ತಮಿಳುನಾಡಿನ ಕರೂರಿನಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ರ್‍ಯಾಲಿ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಸಾವಿಗೀಡಾದವರ ಸಂಖ್ಯೆ 39ಕ್ಕೆ ಏರಿಕೆಯಾಗಿದೆ. ಈ ಪೈಕಿ 35 ಮೃತದೇಹಗಳ ಗುರುತು ಪತ್ತೆಯಾಗಿದೆ ಎಂದು ವರದಿಗಳು ಹೇಳಿವೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಚಾರ ಆರಂಭಿಸಿರುವ ಟಿವಿಕೆ ಮುಖ್ಯಸ್ಥ, ನಟ ವಿಜಯ್ ಕರೂರಿನಲ್ಲಿ ಶನಿವಾರ (ಸೆ.27) ಬೃಹತ್ ರ್‍ಯಾಲಿ ಆಯೋಜಿಸಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಈ ರ್‍ಯಾಲಿಯಲ್ಲಿ ಸೇರಿದ್ದರು. ಈ ವೇಳೆ ಕಾಲ್ತುಳಿತ ದುರಂತ ಸಂಭವಿಸಿದೆ ಎಂದು ವರದಿಯಾಗಿದೆ.
ಶನಿವಾರ ರಾತ್ರಿಯೇ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕರೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳನ್ನು ಭೇಟಿ ಮಾಡಿದ್ದಾರೆ. ಇದೇ ವೇಳೆ ಮೃತರ ಕುಟುಂಬಸ್ಥರಿಗೂ ಸಾಂತ್ವನ ಹೇಳಿದ್ದಾರೆ.
ಮೃತರ ಕುಟುಂಬಸ್ಥರಿಗೆ ತಲಾ 10 ಲಕ್ಷ ರೂ. ಮತ್ತು ಗಾಯಾಳುಗಳಿಗೆ ತಲಾ 1 ಲಕ್ಷ ರೂ. ಪರಿಹಾರವನ್ನು ಸಿಎಂ ಘೋಷಣೆ ಮಾಡಿದ್ದಾರೆ.
இரவு முழுவதும் உயிரிழந்தவர்களின் குடும்பத்தினர் சிந்திய கண்ணீரும், அவர்களது துக்கம் நிறைந்த அழுகுரல் ஏற்படுத்திய வலியும் என் நெஞ்சத்திலிருந்து அகலவில்லை… #KarurTragedy pic.twitter.com/Z9K2TZs7NW
— M.K.Stalin – தமிழ்நாட்டை தலைகுனிய விடமாட்டேன் (@mkstalin) September 28, 2025
ದುರಂತದ ಬಗ್ಗೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶೆ ಅರುಣಾ ಜಗದೀಶನ್ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗವನ್ನು ರಚಿಸುವುದಾಗಿಯೂ ಸ್ಟಾಲಿನ್ ಘೋಷಿಸಿದ್ದಾರೆ.
ದುರಂತದ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, “ಇದು ಅತ್ಯಂತ ದುಖಃದ ವಿಷಯ. ಭರಿಸಲಾಗದ ನಷ್ಟ” ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿರುವ ತಮಿಳುನಾಡಿನ ಡಿಜಿಪಿ (ಪ್ರಭಾರ) ಆರ್ ವೆಂಕಟರಾಮನ್, “ಘಟನೆಯಲ್ಲಿ 39 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ 35 ಮೃತದೇಹಗಳನ್ನು ಗುರುತಿಸಲಾಗಿದ್ದು, ನಾಲ್ಕು ಮೃತದೇಹಗಳ ಗುರುತು ಪತ್ತೆಯಾಗಿಲ್ಲ” ಎಂದು ಹೇಳಿದ್ದಾರೆ.
ಸುಮಾರು 111 ಮಂದಿ ಗಾಯಗೊಂಡಿದ್ದು, ಕರೂರು ಸರ್ಕಾರಿ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಐ ಲವ್ ಮುಹಮ್ಮದ್’ ವಿವಾದ: ದೇಶದಾದ್ಯಂತ 3000ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲು


