ತನಿಖಾ ದಾಖಲೆಗಳು ಮತ್ತು ಇತರ ಸಾರ್ವಜನಿಕ ದಾಖಲೆಗಳಲ್ಲಿ ಜಾತಿ ದಾಖಲಿಸುವುದನ್ನು ನಿಲ್ಲಿಸಲು ಪೊಲೀಸ್ ಕೈಪಿಡಿಗಳನ್ನು ತಿದ್ದುಪಡಿ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ ಎಂದು ಬಾರ್ ಮತ್ತು ಬೆಂಚ್ ಶನಿವಾರ (ಸೆ.20) ವರದಿ ಮಾಡಿದೆ.
ನ್ಯಾಯಮೂರ್ತಿ ವಿನೋದ್ ದಿವಾಕರ್ ಅವರಿದ್ದ ಪೀಠವು, ವಾಹನಗಳ ಮೇಲೆ ಜಾತಿ ಆಧಾರಿತ ಘೋಷಣೆಗಳು ಮತ್ತು ಗುರುತು ಫಲಕಗಳನ್ನು ನಿಷೇಧಿಸಲು ಕೇಂದ್ರ ಮೋಟಾರು ವಾಹನ ನಿಯಮಗಳಲ್ಲಿ ಬದಲಾವಣೆಗಳನ್ನು ತರುವಂತೆಯೂ ಮತ್ತು ನಿರ್ದೇಶನಗಳನ್ನು ಪಾಲಿಸಲು ವಿಫಲರಾದ ವಾಹನ ಮಾಲೀಕರಿಗೆ ದಂಡ ವಿಧಿಸುವಂತೆಯೂ ಹೇಳಿದೆ.
ಪೊಲೀಸ್ ಅರ್ಜಿಗಳಲ್ಲಿ ಜಾತಿ ದಾಖಲಿಸುವುದನ್ನು ತೆಗೆದುಹಾಕಲು ಆದೇಶಿಸುವಾಗ, ತಂದೆ ಮತ್ತು ಗಂಡನ ಹೆಸರಿನೊಂದಿಗೆ ತಾಯಿಯ ಹೆಸರಿನ ಜಾಗ ಸೇರಿಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೆ, ಪೊಲೀಸ್ ಠಾಣೆಗಳ ಸೂಚನಾ ಫಲಕಗಳಿಂದ ಜಾತಿ ಕಾಲಂಗಳನ್ನು ತೆಗೆದುಹಾಕುವಂತೆಯೂ ಆದೇಶಿಸಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, 1989ರ ಅಡಿಯಲ್ಲಿ ಕಾನೂನುಬದ್ಧವಾಗಿ ಜಾತಿ ಘೋಷಣೆ ಅಗತ್ಯವಿರುವ ಸಂದರ್ಭಗಳಲ್ಲಿ ಮಾತ್ರ ವಿನಾಯಿತಿಗಳು ಅನ್ವಯಿಸುತ್ತವೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ಈ ನಿರ್ದೇಶನಗಳನ್ನು ಪಾಲಿಸುವುದು ಉತ್ತರ ಪ್ರದೇಶ ಸರ್ಕಾರಕ್ಕೆ ಕಡ್ಡಾಯವಾಗಿದೆ. ಪ್ರಕರಣದಲ್ಲಿ ಪಕ್ಷವಾಗಿರದ ಕೇಂದ್ರಕ್ಕೆ ಆಯ್ಕೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.
ವಿಚಾರಣೆಯ ಸಮಯದಲ್ಲಿ, ಆರೋಪಿಗಳನ್ನು ಜಾತಿಯಿಂದ ಗುರುತಿಸುವುದರಿಂದ ಗೊಂದಲ ನಿವಾರಣೆಯಾಗುತ್ತದೆ ಎಂಬ ಪೊಲೀಸರ ಹೇಳಿಕೆಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಬಾಡಿ ಕ್ಯಾಮರಾ, ಬೆರಳಚ್ಚು, ಆಧಾರ್ ಕಾರ್ಡ್ ಸಂಖ್ಯೆ, ಮೊಬೈಲ್ ನಂಬರ್ ಮತ್ತು ಪೋಷಕರ ವಿವರಗಳಂತಹ ಆಧುನಿಕ ಸಾಧನಗಳು ನಿಖರವಾದ ಗುರುತಿಸುವಿಕೆಗೆ ಅವಕಾಶ ಮಾಡಿಕೊಡುತ್ತದೆ ಎಂದು ಹೇಳಿದೆ.
21ನೇ ಶತಮಾನದಲ್ಲೂ ಪೊಲೀಸರು ಗುರುತಿನ ಸಾಧನವಾಗಿ ಜಾತಿಯನ್ನು ಅವಲಂಬಿಸಿರುವುದು ‘ದುರದೃಷ್ಟಕರ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜಾತಿ ವ್ಯವಸ್ಥೆ ಹೊಂದಿರುವ ಭಾರತೀಯ ಸಮಾಜದಲ್ಲಿ ಪೊಲೀಸ್ ದಾಖಲೆಗಳಂತಹ ವಿಷಯಗಳಲ್ಲಿ ಜಾತಿ ಮತ್ತು ಧರ್ಮವನ್ನು ಉಲ್ಲೇಖಿಸುವುದು ಸಾಮಾಜಿಕ ವಿಭಜನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ. ಹಾಗಾಗಿ, ಈ ಪದ್ಧತಿಯನ್ನು ಪುನರ್ವಿಮರ್ಶೆ ಮಾಡುವ ಅಗತ್ಯವಿದೆ ಎಂದು ನ್ಯಾಯಾಲಯವು ಒತ್ತಿ ಹೇಳಿದೆ.
