Homeಮುಖಪುಟಯಡಿಯೂರಪ್ಪನವರ ಮೊಗದಲ್ಲಿ ದುರಂತ ನಾಯಕನ ಗೆರೆಗಳು

ಯಡಿಯೂರಪ್ಪನವರ ಮೊಗದಲ್ಲಿ ದುರಂತ ನಾಯಕನ ಗೆರೆಗಳು

- Advertisement -
- Advertisement -

ಈ ಬಾರಿಯ ವಿಧಾನ ಸಭಾ ಚುನಾವಣೆ ನಂತರ ಬಿ.ಎಸ್ ಯಡಿಯೂರಪ್ಪನವರ ಕತೆ ಏನಾಗಲಿದೆ! ಇಂತಹದೊಂದು ಪ್ರಶ್ನೆ ಇವತ್ತು ಬಿಜೆಪಿಯ ಒಳಗೂಹೊರಗೂ ಚರ್ಚೆಯಾಗುತ್ತಿದೆ. ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಈ ಬಾರಿ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಡುವಿಲ್ಲದ ಓಡಾಟದಲ್ಲಿ ತೊಡಗಿಕೊಂಡಿರುವ ಯಡಿಯೂರಪ್ಪನವರಿಗೂ ಈ ಚುನಾವಣೆಯ ನಂತರ ತಮ್ಮ ಭವಿಷ್ಯ ಏನಾಗಲಿದೆ ಎಂಬ ಆತಂಕವಿರುವಂತಿದೆ. ಯಡಿಯೂರಪ್ಪನವರ ರಾಜಕೀಯ ನಡೆಯನ್ನು ಗಮನಿಸುತ್ತಾ ಬಂದವರಿಗೆಲ್ಲಾ ಚುನಾವಣೆ ಮುಗಿಯುವಷ್ಟರಲ್ಲಿ ಬಿಎಸ್‍ವೈ ದುರಂತ ನಾಯಕನಾಗಿ ಹೊರಹೊಮ್ಮುವ ಸಾಧ್ಯತೆಯೇ ಹೆಚ್ಚಾಗಿ ಕಂಡುಬರುತ್ತಿದೆ.

ನಿಜ ಹೇಳಬೇಕೆಂದರೆ, ಯಡಿಯೂರಪ್ಪ ಇವತ್ತು ಈ ಮಟ್ಟಕ್ಕೆ ಬಂದು ನಿಲ್ಲಲು ಸಿಕ್ಕಾಪಟ್ಟೆ ಬೆವರಿಳಿಸಿದ್ದಾರೆ. ಇಲ್ಲದೇ ಹೋಗಿದ್ದರೆ ಮಂಡ್ಯ ಸೀಮೆಯ ಬೂಕನಕೆರೆಯ ಆಸಾಮಿ ವಯಾ ಶಿಕಾರಿಪುರ ದಾಟಿ ವಿಧಾನಸೌಧ ಸಿಎಂ ಕುರ್ಚಿಯ ಮೇಲೆಯೇ ಕೂರಲು ಸಾಧ್ಯವಾಗುತ್ತಿರಲಿಲ್ಲ. ಒಂದು ಜೀವ ವಿರೋಧಿ ಸಿದ್ಧಾಂತದ ಜೊತೆ ರಾಜಕೀಯವಾಗಿ ಬೆಳೆದು ಬಂದರೂ ಯಡಿಯೂರಪ್ಪ ಫುಲ್‍ಟೈಂ ಕೋಮುವಾದಿಯಾಗಿ ಮೈದಳೆಯದೆ ಹೋರಾಟಗಾರ ಎಂಬ ಇಮೇಜು ದಕ್ಕಿಸಿಕೊಳ್ಳಲು ಪಟ್ಟ ಪಡಿಪಾಟಲುಗಳು ಅಷ್ಟಿಷ್ಟಲ್ಲ. ಇದೇ ಕಾರಣಕ್ಕೆ ಆರೆಸ್ಸೆಸ್‍ಗೆ ಯಡಿಯೂರಪ್ಪ ಅಂದ್ರೆ ಅಷ್ಟಕ್ಕಷ್ಟೆ. ನಿಜವಾದರೂ ಯಡಿಯೂರಪ್ಪ ತಮ್ಮದೇ ಹೋರಾಟ ವರ್ಚಸ್ಸು ಬೆಳೆಸಿಕೊಂಡವರು ಹಾಗೂ ಅದಕ್ಕಾಗಿ ಅಪಾರ ದೈಹಿಕ ಶ್ರಮ ಹಾಕಿದವರು ಎಂಬುದನ್ನು ಒಪ್ಪಲೇಬೇಕು.

