ಎನ್‌ಡಿಟಿವಿ ಪ್ರವರ್ತಕರಾದ ಆರ್‌ಆರ್‌ಪಿಆರ್ ಹೋಲ್ಡಿಂಗ್‌ಗೆ ನೀಡಿದ ಕೆಲವು ಬಡ್ಡಿರಹಿತ ಸಾಲಗಳಿಗೆ ಸಂಬಂಧಿಸಿದಂತೆ ಮಾರ್ಚ್ 2016ರಲ್ಲಿ ಎನ್‌ಡಿಟಿವಿ ಸ್ಥಾಪಕರಾದ ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ನೀಡಲಾಗಿದ್ದ ಆದಾಯ ತೆರಿಗೆ ಮರುಮೌಲ್ಯಮಾಪನ ನೋಟಿಸ್‌ಗಳನ್ನು ದೆಹಲಿ ಹೈಕೋರ್ಟ್ ಸೋಮವಾರ (ಜ.19) ರದ್ದುಗೊಳಿಸಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ದಿನೇಶ್ ಮೆಹ್ತಾ ಮತ್ತು ವಿನೋಕ್ ಕುಮಾರ್ ಅವರ ವಿಭಾಗೀಯ ಪೀಠವು, ನೋಟಿಸ್ ಜಾರಿ ಮಾಡಿದ್ದಕ್ಕಾಗಿ ಆದಾಯ ತೆರಿಗೆ ಇಲಾಖೆಗೆ 2 ಲಕ್ಷ ರೂಪಾಯಿ ದಂಡ ವಿಧಿಸಿದೆ.
“ಇಂತಹ ಪ್ರಕರಣಗಳಲ್ಲಿ ಯಾವುದೇ ಮೊತ್ತದ ದಂಡವು ಸಾಕಾಗುವುದಿಲ್ಲ (ಅಂದರೆ, ಯಾವುದೇ ಹಣದ ಮೊತ್ತವು ಪೂರ್ಣ ಪರಿಹಾರವಾಗಲಾರದು, ಇದು ಬಹಳ ಗಂಭೀರ/ತಪ್ಪು ಕ್ರಮ). ಆದರೂ ಕೂಡ, ಸಾಂಕೇತಿಕವಾಗಿ ಆದಾರಿಯ ತೆರಿಗೆ ಇಲಾಖೆಯು ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ತಲಾ 1 ಲಕ್ಷ ರೂಪಾಯಿ ಪಾವತಿಸಬೇಕು” ಎಂದು ನ್ಯಾಯಾಲಯ ಆದೇಶಿಸಿರುವುದಾಗಿ ವರದಿ ಉಲ್ಲೇಖಿಸಿದೆ.
“ಎರಡೂ ರಿಟ್ ಅರ್ಜಿಗಳನ್ನು ಪುರಸ್ಕರಿಸಲಾಗಿದೆ. ಮಾರ್ಚ್ 31,2016 ರಂದು ಅರ್ಜಿದಾರರಿಗೆ ನೀಡಲಾದ ನೋಟಿಸ್‌ಗಳು ಮತ್ತು ಅದರ ಪರಿಣಾಮವಾಗಿ ಬಂದ ಯಾವುದೇ ಆದೇಶ ಅಥವಾ ಕಾರ್ಯವಿಧಾನಗಳನ್ನು ರದ್ದುಗೊಳಿಸಲಾಗಿದೆ. ಇಂತಹ ಪ್ರಕರಣಗಳಲ್ಲಿ ಯಾವುದೇ ಮೊತ್ತದ ದಂಡವು ಸಾಕಾಗುವುದಿಲ್ಲ. ಆದರೂ, ಪ್ರಕರಣವನ್ನು ಸಂಪೂರ್ಣವಾಗಿ ದಂಡವಿಲ್ಲದೆ ಬಿಡಲಾಗದು. ಹಾಗಾಗಿ, ಸಾಂಕೇತಿಕವಾಗಿ ಆದಾಯ ತೆರಿಗೆ ಇಲಾಖೆಯು ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ತಲಾ 1 ಲಕ್ಷ ರೂಪಾಯಿ (ಒಟ್ಟು 2 ಲಕ್ಷ ರೂ.) ಪಾವತಿಸಬೇಕು” ಎಂದು ನ್ಯಾಯಾಲಯ ಹೇಳಿದೆ.
