ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಂಡ ಕರ್ನಾಟಕ ಪರಿಶಿಷ್ಟ ಜಾತಿಗಳ (ಉಪವರ್ಗೀಕರಣ) ಮಸೂದೆಗೆ ಅಂಕಿತ ಹಾಕದೆ ರಾಜ್ಯಪಾಲರು ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಕೆಲವು ಸ್ಪಷ್ಟನೆಗಳನ್ನು ಕೇಳಿರುವ ರಾಜ್ಯಪಾಲರು, ಮಸೂದೆಯನ್ನು ವಾಪಸ್ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಸೂದೆಯ ಮೂಲಕ ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ತನ್ನ ಆದೇಶಕ್ಕೆ ಕಾನೂನು ಬಲ ನೀಡಲು ರಾಜ್ಯ ಸರ್ಕಾರ ಮುಂದಾಗಿತ್ತು.
ಮಸೂದೆ ವಾಪಸ್ ಕಳುಹಿಸಿರುವ ರಾಜ್ಯಪಾಲರ ನಿರ್ಧಾರದ ಕುರಿತು ಒಳ ಮೀಸಲಾತಿ ಹೋರಾಟಗಾರರು ಮತ್ತು ದಲಿತ ಸಮುದಾಯದ ಮುಖಂಡರು ಪ್ರತಿಕ್ರಿಯಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿರುವ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್ ಅವರು, “ರಾಜ್ಯಪಾಲರು ಮಸೂದೆಯನ್ನು ತಿರಸ್ಕರಿಸಿಲ್ಲ, ಸರ್ಕಾರದಿಂದ ಕೆಲವೊಂದು ಸ್ಪಷ್ಟನೆಗಳನ್ನು ಕೇಳಿದ್ದಾರೆ ಎಂದು ತಿಳಿದು ಬಂದಿದೆ. ಮಸೂದೆ ಪ್ರಸ್ತುತ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ ಪಾಟೀಲ್ ಬಳಿ ಇದೆ ಎಂದು ಗೊತ್ತಾಗಿದೆ. ಸರ್ಕಾರ ತಕ್ಷಣ ರಾಜ್ಯಪಾಲರು ಕೇಳಿರುವ ಸ್ಪಷ್ಟನೆಯನ್ನು ಕೊಡಬೇಕು, ರಾಜ್ಯಪಾಲರು ರಾಜಕೀಯವನ್ನು ಬದಿಗಿಟ್ಟು ಅದಕ್ಕೆ ಅಂಕಿತ ಹಾಕಬೇಕು ಎಂದು ಒತ್ತಾಯಿಸಿದ್ದಾರೆ.
ಒಳ ಮೀಸಲಾತಿ ವಿಷಯ ತಾರ್ಕಿಕ ಅಂತ್ಯ ಕಾಣದೆ ನೇಮಕಾತಿಗಳು, ಬಡ್ತಿ ನಿಂತು ಹೋಗಿದೆ. ಇದರಿಂದ ಉದ್ಯೋಗಕಾಂಕ್ಷಿ ಯುವಜನತೆ ಭಾರೀ ಸಮಸ್ಯೆ ಎದುರಿಸುತ್ತಿದ್ದಾರೆ. ಒಳಮೀಸಲಾತಿಯ ಸರಿಯಾದ ಹಂಚಿಕೆಗೆ ಸಂಬಂಧಿಸಿದಂತೆ ನಮ್ಮ ಹೋರಾಟಗಳು ಮುಂದುವರಿಯುತ್ತದೆ. ಸಣ್ಣಪುಟ್ಟ ವ್ಯತ್ಯಾಸಗಳನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳಬಹುದು. ಹಾಗಾಗಿ, ಸರ್ಕಾರ ಮತ್ತು ರಾಜ್ಯಪಾಲರು ಸಮನ್ವಯ ಸಾಧಿಸಿಕೊಂಡು ತಕ್ಷಣಕ್ಕೆ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮನವಿ ಮಾಡಿದ್ದಾರೆ.
ಬಿಜೆಪಿಯವರು ನಾಗಮೋಹನ್‌ದಾಸ್ ಸಮಿತಿಯ ವರದಿಯನ್ನೇ ಅವೈಜ್ಞಾನಿಕ ಎಂದಿದ್ದರು. ಮಸೂದೆ ವಾಪಸ್ ಬಂದಿರುವುದರ ಹಿಂದೆ ಅವರ ಕ್ರೆಡಿಟ್ ವಾರ್ ಕೂಡ ಇರಬಹುದು ಎಂದಿದ್ದಾರೆ.
ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್‌ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ನಿರ್ಧಾರ ತೆಗೆದುಕೊಳ್ಳುವ ಅವಕಾಶ ಈಗ ಸರ್ಕಾರದ ಹಂತದಲ್ಲಿದೆ. ರಾಜ್ಯಪಾಲರು ಏನು ಸ್ಪಷ್ಟನೆ ಕೇಳಿದ್ದಾರೋ, ಅದನ್ನು ಕೊಟ್ಟು ಸರ್ಕಾರ ಮಸೂದೆಗೆ ಅಂಕಿತ ಪಡೆಯುವ ಕೆಲಸ ತುರ್ತಾಗಿ ಮಾಡಬೇಕು. ಒಳಮೀಸಲಾತಿ ವಿಚಾರ ಬಗೆಹರಿಯದೆ ನೇಮಕಾತಿ ಮತ್ತು ಬಡ್ತಿಯಲ್ಲಿ ಸಮಸ್ಯೆ ಉಂಟಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಮಸೂದೆ ಕುರಿತು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬಿ. ಕೃಷ್ಣಪ್ಪ ಸ್ಥಾಪಿತ) ರಾಜ್ಯ ಪ್ರಧಾನ ಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ಮಸೂದೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿರುವುದರ ಹಿಂದೆ ನೇರವಾಗಿ ಬಿಜೆಪಿಯವರ ಕೈವಾಡವಿದೆ. ಅವರು ರಾಜ್ಯಪಾಲರ ಮೇಲೆ ಒತ್ತಡ ಹೇರಿ ಅಂಕಿತ ಬೀಳದಂತೆ ಮಾಡಿದ್ದಾರೆ. ಬಿಜೆಪಿಯವರು ಒಳ ಮೀಸಲಾತಿ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ ಎಂದಿದ್ದಾರೆ. ಸರ್ಕಾರ ರಾಜ್ಯಪಾಲರು ಕೇಳಿದ ಸ್ಪಷ್ಟನೆಯನ್ನು ಕೊಟ್ಟು ಕಾನೂನು ಜಾರಿಯಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.