ದಕ್ಷಿಣ ಭಾರತದ ಯಾವ ರಾಜ್ಯಗಳಲ್ಲೂ ಏಳಿಗೆ ಕಾಣಲಾಗದ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಕೇಂದ್ರದ ಹತ್ತಿರದಲ್ಲಿದೆ ಎಂದರೆ ಅದರಲ್ಲಿ ಯಡಿಯೂರಪ್ಪನವರ ಪಾಲು ದೊಡ್ಡದೇ ಇದೆ. ಕರ್ನಾಟಕದಲ್ಲಿ ಸಂಘಪರಿವಾರ ಲಾಠಿ ತಿರುಗಿಸುತ್ತಾ, ಜನರ ತಲೆ ಕೆಡಿಸುತ್ತಾ ಕೋಮುವಾದಿ ರಾಜಕಾರಣದ ಮೂಲಕ ತನ್ನ ಹೆಜ್ಜೆ ಗುರುತು ಮೂಡಿಸುತ್ತಾ ಬರುತ್ತಿತ್ತಾದರೂ ಅದಕ್ಕೊಂದು ಜನಪರ ರಾಜಕೀಯ ಮುಖ ದೊರೆತದ್ದು ಯಡಿಯೂರಪ್ಪನಿಂದಲೇ. ಸಂಘ ಪರಿವಾರ ಕೂಡಾ ಕೊಂಚಮಟ್ಟಿಗೆ ತನ್ನೆಲ್ಲಾ ಅಜೆಂಡಾಗಳನ್ನ ತೆರೆಹಿಂದಕ್ಕೆ ತಳ್ಳಿ ಯಡಿಯೂರಪ್ಪನ ಬೆನ್ನಿಗೆ ನಿಂತಿತು. ಬಿಜೆಪಿಗೆ ಕರ್ನಾಟಕದಲ್ಲಿ ಒಂದು ನೆಲೆ ಸಿಕ್ಕಿದ್ದೇ ಆಗ.

ಅಂತಹ ಯಡಿಯೂರಪ್ಪ ಇವತ್ತು ತಮಗಿಂತ ರಾಜಕೀಯದಲ್ಲಿ ಕಿರಿಯರಾದ ಹಾಗೂ ಜನಸಾಮಾನ್ಯರ ಪರವಾದ ಯಾವ ಹೋರಾಟಗಳಲ್ಲೂ ತೊಡಗಿಸಿಕೊಳ್ಳದ ನರೇಂದ್ರಮೋದಿ ಮತ್ತು ಅಮಿತ್ ಶಾ ಜೋಡಿಯ ಎದುರು ನಡುಬಗ್ಗಿಸಿ ನಿಂತು ಮತ್ತೊಮ್ಮೆ ಮುಖ್ಯಮಂತ್ರಿ ಮಾಡಿ ಎಂಬುದಾಗಿ ಯಾಚಿಸುತ್ತಿರುವುದನ್ನು ಗಮನಿಸಿದರೆ ಈ ಚುನಾವಣೆ ನಂತರ ಅವರ ಗತಿ ಏನಾಗಲಿದೆ ಎಂಬುದನ್ನು ಊಹಿಸುವುದು ಕಷ್ಟವಾಗಲಾರದು.

ತಮ್ಮ ರಾಜಕೀಯ ಹಿರಿತನವನ್ನು ಬಳಸಿಕೊಂಡು ಸೆಟೆದು ನಿಲ್ಲಲೂ ಆಗದೆ, ಮೋದಿ-ಶಾ ಜೋಡಿಯ ಹುಕುಂಗಳನ್ನು ಚಾಚೂ ತಪ್ಪದೇ ಪಾಲಿಸಿಕೊಂಡು ತೆಪ್ಪಗಿರಲೂ ಆಗದೆ ಯಡಿಯೂರಪ್ಪ ತಮ್ಮ ರಾಜಕೀಯ ಚಹರೆಯನ್ನೇ ಕಳೆದುಕೊಳ್ಳತೊಡಗಿದ್ದಾರೆ.