ಇದಲ್ಲದೆ, ನೋಟಿಸ್‌ಗಳಿಗೆ ಅನುಸಾರವಾಗಿ ಪ್ರಾರಂಭಿಸಲಾದ ಎಲ್ಲಾ ನಂತರದ ಪ್ರಕ್ರಿಯೆಗಳನ್ನು ರದ್ದುಗೊಳಿಸಲಾಗಿದೆ ಎಂದಿದೆ ಎಂದು ಬಾರ್ & ಬೆಂಚ್ ತಿಳಿಸಿದೆ.
ಈ ನೋಟಿಸ್‌ಗಳು ಮುಖ್ಯವಾಗಿ ಆರ್‌ಆರ್‌ಪಿಆರ್ ಹೋಲ್ಡಿಂಗ್ಸ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಲಾದ ಕೆಲವು ಬಡ್ಡಿರಹಿತ ಸಾಲಗಳಿಗೆ ಸಂಬಂಧಿಸಿದ ಆರೋಪಗಳ ಮೇಲೆ ಆಧಾರಿತವಾಗಿದ್ದವು. ಇದರಲ್ಲಿ ವಿಶ್ವಪ್ರಧಾನ್ ಕಮರ್ಷಿಯಲ್ ಪ್ರೈವೇಟ್ ಲಿಮಿಟೆಡ್ (ವಿಸಿಪಿಎಲ್) ಎಂಬ ಕಂಪನಿಯಿಂದ ಆರ್‌ಆರ್‌ಪಿಆರ್‌ಗೆ ಸುಮಾರು 403.85 ಕೋಟಿ ರೂಪಾಯಿ ಬಡ್ಡಿರಹಿತ ಸಾಲ ನೀಡಲಾಗಿತ್ತು, ಮತ್ತು ಇದರೊಂದಿಗೆ ಎನ್‌ಡಿಟಿವಿಯ ಷೇರುಗಳ ಒತ್ತೆ, ಷೇರು ವರ್ಗಾವಣೆಗಳು ಮತ್ತು ಇತರ ಸಂಕೀರ್ಣ ವಹಿವಾಟುಗಳಿದ್ದವು. ಆದಾಯ ತೆರಿಗೆ ಇಲಾಖೆಯು ಇದನ್ನು ತೆರಿಗೆ ತಪ್ಪಿಸುವಿಕೆ ಅಥವಾ ಆದಾಯ ಮರೆಮಾಚುವಿಕೆ ಎಂದು ಆರೋಪಿಸಿ, 2009-10ರ ಅಸೆಸ್‌ಮೆಂಟ್ ಇಯರ್‌ಗೆ ಸಂಬಂಧಿಸಿದಂತೆ ಮರುಮೌಲ್ಯಮಾಪನ ಮಾಡಲು ಪ್ರಯತ್ನಿಸಿತ್ತು.
ಒಂದು ವರ್ಷಕ್ಕೆ ಎರಡನೇ ಬಾರಿಗೆ ಮರುಮೌಲ್ಯ ಮಾಪನ ಎಂದು ವಾದಿಸಿ, ಆದಾಯ ತೆರಿಗೆ ನೋಟಿಸ್‌ಗಳ ವಿರುದ್ಧ ಪ್ರಣಯ್ ಮತ್ತು ರಾಧಿಕಾ ರಾಯ್ ನವೆಂಬರ್ 2017ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಆದಾಯ ಇಲಾಖೆಯು ಈ ಹಿಂದೆ ಜುಲೈ 2011ರಲ್ಲಿ ಮರು ಮೌಲ್ಯಮಾಪನ ಮಾಡಿತ್ತು. ಆ ಪ್ರಕ್ರಿಯೆಗಳಲ್ಲಿ ಅದೇ ಸಮಸ್ಯೆಗಳನ್ನು ನಿರ್ದಿಷ್ಟವಾಗಿ ಪರಿಶೀಲಿಸಿತ್ತು ಮತ್ತು ಅದು ಮಾರ್ಚ್ 2013ರಲ್ಲಿ ಮರುಮೌಲ್ಯಮಾಪನ ಆದೇಶದೊಂದಿಗೆ ಮುಕ್ತಾಯಗೊಂಡಿತು ಎಂದು ಹೇಳಿದ್ದರು.