ಕಾನೂನು ಜಾರಿ ಸಂಸ್ಥೆಗಳೂ ಕೂಡ ಸಾಮಾಜಿಕ ಪಕ್ಷಪಾತಗಳಿಂದ ಮುಕ್ತವಾಗಿಲ್ಲ. ಹೀಗಿರುವಾಗ, ತನಿಖೆ ಮತ್ತು ಕಾನೂನು ಜಾರಿಯಲ್ಲಿ ನಿಷ್ಪಕ್ಷಪಾತತೆ ಅಗತ್ಯವಾಗಿದೆ. ಕಾನೂನಿಗೆ ಅಗತ್ಯವಿಲ್ಲದೆ ಜಾತಿ ದಾಖಲಿಸುವುದು ಅಥವಾ ಘೋಷಿಸುವುದು ಗುರುತಿನ ಪ್ರೊಫೈಲಿಂಗ್‌ಗೆ ಸಮನಾಗಿರುತ್ತದೆ. ಇದು ಪೂರ್ವಾಗ್ರಹವನ್ನು ಬಲಪಡಿಸುತ್ತದೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
‘ಜಾತಿ ಗುರುತಿಸುವಿಕೆ ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುತ್ತವೆ’
ಸಾರ್ವಜನಿಕ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಜಾತಿ ಗುರುತಿಸುವಿಕೆ ಮತ್ತೆ ಕಾಣಿಸಿಕೊಳ್ಳುತ್ತಿದೆ. ಇದು ಸಾಂವಿಧಾನಿಕ ಮೌಲ್ಯಗಳನ್ನು ದುರ್ಬಲಗೊಳಿಸುವ ಸಾಮಾಜಿಕ ಶಕ್ತಿಯ ಸಂಕೇತೀಕೃತ ಪ್ರತಿಪಾದನೆಯಾಗಿದೆ ಎಂದು ನ್ಯಾಯಾಲಯ ಹೇಳಿರುವುದಾಗಿ ಬಾರ್ ಮತ್ತು ಬೆಂಚ್ ವರದಿ ಮಾಡಿದೆ.
“ಉತ್ತರ ಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಬಿಹಾರದ ಕೆಲವು ಭಾಗಗಳಲ್ಲಿ, ವ್ಯಕ್ತಿಗಳು ಸಾಮಾನ್ಯವಾಗಿ ತಮ್ಮ ಕಾರು, ಬೈಕ್ ಮತ್ತು ಕೆಲವೊಮ್ಮೆ ಮನೆಗಳನ್ನು ಎಚ್ಚರಿಕೆಗಳೊಂದಿಗೆ ಗುರುತಿಸುತ್ತಾರೆ”
ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಯುವಕರು ತಮ್ಮ ಜಾತಿಯನ್ನು ಹೆಮ್ಮೆಯಿಂದ ತೋರಿಸುತ್ತಾರೆ ಮತ್ತು ಜಾತಿಗೆ ಸಂಬಂಧಿಸಿದ ದೊಡ್ಡತನವನ್ನೋ ಅಥವಾ ಆಕ್ರಮಣಕಾರಿ ವರ್ತನೆಯನ್ನೋ ಒಳ್ಳೆಯದೆಂದು ಬಿಂಬಿಸುತ್ತಾರೆ. ಇದರ ಜೊತೆಗೆ, ಕೆಲವು ಹಳೆಯ ಆಚಾರ-ವಿಚಾರಗಳನ್ನು (ಉದಾಹರಣೆಗೆ, ಗೌರವದ ಸಂಹಿತೆ) ಅವರು ಬೆಂಬಲಿಸುತ್ತಾರೆ ಎಂದ ನ್ಯಾಯಾಲಯ, ಇದನ್ನು ಗಂಭೀರವಾದ ಸಮಸ್ಯೆಯೆಂದು ಗುರುತಿಸಿದೆ.
ಇಂತಹ ನಡವಳಿಕೆಯು ಹಳೆಯ ಶ್ರೇಣೀಕೃತ ವ್ಯವಸ್ಥೆ ಮತ್ತು ಆಧುನಿಕ ಅಭದ್ರತೆಗಳನ್ನು ಪ್ರತಿಬಿಂಬಿಸುತ್ತದೆ. ಸಾಂವಿಧಾನಿಕ ನೈತಿಕತೆಯನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಜಾತಿಯನ್ನು ಮಹಿಮೆಗೊಳಿಸುವ ಅಥವಾ ದ್ವೇಷವನ್ನು ಉಂಟುಮಾಡುವ ಆನ್‌ಲೈನ್ ವಿಷಯಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲು, ಮಾಹಿತಿ ತಂತ್ರಜ್ಞಾನ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ ನಿಯಮಗಳು, 2021 ಅನ್ನು ಬಲಪಡಿಸುವ ಅಗತ್ಯವಿದೆ ಎಂದು ತಿಳಿಸಿದೆ.
ಈ ಆದೇಶದ ಪ್ರತಿಯನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಹಂಚಿಕೊಳ್ಳುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.