ತಾನು ಮದುವೆಯಾದ ಪತ್ನಿಯ ಕುಟುಂಬದ ಆಸ್ತಿಯನ್ನು ಕಬಳಿಸಿದವರು, ವಿರೋಧ ಪಕ್ಷದಲ್ಲಿದ್ದುಕೊಂಡೆ ಬ್ಲಾಕ್‍ಮೇಲ್ ರಾಜಕಾರಣ ಮಾಡಿದವರು ಇತ್ಯಾದಿ ಆರೋಪಗಳನ್ನೆಲ್ಲ ನಗಣ್ಯವಾಗಿಸಿ ಯಡಿಯೂರಪ್ಪ ಬಿಜೆಪಿಯ ಏಕಮಾತ್ರ ನಾಯಕನಾಗಿ ಬೆಳೆಯಲು ಕಾರಣವಾದುದು ಅವರ ಹೋರಾಟದ ಸೋಗಿನ ಚಟುವಟಿಕೆಗಳೇ ಕಾರಣವಾಗಿದ್ದವು. ಆದರೆ ಕುಟುಂಬ ರಾಜಕಾರಣ ಮತ್ತು ಅಧಿಕಾರದ ಹಪಾಹಪಿ ಇವತ್ತು ಅವರನ್ನು ರಾಜಕೀಯವಾಗಿ ದೈನೇಸಿ ಸ್ಥಿತಿಗೆ ತಂದು ನಿಲ್ಲಿಸಿರುವುದನ್ನು ಗಮನಿಸಿದರೆ ಅವರ ಹಿಂದಿನದೆಲ್ಲಾ ಹೋರಾಟದ ಚಟುವಟಿಕೆಗಳ ಹಿಂದಿದ್ದ ಕಾಳಜಿಯೇ ಪ್ರಶ್ನಾರ್ಥವಾಗತೊಡಗುತ್ತದೆ.

ಯಡಿಯೂರಪ್ಪ 6 ಬಾರಿ ಶಿಕಾರಿಪುರ ಶಾಸಕರಾಗಿ ಗೆದ್ದವರು, ಬಿಜೆಪಿ ರಾಜ್ಯಾಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿದ್ದವರು. ಹಾಲಿ ಸಂಸದರೂ ಹೌದು. ಅಷ್ಟಾಗಿಯೂ ಅವರ ಸ್ವಂತ ಜಿಲ್ಲೆಯಲ್ಲೂ ಯಡಿಯೂರಪ್ಪರ ಅಭಿಪ್ರಾಯ ಪಕ್ಷದ ಟಿಕೇಟ್ ನೀಡುವಲ್ಲಿ ಪರಿಗಣನೆಯಾಗುತ್ತಿಲ್ಲ ಎನ್ನುವುದಾದರೆ ಬಿಜೆಪಿಯಲ್ಲಿ ಯಡಿಯೂರಪ್ಪ ಕತೆ ಏನಾಗಿದೆ ಎಂಬುದನ್ನು ಯಾರು ಬೇಕಾದರು ಊಹಿಸಬಹುದು. ಯಡಿಯೂರಪ್ಪ ಕತೆ ಮಾತ್ರವಲ್ಲ. ಸಂಘಪರಿವಾರದ ಮುದ್ದಿನ ಕೂಸುಮರಿಯಾದ ಕೆ.ಎಸ್.ಈಶ್ವರಪ್ಪ ತಮ್ಮ ಸ್ವಂತ ಕ್ಷೇತ್ರಕ್ಕೆ ಟಿಕೆಟ್ ಪಡೆಯಲು ಏನೆಲ್ಲ ಹೋರಾಟ-ಹಾರಾಟ ಮಾಡಬೇಕಾಯಿತು ಎಂಬುದನ್ನು ಗಮನಿಸಿದರೆ ಮೋದಿ-ಶಾ ಜೋಡಿ ಬಿಜೆಪಿಯ ರಾಜ್ಯ ನಾಯಕಮಣಿಗಳನ್ನು ಹೇಗೆ ಕಸಕ್ಕಿಂತ ಕಡೆಯಾಗಿ ಪರಿಗಣಿಸಿದೆ ಎಂಬುದು ತಿಳಿಯುತ್ತೆ. ಅದಿರಲಿ, ಈ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮಾಡಿಕೊಂಡ ಹಳವಂಡಗಳು, ಭ್ರಷ್ಟಾಚಾರ, ಜೈಲು, ಮಕ್ಕಳ ಹುಚ್ಚಾಟ, ಮಾಡಿದ ಸಾವಿರಾರು ಕೋಟಿ ಆಸ್ತಿ ಇವೆಲ್ಲವುಗಳಿಂದ ಸೃಷ್ಟಿಯಾದ ವೈಯಕ್ತಿಕ ಇಕ್ಕಟ್ಟು-ಬಿಕ್ಕಟ್ಟಿನಿಂದ ಪಾರಾಗುವುದಕ್ಕೆಂದೇ ಮರಳಿ ಬಿಜೆಪಿ ಸೇರಿದ್ದು. ಹೀಗೆ ಮರಳಿ ಬಂದಿರುವ ಯಡಿಯೂರಪ್ಪ ಬಿಜೆಪಿಯ ವರಿಷ್ಠರಾದ ಮೋದಿ ಶಾ ಜೋಡಿಗೆ ಯೂಸ್ ಅಂಡ್ ಥ್ರೋ ಐಟಂ ಅಷ್ಟೆ! ಈ ಸಲದ ಅಸೆಂಬ್ಲಿ ಎಲೆಕ್ಷನ್‍ನಲ್ಲಿ ಗೆಲ್ಲಬೇಕೆನ್ನುವುದು ಅವರ ಮೋದಿ-ಶಾ ಜೋಡಿಯ ಉದ್ದೇಶವಾದರೂ ಅದಕ್ಕಿಂತಲೂ ಹೆಚ್ಚಾಗಿ 2019ರ ಎಲೆಕ್ಷನ್ ಮೇಲೂ ಅವರ ಕಣ್ಣಿದೆ. ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಹೆಚ್ಚು ಸೀಟು ಕಬಳಿಸುವುದಕ್ಕೆಂದೇ ಅವರೆಲ್ಲ ಲೆಕ್ಕಾಚಾರಗಳು ನಡೆಯುತ್ತಿವೆ. ಯಡಿಯೂರಪ್ಪ ಹೊರತಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಒಂದಿಷ್ಟು ನಿರ್ದಿಷ್ಟ ಮತಗಳನ್ನು ತರಬಲ್ಲ ಯಾವ ನಾಯಕನೂ ಇಲ್ಲವೇ ಇಲ್ಲ.

