ಶಿಕ್ಷಕರ ಹಾಜರಾತಿ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಮುಂತಾದವುಗಳಿಗೆ ಮುಖ ಚಹರೆ ಗುರುತಿಸುವಿಕೆ (ಎಫ್‌ಆರ್‌ಎಸ್) ಕಡ್ಡಾಯಗೊಳಿಸಿರುವುದನ್ನು ಕೈಬಿಡಲು ವಿವಿಧ ಕ್ಷೇತ್ರದ ತಜ್ಞರು ಒತ್ತಾಯಿಸಿದರು.
ಮಂಗಳವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘ ಹಾಗೂ ಭಾರತ ಜ್ಞಾನ ವಿಜ್ಞಾನ ಸಮಿತಿ ಜಂಟಿಯಾಗಿ ಮುಖ ಚಹರೆ ಗುರುತಿಸುವಿಕೆ ವ್ಯವಸ್ಥೆಯ ಅನುಷ್ಠಾನದಿಂದ ಆಹಾರ ಮತ್ತು ಶಿಕ್ಷಣದ ಹಕ್ಕಿನ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಆಯೋಜಿಸಿದ್ದ ಸಮಾಲೋಚನಾ ಸಭೆಯಲ್ಲಿ ಎಫ್‌ಆರ್‌ಎಸ್ ಜಾರಿಗೆ ವಿರೋಧ ವ್ಯಕ್ತವಾಯಿತು.
ಒಂದೆಡೆ, ಕೇಂದ್ರ ಸರ್ಕಾರ ಪಿಎಂ-ಪೋಷಣ್ ಯೋಜನೆಯಡಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರ ನೀಡಲು ಮುಖ ಚಹರೆ ಗುರುತಿಸುವಿಕೆ ವ್ಯವಸ್ಥೆ ಜಾರಿಗೊಳಿಸಿದೆ. ಮತ್ತೊಂದೆಡೆ, ರಾಜ್ಯ ಸರ್ಕಾರವು ಎಫ್‌ಆರ್‌ಎಸ್ ಜಾರಿಗೆ ತರುವ ಮುನ್ನ ಸಾರ್ವಜನಿಕ ಚರ್ಚೆಗಳನ್ನಾಗಲೀ, ಪಾಲುದಾರರ ಅಭಿಪ್ರಾಯವನ್ನಾಗಲಿ ಆಲಿಸಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು. ಚಿಂತಕರು, ಸಾಮಾಜಿಕ ಹೋರಾಟಗಾರರು, ವಕೀಲರು, ಸ್ವತಂತ್ರ ತಂತ್ರಾಂಶ ಹೋರಾಟಗಾರರು ಮತ್ತು ನಾಗರಿಕ ಸಮಾಜದ ಪ್ರತಿನಿಧಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ಆಹಾರ ಹಕ್ಕು ಕಾರ್ಯಕರ್ತೆ ಮತ್ತು ಶಿಕ್ಷಣ ತಜ್ಞೆ ಡಾ. ದೀಪಾ ಸಿನ್ಹಾ, ಸಮಗ್ರ ಶಿಶು ಅಭಿವೃದ್ಧಿ ಸೇವೆಗಳಲ್ಲಿ (ಐಸಿಡಿಎಸ್) ಮುಖ ಚಹರೆ ಗುರುತಿಸುವಿಕೆ ಪರಿಚಯಿಸುತ್ತಿರುವುದು ಸಾಮಾಜಿಕ ಭದ್ರತಾ ಯೋಜನೆಗಳ ಮೇಲೆ ನಡೆಸಲಾಗುತ್ತಿರುವ ಸರಣಿ ದಾಳಿಗಳಲ್ಲಿನ ಒಂದು. ಎಸ್‌ಎನ್‌ಪಿ ಮತ್ತು ಟೇಕ್ ಹೋಮ್ ರೇಷನ್‌ಗಳ ಗುಣಮಟ್ಟ ಕುಸಿಯುತ್ತಿದೆ. ಈ ಸಮಸ್ಯೆಯನ್ನು ಬಗೆಹರಿಸಲು ಮೀಸಲಿಟ್ಟಿರುವ ಬಜೆಟ್ ಹೆಚ್ಚಿಸುವ ಬದಲು, ಎಫ್‌ಆರ್‌ಎಸ್ ಹೆಸರಿನಲ್ಲಿ ಫಲಾನುಭವಿಗಳನ್ನು ಹೊರದೂಡುವ ಮಾರ್ಗಗಳನ್ನು ಸರ್ಕಾರ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಾಪಕ ಡಾ. ರಾಜೇಂದ್ರನ್ ನಾರಾಯಣನ್ ಮಾತನಾಡಿ, ಎಫ್‌ಆರ್‌ಎಸ್ ಒಂದು ಕಣ್ಣಾವಲು ವ್ಯವಸ್ಥೆಯಾಗಿದೆ. ಇದನ್ನು ಮೊಟ್ಟ ಮೊದಲು ರೂಪಿಸಿ, ಜಾರಿಗೊಳಿಸಿದ ಸ್ಕ್ಯಾನ್ ಫ್ರಾನ್ಸಿಸ್ಕೋದಲ್ಲಿಯೇ ಈ ತಂತ್ರಜ್ಞಾನವನ್ನು ಬಳಸದಿರಲು ನಿರ್ಣಯ ಕೈಗೊಳ್ಳಲಾಗಿದೆ. ಹೀಗಿರುವಾಗ ಇದನ್ನು ನಮ್ಮ ಹಳ್ಳಿಗಳಲ್ಲೇಕೆ ಜಾರಿಗೊಳಿಸಬೇಕು ಎಂದು ಪ್ರಶ್ನಿಸಿದರು. ಎಫ್‌ಆರ್‌ಎಸ್ ಯೋಜನೆಯು ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಮತ್ತು ಘನತೆಯ ಸಾಂವಿಧಾನಿಕ ಮೌಲ್ಯಗಳ ಮೇಲಿನ ದಾಳಿಯೂ ಆಗಿದೆ ಎಂದು ಹೇಳಿದರು.
