ಮಹಿಳೆಯೊಬ್ಬರಿಗೆ ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ವಿಡಿಯೋ ವೈರಲ್ ಆದ ಬಳಿಕ ಮನನೊಂದ ಆರೋಪಿತ ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೇರಳದ ಕೋಝಿಕೋಡ್ ಮೂಲದ ವ್ಯಕ್ತಿಯ ಕುಟುಂಬವು ದೂರುದಾರ ಮಹಿಳೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ್ದು, ಘಟನೆಯು ವ್ಯಾಪಕ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.
ದೀಪಕ್ ಅವರ ಕುಟುಂಬ ಮತ್ತು ಸ್ನೇಹಿತರು, ನ್ಯಾಯಕ್ಕಾಗಿ ನಾವು ಯಾವುದೇ ಹಂತಕ್ಕೆ ಹೋಗುವುದಾಗಿ ಹೇಳಿದ್ದಾರೆ. ದೀಪಕ್ ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಸಮರ್ಥಿಸಿಕೊಂಡರು, ದೌರ್ಜನ್ಯ ಆರೋಪದ ಮಹಿಳೆಯ ಸಾಮಾಜಿಕ ಮಾಧ್ಯಮ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿ, ಅವರನ್ನು ತೀವ್ರ ಮಾನಸಿಕ ತೊಂದರೆಗೆ ತಳ್ಳಿತು. ಅಂತಿಮವಾಗಿ ಅವರ ಸಾವಿಗೆ ಕಾರಣವಾಯಿತು ಎಂದು ಹೇಳಿಕೊಂಡರು.
ದೀಪಕ್ ಅವರು ನಿರಪರಾಧಿ, ಯಾವುದೇ ತಪ್ಪು ಮಾಡಿಲ್ಲ ಎಂದು ಪದೇ ಪದೇ ಹೇಳುತ್ತಿದ್ದರು ಎಂದು ಸ್ನೇಹಿತರು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ದೀಪಕ್ ಸಾವಿನ ನಂತರ, ಆರೋಪ ಮಾಡಿದ ಮಹಿಳೆಯ ಹೇಳಿಕೆಯನ್ನು ಪೊಲೀಸರು ಈಗಾಗಲೇ ದಾಖಲಿಸಲು ಪ್ರಾರಂಭಿಸಿದ್ದಾರೆ. ಬಸ್ ಸಿಬ್ಬಂದಿ ಮತ್ತು ಪ್ರಯಾಣದ ಸಮಯದಲ್ಲಿ ಹಾಜರಿದ್ದ ಇತರರಿಂದಲೂ ಹೇಳಿಕೆಗಳನ್ನು ಪಡೆಯಲಾಗುವುದು. ತಕ್ಷಣ ಪೊಲೀಸ್ ದೂರು ದಾಖಲಿಸುವ ಬದಲು ಮಹಿಳೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ಯಾಕೆ? ವೀಡಿಯೊ ಕಾಣಿಸಿಕೊಂಡ ನಂತರ ನಡೆದ ಘಟನೆಗಳ ಕುರಿತು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಎರಡೂ ಕಡೆಗಳಲ್ಲಿ ಲೋಪಗಳಾಗಿರಬಹುದು ಎಂದು ಅಧಿಕಾರಿಗಳು ಅನುಮಾನಪಟ್ಟಿದ್ದಾರೆ. ಆದರೆ ತನಿಖೆ ಇನ್ನೂ ಆರಂಭಿಕ ಹಂತದಲ್ಲಿದೆ ಎಂದು ಪೊಲೀಸರು ಒತ್ತಿ ಹೇಳಿದರು.
ದೀಪಕ್ ವಿರುದ್ಧ ಆನ್‌ಲೈನ್‌ನಲ್ಲಿ ಪ್ರತಿದಾಳಿಗಳನ್ನು ಸಾರ್ವಜನಿಕ ಪರಿಶೀಲನೆಗೆ ಒಳಪಡಿಸಲಾಗಿದೆ. ಘಟನೆ ನಡೆದಿದೆ, ಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ಮಹಿಳೆ ತನ್ನ ಆರೋಪಕ್ಕೆ ಬದ್ಧಳಾಗಿದ್ದಾಳೆ. ದೀಪಕ್ ತಾನು ವೀಡಿಯೊ ರೆಕಾರ್ಡ್ ಮಾಡುತ್ತಿದ್ದುದನ್ನು ಅರಿತು ಬಸ್‌ನಿಂದ ಇಳಿದು ಬೇಗನೆ ನಡೆದುಕೊಂಡು ಹೋಗಿದ್ದಾನೆ ಎಂದು ಅವರು ಹೇಳಿಕೊಂಡಿದ್ದಾರೆ.
ಆದರೆ, ದೀಪಕ್ ಸಾವಿನ ನಂತರ, ಮಹಿಳೆಯು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಿಂದ ವೀಡಿಯೊ ಮತ್ತು ಸಂಬಂಧಿತ ಪೋಸ್ಟ್‌ಗಳನ್ನು ಅಳಿಸಿಹಾಕಿದ್ದಾರೆ ಎಂದು ವರದಿಯಾಗಿದೆ. ಇದು ಪ್ರಕರಣದ ಬಗ್ಗೆ ಹೆಚ್ಚಿನ ಅನುಮಾನ ಹುಟ್ಟುಹಾಕಿದೆ.
ದೀಪಕ್ ಕೋಝಿಕ್ಕೋಡ್ ಬಳಿಯ ತನ್ನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೆನಯಲ್ಲಿ ಅವರ ಪೋಷಕರು ಮಾತ್ರ ಇದ್ದರು. ವೀಡಿಯೊ ವ್ಯಾಪಕವಾಗಿ ವೈರಲ್ ಆದ ಬಳಿಕ ಅವರು ತೀವ್ರವಾಗಿ ನೊಂದಿದ್ದರು ಎನ್ನಲಾಗಿದೆ. ಅವರಿಗೆ ಯಾವುದೇ ದುಷ್ಕೃತ್ಯ ಅಥವಾ ಮಾದಕ ವ್ಯಸನದ ಇತಿಹಾಸವಿಲ್ಲ ಎಂದು ಅವರ ಕುಟುಂಬ ತಿಳಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಾರ್ವಜನಿಕವಾಗಿ ಅವಮಾನಿಸಿರುವುದು ಅವರನ್ನು ಮಾನಸಿಕವಾಗಿ ಘಾಸಿಗೊಳಿಸಿತ್ತು ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಈ ಮಧ್ಯೆ, ಆತ್ಮಹತ್ಯೆಗೆ ಪ್ರಚೋದನೆಗಾಗಿ ಪ್ರಕರಣ ದಾಖಲಿಸುವ ಜೊತೆಗೆ, ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಪ್ರತ್ಯೇಕ ದೂರುಗಳನ್ನು ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಲಾಗಿದೆ.


