ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆ ಹೈದರಾಬಾದ್‌ನ ‘ಕರಾಚಿ ಬೇಕರಿ’ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ.
ಬಿಜೆಪಿ ಕಾರ್ಯಕರ್ತರ ಗುಂಪು ‘ಭಾರತ್ ಮಾತಾಕಿ ಜೈ’ ಎಂಬ ಘೋಷಣೆ ಕೂಗುತ್ತಾ ಹೈದರಾಬಾದ್‌ನ ಶಂಶಾಬಾದ್‌ನಲ್ಲಿರುವ ಕರಾಚಿ ಬೇಕರಿಯ ಶಾಖೆ ಮೇಲೆ ದಾಳಿ ಮಾಡಿದ್ದಾರೆ. ಮೇ. 10, ಶನಿವಾರ ಈ ಘಟನೆ ನಡೆದಿದೆ.
ಪಾಕಿಸ್ತಾನದ ನಗರ ಕರಾಚಿಯ ಹೆಸರನ್ನು ಹೊಂದಿರುವ ಕರಾಚಿ ಬೇಕರಿಯನ್ನು 1953ರಲ್ಲಿ ಖಾನ್‌ಚಂದ್ ರಾಮನಾನಿ ಎಂಬ ಸಿಂಧಿ ಹಿಂದೂ ವ್ಯಕ್ತಿ ಸ್ಥಾಪಿಸಿದರು, ಅವರು ದೇಶ ವಿಭಜನೆಯ ಸಮಯದಲ್ಲಿ ಭಾರತಕ್ಕೆ ವಲಸೆ ಬಂದವರು. ಪ್ರಸ್ತುತ ರಾಮನಾನಿ ಅವರ ಮೊಮ್ಮಕ್ಕಳಾದ ಹರೀಶ್ ಮತ್ತು ರಾಜೇಶ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.
ಕೇಸರಿ ಶಾಲು ಧರಿಸಿ, ಕೈಯಲ್ಲಿ ಭಾರತದ ರಾಷ್ಟ್ರಧ್ವಜ ಹಿಡಿದುಕೊಂಡ ಪುರುಷರ ಗುಂಪೊಂದು ಕೋಲುಗಳಿಂದ ‘ಕರಾಚಿ ಬೇಕರಿ’ಯ ಸೈನ್ ಬೋರ್ಡ್‌ಗೆ ಹೊಡೆದು ಹಾನಿಗೊಳಿಸಿದ ವಿಡಿಯೋ ಸಾಮಾಜಿಕ ಮಾಧ್ಯಗಳಲ್ಲಿ ವೈರಲ್ ಆಗಿದೆ.
పాకిస్తాన్ ని ఏమి చేయలేక కారాచి బేకరీ మీద తమ ప్రతాపం చూపిస్తున్న బీజేపీ భక్త్తులు. #KarachiBakery
— Warrior YSRCP (@Vamsee007) May 11, 2025
“ಭಾರತ್ ಮಾತಾಕಿ ಜೈ”, “ಪಾಕಿಸ್ತಾನ್ ಮುರ್ದಾಬಾದ್” ಮತ್ತು “ಜೈ ಜವಾನ್” ಎಂಬ ಘೋಷಣೆಗಳನ್ನು ದಾಳಿ ನಡೆಸಿದವರು ಕೂಗಿದ್ದಾರೆ.