ಯಡಿಯೂರಪ್ಪರನ್ನು ಹದ್ದುಬಸ್ತಿನಲ್ಲಿ ಇಡಬೇಕೆಂಬ ಉದ್ದೇಶದಿಂದಲೇ ಸಂಘಪರಿವಾರ ಈಶ್ವರಪ್ಪ ಮೂಲಕ ರಾಯಣ್ಣ ಬ್ರಿಗೇಡ್ ಹುಟ್ಟುವಂತೆ ನೋಡಿಕೊಂಡದ್ದು ಈಗ ರಹಸ್ಯವಾಗೇನೂ ಉಳಿದಿಲ್ಲ. ಈಶ್ವರಪ್ಪನಿಗೆ ಶಿವಮೊಗ್ಗದಲ್ಲಿ ಬಿಜೆಪಿ ಟಿಕೆಟ್ ಪಡೆಯಲೋಸುಗವಾದರೂ ಹಿಂದುಳಿದ ನಾಯಕನೆಂದು ಯಡಿಯೂರಪ್ಪನವರೆದುರು ಗುಟರಿಕೆ ಹಾಕಲು ಸಕಾರಣವೊಂದು ಬೇಕಾಗಿತ್ತು. ಇಂಥಾ ಕ್ಷೀಣ ಉದ್ದೇಶ ಇದ್ದುದರಿಂದಲೇ ರಾಯಣ್ಣ ಬ್ರಿಗೇಡು ಸಿಎಂ ಸಿದ್ದರಾಮಯ್ಯನವರ ಹಿಂದುಳಿದ ವರ್ಗದ ಓಟ್ ಬ್ಯಾಂಕನ್ನು ಕಿಂಚಿತ್ತೂ ಅಲುಗಾಡಿಸಲಿಲ್ಲ. ರಾಯಣ್ಣ ಬ್ರಿಗೇಡ್‍ನಿಂದ ಯಡಿಯೂರಪ್ಪರನ್ನು ಬೆದರಿಸುವಲ್ಲಿ ಸಫಲವಾದ, ಯಡಿಯೂರಪ್ಪ ವಿರೋಧಿಗಳು ಬ್ರಿಗೇಡ್ ಅನ್ನು ಹಿನ್ನೆಲೆಗೆ ಸರಿಸಿದರು. ಹಕೀಕತ್ತು ಏನೆಂದರೆ ಇಂತಹದೊಂದು ಒಳಬೇಗುದಿಯನ್ನು ಹುಟ್ಟುಹಾಕಿ ಮೋದಿ-ಶಾ ಜೋಡಿ ಇವತ್ತು ಯಡಿಯೂರಪ್ಪ-ಈಶ್ವರಪ್ಪ ಇಬ್ಬರನ್ನು ತಾವು ಹೇಳಿದಂತೆ ಕೇಳುವ ಕೀಲುಗೊಂಬೆಗಳನ್ನಾಗಿ ಮಾಡಿಕೊಳ್ಳುವಲ್ಲಿಯಂತೂ ಯಶಸ್ವಿಯಾಗಿದ್ದಾರೆ.