ಮೌಲ್ಯಮಾಪನ ಅಧಿಕಾರಿ ಹೇಳಿಂತೆ ಹಿಂದಿನ ಮರು-ಮೌಲ್ಯಮಾಪನ ಕೇವಲ ಸೀಮಿತ ವ್ಯಾಪ್ತಿಯದ್ದು ಎಂಬ ಅಭಿಪ್ರಾಯವನ್ನು ಅವರು ಪ್ರಶ್ನಿಸಿದ್ದರು. ಒಮ್ಮೆ ಮರುಮೌಲ್ಯಮಾಪನ ಪ್ರಾರಂಭವಾದ ನಂತರ, ಸಂಪೂರ್ಣ ಕಡಿಮೆ ಅಂದಾಜು ಮಾಡಲಾದ ಆದಾಯವನ್ನು ಪರಿಶೀಲಿಸಬಹುದು ಎಂದು ವಾದಿಸಿದ್ದರು. ಅದೇ ವಿಷಯವನ್ನು ಮತ್ತೆ ತೆರೆಯುವುದು ‘ಅಭಿಪ್ರಾಯದ ಬದಲಾವಣೆ’, ಇದು ಕಾನೂನಿನ ಅಡಿಯಲ್ಲಿ ಸ್ವೀಕಾರಾರ್ಹವಲ್ಲ ಎಂದಿದ್ದರು.
ಆರ್‌ಆರ್‌ಪಿಆರ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ವಿರುದ್ಧದ ಇದೇ ರೀತಿಯ ಮರುಮೌಲ್ಯಮಾಪನ ಪ್ರಕ್ರಿಯೆಗಳು ಈಗಾಗಲೇ ಹೈಕೋರ್ಟ್‌ನಲ್ಲಿ ಬಾಕಿ ಉಳಿದಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಅಲ್ಲಿ ಅಂತಿಮ ಆದೇಶಗಳ ಮೇಲಿನ ತಡೆಯಾಜ್ಞೆ ಜಾರಿಯಲ್ಲಿದೆ. ಸೆಪ್ಟೆಂಬರ್ 2024 ರಲ್ಲಿ ಹೈಕೋರ್ಟ್‌ನ ಪ್ರತ್ಯೇಕ ಪೀಠವು ಆರ್‌ಆರ್‌ಪಿಆರ್‌ಗೆ ನೀಡಲಾದ ನೋಟಿಸ್ ಅನ್ನು ರದ್ದುಗೊಳಿಸಿದೆ ಎಂದು ಹೇಳಲಾಗಿತ್ತು.
ಪ್ರಣಯ್ ರಾಯ್ ಮತ್ತು ರಾಧಿಕಾ ರಾಯ್ ಪರ ವಕೀಲರಾದ ವಿಯುಷ್ಟಿ ರಾವತ್, ದೇವಾಂಶ್ ಜೈನ್ ಮತ್ತು ಸಾರ್ಥಕ್ ಅಬ್ರೋಲ್ ಅವರೊಂದಿಗೆ ಹಿರಿಯ ವಕೀಲ ಸಚಿತ್ ಜಾಲಿ ವಾದ ಮಂಡಿಸಿದ್ದರು.
ಆದಾಯ ತೆರಿಗೆ ಇಲಾಖೆಯನ್ನು ವಕೀಲರಾದ ಎನ್.ಪಿ. ಸಾಹ್ನಿ, ಇಂದ್ರಜ್ ಸಿಂಗ್ ರೈ, ಸಂಜೀವ್ ಮೆನನ್, ರಾಹುಲ್ ಸಿಂಗ್ ಮತ್ತು ಗೌರವ್ ಕುಮಾರ್ ಪ್ರತಿನಿಧಿಸಿದ್ದರು.


