ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆಂಬ ಸುದ್ದಿಯೊಂದು ಹರಿದಾಡುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಹಾಗೂ ಖರ್ಗೆಯವರ ಖಾಸಾ ಶಿಷ್ಯರೂ ಆಗಿರುವ ಶರಣಪ್ರಕಾಶ್ ಪಾಟೀಲ್ ಅವರು ಈ ಸಾಧ್ಯತೆಯನ್ನು ತಳ್ಳಿಹಾಕಿದ್ದಾರಾದರೂ ಹಲವು ಕಾಂಗ್ರೆಸ್ಸಿಗರೇ ಆ ಸಾಧ್ಯತೆಯನ್ನು ಬಲವಾಗಿ ನಂಬಿದ್ದಾರೆ. ಇದರ ಹಿಂದಿನ ಲಾಜಿಕ್ಕು ಈ ಸಾಧ್ಯತೆಗೆ ಪುಷ್ಠಿ ನೀಡುತ್ತಿವೆ.
ಮೊದಲನೆಯದಾಗಿ, ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಬೇಕಿರುವುದು ಕಾಂಗ್ರೆಸ್‍ಗೆ ಜೀವನ್ಮರಣದ ಪ್ರಶ್ನೆ. ಹಾಗಾಗಿ, ಗೆಲ್ಲಲೇಬೇಕು ಎಂಬ ಅನಿವಾರ್ಯತೆ ಇದ್ದುದರಿಂದ ಪಕ್ಷದಲ್ಲಿ ಗೆಲ್ಲುವವರು ಯಾರೇ ಇದ್ದರೂ ಸರಿ ತಂದು ಚುನಾವಣೆಗೆ ನಿಲ್ಲಿಸಬೇಕೆಂದು ಹೈಕಮಾಂಡ್ ಯೋಚಿಸುತ್ತಿದೆ. ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧಿಸಿದರೆ ಗೆದ್ದೇ ಗೆಲ್ಲುತ್ತಾರೆ ಎಂಬುದು ಸಾಮಾನ್ಯ ಜ್ಞಾನ.

ಎರಡನೆಯದಾಗಿ, ಮಲ್ಲಿಕಾರ್ಜುನ ಖರ್ಗೆಯವರ ಮಗ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ಪ್ರವಾಸೋದ್ಯಮ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಈ ಬಾರಿ ಚಿತ್ತಾಪುರ ಕ್ಷೇತ್ರದಿಂದ ಗೆಲ್ಲುವುದು ಕಷ್ಟ ಎಂಬ ಅಭಿಪ್ರಾಯವಿದೆ. ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರ ವಿಶ್ವಾಸವನ್ನು ಜ್ಯೂನಿಯರ್ ಖರ್ಗೆ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಹಾಗಾಗಿ, ಚಿತ್ತಾಪುರ ಕ್ಷೇತ್ರದಿಂದ ತಾವೇ ನಿಂತರೆ ಈ ಎಲ್ಲಾ ಅಸಮಾಧಾನಗಳು ಇರುವುದಿಲ್ಲ. ಪಕ್ಷದ ಹಿರಿಯ, ಕಿರಿಯ ನಾಯಕರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿ ತಮ್ಮನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಸೀನಿಯರ್ ಖರ್ಗೆಗೂ ಇದೆ.
ಮೂರನೆಯದಾಗಿ, ಒಂದು ವೇಳೆ ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿ ಜೆಡಿಎಸ್ ಬೆಂಬಲದೊಂದಿಗೆ ಸರ್ಕಾರ ರಚಿಸುವ ಅನಿವಾರ್ಯತೆ ಕಾಂಗ್ರೆಸ್ಸಿಗೆ ಬಂದರೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಲು ದೇವೇಗೌಡರಾಗಲೀ, ಕುಮಾರಸ್ವಾಮಿಯವರಾಗಲಿ. ಸುತರಾಂ ಒಪ್ಪುವುದಿಲ್ಲ. ಅಂಥಾ ಸನ್ನಿವೇಶದಲ್ಲಿ ಖರ್ಗೆಯವರು ಮುಂಚೂಣಿಯಲ್ಲಿದ್ದರೆ ಉಭಯರಿಗೂ ಅನುಕೂಲ. ಹೀಗಾದರೆ ಒಂದೆಡೆ ದೇವೇಗೌಡರನ್ನೂ ತೃಪ್ತಿಪಡಿಸಿದಂತಾಗುತ್ತದೆ, ದಲಿತ ಮುಖ್ಯಮಂತ್ರಿಯ ಬಹುದಿನದ ಬೇಡಿಕೆಯನ್ನು ಈಡೇರಿಸಿ ದಲಿತರ ನಡುವಿನ ಬೇಸ್ ಗಟ್ಟಿಗೊಳಿಸಿದಂತಾಗುತ್ತದೆ.