ಇವತ್ತು ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿಯೇ ಯಡಿಯೂರಪ್ಪನವರ ಮಾತಿಗೆ ಮೂರು ಕಾಸಿನ ಬೆಲೆ ಇಲ್ಲವಾಗಿದೆ. ಸಮೀಕ್ಷೆಯನ್ನಾಧರಿಸಿ ಟಿಕೆಟ್ ನೀಡಲಾಗುತ್ತದೆ ಎಂಬ ಗಿಳಿಪಾಠವನ್ನೂ ಅಮಿತ್ ಶಾ ಒಪ್ಪಿಸುತ್ತಿದ್ದಾರಾದರೂ ಕರ್ನಾಟಕದಲ್ಲಿ ಬಿಜೆಪಿ ಯಾವ ಕಾರಣಕ್ಕೂ ಪೂರ್ಣಪ್ರಮಾಣದಲ್ಲಿ ಅಧಿಕಾರಕ್ಕೇನು ಬರುವುದಿಲ್ಲವೆಂದರಿತು, ಈ ಹಂತದಲ್ಲೇ ಮುಂದಿನ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯಾಚರಣೆ ಶುರುವಾಗಿದೆ. ಇದು ಯಡಿಯೂರಪ್ಪನವರ ಭವಿಷ್ಯದ ರಾಜಕಾರಣದ ದೃಷ್ಟಿಯಿಂದ ಮರಣ ಶಾಸನವೇ ಆಗಲಿದೆ. ಯಾಕೆಂದರೆ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರನ್ನು ಬಳಸಿಕೊಂಡು ಕೈಬಿಟ್ಟಂತೆಯೇ ಈ ಚುನಾವಣೆಯಲ್ಲೂ ಆಗಲಿದೆ. ಟಿಕೆಟ್ ಹಂಚಿಕೆ ಹಂತದಲ್ಲೇ ಯಡಿಯೂರಪ್ಪನವರನ್ನು ಹೊರಗಿಡುವುದರಿಂದ ರಾಜ್ಯ ಬಿಜೆಪಿ ಮೇಲಿನ ಯಡಿಯೂರಪ್ಪನವರ ಹಿಡಿತ ತಪ್ಪಿಹೋಗಲಿದೆ. ಮೈತ್ರಿ ಸರ್ಕಾರವೇ ಗತಿಯೆಂಬ ಲೆಕ್ಕಾಚಾರದಲ್ಲಿರುವ ಬಿಜೆಪಿ ಪಾಳಯ ಅಧಿಕಾರ ಪಡೆಯುವ ಸಂದರ್ಭ ಬಂದಾಗಲೂ ಸಹಜವಾಗಿಯೇ ಯಡಿಯೂರಪ್ಪ ಮೂಲೆ ಸೇರಬೇಕಾಗುತ್ತದೆ. ಇಂತಹದೊಂದು ಸನ್ನಿವೇಶವನ್ನು ಸೃಷ್ಟಿಸುವುದನ್ನು ಗಮನಿಸಿದರೆ ಯಡಿಯೂರಪ್ಪ ಚುನಾವಣೆ ಮುಗಿಯುವಷ್ಟರಲ್ಲಿ ದುರಂತ ನಾಯಕನಾದಲ್ಲಿ ಅಚ್ಚರಿ ಇಲ್ಲ.

ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಮಾಡಬಾರದ್ದು ಮಾಡಿದ್ದೇನೊ ನಿಜ. ಗಣಿ ಲೂಟಿ, ಭ್ರಷ್ಟಾಚಾರ, ಸ್ವಜನಪಕ್ಷಪಾತ, ಕುಟುಂಬ ರಾಜಕಾರಣ ಒಂದಾ.. ಎರಡಾ… ಆದರೆ ಸಂಘಪರಿವಾರದ ಕೈಮೇಲಾಗದಂತೆ ನೋಡಿಕೊಂಡಿದ್ದೇ ಮುಂದೆ ಅವರಿಗೆ ಮುಳುವಾಯ್ತು. ವ್ಯವಸ್ಥಿತವಾಗಿ ಸಿಎಂ ಗಾದಿಯಿಂದ ಕೆಳಗಿಳಿಸಿದ್ದಲ್ಲದೆ, ಪಕ್ಷವನ್ನೇ ತೊರೆಯುವಷ್ಟು ಕಿರಿಕಿರಿ ಕೊಟ್ಟಿದ್ದರು. ಯಡಿಯೂರಪ್ಪನವರನ್ನು ಅವರ ಪಾಪಕೃತ್ಯಗಳ ಸಮೇತ ಹೂತು ಹಾಕುವ ಯತ್ನವನ್ನು ಸ್ವತಃ ಸಂಘ ಪರಿವಾರವೇ ನಡೆಸಿತು. ಯಡಿಯೂರಪ್ಪ ಮೇಲಿರುವ ಭ್ರಷ್ಟಾಚಾರದ ಆರೋಪದ ಹೊರತಾಗಿಯೂ ಹೊಂದಿರುವ ಮಾಸ್‍ಲೀಡರ್ ಎಂಬ ಚಹರೆಯನ್ನು ವೀರಶೈವ ಲಿಂಗಾಯತ ಸಮುದಾಯದ ಮೇಲೆ ಅವರಿಗಿರುವ ಹಿಡಿತವನ್ನು ಬಳಸಿಕೊಳ್ಳುವುದಕ್ಕಷ್ಟೇ ಸಂಘ ಪರಿವಾರ ಮತ್ತು ಮೋದಿ-ಶಾ ಜೋಡಿ ಸೀಮಿತಗೊಂಡಿರುವುದನ್ನು ಗಮನಿಸಿದರೆ ಶಿಕಾರಿಪುರ ಪುರಸಭೆಯಿಂದ ಹೊರಟ ಯಡಿಯೂರಪ್ಪನವರ ರಾಜಕೀಯ ಯಾತ್ರೆ 2018-19 ಎರಡು ಚುನಾವಣೆ ಮುಗಿಯುವಷ್ಟರಲ್ಲಿ ದುರಂತ ಕಾಣುವ ಎಲ್ಲ ಲಕ್ಷಣಗಳೂ ಗೋಚರವಾಗುತ್ತಿವೆ. ಈ ಚುನಾವಣಾ ಪ್ರಚಾರದಲ್ಲಿನ ಯಡಿಯೂರಪ್ಪನವರ ನಿಸ್ಸಹಾಯಕ ಮಾತುಗಳು, ಅವರನ್ನು ಬಲಿಹಾಕಲು ಪಕ್ಷದಲ್ಲೇ ನಡೆಯುತ್ತಿರುವ ಮಸಲತ್ತುಗಳು ಇದಕ್ಕೆ ಸಾಕ್ಷ್ಯ ಒದಗಿಸುತ್ತವೆ.

ದೋಸ್ತಿಗಳ ದುಷ್ಮನಿ

ಒಂದು ಕಾಲದಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪ ಒಟ್ಟಿಗೆ ಓಡಾಡಿಕೊಂಡು ಪಕ್ಷ ಕಟ್ಟಿದವರು. ಯಡಿಯೂರಪ್ಪನವರ ನೆರಳಲ್ಲೇ ಬೆಳೆದ ಈಶ್ವರಪ್ಪನ ಇಷ್ಟು ವರ್ಷಗಳ ಗೆಲುವಲ್ಲಿ ಯಡಿಯೂರಪ್ಪನವರ ಪಾತ್ರ ಮುಖ್ಯವಾಗಿತ್ತು. ಆದರೀಗ ಶರಂಪರ ಜಗಳವಾಡುತ್ತಾ ಬೀದಿಗೆ ಬಂದಿದ್ದಾರೆ. ಒಬ್ಬರನ್ನೊಬ್ಬರು ರಾಜಕೀಯವಾಗಿ ಮುಗಿಸುವಷ್ಟು ಜಿದ್ದು ಸಾಕಿಕೊಂಡಿದ್ದಾರೆ.

