ತಮಿಳುನಾಡು ಸರ್ಕಾರ ರಾಜ್ಯದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ -2020 (ಎನ್‌ಇಪಿ) ಮತ್ತು ಅದರ ‘ತ್ರಿಭಾಷಾ ಸೂತ್ರ’ವನ್ನು ಜಾರಿಗೊಳಿಸುವಂತೆ ನಿರ್ದೇಶಿಸಲು ಕೋರಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ (ಮೇ.9) ವಜಾಗೊಳಿಸಿದೆ.
ಸಂವಿಧಾನದ 32ನೇ ವಿಧಿಯಡಿಯಲ್ಲಿ ಯಾವುದೇ ರಾಜ್ಯ ಎನ್‌ಇಪಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿ ನ್ಯಾಯಾಲಯ ಯಾವುದೇ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಜೆ.ಬಿ. ಪಾರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರನ್ನೊಳಗೊಂಡ ಪೀಠ ಹೇಳಿದೆ.
ಜಿ.ಎಸ್ ಮಣಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಹೀಗೆ ಹೇಳಿದೆ:
“ರಾಜ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿ, 2020 ಅನ್ನು ಅಳವಡಿಸಿಕೊಳ್ಳಬೇಕೇ ಅಥವಾ ಬೇಡವೇ ಎಂಬುದು ಒಂದು ಸಂಕೀರ್ಣ ವಿಷಯವಾಗಿದೆ. ಸಂವಿಧಾನದ 32ನೇ ವಿಧಿಯ ಮೂಲಕ ಸುಪ್ರೀಂ ಕೋರ್ಟ್ ನಾಗರಿಕರ ಹಕ್ಕುಗಳನ್ನು ರಕ್ಷಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಿರ್ದೇಶನಗಳನ್ನು ನೀಡಬಹುದು. ಆದರೆ, ರಾಷ್ಟ್ರೀಯ ಶಿಕ್ಷಣ ನೀತಿ 2020ರಂತಹ ನೀತಿಯನ್ನು ಅಳವಡಿಸಿಕೊಳ್ಳಲು ರಾಜ್ಯವನ್ನು ನೇರವಾಗಿ ಒತ್ತಾಯಿಸಲು ಸಾಧ್ಯವಿಲ್ಲ. ಆದಾಗ್ಯೂ, ರಾಷ್ಟ್ರೀಯ ಶಿಕ್ಷಣ ನೀತಿಗೆ ಸಂಬಂಧಿಸಿದ ರಾಜ್ಯದ ಕ್ರಮ ಅಥವಾ ನಿಷ್ಕ್ರಿಯತೆಯು ಯಾವುದೇ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದರೆ ನ್ಯಾಯಾಲಯವು ಮಧ್ಯಪ್ರವೇಶಿಸಬಹುದು. ಈ ಅರ್ಜಿಯಲ್ಲಿ ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದ ಬಗ್ಗೆ ಪ್ರಸ್ತಾಪಿಸಿಲ್ಲ. ಹಾಗಾಗಿ, ಈ ಬಗ್ಗೆ ಪರಿಶೀಲಿಸಲು ಸೂಚಿಸುವ ಅಗತ್ಯವಿಲ್ಲ. ಅರ್ಜಿದಾರರು ತಮಿಳುನಾಡು ರಾಜ್ಯದವರಾಗಿರಬಹುದು. ಆದರೆ, ಅವರ ಸ್ವಂತ ಒಪ್ಪಿಗೆಯ ಮೇರೆಗೆ, ಅವರು ಈಗ ನವದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ, ಈ ಅರ್ಜಿಯನ್ನು ವಜಾಗೊಳಿಸಲಾಗಿದೆ.”
“ಪಿಐಎಲ್‌ನ ಮುಖ್ಯ ವಿಷಯವನ್ನು ನ್ಯಾಯಾಲಯವು ಸೂಕ್ತ ಕ್ರಮದಲ್ಲಿ ಪರಿಶೀಲಿಸಬಹುದು” ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ.
ಅಲ್ಲದೆ, ತಕ್ಷಣ ವಿಷಯವನ್ನು ಕೈಗೆತ್ತಿಕೊಂಡಿದೆ. ಈ ವೇಳೆ ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಿದ್ದ ಅರ್ಜಿದಾರರನ್ನು, “ನೀವು ಯಾರು? ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ನಿಮಗೆ ಏಕೆ ಕಾಳಜಿ ಅಥವಾ ಯಾವ ರೀತಿಯ ಕಾಳಜಿ? ಎಂದು ಪೀಠ ಪ್ರಶ್ನಿಸಿದೆ.
ಅದಕ್ಕೆ ಉತ್ತರಿಸಿದ ಅರ್ಜಿದಾರ, “ತಾನು ತಮಿಳುನಾಡಿನವನು, ಈಗ ದೆಹಲಿಯಲ್ಲಿ ನೆಲೆಸಿದ್ದೇನೆ. ಹಿಂದಿ ಕಲಿಸುವುದಿಲ್ಲ ಎಂಬ ತಮಿಳುನಾಡಿನ ನೀತಿಯಿಂದಾಗಿ, ತನಗೆ ಸುಲಭವಾಗಿ ಹಿಂದಿ ಕಲಿಯಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪಾರ್ದಿವಾಲಾ ಅವರು, “ಈಗ ದೆಹಲಿಯಲ್ಲಿ ಇದ್ದೀರಲ್ವ ಹಿಂದಿ ಕಲಿಯಿರಿ” ಎಂದು ಹೇಳಿದ್ದಾರೆ. ಈ ಮೂಲಕ ತಮಿಳುನಾಡಿನಲ್ಲಿ ಎನ್‌ಇಪಿಗೆ ಜಾರಿಗೆ ನಿರ್ದೇಶನ ನೀಡಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ 2020ರಲ್ಲಿ ಜಾರಿಗೆ ತಂದ ರಾಷ್ಟ್ರೀಯ ಶಿಕ್ಷಣ ನೀತಿ ಅಥವಾ ಹೊಸ ಶಿಕ್ಷಣ ನೀತಿಯನ್ನು (ಎನ್‌ಇಪಿ) ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ತಮಿಳುನಾಡು ಸರ್ಕಾರ ಹೇಳಿದೆ. ಎನ್‌ಇಪಿಯ ತ್ರಿಭಾಷ ಸೂತ್ರ ಹಿಂದಿ ಹೇರಿಕೆಯ ಪ್ರಯತ್ನ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ವಿರೋಧ ವ್ಯಕ್ತಪಡಿಸಿದ್ದಾರೆ.