HUNGAMA NEAR KARACHI BAKERY SHAMSHABAD:BJP Leaders Vandalised "Karachi" Name from Bakery Signboard,In Shamshabad Municipality limits, BJP leaders staged a protest in front of a bakery named "KarachiBakery,"demanding the removal of the word "Karachi" from its signboard.#Hyderabad pic.twitter.com/G2sVkwFETs
— Arbaaz The Great (@ArbaazTheGreat1) May 11, 2025
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ಶಂಶಾಬಾದ್ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ (ಆರ್‌ಜಿಐ) ವಿಮಾನ ನಿಲ್ದಾಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಕೆ. ಬಾಲರಾಜು, “ಬೇಕರಿ ಮೇಲೆ ದಾಳಿ ಮಾಡಿದವರು ಬಿಜೆಪಿ ಬೆಂಬಲಿಗರು. ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಹೆಚ್ಚಿನ ದಾಳಿ ತಡೆದಿದ್ದಾರೆ. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 126 ಮತ್ತು ಆಸ್ತಿ ಹಾನಿಗೆ ಸಂಬಂಧಿಸಿದ ಇತರ ಸೆಕ್ಷನ್‌ಗಳಡಿಯಲ್ಲಿ ಅವರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
‘ಕರಾಚಿ ಬೇಕರಿ’ಯನ್ನು ಬಲಪಂಥೀಯರು ಈ ಹಿಂದೆಯೂ ಗುರಿ ಮಾಡಿದ್ದರು. ಪಾಕಿಸ್ತಾನದ ಹೆಸರನ್ನು ಬದಲಾಯಿಸುವಂತೆ ಅದರ ಮಾಲೀಕರಿಗೆ ಒತ್ತಡ ಹೇರುತ್ತಿದ್ದರು. ಇತ್ತೀಚೆಗೆ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾದ ಬಳಿಕ, ತಮ್ಮ ಸಂಸ್ಥೆಗೆ ರಕ್ಷಣೆ ಒದಗಿಸುವಂತೆ ಕರಾಚಿ ಬೇಕರಿಯ ಮಾಲೀಕರು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ. ಜಿತೇಂದರ್ ಅವರಿಗೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಬೇಕರಿ ಮೇಲೆ ದಾಳಿ ನಡೆದಿದೆ.
ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಸೃಷ್ಟಿಯಾದ ಬಳಿಕ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಹೇಳಿಕೆಯೊಂದನ್ನು ನೀಡಿದ್ದ ಕರಾಚಿ ಬೇಕರಿ, “ನಾವು ಹೆಮ್ಮೆಯಿಂದ ಭಾರತೀಯರು. ನಮ್ಮ ಹೆಸರು ನಮ್ಮ ಇತಿಹಾಸದ ಭಾಗವಾಗಿದೆ, ನಮ್ಮ ರಾಷ್ಟ್ರೀಯತೆಯಲ್ಲ” ಎಂದು ಹೇಳಿಕೊಂಡಿತ್ತು.
View this post on Instagram
ಹೈದರಾಬಾದ್ ಸೇರಿದಂತೆ ತೆಲಂಗಾಣದ ಪ್ರಮುಖ ನಗರಗಳು ಮತ್ತು ಇತರ ರಾಜ್ಯಗಳಲ್ಲಿ ವ್ಯಾಪಿಸಿರುವ ಕರಾಚಿ ಬೇಕರಿ, ಬಿಸ್ಕೇಟ್ ಮತ್ತು ಇತರ ಕರಿದ ತಿಂಡಿಗಳಿಗೆ ಪ್ರಸಿದ್ದಿಯನ್ನು ಪಡೆದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಹೈದರಾಬಾದ್‌ನ ಬಲಪಂಥೀಯ ಗುಂಪುಗಳ ಸದಸ್ಯರು ಹಲವಾರು ಕರಾಚಿ ಬೇಕರಿ ಮಳಿಗೆಗಳ ಸೈನ್‌ಬೋರ್ಡ್‌ಗಳಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾಕುತ್ತಿದ್ದಾರೆ. ವಿಶಾಖಪಟ್ಟಣಂನ ಬಲಪಂಥೀಯ ಗುಂಪು ಕೂಡ ಮೇ 6 ರಂದು ಅಂಗಡಿಯೊಂದರಲ್ಲಿ ಪ್ರತಿಭಟನೆಗೆ ಕರೆ ನೀಡಿತ್ತು, ಸಂಸ್ಥೆಯು ಕರಾಚಿ ಎಂಬ ಹೆಸರನ್ನು ಬದಲಾಯಿಸಲು ಒತ್ತಾಯಿಸಿತ್ತು.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಕುರಿತ ಟ್ರೋಲ್ ವಿರೋಧಿಸಿದ ಅಸಾದುದ್ದೀನ್ ಓವೈಸಿ