ಅದೊಂದು ಕಾಲವಿತ್ತು. ಯಡಿಯೂರಪ್ಪ ಶಿಕಾರಿಪುರದಿಂದ ಬಂದು ಶಿವಮೊಗ್ಗ ಬಸ್‍ಸ್ಟಾಂಡ್‍ನಲ್ಲಿ ಇಳಿಯುತ್ತಿದ್ದಂತೆಯೇ ಕಾದು ನಿಂತಿರುತ್ತಿದ್ದ ಈಶ್ವರಪ್ಪ ತಮ್ಮ ಸ್ಕೂಟರ್‍ನಲ್ಲಿ ಕೂರಿಸಿಕೊಂಡು ಎನ್.ಎನ್.ಮಾರ್ಕೆಟ್ ಮೇಲಿದ್ದ ಬಿಜೆಪಿ ಆಫೀಸಿಗೆ ಕರೆದೊಯ್ಯುತ್ತಿದ್ದರು. ವಾಪಾಸ್ ಬಸ್ ಸ್ಟಾಂಡಿಗೆ ಕರೆತಂದು ಬಸ್ ಹತ್ತಿಸುವ ಹೊಣೆಯೂ ಈಶ್ವರಪ್ಪನದ್ದಾಗಿತ್ತು. ಈ ಜೋಡಿ ಡಿ.ಎಚ್. ಶಂಕರಮೂರ್ತಿ ಜೊತೆ ಪಾಲುದಾರಿಕೆಯಲ್ಲಿ ಜಾಮ್ ಪೈಪ್ಸ್ ಹೆಸರಿನ ಸಿಮೆಂಟ್ ಪೈಪ್‍ಗಳ ಫ್ಯಾಕ್ಟರಿಯನ್ನೂ ಮಾಡಿದ್ದರು. ವಿರೋಧ ಪಕ್ಷಗಳ ಪ್ರಭಾವಿ ಮುಖಂಡರಾಗಿದ್ದಾಗ ಪಂಚಾಯತ್ ಇಂಜನಿಯರಿಂಗ್ ವಿಭಾಗದ ಅಧಿಕಾರಿಗಳ ಮೂಲಕ ತಮ್ಮ ಪೈಪ್‍ಗಳನ್ನು ಖರೀದಿಸುವಂತೆ ಮಾಡಿ ಭಾರೀ ಲಾಭವನ್ನು ಮಾಡಿಕೊಂಡವರು. ಅಂದಹಾಗೆ, ಜಾಮ್ ಎಂದರೆ ಈ ಮೂವರ ಪತ್ನಿಯರ ಮೊದಲಕ್ಷರ.

ಹೀಗಿದ್ದವರು ಈಗ ಒಬ್ಬರ ಮುಖ ಮತ್ತೊಬ್ಬರು ನೋಡದ ಸ್ಥಿತಿಯಲ್ಲಿದ್ದಾರೆ. ಈಶ್ವರಪ್ಪರಿಗೆ ಟಿಕೆಟ್ ತಪ್ಪಿಸಲು ಯಡಿಯೂರಪ್ಪ ಕಸರತ್ತು ನಡೆಸಿದರೆ, ಶಂಕರಮೂರ್ತಿ ಮಗನಿಗೆ ಎಂಎಲ್‍ಸಿ ಸೀಟು ಈಶ್ವರಪ್ಪ ಹೆಣಗಾಡುತ್ತಿದ್ದಾರೆ. ಯಡಿಯೂರಪ್ಪನೇ ಮತ್ತೆ ಮುಖ್ಯಮಂತ್ರಿಯಾಗುವುದಾದರೆ ಬಿಜೆಪಿ ರಾಜ್ಯದಲ್ಲಿ ಗೆಲ್ಲುವುದೇ ಬೇಡ ಎನ್ನುವ ಆರೆಸ್ಸೆಸ್ ಅಜೆಂಡಾಕ್ಕೆ ಈಶ್ವರಪ್ಪ ರಾಯಣ್ಣ ಬ್ರಿಗೇಡಿನ ಸೋಪಾನ ಹಾಕುತ್ತಾರೆ!

