ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ (ಆ.8) ಲೋಕಸಭೆಯಲ್ಲಿ ಆದಾಯ ತೆರಿಗೆ ಮಸೂದೆ- 2025 ಅನ್ನು ಹಿಂತೆಗೆದುಕೊಂಡಿದ್ದಾರೆ.
ಈ ಮಸೂದೆಗೆ ಸಂಬಂಧಿಸಿದಂತೆ ಪರಿಶೀಲನಾ ಸಮಿತಿಯು ಸೂಚಿಸಿರುವ ಬದಲಾವಣೆಗಳನ್ನು ಸೇರ್ಪಡೆಗೊಳಿಸಿದ ನಂತರ, ಸರ್ಕಾರವು ಆ.11ರಂದು ಮತ್ತೆ ಮಂಡಿಸಲಿದೆ ಎಂದು ವರದಿಯಾಗಿದೆ.
ಮಸೂದೆಯಲ್ಲಿ ಇರುವ ಗೊಂದಲಗಳನ್ನು ನಿವಾರಿಸಿ, ಬದಲಾವಣೆಗಳನ್ನು ಸೇರಿಸಿ ಹೊಸದಾಗಿ ಮಂಡಿಸಲು ಹಿಂಪಡೆಯಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಆರು ದಶಕಗಳಷ್ಟು ಹಳೆಯದಾದ 1961ರ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸುವ ಉದ್ದೇಶದಿಂದ ಆದಾಯ ತೆರಿಗೆ ಮಸೂದೆಯನ್ನು 2025ರ ಫೆಬ್ರವರಿ 13ರಂದು ಲೋಕಸಭೆಯಲ್ಲಿ ಮಂಡಿಸಲಾಗಿತ್ತು ಮತ್ತು ಅದನ್ನು ಪರಿಶೀಲನಾ ಸಮಿತಿಗೆ ಕಳುಹಿಸಲಾಗಿತ್ತು.
ಬಿಜೆಪಿ ಸಂಸದ ಬೈಜಯಂತ್ ಪಾಂಡಾ ಅಧ್ಯಕ್ಷತೆಯ ಪರಿಶೀಲನಾ ಸಮಿತಿಯಲ್ಲಿ 31 ಸದಸ್ಯರಿದ್ದರು.
ಧಾರ್ಮಿಕ ಮತ್ತು ದತ್ತಿ ಟ್ರಸ್ಟ್‌ಗಳಿಗೆ ನೀಡುವ ಅನಾಮಧೇಯ ದೇಣಿಗೆಗಳ ಮೇಲಿನ ತೆರಿಗೆ ವಿನಾಯಿತಿಯನ್ನು ಹೊಸ ಕಾನೂನಿನಲ್ಲಿ ಮುಂದುವರಿಸುವುದು, ತೆರಿಗೆದಾರರು ಯಾವುದೇ ದಂಡ ಶುಲ್ಕವನ್ನು ಪಾವತಿಸದೆ ಐಟಿಆರ್ ಸಲ್ಲಿಸುವ ಅಂತಿಮ ದಿನಾಂಕದ ನಂತರವೂ ಟಿಡಿಎಸ್ ಮರುಪಾವತಿಯನ್ನು ಪಡೆಯಲು ಅವಕಾಶ ನೀಡುವುದು ಸೇರಿದಂತೆ ಮಸೂದೆಯಲ್ಲಿ ಹಲವು ಬದಲಾವಣೆಗಳನ್ನು ಪರಿಶೀಲನಾ ಸಮಿತಿ ಸೂಚಿಸಿದೆ ಎಂದು ವರದಿಗಳು ಹೇಳಿವೆ.
ಹೊಸ ಮಸೂದೆಯಲ್ಲಿ ಸರ್ಕಾರವು ಲಾಭರಹಿತ ಸಂಸ್ಥೆಗಳಿಗೆ (NPOs)ಧಾರ್ಮಿಕ ಟ್ರಸ್ಟ್‌ಗಳು ಪಡೆಯುವ ಅನಾಮಧೇಯ ದೇಣಿಗೆಗಳಿಗೆ ತೆರಿಗೆ ವಿಧಿಸುವುದರಿಂದ ವಿನಾಯಿತಿ ನೀಡಿದೆ.
ಆದರೆ, ಆಸ್ಪತ್ರೆಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುವಂತಹ ಇತರ ದತ್ತಿ ಕಾರ್ಯಗಳನ್ನು ನಡೆಸುವ ಧಾರ್ಮಿಕ ಟ್ರಸ್ಟ್ ಪಡೆಯುವ ದೇಣಿಗೆಗಳಿಗೆ ತೆರಿಗೆ ವಿಧಿಸಲಾಗುತ್ತದೆ ಎಂದು ವರದಿಯಾಗಿದೆ.