ಅಖಿಲ ಕರ್ನಾಟಕ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಮಾತನಾಡಿ, ಸಾರ್ವತ್ರಿಕವಾಗಿರಬೇಕಾದ ಐಸಿಡಿಎಸ್ ಯೋಜನೆಯನ್ನು ಕೆಲವೇ ಕೆಲವು ಫಲಾನುಭವಿಗಳಿಗೆ ಸೀಮಿತಗೊಳಿಸುವ ಹುನ್ನಾರ ಇದಾಗಿದೆ. ಎಫ್‌ಆರ್‌ಎಸ್ ವ್ಯವಸ್ಥೆಯನ್ನು ಜಾರಿಗೆ ತರುವಲ್ಲಿ ಬಹಳ ಸಮಸ್ಯೆಗಳು ತಲೆದೋರಿದ್ದು, ಅದನ್ನು ಜಾರಿಗೆ ತರಲು ಸಾಧ್ಯವಾಗದ ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಇಲಾಖೆಯು ಕ್ರಮಗಳನ್ನು ಜರುಗಿಸಲು ಮುಂದಾಗಿದೆ. ಅಲ್ಲದೇ, ಎಫ್‌ಆರ್‌ಎಸ್ ಯೋಜನೆಯು ಅಂಗನವಾಡಿ ನೌಕರರ ಕೆಲಸದ ಒತ್ತಡವನ್ನು ಅತೀವವಾಗಿ ಹೆಚ್ಚಿಸಿದೆ ಎಂದರು.
ವಕೀಲ ವಿನಯ್ ಶ್ರೀನಿವಾಸ್ ಮಾತನಾಡಿ, ಈಗ ಜಾರಿಗೊಳಿಸಲಾಗುತ್ತಿರುವ ಎಫ್‌ಆರ್‌ಎಸ್ ತಂತ್ರಜ್ಞಾನವು ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಗೌಪ್ಯತೆಯ ಹಕ್ಕಿನ ಕುರಿತಾದ ಸುಪ್ರೀಂ ಕೋರ್ಟ್ ತೀರ್ಪುನ್ನು ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ತಿಳಿಸಿದರು.
ಸ್ಥಳೀಯ ಪೂರೈಕೆ ಸರಪಳಿ (Local Supply Chain)ಗಳನ್ನು ಮುರಿದು, ಫೋರ್ಟಿಫೈಡ್ ಆಹಾರದ ಕಡೆಗೆ ದಾಪುಗಾಲಿಡಲು ಡೇಟಾವನ್ನು ಎಫ್‌ಆರ್‌ಎಸ್ ಮೂಲಕ ಸಂಗ್ರಹಿಸಲಾಗುತ್ತಿದೆ ಎಂಬುದರ ಬಗ್ಗೆ ಮತ್ತು ಡೇಟಾ ಗೌಪ್ಯತೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಫ್ರೀ ಸಾಫ್ಟ್‌ವೇರ್ ಮೂವ್‌ಮೆಂಟ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ನವೀನ್ ಮಾತನಾಡಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದ ಉಪಾಧ್ಯಕ್ಷ ಶುಭಂಕರ್ ಚಕ್ರವರ್ತಿ ಮಾತನಾಡಿ, ಶಿಕ್ಷಕರ ಹಾಜರಾತಿಯನ್ನು ಟ್ರ್ಯಾಕ್ ಮಾಡಲು ಶಿಕ್ಷಣ ಇಲಾಖೆಯು ಜುಲೈ 1ರಿಂದ ಎಫ್‌ಆರ್‌ಎಸ್ ಪರಿಚಯಿಸಿದೆ. ಅತ್ಯಂತ ಕಡಿಮೆ ಶಿಕ್ಷಕರ ಗೈರುಹಾಜರಿ ಪ್ರಮಾಣ ಹೊಂದಿರುವ ಕರ್ನಾಟಕದಲ್ಲಿ ಇಂತಹ ಯೋಜನೆಗಳ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು. ನಾಗರಿಕ ಸಮಾಜವು ಈ ಬಗ್ಗೆ ಒಗ್ಗೂಡಿ ಎಫ್‌ಆರ್‌ಎಸ್ ತಂತ್ರಜ್ಞಾನದ ಅನುಷ್ಠಾನದ ವಿರುದ್ಧ ಹೋರಾಡಬೇಕು ಎಂದು ಅವರು ಕರೆ ನೀಡಿದರು.
ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾದ ಮಗು ಮತ್ತು ಕಾನೂನು ಕೇಂದ್ರದ ಸುಧಾ, ಬೆಂಗಳೂರಿನ ಸಿವಿಕ್ ಸಂಸ್ಥೆಯ ಕಾತ್ಯಾಯಿನಿ ಚಾಮರಾಜ್ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಧರ್ಮಸ್ಥಳ ಸುದ್ದಿ ಪ್ರಕಟಿಸದಂತೆ ತಡೆ: ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಯೂಟ್ಯೂಬ್ ಚಾನೆಲ್