ಯಡಿಯೂರಪ್ಪ ಮುಖ್ಯಮಂತ್ರಿಯಾದಾಗ ಈಶ್ವರಪ್ಪನಿಗೆ ಮೊದಲ ಹಂತದಲ್ಲಿ ಸಚಿವ ಸ್ಥಾನ ಕೊಡದೆ ಏಟು ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಅನಂತ್‍ಕುಮಾರ್ ಜೊತೆ ಸೇರಿ ಈಶ್ವರಪ್ಪ, ಅಡ್ವಾಣಿಗೆ ದೂರು ಹೇಳಿ ಕಾಟ ಕೊಟ್ಟಿದ್ದುಂಟು. ಕಳೆದ ಚುನಾವಣೆಯಲ್ಲಿ ಈಶ್ವರಪ್ಪ ಮೂರನೇ ಕುಸಿದದ್ದು ಕೆಜೆಪಿಯಿಂದ ಕಣಕ್ಕಿಳಿದಿದ್ದ ಎಸ್.ರುದ್ರೇಗೌಡರಿಂದಾಗಿ. ಇವರಿಬ್ಬರ ಕಿತ್ತಾಟದಲ್ಲಿ ಗೆದ್ದು ಬಂದ ಕಾಂಗ್ರೆಸ್‍ನ ಕೆ.ಬಿ. ಪ್ರಸನ್ನಕುಮಾರ್ ಇವತ್ತು ಯಡಿಯೂರಪ್ಪ ಈಶ್ವರಪ್ಪ ಇಬ್ಬರನ್ನು ಎದುರಿಸಿ ಮತ್ತೆ ಗೆಲ್ಲುವ ಪ್ರಾಬಲ್ಯ ಸಾಧಿಸಿದ್ದಾರೆ.

ಈ ಬಾರಿ ಈಶ್ವರಪ್ಪರಿಗೆ ಬಿಜೆಪಿ ಟಿಕೆಟ್ ಇಲ್ಲ, ಎಸ್. ರುದ್ರೇಗೌಡರೇ ಬಿಜೆಪಿ ಅಭ್ಯರ್ಥಿ ಎಂಬುದಾಗಿ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದಾಗಲೇ ಗುಲ್ಲೆದ್ದಿತ್ತು. ಬಿಜೆಪಿ ಟಿಕೆಟ್ ಕೈತಪ್ಪುವ ಆತಂಕದಲ್ಲಿ ಯಡ್ಡಿಯೂರಪ್ಪನಿಗೆ ಎದಿರೇಟು ಕೊಡುವ ಸಲುವಾಗಿಯೇ ಈಶ್ವರಪ್ಪ ಪರಿವಾರದ ಕುಮ್ಮಕ್ಕಿನಿಂದ ರಾಯಣ್ಣ ಬ್ರಿಗೇಡ್ ಮಾಡಿದ್ರು. ಕೊನೆಗೆ ರಾಜಿಯಾಗುವ ಹಂತದಲ್ಲಿ ರಾಯಣ್ಣ ಬ್ರಿಗೇಡ್ ಕೈಬಿಡಬೇಕಾದರೆ ಶಿವಮೊಗ್ಗದಲ್ಲಿ ಈಶ್ವರಪ್ಪರಿಗೆ ಟಿಕೆಟ್ ಕೊಡಬೇಕು ಅಂತ ತೀರ್ಮಾನವಾಗಿತ್ತು. ಯಡಿಯೂರಪ್ಪ ಮೊನ್ನೆಮೊನ್ನೆವರೆಗೂ ರುದ್ರೇಗೌಡರ ಹೆಸರನ್ನು ಶಿವಮೊಗ್ಗ ಬಿಜೆಪಿ ಅಭ್ಯರ್ಥಿ ಎಂಬುದಾಗಿ ಚಾಲನೆಯಲ್ಲಿಟ್ಟಿದ್ದರು. ರಾಯಣ್ಣ ಬ್ರಿಗೇಡ್ ಎಸ್. ರುದ್ರೇಗೌಡರ ಹೆಸರು ಚಲಾವಣೆ ಪಡೆದದ್ದು ಎಲ್ಲವೂ ಇವರಿಬ್ಬರ ನಡುವಿನ ಮತ್ತು ಸಂಘಪರಿವಾರ ಹಾಗು ಯಡಿಯೂರಪ್ಪನವರ ನಡುವಿನ ಕೊಡು-ಕೊಳ್ಳುವ ಕಿತ್ತಾಟ ಭಾಗವಾಗಿಯೇ ನಡೆಯುತ್ತಿರುವುದು ಎಂಬುದು ಬಹುಜನರಿಗೆ ತಿಳಿದಿಲ್ಲ.

@ ಈಶ್ವರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...