ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಸೆಪ್ಟೆಂಬರ್ 30ರಂದು ಪ್ರಕಟಿಸಿದ ವರದಿಯ ಪ್ರಕಾರ, ವರದಕ್ಷಿಣೆ ಸಂಬಂಧಿತ ಅಪರಾಧಗಳ ಪ್ರಕರಣಗಳು 2023ರಲ್ಲಿ ಶೇ. 14ರಷ್ಟು ಹೆಚ್ಚಾಗಿದ್ದು, ದೇಶದಾದ್ಯಂತ 15,000ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು ಒಂದು ವರ್ಷದಲ್ಲಿ 6,100ಕ್ಕೂ ಅಧಿಕ ಮಹಿಳೆಯರ ಸಾವುಗಳು ವರದಿಯಾಗಿವೆ.
ಎನ್‌ಸಿಆರ್‌ಬಿಯ ‘ಭಾರತದಲ್ಲಿ ಅಪರಾಧ- 2023’ ವರದಿಯು 2023ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ 15,489 ಪ್ರಕರಣಗಳು ದಾಖಲಾಗಿವೆ ಎಂದು ಹೇಳಿದೆ. ಈ ಕಾಯ್ದೆ ಅಡಿ 2022ರಲ್ಲಿ 13,479 ಮತ್ತು 2021ರಲ್ಲಿ 13,568 ಪ್ರಕರಣಗಳು ದಾಖಲಾಗಿದ್ದವು.
ಕಾಯ್ದೆಯಡಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು 7,151 ಪ್ರಕರಣಗಳು ದಾಖಲಾಗಿದ್ದು, ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಬಿಹಾರ (3,665) ಮತ್ತು ಕರ್ನಾಟಕ (2,322) ಇವೆ.
ಪಶ್ಚಿಮ ಬಂಗಾಳ, ಗೋವಾ, ಅರುಣಾಚಲ ಪ್ರದೇಶ, ಲಡಾಖ್ ಮತ್ತು ಸಿಕ್ಕಿಂ ಸೇರಿದಂತೆ ಹದಿಮೂರು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗ 2023ರಲ್ಲಿ ಶೂನ್ಯ ವರದಕ್ಷಿಣೆ ಪ್ರಕರಣಗಳನ್ನು ವರದಿ ಮಾಡಿವೆ.
2023ರಲ್ಲಿ ವರದಕ್ಷಿಣೆ ಸಂಬಂಧಿತ ಪ್ರಕರಣಗಳಲ್ಲಿ ಒಟ್ಟು 6,156 ಮಹಿಳೆಯರು ಪ್ರಾಣ ಕಳೆದುಕೊಂಡಿದ್ದಾರೆ.
2,122 ಸಾವು ಪ್ರಕರಣಗಳೊಂದಿಗೆ ಇದರಲ್ಲೂ ಉತ್ತರ ಪ್ರದೇಶದ ಮೊದಲ ಸ್ಥಾನದಲ್ಲಿದೆ. 1,143 ಸಾವು ಪ್ರಕರಣಗಳೊಂದಿಗೆ ಬಿಹಾರ ಎರಡನೇ ಸ್ಥಾನದಲ್ಲಿದೆ. 2023ರಲ್ಲಿ ದೇಶದಾದ್ಯಂತ ನಡೆದ ಒಟ್ಟು ಕೊಲೆ ಪ್ರಕರಣಗಳಲ್ಲಿ 833 ಕೊಲೆಗಳಿಗೆ ವರದಕ್ಷಿಣೆ ಕಾರಣ ಎಂದು ವರದಿ ಹೇಳಿದೆ.
ವರದಕ್ಷಿಣೆ ನಿಷೇಧ ಕಾಯ್ದೆಯಡಿಯಲ್ಲಿ, 2023ರಲ್ಲಿ 83,327 ಪ್ರಕರಣಗಳು ವಿಚಾರಣೆಗೆ ಬಂದಿದ್ದು, ಹಿಂದಿನ ವರ್ಷಗಳ 69,434 ಪ್ರಕರಣಗಳನ್ನು ಮುಂದುವರಿಸಲಾಗಿದೆ. ಇದೇ ವರ್ಷ ಕಾಯ್ದೆಯಡಿಯಲ್ಲಿ 22,316 ಪುರುಷರು ಮತ್ತು 4,838 ಮಹಿಳೆಯರು ಸೇರಿ 27,154 ಜನರನ್ನು ಬಂಧಿಸಲಾಗಿದೆ.
ಗುಜರಾತ್| ದಲಿತ ಯುವತಿಯನ್ನು ಗರ್ಬಾ ಕಾರ್ಯಕ್ರಮದಿಂದ ಹೊರಗೆ ಕಳಿಸಿ ಅವಮಾನ; ದೂರು ದಾಖಲು


