆಂಬಲಿಸಿದ್ದು, ಇಂಡಿಯಾ ಟುಡೇಗೆ ನೀಡಿದ ಹೇಳಿಕೆಯಲ್ಲಿ, “ನಾವು ಒಂದು ತಂಡವಾಗಿ ಸಿಬಿಎಫ್‌ಸಿ ಸೂಚಿಸಿದ ದೃಶ್ಯಗಳ ಕಡಿತ ಒಪ್ಪುವುದಿಲ್ಲ. ಏಕೆಂದರೆ ಅವು ಚಿತ್ರವನ್ನು ತುಂಬಾ ಬದಲಾಯಿಸುತ್ತವೆ. ಆದ್ದರಿಂದ ಭಾರತದಲ್ಲಿ ಚಿತ್ರಮಂದಿರಗಳಲ್ಲಿ ನಮ್ಮ ಚಿತ್ರ ಬಿಡುಗಡೆಯಾಗದಿರುವ ಬಿಕ್ಕಟ್ಟಿನಲ್ಲಿದೆ” ಎಂದು ಹೇಳಿದ್ದಾರೆ.
“ಸೆನ್ಸಾರ್ ಮಟ್ಟದಲ್ಲಿ ಅನುಮೋದನೆ ಪಡೆದಿರುವ ಚಿತ್ರವನ್ನು ಭಾರತದಲ್ಲಿ ಬಿಡುಗಡೆ ಮಾಡಲು ಇಷ್ಟೊಂದು ಕಡಿತ ಮತ್ತು ಬದಲಾವಣೆಗಳ ಅಗತ್ಯವಿರುವುದು ದುಃಖಕರ” ಎಂದು ಅವರು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ, ದೇವ್ ಪಟೇಲ್ ಅವರ ಚಿತ್ರ ‘ಮಂಕಿ ಮ್ಯಾನ್’ ಕೂಡ ಸಿಬಿಎಫ್‌ಸಿಯಿಂದ ಇದೇ ರೀತಿಯ ನಿರ್ಬಂಧಗಳನ್ನು ಎದುರಿಸಿತ್ತು. ಹಾಗಾಗಿ, ಅವರು ಕೂಡ ಭಾರತದಲ್ಲಿ ಥಿಯೇಟ್ರಿಕಲ್ ಬಿಡುಗಡೆಯ ಅವಕಾಶ ಪಡೆದಿರಲಿಲ್ಲ.
ಬ್ರಿಟಿಷ್-ಭಾರತೀಯ ನಿರ್ಮಾಪಕಿ ಸಂಧ್ಯಾ ಸೂರಿ ಅವರ ಕಥೆ ಮತ್ತು ನಿರ್ದೇಶನವನ್ನು ಹೊಂದಿರುವ ‘ಸಂತೋಷ್’ ಚಿತ್ರ ಉತ್ತರ ಭಾರತದ ಹಿನ್ನೆಲೆಯನ್ನು ಹೊಂದಿದ್ದು, ಪೋಲಿಸ್ ಪಡೆಗೆ ಸೇರ್ಪಡೆಗೊಂಡು ದಲಿತ ಯುವತಿಯ ಕೊಲೆ ಪ್ರಕರಣದ ತನಿಖೆ ನಡೆಸುವ ಯುವ ವಿಧವೆಯ ಪಾತ್ರಕ್ಕಾಗಿ ಅಂತಾರಾಷ್ಟ್ರೀಯ ಪ್ರಶಂಸೆಯನ್ನು ಗಳಿಸಿದೆ.
ಚಿತ್ರವು ಭಾರತೀಯ ಪೋಲಿಸ್ ಪಡೆಯಲ್ಲಿನ ಅತ್ಯಂತ ಹೀನ ಅಂಶಗಳ ಆಳವಾದ ಕಾಲ್ಪನಿಕ ಚಿತ್ರಣವಾಗಿದ್ದು, ಆಳವಾಗಿ ಬೇರೂರಿರುವ ಸ್ತ್ರೀದ್ವೇಷ, ದಲಿತರ ವಿರುದ್ಧದ ತಾರತಮ್ಯ ಹಾಗೂ ಪೋಲಿಸ್ ಅಧಿಕಾರಿಗಳಿಂದ ಸಾಮಾನ್ಯವಾಗಿ ನಡೆಯುವ ದೌರ್ಜನ್ಯ ಮತ್ತು ಹಿಂಸೆಯನ್ನು ಬಿಂಬಿಸಿದೆ. ಚಿತ್ರವು ಭಾರತದ, ವಿಶೇಷವಾಗಿ ದುರ್ಬಲ ವರ್ಗದ ಮಹಿಳೆಯರ ವಿರುದ್ಧ ಲೈಂಗಿಕ ಹಿಂಸಾಚಾರ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಮುಸ್ಲಿಮ್ ವಿರೋಧಿ ಪೂರ್ವಾಗ್ರಹವನ್ನು ಮುನ್ನೆಲೆಗೆ ತಂದಿದೆ.
ಯುಕೆಯಿಂದ ಆಸ್ಕರ್‌ಗೆ ಅಧಿಕೃತ ಪ್ರವೇಶದ ಜೊತೆಗೆ, ಈ ವರ್ಷದ ಅತ್ಯುತ್ತಮ ಚೊಚ್ಚಲ ನಿರ್ದೇಶನದ ಚಿತ್ರವಾಗಿ ಬಾಫ್ಟಾ ಪ್ರಶಸ್ತಿಗೆ ಸಂತೋಷ್ ನಿರ್ದೇಶನಗೊಂಡಿತ್ತು. ‘ಅಬ್ಸರ್ವರ್’ನಲ್ಲಿ ಫೈವ್ ಸ್ಟಾರ್ ರೇಟಿಂಗ್ ಒಳಗೊಂಡಂತೆ ಅತ್ಯುತ್ತಮ ವಿಮರ್ಶೆಗಳಿಗೆ ಪಾತ್ರವಾಗಿತ್ತು. ಚಿತ್ರದಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಿರುವ ಶಹನಾ ಗೋಸ್ವಾಮಿ ಇತ್ತಿಚಿಗೆ ಏಷ್ಯನ್ ಫಿಲ್ಮ್ ಅವಾರ್ಡ್ಸ್‌ಗಳ ಅತ್ತುತ್ತಮ ನಟಿ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.
IIFA 2025 | ವಿವಿಧ ವಿಭಾಗಗಳಲ್ಲಿ ‘ಲಾಪತಾ ಲೇಡಿಸ್’ ಚಿತ್ರಕ್ಕೆ ಪ್ರಶಸ್ತಿ