ರಾಜಕೀಯದಲ್ಲಿ ಅಸಾಧ್ಯ ಎಂಬುದು ಯಾವುದೂ ಇಲ್ಲ. ಖರ್ಗೆ ಮತ್ತು ಹೈಕಮಾಂಡ್ ನಡೆಯ ಮೇಲೆ ಈ ರಾಜಕೀಯ ಲೆಕ್ಕಾಚಾರ ನಿಂತಿದೆ ಎನ್ನಲಾಗಿದೆ.

ಈ ಲೆಕ್ಕಾಚಾರ ಒಂದೆಡೆಯಾದರೆ, ಖರ್ಗೆಯವರ ಮಗನ ರಾಜಕೀಯ ಭವಿಷ್ಯವೇನು ಎಂಬುದು ಮತ್ತೊಂದು ಜಟಿಲ ಪ್ರಶ್ನೆ. ಅದಕ್ಕೂ ಒಂದು ಪರ್ಯಾಯ ಯೋಜನೆ ಸಿದ್ಧವಾಗಿದೆ. ಅದು ಗುಲ್ಬರ್ಗಾ ಗ್ರಾಮೀಣ ಕ್ಷೇತ್ರ. ಅದೂ ಕೂಡ ಚಿತ್ತಾಪುರದಂತೆಯೇ ಎಸ್‍ಸಿ ಮೀಸಲು ಕ್ಷೇತ್ರ. ಅಲ್ಲಿ ಕಳೆದ ಬಾರಿ ಬಿಜೆಪಿ, ಕೆಜೆಪಿ ಪಕ್ಷಗಳ ಮತವಿಭಜನೆಯಿಂದಾಗಿ ಕಾಂಗ್ರೆಸ್ಸಿನ ರಾಮಕೃಷ್ಣ ಗೆದ್ದಿದ್ದರು. ಅವರಿಗೆ ವಯಸ್ಸಾಗಿದೆ, ಆರೋಗ್ಯವೂ ಸರಿಯಿಲ್ಲ. ಅವರು ಈ ಬಾರಿ ಚುನಾವಣಾ ಕಣದಲ್ಲೂ ಇಲ್ಲ. ಅವರ ಮಗ ಟಿಕೆಟ್ ಆಕಾಂಕ್ಷಿಯಾಗಿದ್ದರೂ ತಂದೆಗಿದ್ದ ಜನಬೆಂಬಲ ಮಗನಿಗಿಲ್ಲ. ಹೀಗಾಗಿ, ಪ್ರಿಯಾಂಕ ಖರ್ಗೆಯನ್ನು ಅಲ್ಲಿಗೆ ತಂದರೆ ಅವರು ಒಮ್ಮತದ ಅಭ್ಯರ್ಥಿಯಾಗಿಬಿಡುತ್ತಾರೆ. ಅಲ್ಲಿ ಬಿಜೆಪಿ, ಕೆಜೆಪಿ ಒಂದಾಗಿದ್ದರೂ ಮೂವರು ಟಿಕೆಟ್ ಆಕಾಂಕ್ಷಿಗಳು ಪರಸ್ಪರ ಪೈಪೋಟಿಯ ಹಿನ್ನೆಲೆಯಲ್ಲಿ ಖರ್ಗೆ ಪುತ್ರನ ಹಾದಿ ಸುಗಮವಾಗಲಿದೆ. ರೇವುನಾಯಕ ಬೆಳಮಗಿಗೆ ಟಿಕೆಟ್ ಖಾತರಿಯಾಗಲಿದ್ದು ಉಳಿದವರು ಬಂಡಾಯವೇಳುವ ಸಾಧ್ಯತೆಯಿದೆ. ಬಿಜೆಪಿಯ ಈ ಬಂಡಾಯವನ್ನು ಉಪಯೋಗಿಸಿಕೊಳ್ಳುವುದಕ್ಕೂ ಪ್ರಿಯಾಂಕ್ ಖರ್ಗೆ ಸ್ಪರ್ಧೆ ಕಾಂಗ್ರೆಸ್ಸಿಗೆ ನೆರವಾಗಲಿದೆಯೆಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ. ರಾಜಕಾರಣದ ಒಳಸುಳಿಗಳೇ ಹೀಗೆ.


